Bhola Shankar Review: 8 ವರ್ಷಗಳ ಹಳೆ ಚಿತ್ರದ ರಿಮೇಕ್‌ನಲ್ಲಿ ರೇಂಜ್ ಇಲ್ಲ, ಚೇಂಜ್ ಇಲ್ಲ, ಯಾಕೋ ಗೆಲ್ಲಂಗಿಲ್ಲ!
ಇತ್ತೀಚೆಗಿನ ದಿನಗಳಲ್ಲಿ ರಿಮೇಕ್ ಚಿತ್ರಗಳಿಗೆ ಮೈಲೇಜ್ ಇಲ್ಲ ಎಂಬ ಕಟು ಸಂದೇಶವನ್ನು ಸಿನಿ ರಸಿಕರು ಚಿತ್ರ ನಿರ್ಮಾಪಕರಿಗೆ ಹಾಗೂ ನಿರ್ದೇಶಕರಿಗೆ ಈಗಾಗಲೇ ಸಾಕಷ್ಟು ಬಾರಿ ಮನದಟ್ಟು ಮಾಡಿದ್ದಾರೆ. ಆದರೂ ಸಹ ಕೆಲ ನಿರ್ಮಾಪಕರು ಹಾಗೂ ನಿರ್ದೇಶಕರು ಬೇಡದ ಸಾಹಸಕ್ಕೆ ಕೈ ಹಾಕಿ ಕೈ ಸುಟ್ಟುಕೊಂಡಿದ್ದಾರೆ, ಕೈ ಸುಟ್ಟುಕೊಳ್ಳುತ್ತಲೇ ಇದ್ದಾರೆ. ಇಂತಹ ಸಾಲಿಗೆ ಹೊಸ ಸೇರ್ಪಡೆಯಾಗುವ ಎಲ್ಲಾ ಲಕ್ಷಣಗಳು ಭೋಳಾ ಶಂಕರ್ ಚಿತ್ರತಂಡವನ್ನು ನೋಡಿದರೆ ಕಾಣಿಸುತ್ತಿವೆ.
ಚಿತ್ರತಂಡ 2015ರಲ್ಲಿ ತೆರೆಗೆ ಬಂದಿದ್ದ ಅಜಿತ್ ಕುಮಾರ್ ನಟನೆಯ ತಮಿಳು ಚಿತ್ರ ವೇದಾಲಂನ ರಿಮೇಕ್ ಮಾಡಲಿದ್ದೇವೆ ಎಂದು ಭೋಳಾ ಶಂಕರ್ ಚಿತ್ರವನ್ನು ಘೋಷಿಸಿದಾಗಲೇ ಇದೊಂದು ಕೆಟ್ಟ ನಿರ್ಧಾರ ಎಂದು ಹಲವರು ಟೀಕಿಸಿದರು. ಅಲ್ಲದೇ ಈ ಹಿಂದೆ ದೊಡ್ಡ ಮಟ್ಟದಲ್ಲಿ ಟೀಕೆಗೊಳಗಾಗಿದ್ದ ನಿರ್ದೇಶಕ ಮೆಹೆರ್ ರಮೇಶ್ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳಲಿದ್ದಾರೆ ಎಂದಾಗ ಇನ್ನೂ ದೊಡ್ಡ ಮಟ್ಟದಲ್ಲಿ ಟ್ರೋಲ್ ಆಗಿತ್ತು. ಚಿತ್ರ ನಿರೀಕ್ಷಿಸಿದ ಮಟ್ಟವನ್ನು ತಲುಪುವುದಿಲ್ಲ ಎಂದು ಅನೇಕರು ಭವಿಷ್ಯ ನುಡಿದಿದ್ದರು.

ಅದೇ ರೀತಿಯ ಪ್ರತಿಕ್ರಿಯೆಗಳನ್ನು ಇದೀಗ ಭೋಳಾ ಶಂಕರ್ ಪಡೆದುಕೊಳ್ಳತೊಡಗಿದೆ. ಹೌದು, ಇಂದು ( ಆಗಸ್ಟ್ 11 ) ಭೋಳಾ ಶಂಕರ್ ಚಿತ್ರ ತೆರೆಗೆ ಬಂದಿದ್ದು ಮೂಲ ವೇದಾಲಂ ಚಿತ್ರದ ರೇಂಜ್ ತಲುಪಲಾಗದೇ ಮಕಾಡೆ ಮಲಗಿದೆ.
