»   » 2002ರ ಚೊಚ್ಚಲ ಕಾಣಿಕೆ ‘ಬೂತಯ್ಯನ ಮಕ್ಕಳು’ ಈ ಚಿತ್ರಕ್ಕೂ ಕನ್ನಡದ ಸ್ಮರಣೀಯ ‘ಬೂತಯ್ಯನ ಮಗ ಅಯ್ಯು’ಗೂ ಖಂಡಿತಾ ಸಂಬಂಧ ಇಲ್ಲ. ಆದರೆ ಎರಡೂ ಚಿತ್ರದಲ್ಲಿ ಲೋಕೇಶ್‌ ಇದ್ದಾರೆ ಅಷ್ಟೇ.

2002ರ ಚೊಚ್ಚಲ ಕಾಣಿಕೆ ‘ಬೂತಯ್ಯನ ಮಕ್ಕಳು’ ಈ ಚಿತ್ರಕ್ಕೂ ಕನ್ನಡದ ಸ್ಮರಣೀಯ ‘ಬೂತಯ್ಯನ ಮಗ ಅಯ್ಯು’ಗೂ ಖಂಡಿತಾ ಸಂಬಂಧ ಇಲ್ಲ. ಆದರೆ ಎರಡೂ ಚಿತ್ರದಲ್ಲಿ ಲೋಕೇಶ್‌ ಇದ್ದಾರೆ ಅಷ್ಟೇ.

Subscribe to Filmibeat Kannada


ಈ ಚಿತ್ರಕ್ಕೂ ‘ಬೂತಯ್ಯನ ಮಗ ಅಯ್ಯು’ಗೂ ಯಾವುದೇ ಸಂಬಂಧ ಇಲ್ಲ. ಇದು ಮುದ್ದುರಾಜ್‌ ಮೊದ್ದು ಮೊದ್ದಾಗಿ ನಿರ್ದೇಶಿಸಿರುವ ಒಂದು ಸಾಧಾರಣ ಮಸಾಲೆ ಚಿತ್ರ. ವಿಶೇಷ ಎಂದರೆ ಎರಡೂ ಚಿತ್ರದಲ್ಲಿ ಲೋಕೇಶ್‌ ಇದ್ದಾರೆ.

ಮದುವೆಯ ಮಂಟಪದಿಂದ ಪ್ರಾರಂಭವಾಗಿ ಅಲ್ಲೇ ಕೊನೆಗೊಳ್ಳುವ ಚಿತ್ರದ ಹುರುಳು ಬೂತಯ್ಯನ ಮಕ್ಕಳು ಬ್ರಹ್ಮಚಾರಿಗಳಾಗಿಯೇ ಉಳಿಯುತ್ತಾರೆಯೋ ಇಲ್ಲ ಮದುವೆಯಾಗುತ್ತಾರೋ ಎನ್ನುವ ಸಸ್ಪೆನ್ಸ್‌ . ಮಾಮೂಲಿನಂತೆ ಎಂದೊ ನಡೆದುಹೋದ ಕಹಿ ಘಟನೆ ಎರಡು ಕುಟುಂಬಗಳ ಮಧ್ಯೆ ದ್ವೇಷ ಹುಟ್ಟಿಸುತ್ತದೆ. ಅತ್ತ ದ್ವೇಷವಾದರೆ ಇತ್ತ ಆ ಮನೆಯ ಮಗ - ಈ ಮನೆಯ ಮಗಳು ಪ್ರೀತಿಸುತ್ತಾರೆ ಮುಂದೇನಾಗತ್ತೆ? ಅದೇ ಚಿತ್ರದ ಒಂದು ಕಥೆ. ಆದರೆ ಒಟ್ಟಾರೆಯಾಗಿ ಚಿತ್ರದ ಕತೆ ಹೇಳುವುದು ಸ್ವಲ್ಪ ಕಷ್ಟವೇ?

ಇದ್ಕಕ್ಕೂ ಕಾರಣ ಇದೆ. ಈ ಚಿತ್ರದಲ್ಲಿ ಯಾವ್ಯಾವುದೋ ಪಾತ್ರಗಳು ಪ್ರತ್ಯಕ್ಷವಾಗುತ್ತವೆ. ಆ ಪಾತ್ರಕ್ಕೊಂದು ಉಪ ಕಥೆ ಇದೆ. ಇದ್ದಕ್ಕಿದ್ದಂತೆ ಚರಣ್‌ರಾಜ್‌ ಪ್ರತ್ಯಕ್ಷ ಆಗ್ತಾರೆ. ಅವರ್ಯಾರು? ಏಕೆ ಬಂದರು ಎಂದು ಪ್ರೇಕ್ಷಕರು ಊಹಿಸುವ ಹೊತ್ತಿಗೆ ಅವರಿಗೊಬ್ಬಳು ತಂಗಿ ಇರುವ ವಿಷಯ ಹೊರಬೀಳತ್ತೆ. ಮತ್ತೆ ಆ ತಂಗಿಯ ಕೊಲೆಯಾಗಿದ್ದು ಏಕೆ ಎಂಬ ರಹಸ್ಯ.... ಹೀಗೆ ಕಥಾಹಂದರವೇ ಇದೆ.

