Border 2 Review : ರಣರಂಗ..ಭಾವತರಂಗ - ಸನ್ನಿಡಿಯೋಲ್ ಬೆಂಕಿ : ಹೇಗಿದೆ ಬಾರ್ಡರ್ 2 ? ಇಲ್ಲಿದೆ ವಿಮರ್ಶೆ
ಕನ್ನಡ ಚಿತ್ರರಂಗವನ್ನು ಹೊರತು ಪಡಿಸಿದರೆ ಅಕ್ಕ-ಪಕ್ಕದ ರಾಜ್ಯಗಳಲ್ಲಿನ ಚಿತ್ರರಂಗದವರಿಗೆ ಅದರಲ್ಲಿಯೂ ವಿಶೇಷವಾಗಿ ಹಿಂದಿ ಚಿತ್ರರಂಗಕ್ಕೆ ಸದ್ಯ ಸಿಕ್ವೆಲ್ ಜ್ವರ ಹಿಡಿದಿದೆ. ನಿಜಾ.. ನಮ್ಮಲ್ಲಿ ಕೂಡ ಈ ಟ್ರೆಂಡ್ ಇದೆ. ಆದರೆ.. ಅನ್ಯ ಭಾಷೆಯವರಿಗೆ ಹೋಲಿಸಿದರೆ ಪ್ರಯತ್ನಗಳು ನಡೆಯುತ್ತಿರುವುದು ಕಡಿಮೆ. ಬೇರೆ ಭಾಷೆಗಳಲ್ಲಿ ಹಳೆಯ ಗೆಲುವನ್ನೇ ಟ್ರಂಪ್ ಕಾರ್ಡ್ ಆಗಿ ಉಪಯೋಗಿಸಿಕೊಂಡು ಹಲವರು ಇಲ್ಲಿ ದುಡ್ಡು ಬಾಚಿಕೊಳ್ಳುವ ಪ್ರಯತ್ನವನ್ನು ಮಾಡುತ್ತಿದ್ದಾರೆ.
ಚಿತ್ರರಂಗದಲ್ಲಿ ಯಾರನ್ನೇ ಕೇಳಿ.. ಎಲ್ಲರಲ್ಲಿಯೂ ತಮ್ಮದೇ ಆದ ಯೂನಿವರ್ಸ್ ರೆಡಿಯಾಗಿರುತ್ತೆ. ಇತಿಹಾಸದ ಪುಟ ಸೇರಿದ ತಮ್ಮ ಹಿಂದಿನ ಚಿತ್ರದ ಮುಂದಿನ ಭಾಗದ ಕಥೆ ಸಿದ್ಧವಾಗಿರುತ್ತೆ. ಹಾಗಂಥ ಇಲ್ಲಿ ಎಲ್ಲರಿಗೆ ಗೆಲುವು ಸಿಗಲ್ಲ. ಯಾಕೆಂದರೆ ಸಿಕ್ವೆಲ್ ಮಾಡುವುದು ಹುಡುಗಾಟ ಅಲ್ಲ. ಯಾಕೆಂದರೆ ಸಿಕ್ವೆಲ್ ಅಂದಾಗ ನಿರೀಕ್ಷೆ ಗಗನಕ್ಕೇರಿರುತ್ತೆ. ಮೈಯೆಲ್ಲಾ ಕಣ್ಣಾಗಿಸಿಕೊಂಡು ಸಿನಿಮಾ ಮಾಡಬೇಕಾಗುತ್ತೆ. ಚೂರು ಯಾಮಾರಿದರೂ ಆ ಬ್ರ್ಯಾಂಡ್ ಮಣ್ಣು ಪಾಲಾಗುವ ಸಾಧ್ಯತೆ ಇರುತ್ತೆ.