ಚಿತ್ರದ ಕಥೆ ಏನು?
ಚಿತ್ರ ರಿಮೇಕ್ ಆದ ಕಾರಣ ಕಥೆಯನ್ನು ರಿವೀಲ್ ಮಾಡಬಾರದು ಎಂಬ ತಲೆ ನೋವಿಲ್ಲ, ತಲೆ ಓಡಿಸುವ ಹಾಗೂ ಇಲ್ಲ. ಮೂಲ ಕಥೆಯಂತೆ ಲೋಕಲ್ ಡಾನ್ ಆದ ನಾಯಕ ತನಗೆ ಸಹಾಯ ಮಾಡಿದ ಹುಡುಗಿಯೋರ್ವಳನ್ನು ಉಳಿಸಿಕೊಳ್ಳಲು ಆಕೆ ಪ್ರಜ್ಞೆ ಕಳೆದುಕೊಂಡ ಬಳಿಕ ಆಕೆಯನ್ನು ತನ್ನ ತಂಗಿ ಎಂದು ದೂರದ ಕೊಲ್ಕತ್ತಾಗೆ ಕರೆದುಕೊಂಡು ಬರುತ್ತಾನೆ. ಅಲ್ಲಿ ಹೊಸ ಜೀವನ ಕಟ್ಟಿಕೊಳ್ಳುವ ನಾಯಕ ರೌಡಿಸಂ ಬಿಟ್ಟು ಟ್ಯಾಕ್ಸಿ ಡ್ರೈವರ್ ಆಗಿ ನಾಟಕದ ಜೀವನ ಆರಂಭಿಸ್ತಾನೆ. ತಂಗಿಗೆ ಅಲ್ಲಿಯೇ ಮದುವೆಯೂ ಸೆಟ್ ಆಗುತ್ತೆ. ಇದೆಲ್ಲದರ ನಡುವೆ ತನ್ನ ತಂಗಿಯ ತಂದೆ, ತಾಯಿಯನ್ನು ಕೊಂದು, ಆಕೆಯ ಕೊಲೆ ಯತ್ನ ಮಾಡಿದ ಮಾಫಿಯಾ ವಿರುದ್ಧ ಸೇಡು ತೀರಿಸಿಕೊಳ್ಳುವ ಕೆಲಸವನ್ನೂ ಸಹ ನಾಯಕ ಮಾಡ್ತಾನೆ. ಮೂಲ ಚಿತ್ರದಲ್ಲಿ ಇರುವ ಹಾಗೆ ಈ ಎಲ್ಲಾ ಅಂಶಗಳೂ ಸಹ ಈ ಚಿತ್ರದಲ್ಲಿಯೂ ಇವೆ. ಎಂಟು ವರ್ಷಗಳ ಹಿಂದೆ ಬಂದು ಬೃಹತ್ ಹಿಟ್ ಆಗಿದ್ದ ಈ ಚಿತ್ರವನ್ನು ಈಗ ರಿಮೇಕ್ ಮಾಡಿರುವುದರಿಂದ ಮೂಲ ಚಿತ್ರದ ರೇಂಜ್‌ನಲ್ಲಿ ಚಿತ್ರವಿಲ್ಲ, ಅಲ್ಲಲ್ಲಿ ಒಂದಿಷ್ಟು ಬದಲಾವಣೆಗಳಿದ್ದರೂ ಮುಖ್ಯ ಕಥೆಯಲ್ಲಿ ಅಷ್ಟೇನೂ ಚೇಂಜ್ ಇಲ್ಲ ಎನಿಸಿಬಿಡುತ್ತದೆ. ಒಟ್ಟಿನಲ್ಲಿ ಚಿತ್ರ ಸಂಪೂರ್ಣವಾಗಿ ಮುಗಿಯುವಷ್ಟರಲ್ಲಿ ಯಾಕೋ ಗೆಲ್ಲಂಗಿಲ್ಲ ಬಿಡಿ ಎನಿಸುವುದಂತೂನ ಪಕ್ಕಾ.
ಪ್ಲಸ್ ಪಾಯಿಂಟ್, ಮೈನಸ್ ಪಾಯಿಂಟ್:
ರಿಮೇಕ್ ಚಿತ್ರಗಳಲ್ಲಿನ ಅಂಶಗಳನ್ನು ಪ್ಲಸ್ ಪಾಯಿಂಟ್ ಹಾಗೂ ಮೈನಸ್ ಪಾಯಿಂಟ್ ಎಂದು ವಿಂಗಡಿಸುತ್ತಾ ಹೋದರೆ ಮೊದಲಿಗೆ ತಲೆ ಎತ್ತಿ ನಿಲ್ಲುವ ದೊಡ್ಡ ಮೈನಸ್ ಪಾಯಿಂಟ್ ಚಿತ್ರವನ್ನು ರಿಮೇಕ್ ಮಾಡಿದ್ದು ಎನ್ನಬಹುದಾಗಿದೆ. ಹೌದು, ಈಗಿನ ಸಿನಿ ರಸಿಕರು ರಿಮೇಕ್ ಚಿತ್ರಗಳನ್ನು ತಳ್ಳಿ ಹಾಕುತ್ತಿದ್ದು, ಇಂತಹ ಕಾಲದಲ್ಲಿ ಎಂಟು ವರ್ಷಗಳ ಹಳೆ ಚಿತ್ರವನ್ನು ರಿಮೇಕ್ ಮಾಡಬಹುದು, ಮಾಡಿದರೆ ಜನ ಇಷ್ಟಪಡಬಹುದು ಎಂದುಕೊಂಡಿದ್ದೇ ಇಲ್ಲಿನ ದೊಡ್ಡ ಮೈನಸ್ ಪಾಯಿಂಟ್. ಇನ್ನು ಚಿತ್ರದಲ್ಲಿ ಎಲ್ಲಿಯೂ ಕಾಮಿಡಿ ವರ್ಕ್ ಆಗಿಲ್ಲ. ವೇದಾಲಂ ಚಿತ್ರದಲ್ಲಿ ಅಜಿತ್ ಮಾಡಿದ್ದ ವಿಭಿನ್ನ ನಟನೆ ಇಡೀ ಭೋಳ ಶಂಕರ್ ಚಿತ್ರದಲ್ಲಿ ಇಲ್ಲವೇ ಇಲ್ಲ. ಹಾಡುಗಳು, ಬಿಜಿಎಂ ಅತಿ ಕಳಪೆ. ಮೂಲ ಚಿತ್ರದ ಜತೆ ಹೋಲಿಸದಿದ್ದರೆ ಚಿರಂಜೀವಿ ನಟನೆ ಚೆನ್ನಾಗಿದೆ. ಉಳಿದಂತೆ ನಾಯಕಿಯಾಗಿ ತಮನ್ನಾ ಹಾಗೂ ನಾಯಕನ ತಂಗಿಯಾಗಿ ಕೀರ್ತಿ ಸುರೇಶ್ ತಮ್ಮ ಪಾಲಿನ ಪ್ರಯತ್ನ ಮಾಡಿದ್ದಾರೆ.
ಹೀಗಾಗಿ ಭೋಳಾ ಶಂಕರ್ ಚಿತ್ರ ಎಂಟು ವರ್ಷಗಳ ಹಿಂದೆ ಬಂದಿದ್ದ ಕಮರ್ಷಿಯಲ್ ಚಿತ್ರವೊಂದರ ಕೆಟ್ಟ ರಿಮೇಕ್ ಎಂದೇ ಹೇಳಬಹುದಾಗಿದೆ. ಇವೆಲ್ಲವನ್ನೂ ಸಹಿಸಿಕೊಂಡು ಚಿತ್ರ ನೋಡುತ್ತೇನೆ ಎನ್ನುವ ಚಿರಂಜೀವಿ ಅಭಿಮಾನಿಗಳಿಗೆ ಮಾತ್ರ ಈ ಸಿನಿಮಾ ಎಂದರೆ ತಪ್ಪಾಗಲಾರದು.


Click it and Unblock the Notifications











