Bhootayyana Maga Ayyu Review ; ಎಲ್ಲಾ ಕಾಲಕ್ಕೂ ಸಲ್ಲುವ 'ಭೂತಯ್ಯನ ಮಗ ಅಯ್ಯು'-ಬೆರಗುಗೊಳಿಸುವ ಕ್ಲೈಮ್ಯಾಕ್ಸ್

ಸಾಮಾಜಿಕ ಮತ್ತು ಸದಭಿರುಚಿ ಚಿತ್ರಗಳ ಮೂಲಕವೇ ಕನ್ನಡ ಚಿತ್ರರಂಗಕ್ಕೆ ಮಾನವೀಯ ಚೌಕಟ್ಟು ನಿರ್ಮಿಸಿದ ನಿರ್ದೇಶಕರು ಸಿದ್ದಲಿಂಗಯ್ಯ. ಗ್ರಾಮೀಣ ಭಾಗದ ಆತ್ಮವನ್ನೇ ಸೆಲ್ಯುಲಾಯ್ಡ್ ಕ್ಯಾನ್ವಾಸ್ ಮೇಲೆ ಕೆತ್ತಿದ ಸಿದ್ದಲಿಂಗಯ್ಯ 1969ರಲ್ಲಿ ''ಮೇಯರ್ ಮುತ್ತಣ್ಣ'' ಚಿತ್ರದ ಡೈರೆಕ್ಟರ್ ಆದರು. ಆ ನಂತರ ಇವರು ನಿರ್ದೇಶನ ಮಾಡಿದ್ದು 22 ಚಿತ್ರಗಳನ್ನು. ಆ ಪೈಕಿ ''ಬಂಗಾರದ ಮನುಷ್ಯ'' ಚಿತ್ರದ ನಂತರ ಅತ್ಯಂತ ಮಹತ್ವ ಮತ್ತು ಪ್ರಮುಖವಾದ ಚಿತ್ರ ''ಭೂತಯ್ಯನ ಮಗ ಅಯ್ಯು''.

ಹೌದು, ನಿಮಗೆ ಗೊತ್ತಿರಲಿ, ''ಭೂತಯ್ಯನ ಮಗ ಅಯ್ಯು'' ಚಿತ್ರಕ್ಕೂ ಮುನ್ನ ಸಿದ್ದಲಿಂಗಯ್ಯ 7 ಚಿತ್ರಗಳನ್ನು ನಿರ್ದೇಶನ ಮಾಡಿದ್ದರು. ವಿಶೇಷ ಅಂದರೆ ಈ 7 ಚಿತ್ರಕ್ಕೆ ಡಾ.ರಾಜ್ ಕುಮಾರ್ ಅವರೇ ನಾಯಕರಾಗಿದ್ದರು. ಇನ್ನೂ ವಿಶೇಷ ಅಂದರೆ ಆ 7ರಲ್ಲಿ 6 ಚಿತ್ರಕ್ಕೆ ಭಾರತಿ ನಾಯಕಿ. ''ಭೂತಯ್ಯನ ಮಗ ಅಯ್ಯು'' ಸಿದ್ದಲಿಂಗಯ್ಯ ನಿರ್ದೇಶನದ 8ನೇ ಚಿತ್ರ. ರಾಜ್ ಕುಮಾರ್ ಅವರನ್ನು ಬಿಟ್ಟು ಹೊಸ ಪಾತ್ರವರ್ಗದ ಜೊತೆ ಶುರು ಮಾಡಿದ ಮೊದಲ ಚಿತ್ರ.

No CGI  No Green Screen  How  Bhootayyana Maga Ayyu  Created an Unparalleled Visual Masterpiece in 1

ಚಿತ್ರದ ನಿರ್ಮಾಪಕರಲ್ಲಿ ಒಬ್ಬರಾಗಿದ್ದರು ರಾಜ್ ಸಹೋದರ

''ಭೂತಯ್ಯನ ಮಗ ಅಯ್ಯು'' ಚಿತ್ರ ರಾಜ್ ಇಲ್ಲದೇ ಸಿದ್ದಲಿಂಗಯ್ಯ ಮಾಡಿದ ಮೊದಲ ಸಿನಿಮಾ ಆದರೂ ಈ ಚಿತ್ರಕ್ಕೆ ಅಣ್ಣಾವ್ರ ಸಹೋದರ ವರದಪ್ಪ ಅವರು ಹಣ ಹೂಡಿದ್ದು ಮತ್ತೊಂದು ವಿಶೇ‍ಷ. ಎನ್‌. ವೀರಾಸ್ವಾಮಿ, ಚಂದುಲಾಲ್ ಜೈನ್ ನಿರ್ಮಾಣದಲ್ಲಿ ವರದಪ್ಪ ಅವರ ಜೊತೆ ಕೈ ಜೋಡಿಸಿದ್ದರು.

ಕಥಾಹಂದರ

ಸಾಹಿತ್ಯ ಅಕಾಡಮಿ ಪ್ರಶಸ್ತಿ ವಿಜೇತ ಗೋರೂರು ರಾಮಸ್ವಾಮಿ ಅಯ್ಯಂಗಾರರ ಕಾದಂಬರಿ ಆಧಾರಿತ ಚಿತ್ರ ಭೂತಯ್ಯನ ಮಗ ಅಯ್ಯು. ಹಳ್ಳಿಯ ಸಾಮಾನ್ಯ ಜನರು ಕೋರ್ಟು-ಕಚೇರಿ ಎಂದು ಕಾನೂನು ವ್ಯಾಜ್ಯಕ್ಕಿಳಿದರೆ ಯಾವೆಲ್ಲಾ ತೊಂದರೆಗಳನ್ನು ಅನುಭವಿಸಬೇಕಾಗುತ್ತೆ ಎನ್ನುವುದನ್ನು ಸಿದ್ದಲಿಂಗಯ್ಯ ತೋರಿಸಿದ್ದರು. ಭೂತಯ್ಯನ ದಬ್ಬಾಳಿಕೆ, ದೌರ್ಜನ್ಯ, ತಿರುಗಿ ಬೀಳುವ ಗುಳ್ಳ, ಮನುಷ್ಯನ ದುರಾಸೆ ಮತ್ತು ದುರಂಹಕಾರ, ಪ್ರಕೃತಿಯ ವಿಕೋಪ, ಮಾನೀಯತೆಯ ಮೇಲುಗೈ ಹೀಗೆ ಅನೇಕ ಅಂಶಗಳನ್ನೊಳಗೊಂಡ ಸದಭಿರುಚಿಯುಳ್ಳ, ಅತ್ಯುತ್ತಮ ಸಂದೇಶವನ್ನು ಸಾರುವ ಸಿನಿಮಾ ''ಭೂತಯ್ಯನ ಮಗ ಅಯ್ಯು''

ಜಿದ್ದಾಜಿದ್ದಿನ ಅಭಿನಯ

ಭೂತಯ್ಯನ ಪಾತ್ರದಲ್ಲಿ ಎಂಪಿ ಶಂಕರ್ ಅವರದ್ದು ಮನೋಜ್ಞ ಅಭಿನಯ. ಲೋಕೇಶ್ ಅವರ ಬಗ್ಗೆ ಕೆಮ್ಮುವಂತೆ ಇಲ್ಲ. ಇದಕ್ಕೆ ಅವರಿಗೆ ಒಲಿದ ರಾಜ್ಯ ಪ್ರಶಸ್ತಿಯೇ ಕೈಗನ್ನಡಿ. ಗುಳ್ಳನ ಪಾತ್ರದಲ್ಲಿ ವಿಷ್ಣುವರ್ಧನ್ ಅವರದ್ದು ಕೂಡ ಸಹಜ ಅಭಿನಯ. ಅನ್ಯಾಯದ ವಿರುದ್ಧ ಹೋರಾಡುವ ಬಂಡಾಯಗಾರನಾಗಿ ತಮ್ಮ ಉದ್ವೇಗ ಮತ್ತು ಭಾವುಕತೆಯ ಮೂಲಕ ಬೆರಗುಗೊಳಿಸಿದ್ದರು ವಿಷ್ಣು.
ಇವರ ಜೊತೆಗೆ ಬಾಲಕೃಷ್ಣ, ದಿನೇಶ್‌, ಲೋಕನಾಥ್, ಧೀರೇಂದ್ರ ಗೋಪಾಲ್ ಇನ್ನೂ ಅನೇಕರು ಈ ಚಿತ್ರದಲ್ಲಿ ನಟಿಸಿದ್ದಾರೆ. ಇವರೆಲ್ಲರ ಅಭಿನಯವನ್ನು ಕಣ್ತುಂಬಿಕೊಳ್ಳುವುದೇ ಸೊಗಸು.

ಒಂದೊಂದು ದೃಶ್ಯವೂ ಒಂದೊಂದು ಇತಿಹಾಸ.

''ಭೂತಯ್ಯನ ಮಗ ಅಯ್ಯು''. ಭಾರತೀಯ ಚಿತ್ರರಂಗದ ಜೀವಂತ ದಂತಕಥೆ. 52 ವರ್ಷಗಳಲ್ಲಿ ಸಾವಿರಾರು ಸಿನಿಮಾಗಳು ಬಂದರೂ ಜನಮಾನಸದಲ್ಲಿ ಹಚ್ಚಹಸಿರಾಗಿರೋ ಸಿನಿಮಾ. ಆ ಚಿತ್ರದ ದೇವಯ್ಯ ನೇಣು ಹಾಕಿಕೊಂಡಿದ್ದು, ಭೂತಯ್ಯನ ಮೃತನ ದೇಹವನ್ನ ಊರಲ್ಲಿ ಮೆರವಣಿಗೆ ಮಾಡಿದ್ದು, ಎರಡು ರೂಪಾಯಿಯಲ್ಲಿ ನಾಲ್ವರು ಅನ್ನ... ಅನ್ನ.... ಅಂತ ಊಟ ಮಾಡಿದ್ದು. ಹೀಗೆ ಎಷ್ಟೇ ಬಾರಿ ನೋಡಿದ್ರು ಮತ್ತೆ ಮತ್ತೆ ನೋಡ್ಬೇಕು ಎನ್ನುವ ಇಂತಹ ಹಲವು ದೃಶ್ಯಗಳು ಈ ಚಿತ್ರದಲ್ಲಿವೆ.

ಸಿದ್ದಲಿಂಗಯ್ಯ ತಾಂತ್ರಿಕ ಜ್ಞಾನ ಮತ್ತು ಮೈಜುಮ್ಮೆನಿಸುವ ದೃಶ್ಯಾವಳಿ

ಈ ಕಾಲದಲ್ಲಿ ಅಂಗೈಯಲ್ಲಿಯೇ ತಂತ್ರಜ್ಞಾನ ಇದೆ. ಗ್ರೀನ್ ಸ್ಕ್ರೀನ್.. ಗ್ರಾಫಿಕ್ಸ್.. ವಿಎಫ್‌ಎಕ್ಸ್.. ಹೀಗೆ ತಮ್ಮ ಕಲ್ಪನೆಗೆ ಅನುಗುಣವಾಗಿ ನಿರ್ದೇಶಕರು, ದೃಶ್ಯಗಳನ್ನು ಹೆಣೆಯಬಹುದು. ಆ ದೃಶ್ಯಗಳನ್ನು ತೆರೆಯ ಮೇಲೆ ಕೂಡ ಪರಿಣಾಮಕಾರಿಯಾಗಿ ತರಬಹುದು. ಆದರೆ..ಆ ಕಾಲದಲ್ಲಿ ಇದ್ಯಾವುದು ಇರಲಿಲ್ಲ. ಇದ್ದಿದ್ದು ನಂಬಿಕೆ, ಶ್ರದ್ದೆ, ಪರಿಶ್ರಮ ಮತ್ತು ಪರಿಪೂರ್ಣತೆ ಮಾತ್ರ. ಇದಕ್ಕೆ ಕೈಗನ್ನಡಿಯೇ ''ಭೂತಯ್ಯನ ಮಗ ಅಯ್ಯು'' ಚಿತ್ರದ 20 ನಿಮಿಷಗಳ ಕ್ಲೈಮ್ಯಾಕ್ಸ್

ಒಂದು ಪ್ಯಾರಾ 20 ನಿಮಿಷ ಕ್ಲೈಮ್ಯಾಕ್ಸ್

ಗೊರೂರು ರಾಮಸ್ವಾಮಿ ಅಯ್ಯಂಗಾರ್ ಅವರು ಬರೆದ ಕಾದಂಬರಿಯಲ್ಲಿ ಕ್ಲೈಮ್ಯಾಕ್ಸ್ ಕೇವಲ ಒಂದು ಪ್ಯಾರಾ ಮಾತ್ರ ಇತ್ತು. ಆ ಒಂದು ಪ್ಯಾರಾವನ್ನು 20 ನಿಮಿಷದವರೆಗೆ ಪರಿವರ್ತಿಸಿದ್ದರು ಸಿದ್ದಲಿಂಗಯ್ಯ. ಸಿದ್ದಲಿಂಗಯ್ಯ ಅವರ ಕಲ್ಪನೆಗೆ ಅನುಗುಣವಾಗಿ ಡಿ.ವಿ.ರಾಜಾರಾಮ್ ಅದ್ಭುತವಾಗಿ ದೃಶ್ಯಗಳನ್ನು ಸೆರೆ ಹಿಡಿದಿದ್ದರು. ಇದಕ್ಕೆ ಪೂರಕವಾಗಿ ಸಂಗೀತ ಲೋಕದ ದಂತಕಥೆ ಜಿ.ಕೆ.ವೆಂಕಟೇಶ್ ತಮ್ಮ ಸಂಗೀತದಿಂದ ಸನ್ನಿವೇಶಗಳ ಮೆರಗು ಹೆಚ್ಚಿಸಿದ್ದರು.


ಶಿವನ ಸಮುದ್ರದಲ್ಲಿ ಕ್ಲೈಮ್ಯಾಕ್ಸ್, 20 ದಿನ ಚಿತ್ರೀಕರಣ

ಶಿವನಸಮುದ್ರದಲ್ಲಿ ಯಾವುದೇ ಸ್ಪೆಷಲ್ ಎಫೆಕ್ಟ್ಸ್ ಇಲ್ಲದೆ, ಸ್ಥಳೀಯ ಈಜುಗಾರರ ಸಹಾಯದಿಂದ 20 ದಿನಗಳ ಕಾಲ ಈ ಚಿತ್ರದ ಕ್ಲೈಮ್ಯಾಕ್ಸ್ ಸೆರೆ ಹಿಡಿದಿದ್ದು ಮತ್ತೊಂದು ವಿಶೇಷ.


ಎರಡು ಬಾರಿ ಟ್ಯಾಂಕ್ ನಿರ್ಮಾಣ

ಖ್ಯಾತ ಛಾಯಾಗ್ರಾಹಕ ಬಿ.ಎಸ್. ಬಸವರಾಜ್ ಹಿಂದೊಮ್ಮೆ 1974ರಲ್ಲಿ ತೆರೆಕಂಡ ''ಭೂತಯ್ಯನ ಮಗ ಅಯ್ಯು'' ಚಿತ್ರದ ಛಾಯಾಗ್ರಾಹಕ ಡಿ.ವಿ. ರಾಜಾರಾಮ್‌ಗೆ ಸಹಾಯಕರಾಗಿದ್ದರು. ತಮ್ಮ ಈ ಅನುಭವವನ್ನು '' ದಿ ಹಿಂದು''ಗೆ ನೀಡಿದ ಸಂದರ್ಶನದಲ್ಲಿ ಹಂಚಿಕೊಂಡಿದ್ದ ಬಸವರಾಜ್, ''ಭೂತಯ್ಯನ ಮಗ ಅಯ್ಯು'' ಚಿತ್ರದ ಕ್ಲೈಮ್ಯಾಕ್ಸ್ ಸಿನಿಮಾ ಇತಿಹಾಸದಲ್ಲಿಯೇ ಬಂದ ಅತ್ಯುತ್ತಮ ದೃಶ್ಯ ಎಂದು ಬಣ್ಣಿಸಿದ್ದರು.

ಯಾವುದೇ ಅನಿರೀಕ್ಷಿತ ಪರಿಸ್ಥಿತಿಯನ್ನು ನಿಭಾಯಿಸಲು ಎಂಟು ಸ್ಥಳೀಯ ಈಜುಗಾರರು ಮತ್ತು ಕೆಲವು ದೋಣಿ ಚಲಾಯಿಸುವವರನ್ನು ನೇಮಿಸಲಾಗಿತ್ತು ಎಂದು ಹೇಳಿದ್ದ ಬಸವರಾಜ್, ಶಿವನಸಮುದ್ರದಲ್ಲಿ ಚಿತ್ರೀಕರಣ ಆರಂಭಕ್ಕೂ ಮುನ್ನ, ನೀರಿನ ಆಳ, ಪ್ರವಾಹದ ತೀವ್ರತೆ ಮತ್ತು ಸುಳಿಗಳ ಸ್ಥಳದ ಬಗ್ಗೆ ಕಲಾವಿದರು ಹಾಗೂ ಸಿಬ್ಬಂದಿಗೆ ಮಾಹಿತಿ ನೀಡಲು ಸಭೆ ನಡೆಸಲಾಗಿತ್ತು ಎಂದು ನೆನಪು ಮಾಡಿಕೊಂಡಿದ್ದರು.

ಎಲ್.ವಿ. ಶಾರದಾ ಮತ್ತು ಅವರ ಮಕ್ಕಳು ನದಿಯ ದಂಡೆಯ ಮನೆಯಿಂದ ಹೊರಬರಲು ಪ್ರಯತ್ನಿಸುವ, ಜಲಾಶಯ ಒಡೆದು ನೆರೆ ನೀರು ಮನೆಯನ್ನು ಸಂಪೂರ್ಣವಾಗಿ ಸುತ್ತುವರೆದಾಗ ವಿಷ್ಣುವರ್ಧನ್ ಒಬ್ಬರೇ ರಾಫ್ಟ್‌ನಲ್ಲಿ ರಕ್ಷಣೆಗೆ ಹೊರಡುವ ಕ್ಲೈಮ್ಯಾಕ್ಸ್ ದೃಶ್ಯಗಳನ್ನು ಕಾಲಸಪುರ, ಮದರಾಯನಕಟ್ಟೆ ಮತ್ತು ಶಿವನಸಮುದ್ರದಲ್ಲಿ ಸುಮಾರು 20 ದಿನಗಳ ಕಾಲ ಚಿತ್ರೀಕರಿಸಲಾಯಿತು ಎಂದು ನೆನಪು ಮಾಡಿಕೊಂಡಿದ್ದ ಬಸವರಾಜ್, ಆರಂಭದಲ್ಲಿ, ಮನೆಗೆ ನೀರು ಹರಿಯುವಂತೆ ಮಾಡಲು ಒಂದು ಟ್ಯಾಂಕ್ ನಿರ್ಮಿಸಲಾಗಿತ್ತು. ಆದರೆ ಕ್ಯಾಮರಾ ರೋಲ್ ಆಗುತ್ತಿದ್ದಂತೆಯೇ ತಕ್ಷಣ ಅದು ಒಡೆದು ಹೋಯಿತು ಎಂದು ಹೇಳಿದ್ದರು. ಸಿದ್ದಲಿಂಗಯ್ಯ ಅದನ್ನು ಮತ್ತೊಮ್ಮೆ ನಿರ್ಮಿಸಿ ಆ ದೃಶ್ಯವನ್ನು ಮತ್ತೆ ಸೆರೆಹಿಡಿದರು ಎಂದು ನೆನಪು ಮಾಡಿಕೊಂಡಿದ್ದರು.

ಮೂರು ಭಾಷೆಗಳಿಗೆ ರಿಮೇಕ್

''ಭೂತಯ್ಯನ ಮಗ ಅಯ್ಯು'' ಸಿನಿಮಾವನ್ನು 1975ರಲ್ಲಿ ತಮಿಳಿಗೆ ''ಎಲ್ಲರುಮ್ ನಲ್ಲವರೇ'' ಹೆಸರಿನಲ್ಲಿ ರಿಮೇಕ್ ಮಾಡಲಾಯಿತು. ಹಿಂದಿಯಲ್ಲಿ ''ಏಕ್ ಗಾಂವ್ ಕಿ ಕಹಾನಿ'' (1975) ಮತ್ತು ತೆಲುಗಿಗೆ ''ಅಂಧರು ಮಂಚಿವಾರೆ'' ಹೆಸರಿನಲ್ಲಿ ರಿಮೇಕ್ ಮಾಡಲಾಗಿತ್ತು.

ಕೊನೆ ಮಾತು

ಒಟ್ನಲ್ಲಿ ''ಭೂತಯ್ಯನ ಮಗ ಅಯ್ಯು'' ಕೇವಲ ಒಂದು ಸಿನಿಮಾವಲ್ಲ. ಇದು ಕನ್ನಡ ಚಿತ್ರರಂಗದ ಪರಮೋಚ್ಚ ಶಿಖರವನ್ನು ಪ್ರತಿನಿಧಿಸುವ ಒಂದು ಸಾಂಸ್ಕೃತಿಕ ಮೈಲಿಗಲ್ಲು. ಜಾತಿ ಸಂಘರ್ಷ, ಆರ್ಥಿಕ ಶೋಷಣೆ ಮತ್ತು ದ್ವೇಷದ ಮೇಲೆ ಮಾನವೀಯತೆಯ ಅಂತಿಮ ವಿಜಯವನ್ನು ಸಾರುವ ಅತ್ಯಂತ ಗಟ್ಟಿಯಾದ ಮತ್ತು ಹೃದಯಸ್ಪರ್ಶಿ ಕಲಾಕೃತಿ. ನೀವು ಸಿನಿಮಾ ಪ್ರೇಮಿಯಾಗಿರಲಿ ಅಥವಾ ಸಾಮಾನ್ಯ ಪ್ರೇಕ್ಷಕರಾಗಿರಲಿ, ಈ ಚಿತ್ರ ನಿಮ್ಮನ್ನು ಸಂಪೂರ್ಣವಾಗಿ ಕಥೆಯೊಳಗೆ ಸೆಳೆದುಕೊಂಡು, ನಿಮ್ಮನ್ನು ಮಂತ್ರಮುಗ್ಧರನ್ನಾಗಿಸುತ್ತದೆ. ಕೆಲವೇ ದಿನಗಳಲ್ಲಿ ಮರೆತುಹೋಗುವ ಇಂದಿನ ಕಮರ್ಷಿಯಲ್ ಚಿತ್ರಗಳ ನಡುವೆ, ಸಿನಿಮಾ ಪ್ರೀತಿ ಇದ್ದರೆ ಎಂಥಾ ಪವಾಡವನ್ನು ಕೂಡ ಮಾಡಬಹುದು ಎನ್ನುವುದಕ್ಕೆ 52 ವರ್ಷಗಳ ಹಿಂದೆ ಅಂದರೆ 1974ರಲ್ಲಿ ಬಂದ ಈ ಚಿತ್ರ ಅತ್ಯುತ್ತಮ ಉದಾಹರಣೆ.

English summary
No CGI, no green screens—just raw nature and filmmaking genius. Read the ultimate review of Sandalwood’s greatest realistic epic, Bhootayyana Maga Ayyu!No CGI, no green screens—just raw nature and filmmaking genius. Read the ultimate review of Sandalwood’s greatest realistic epic, Bhootayyana Maga Ayyu!
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X