ಹೀಗಾಗಿಯೇ ''ಬಾರ್ಡರ್ 2'' ಚಿತ್ರವನ್ನು ಘೋಷಿಸಿದಾಗ ಹಲವರು ಅಪಸ್ವರ ತೆಗೆದಿದ್ದರು. ಹಳೆಯ ಕ್ಲಾಸಿಕ್ ಚಿತ್ರಕ್ಕೆ ಇದು ಕಪ್ಪುಚುಕ್ಕೆಯಾಗುವುದು ಬೇಡ ಎಂದಿದ್ದರು. ಆದರೂ ಕೂಡ ಚಿತ್ರತಂಡ ವ್ಯಕ್ತವಾದ ಅಭಿಪ್ರಾಯಕ್ಕೆ ಮನ್ನಣೆ ಕೊಡಲಿಲ್ಲ. ಅದರ ಫಲವಾಗಿ ಸದ್ಯ ''ಬಾರ್ಡರ್ 2'' ಸಿದ್ಧವಾಗಿ ಗಣರಾಜ್ಯೋತ್ಸವದ ಪ್ರಯುಕ್ತ ನಿನ್ನೆ ( ಜನವರಿ 23 ) ಬಿಡುಗಡೆಯಾಗಿದೆ.
ಹಾಗಿದ್ದರೆ ಹೇಗಿದೆ ''ಬಾರ್ಡರ್ 2''..? ಚಿತ್ರದ ಕಥಾ ಹಂದರವೇನು..? ಹೆಚ್ಚು ಕಡಿಮೆ ಮೂರುವರೆ ಗಂಟೆ ಇರುವ ಈ ಚಿತ್ರ ದೇಶಪ್ರೇಮವನ್ನು ಉಕ್ಕಿಸುವಲ್ಲಿ ಯಶಸ್ವಿಯಾಗಿದೆಯಾ..? ಚಿತ್ರದ ಪ್ಲಸ್ ಮತ್ತು ಮೈನಸ್ ಪಾಯಿಂಟ್‌ಗಳೇನು..? ಎಂದು ತಿಳಿಯಲು ಮುಂದೆ ಓದಿ.
ಕಥಾಹಂದರ
1971ರಲ್ಲಿ ನಡೆದ ಭಾರತ ಮತ್ತು ಪಾಕಿಸ್ತಾನದ ನಡುವೆ ನಡೆದ ಯುದ್ಧದ ಕಥೆ ಈ ಹಿಂದೆ 1997ರಲ್ಲಿ ಬಂದ ''ಬಾರ್ಡರ್'' ಚಿತ್ರದಲ್ಲಿತ್ತು. ಇಲ್ಲಿಯೂ ಕೂಡ 1971ರಲ್ಲಿ ನಡೆದ ಆ ಯುದ್ಧದ ಹಿನ್ನೆಲೆಯಲ್ಲಿಯೇ ಕಥೆ ಸಾಗುತ್ತೆ. ಆದರೆ, ಹಿಂದಿನ ''ಬಾರ್ಡರ್''ನಲ್ಲಿ ರಾಜಸ್ಥಾನ ಲೊಂಗೆವಾಲಾದಲ್ಲಿ ನಡೆದ ಯುದ್ಧ ಮಾತ್ರ ಕೇಂದ್ರ ಬಿಂದುವಾಗಿತ್ತು. ಆದರೆ ಈ ಬಾರಿ ಬಸಂತರ್, ಕಾಶ್ಮೀರ್ ಸೇರಿ ಕೆಲ ಬೇರೆ ಯುದ್ದದ ಸುತ್ತ ಮುತ್ತ ಈ ''ಬಾರ್ಡರ್'' ಕಥೆಯನ್ನು ನಿರ್ಮಾಪಕಿಯೂ ಆದ ನಿಧಿ ದತ್ತಾ ಹೆಣೆದಿದ್ದಾರೆ. ಕೇವಲ ಸೈನ್ಯ ಮಾತ್ರವಲ್ಲದೇ ನೌಕಾಪಡೆ ಮತ್ತು ವಾಯುಪಡೆಯ ದೃಷ್ಟಿಕೋನದಿಂದ ಕಥೆ ಹೇಳುವ ಪ್ರಯತ್ನ ಮಾಡಿದ್ದಾರೆ.
ಭಾರತೀಯ ಸೇನೆಯ ಮೇಜರ್ ಹೋಶಿಯಾರ್ ಸಿಂಗ್ ದಹಿಯಾ (ವರುಣ್ ಧವನ್) ಭಾರತೀಯ ನೌಕಾಪಡೆಯ ಲೆಫ್ಟಿನೆಂಟ್ ಕಮಾಂಡರ್ ಎಂ.ಎಸ್. ರಾವತ್ (ಅಹಾನ್ ಶೆಟ್ಟಿ) ಮತ್ತು ಭಾರತೀಯ ವಾಯುಪಡೆಯ ಫ್ಲೈಯಿಂಗ್ ಆಫೀಸರ್ ನಿರ್ಮಲ್ ಜಿತ್ ಸಿಂಗ್ (ದಿಲ್ಜಿತ್ ದೋಸಾಂಜ್) ಇವರ ಮೂಲಕ ಈ ಕಥೆ ಅನಾವರಣ ಆಗುತ್ತೆ. ಇವರ ಜೊತೆಯಲ್ಲಿ ಹಿರಿಯ ಅಧಿಕಾರಿ ಲೆಫ್ಟಿನೆಂಟ್ ಕರ್ನಲ್ ಫತೇ ಸಿಂಗ್ ಕಾಲರ್ (ಸನ್ನಿ ಡಿಯೋಲ್) ಕೂಡ ಇರುತ್ತಾರೆ. ಇವರೆಲ್ಲರ ವ್ಯೆಯಕ್ತಿಕ ಜೀವನ.. ದೇಶಭಕ್ತಿಯ ಕಥೆ ಆ ನಂತರ ಯುದ್ಧಭೂಮಿಯತ್ತ ಹೊರಳುತ್ತೆ. ಉಳಿದಂತೆ ಯುದ್ಧ ಮತ್ತು ಅಂತ್ಯ.

ಅಭಿನಯ ಹೇಗಿದೆ..?
ದೇಶಭಕ್ತಿಯ ಚಿತ್ರಗಳಲ್ಲಿ.. ಪಾಕಿಸ್ತಾನದ ವಿರುದ್ಧ ಅಬ್ಬರಿಸುವ ಚಿತ್ರಗಳಲ್ಲಿ.. ಸದ್ಯ ಸನ್ನಿ ಡಿಯೋಲ್ ಅವರನ್ನು ಯಾರಿಂದಲೂ ಮೀರಿಸಲು ಸಾಧ್ಯ ಇಲ್ಲ. ''ಬಾರ್ಡರ್ 2'' ಚಿತ್ರದ ಮೂಲಕ ಇದು ಮತ್ತೊಮ್ಮೆ ಸಾಬೀತು ಆಗಿದೆ. ವಯಸ್ಸಾದರೂ ಕೂಡ ಸನ್ನಿ ಡಿಯೋಲ್ ತಮ್ಮ ಪಾತ್ರಕ್ಕೆ ಸಂಪೂರ್ಣ ನ್ಯಾಯ ಸಲ್ಲಿಸಿದ್ದಾರೆ. ಅಕ್ಷರಶಃ ಬೆಂಕಿಯುಂಡೆ ಉಗುಳಿದ್ದಾರೆ. ಇವರ ಡೈಲಾಗ್‌ಗಳಿಗೆ ಚಿತ್ರಮಂದಿರದಲ್ಲಿ ಶಿಳ್ಳೆ, ಚಪ್ಪಾಳೆಯ ಸದ್ದು ಕೇಳಿ ಬರುತ್ತೆ.
ಇವರ ತರಬೇತಿಯಲ್ಲಿ ಪಳಗುವ ಹುಡುಗರಾಗಿ ವರುಣ್ ಧವನ್, ದಿಲ್ಜಿತ್ ಸಿಂಗ್ ಮತ್ತು ಅಹಾನ್ ಶೆಟ್ಟಿ ಕಾಣಿಸಿಕೊಂಡಿದ್ದಾರೆ. ಇನ್ನು ಈ ಹಿಂದೆ ''ಘರ್ ಕಬ್ ಆವೋಗೆ'' ಹಾಡು ಬಿಡುಗಡೆಯಾದಾಗ ಹಲವರು ವರುಣ್ ಧವನ್ ಅಭಿನಯವನ್ನು ಆಡಿಕೊಂಡಿದ್ದರು. ಕಾಲೆಳೆದಿದ್ದರು. ಟ್ರೋಲ್ ಮಾಡಿದ್ದರು. ಚಿತ್ರ ಬಿಡುಗಡೆಯಾಗುವುದನ್ನೇ ಕಾಯುತ್ತಿದ್ದರು. ಇವರೆಲ್ಲರಿಗೆ ವರುಣ್ ಧವನ್ ನಿರಾಸೆ ಮಾಡಿದ್ದಾರೆ. ತಮ್ಮ ಅಭಿನಯದಿಂದ ಖಡಕ್ ಉತ್ತರ ನೀಡಿದ್ದಾರೆ.
ನಿಜಾ. ಹರಿಯಾಣ್ವಿ ಭಾಷೆ ಉಚ್ಚಾರಣೆಯಲ್ಲಿ ಅಲ್ಲಲ್ಲಿ ತಪ್ಪಾಗಿರಬಹುದು. ಆದರೂ ಕೂಡ ವರುಣ್ ಧವನ್ ಮನಸ್ಸು ಗೆಲ್ಲುತ್ತಾರೆ. ವಾಯುಪಡೆಯ ಅಧಿಕಾರಿಯ ಪಾತ್ರದಲ್ಲಿ ಕಾಣಿಸಿಕೊಂಡಿರುವ ದಿಲ್ಜಿತ್ ದೋಸಾಂಜ್ ಅವರ ಪಾಲಿಗೆ ಇದು ಸ್ಮರಣೀಯ ಪಾತ್ರ. ತಮ್ಮ ಪಾತ್ರವನ್ನು ಜೀವಿಸಿದ್ದಾರೆ ದಿಲ್ಜಿತ್. ಈ ಮೂವರಲ್ಲಿ ಸುನಿಲ್ ಶೆಟ್ಟಿ ಮಗ ಅಹಾನ್ ಶೆಟ್ಟಿ ಅಭಿನಯದ ವಿಚಾರದಲ್ಲಿ ಚೂರು ಹಿಂದೆ ಉಳಿದಿದ್ದಾರೆ.
ಸನ್ನಿ ಡಿಯೋಲ್ ಅವರ ಪತ್ನಿಯ ಪಾತ್ರ ನಿರ್ವಹಿಸಿರುವ ಮೋನಾ ಸಿಂಗ್ ಅವರ ಅಭಿನಯ ಮನ ಮುಟ್ಟುವಂತೆ ಇದೆ. ಮೇಧಾ ರಾಣಾ.. ಸೋನಂ ಭಾಜ್ವಾ.. ಆನ್ಯಾ ಸಿಂಗ್ ತಮ್ಮ ಪಾತ್ರಕ್ಕೆ ನ್ಯಾಯ ಸಲ್ಲಿಸಿದ್ದಾರೆ.
ಪ್ಲಸ್ ಪಾಯಿಂಟ್ಸ್
ಈ ಹಿಂದೆ ''ಕೇಸರಿ'' ಚಿತ್ರವನ್ನು ನಿರ್ದೇಶಿಸಿದ್ದ ಅನುರಾಗ್ ಸಿಂಗ್ ಈ ಚಿತ್ರವನ್ನು ಸಮರ್ಥವಾಗಿ ನಿರ್ವಹಿಸಿದ್ದಾರೆ. ಮೊದಲಾರ್ಧ ತುಸು ತಾಳ್ಮೆಯ ಪರೀಕ್ಷೆ ಮಾಡಿದರು ಕೂಡ ಸುಮಿತ್ ಅರೋರಾ ಜೊತೆ ಅನುರಾಗ್ ಸಿಂಗ್ ಹೆಣೆದಿರುವ ಚಿತ್ರಕಥೆಗೆ ನೋಡಿಸಿಕೊಂಡು ಹೋಗುವ ಗುಣ ಇದೆ. ಚಿತ್ರದಲ್ಲಿನ ಡೈಲಾಗ್‌ಗಳು ರೋಮಾಂಚಕ ಅನುಭವ ನೀಡುತ್ತವೆ. ಭಾವನಾತ್ಮಕ ಮತ್ತು ಆಕ್ಷನ್ ದೃಶ್ಯಗಳ ನಡುವೆ ಸಮತೋಲನ ಸಾಧಿಸುವಲ್ಲಿ ಅನುರಾಗ್ ಸಿಂಗ್ ಯಶಸ್ವಿಯಾಗಿದ್ದಾರೆ. ಅಂಶುಲ್ ಚೋಬೈ ಅವರ ಛಾಯಾಗ್ರಹಣ ಈ ಚಿತ್ರದ ಇನ್ನೊಂದು ಆಕರ್ಷಣೆ.
ಇನ್ನು ಹಿಂದಿನ ''ಬಾರ್ಡರ್'' ಚಿತ್ರದ ಗೆಲುವಲ್ಲಿ ಹಾಡುಗಳು ಮಹತ್ತರ ಪಾತ್ರವನ್ನು ನಿರ್ವಹಿಸಿದ್ದವು. ಆ ಪೈಕಿ ಎರಡು ಹಾಡುಗಳನ್ನು ಇಲ್ಲಿ ಉಳಿಸಿಕೊಳ್ಳಲಾಗಿದೆ. ಜಾನ್ ಸ್ಟೀವರ್ಟ್ ಎಡುರಿ ಅವರ ಹಿನ್ನಲೆ ಸಂಗೀತ ಚೆನ್ನಾಗಿದೆ. ಯುದ್ಧದ ಸನ್ನಿವೇಶಗಳು ಮೈನವಿರೇಳಿಸುತ್ತವೆ. ಕ್ಲೈಮ್ಯಾಕ್ಸ್‌ನ ಚಿತ್ರಮಂದಿರದಲ್ಲಿ ನೋಡುವ ಅನುಭವ ಬೇರೆ.
ಮೈನಸ್ ಪಾಯಿಂಟ್ಸ್
ಚಿತ್ರಕ್ಕೆ ಯಥೇಚ್ಚವಾಗಿ ಹಣ ಸುರಿಯಲಾಗಿದೆ. ಆದರೂ ಕೂಡ ವಿಎಫ್‌ಎಕ್ಸ್ ಕೆಲಸ ನಿರಾಸೆ ಮೂಡಿಸುತ್ತೆ. ಕೆಲ ಕಡೆ ಲಾಜಿಕ್ ಮಿಸ್ ಆಗಿದೆ. ಆದರೆ ಅದಕ್ಕೆ ದೇವರ ಮೇಲಿನ ನಂಬಿಕೆಯ ಜೊತೆ ಸಂಬಂಧ ಕಲ್ಪಿಸಲಾಗಿದೆ ಎನ್ನುವುದು ಬೇರೆ ವಿಷಯ. ಕೆಲ ದೃಶ್ಯಗಳು ಹಿಂದಿನ ''ಬಾರ್ಡರ್'' ನೆನಪಿಸುತ್ತವೆ.
ಕೊನೆ ಮಾತು
ಒಟ್ಟಾರೆ ''ಬಾರ್ಡರ್ 2'' ದೇಶ ಭಕ್ತಿಯನ್ನು ಬಡಿದೆಬ್ಬಿಸುವ ಸಿನಿಮಾ. 1997ರಲ್ಲಿ ಬಂದ ''ಬಾರ್ಡರ್'' ಚಿತ್ರವನ್ನು ಈ ''ಬಾರ್ಡರ್'' ಮೀರಿಸದೇ ಇದ್ದರೂ ಕೂಡ ಆ ಚಿತ್ರಕ್ಕೆ ಧಕ್ಕೆಯಾಗದಂತೆ ಈ ಚಿತ್ರವನ್ನು ನಿರೂಪಿಸುವಲ್ಲಿ ಚಿತ್ರತಂಡ ಯಶಸ್ವಿಯಾಗಿದೆ. ಇಲ್ಲಿ ಭಾವನಾತ್ಮಕವಾದ ಕ್ಷಣಗಳು ಇವೆ. ಯುದ್ಧದ ರಣರಂಗ ಕೂಡ ಇದೆ. ಭಾವತರಂಗವೂ ಇದೆ. ಮನೆ ಮಂದಿ ಜೊತೆ ಚಿತ್ರಮಂದಿರದಲ್ಲಿಯೇ ನೋಡಬೇಕಾದ ಚಿತ್ರ ಇದು. ಓಟಿಟಿಯಲ್ಲಿ ಚಿತ್ರಮಂದಿರದಲ್ಲಿ ಸಿಗುವ ತೃಪ್ತಿ ಬಹುಶಃ ಸಿಗಲಿಕ್ಕಿಲ್ಲ.


Click it and Unblock the Notifications