ಇದು ರೀಮೇಕು ಚಿತ್ರ ಎನ್ನುವ ಕೆಲವರು ಬೂತಯ್ಯನ ಮಕ್ಕಳು ‘ಗಾಡ್‌ ಫಾದರ್‌’ ಪ್ರತಿರೂಪ ಎಂದರೆ, ಮತ್ತೆ ಕೆಲವರು ‘ಕಾದಲಕ್ಕು ಮರ್ಯಾದೆ’ ಎನ್ನುವ ತಮಿಳು ಚಿತ್ರದ ಅವತರಣಿಕೆ ಅಂತಾರೆ, ಕಳೆದ ವರ್ಷ ತೆರೆಕಂಡ ‘ಹಾಲು ಸಕ್ಕರೆ’ ಚಿತ್ರದ ಕೆಲವು ಸನ್ನಿವೇಶಗಳೂ ಈ ಚಿತ್ರದಲ್ಲಿವೆ. ಅಂದರೆ ಇದು ರೀಮೇಕೋ ಅಥವಾ ನಾಲ್ಕಾರು ಚಿತ್ರಗಳ ಕಥಾ ಸಂಕಲನವೋ ಎಂಬುದನ್ನು ಪ್ರೇಕ್ಷಕರೇ ನಿರ್ಧರಿಸಬೇಕು.

ಅ್ಯಕ್ಷನ್‌ ದೃಶ್ಯಗಳಲ್ಲಿ ನವನಟ ಸೌರವ್‌ ಓಕೆ ಎನಿಸಿದರೂ ಅಭಿನಯ ಕಲೆ ಇನ್ನೂ ಕರಗತವಾಗಿಲ್ಲ. ನವನಟಿ ಚೈತ್ರ ಕಲಿಯಬೇಕಾದ್ದು ಸಾಗರದಷ್ಟಿದೆ. ಚಿತ್ರದುದ್ದಕ್ಕೂ ನಿರುತ್ಸಾಹ ಎದ್ದು ಕಾಣುತ್ತದೆ. ಚಿತ್ರದಲ್ಲಿ ಅನಂತ್‌ನಾಗ್‌ ತಮ್ಮ ಎಂದಿನ ಸಹಜಾಭಿನಯದಿಂದ ಮಿಂಚಿ ಜನರನ್ನು ಕೊಂಚ ನಗಿಸುತ್ತಾರೆ. ಸದಾ ಕಣ್ಣೀರ ಕೋಡಿಯೇ ಹರಿಸಿದ ಶ್ರುತಿ ಈ ಚಿತ್ರದಲ್ಲಿ ಕೊಂಚ ನಗಿಸುವ ಪ್ರಯತ್ನ ಮಾಡಿದ್ದಾರೆ.

ದ್ವಾರಕೀಶ್‌ ಜಗಳ, ಚರಣ್‌ರಾಜ್‌ ಹೋರಾಟ - ಹೊಡೆದಾಟವಿರುವ ಚಿತ್ರದ ಪ್ಲಸ್‌ ಪಾಯಿಂಟ್‌ ಪ್ರಕೃತಿಯನ್ನು ಮನಮೋಹಕವಾಗಿ ಪ್ರತಿಫ್ರೇಮ್‌ನಲ್ಲೂ ಚಿತ್ರೀಕರಿಸಿರುವ ಗಿರಿಯ ಕ್ಯಾಮರಾ ಚಾತುರ್ಯ. ತಂಗಾಳಿಯನ್ನೇ ತೇರು ಮಾಡಿ ಎಳೆದಿರುವ ಕಲ್ಯಾಣ್‌ ಗೀತೆ ಚೆನ್ನಾಗಿದೆ. ರಾಜೇಶ್‌ ರಾಮನಾಥ್‌ ಸಂಗೀತ ಪರವಾಗಿಲ್ಲ ಅನ್ನಿಸುತ್ತದೆ. ಶ್ರೀರಾಜಮಾತಾ ಪ್ರೊಡಕ್ಷನ್ಸ್‌ ಲಾಂಛನದ ವರ್ಷದ ಮೊದಲ ಚಿತ್ರ- ಬೂತಯ್ಯನ ಮಕ್ಕಳ ನಿರ್ಮಾಪಕರು ಡಾ. ಸುರೇಶ್‌ ಶರ್ಮ.

ಮುಖಪುಟ / ಸ್ಯಾಂಡಲ್‌ವುಡ್‌

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada