BTS Review ; ಹೊಸಬರ ಹೊಸ ಪ್ರಯೋಗ, ಹೇಗಿದೆ ಐದು ಕಥೆಯನ್ನೊಂದಿರುವ ಬಿಟಿಎಸ್ ಚಿತ್ರ..?
Star Cast: ವಿಜಯ್ ಕೃಷ್ಣ, ಮಹದೇವ ಪ್ರಸಾದ್, ಶ್ರೀಪ್ರಿಯ, ಕೌಶಿಕ್, ಚಂದನ, ಮೇದಿನಿ ಕೆಳಮನೆ, ಆಹನ್, ಜಹಾಂಗೀರ್, ನೀನಾಸಂ ಮುಂತಾದವರು
Directors ; ಪ್ರಜ್ಚಲ್ ರಾಜು, ಸಾಯಿ ಶ್ರೀನಿಧಿ, ಕುಲದೀಪ್ ಕಾರಿಯಪ್ಪ, ರಾಜೇಶ್ ಎನ್ ಶಂಕದ್, ಅಪೂರ್ವ ಭಾರದ್ವಾಜ್
ಸಾಮಾನ್ಯವಾಗಿ ಚಿತ್ರ ಮಾಡುವಾಗ ಯಾವುದಾದರೂ ಒಂದು ಕಥೆಯನ್ನು ಆಯ್ಕೆ ಮಾಡಿಕೊಂಡು, ಒಂದು ಜಾನರ್‌ನ ಚಿತ್ರವನ್ನು ಮಾಡುತ್ತಾರೆ. ಇದನ್ನು ಮೀರಿ ಆ ಕಾಲದಲ್ಲಿ ಚಿತ್ರಬ್ರಹ್ಮ ಪುಟ್ಟಣ್ಣ ಕಣ್‌ಗಾಲ್ ಅವರು ಹಂಗು, ಅಕ್ಕರೆ, ಮುನಿತಾಯಿ ಎನ್ನುವ ಮೂರು ಕಥೆಗಳನ್ನು ಒಂದು ಕಡೆ ಸೇರಿಸಿ 'ಕಥಾಸಂಗಮ'ವನ್ನು ತೆರೆಗೆ ತಂದಿದ್ದರು. ಈ ತರಹದ ಪ್ರಯೋಗಳು ಇತ್ತೀಚೆಗೆ ಹೆಚ್ಚಾಗುತ್ತಿವೆ. ಇದಕ್ಕೆ ಕೈಗನ್ನಡಿ ಎಂಬಂತೆ ರಿಷಬ್ ಶೆಟ್ಟಿ ಕೂಡ ಕಥಾ ಸಂಗಮದ ಹೆಸರಿನಲ್ಲಿ 07 ನಿರ್ದೇಶಕರ ಕೈಯಿಂದ 07 ಕಥೆ ಹೇಳಿಸಿದ್ದರು. ಆ ನಂತರ ಗುರು ದೇಶಪಾಂಡೆ ಪೆಂಟಗನ್ ಮೂಲಕ ಐದು ಬಿಡಿ ಚಿತ್ರಗಳನ್ನು ಒಂದು ಕಡೆ ಜೋಡಿಸಿ ಗುಚ್ಚವಾಗಿಸಿ ಮುಂದೆ ಇಟ್ಟಿದ್ದರು. ಈ ಸಾಲಿಗೆ ಸೇರುವ ಮತ್ತೊಂದು ಬಿಟಿಎಸ್ ಚಿತ್ರ ನಿನ್ನೆ ತೆರೆಗೆ ಬಂದಿದೆ. ಹೌದು .. ಚಿತ್ರರಂಗದ ಭಾಷೆಯಲ್ಲಿ 'ಬಿಹೈಂಡ್ ದಿ ಸ್ಕ್ರೀನ್' ಎಂದೇ ಕರೆಯಲ್ಪಡುವ ಪದವನ್ನು ತಮ್ಮ ಚಿತ್ರಕ್ಕೆ ಶೀರ್ಷಿಕೆಯನ್ನಾಗಿಸಿರುವ ಹೊಸಬರ ತಂಡ ನಿನ್ನೆ ತಮ್ಮ ಕನಸಿನ ಚಿತ್ರವೊಂದನ್ನು ತೆರೆಗೆ ತಂದಿದೆ. ತಮ್ಮ ಪ್ರಯತ್ನದಲ್ಲಿ ಬಹುತೇಕ ಯಶಸ್ವಿಯೂ ಆಗಿದೆ. ಆದರೆ ಪ್ರೇಕ್ಷಕರು ಈ ಚಿತ್ರವನ್ನು ಕೈ ಹಿಡಿಯಬೇಕಷ್ಟೇ.

ಕಥಾ ಹಂದರ
ಆಗಲೇ ಹೇಳಿದಂತೆ BTS 05 ಕಥಾಹಂದರದ ಚಿತ್ರ. ಇಲ್ಲಿ ಐದು ನಿರ್ದೇಶಕರು ತಮ್ಮ ದೃಷ್ಟಿಕೋನದಲ್ಲಿ ಕಥೆ ಹೇಳಿದ್ದಾರೆ. ವಿಶೇಷ ಅಂದರೆ ಎಲ್ಲ 05 ಕಥೆ ಹೃದಯಕ್ಕೆ ಅತ್ಯಾಪ್ತವಾಗುತ್ತವೆ. ಯಾಕೆಂದರೆ ಸಾಧನೆ ಮಾಡಲು ಮುಂದಾದಾಗ ನಮ್ಮನ್ನು ಯಾರು ಬೆಂಬಲಿಸುವುದಿಲ್ಲ ಎಂದು ಸಮಾಜ ಎಂದು ಇಲ್ಲಿ ಹೇಳುವ ಪ್ರಯತ್ನವನ್ನು ಐವರು ನಿರ್ದೇಶಕರು ಮಾಡಿದ್ದಾರೆ. ಹೌದು.. ಮೊದಲ ಕಥೆಯಲ್ಲಿ ಅಪ್ಪ ಮಗನ ಭಾವನಾತ್ಮಕ ಕಥೆಯನ್ನು ಹೇಳಿರುವ ನಿರ್ದೇಶಕರು ಎರಡು ಕಾಲಘಟ್ಟವನ್ನು ಎದುರು ನಿಲ್ಲಿಸುವ ಪ್ರಯತ್ನವನ್ನು ಮಾಡಿದ್ದಾರೆ. ಇನ್ನೂ.. ಎರಡನೇ ಕಥೆ ವ್ಯಕ್ತಿಯ ಚುರುಕುತನಕ್ಕೆ ಕೈಗನ್ನಡಿ ಹಿಡಿಯುವಂತೆ ಇದೆ. ಹೆಣ್ಣಿನ ದೃಷ್ಟಿಕೋನದಿಂದ ಇಲ್ಲಿ ಕಥೆ ಹೇಳುವ ಪ್ರಯತ್ನವನ್ನು ಮಾಡಿರುವ ನಿರ್ದೇಶಕರು ಕಥೆಯಲ್ಲಿ ಉಪಕಥೆಯನ್ನು ಹೇಳಿದ್ದಾರೆ.
ಉಳಿದಂತೆ ಹೇಗಿದೆ ಸಿನಿಮಾ..?
ಚಿತ್ರದಲ್ಲಿ ಐದು ಕಥೆಗಳಿವೆ. ಐದು ಕಥೆ ಒಂದಿಕ್ಕೊಂತು ಭಿನ್ನವಾಗಿವೆ. ವಿಶಿಷ್ಠ ಅನುಭವವನ್ನು ನೀಡುತ್ತವೆ. ಅದರಲ್ಲಿಯೂ ಬ್ಲಾಕ್ ಬಸ್ಟರ್ ಕಥೆಯ ಎಳೆ ಕನ್ನಡ ಚಿತ್ರರಂಗ ಮತ್ತು ಕನ್ನಡ ಪ್ರೇಕ್ಷಕರಿಗೆ ತೀರಾ ಹೊಸದು. ಈ ಕಥೆಯನ್ನು ನೋಡುತ್ತಿದ್ದರೆ ನಿಮಗೆ ಚಿತ್ರೋತ್ಸವದಲ್ಲಿ ಪ್ರದರ್ಶನ ಕಾಣುವ ಚಿತ್ರಗಳು ನೆನಪಾದರೆ ಅದರಲ್ಲಿ ಅಚ್ಚರಿ ಇಲ್ಲ.ಇನ್ನೂ ಕಾಫಿ ಸಿಗರೆಟ್ ಆಂಡ್ ಲೈನ್ಸ್ ಕಥೆ ಕೂಡ ಪ್ರೇಕ್ಷಕರಿಗೆ ಇಷ್ಟವಾಗುತ್ತೆ. ಸುಮೋಹ ಕಥೆ ಭಾವನಾತ್ಮಕವಾಗಿ ಕಾಡುತ್ತೆ. ಟಚ್ ಅಪ್ ಬಾಯ್ ಕಥೆ ನಿರ್ದೇಶಕರ ಅಭಿರುಚಿಗೆ ಕೈಗನ್ನಡಿ ಹಿಡಿಯುವಂತೆ ಇದೆ. ಕೊನೆಯವರೆಗೆ ಕಾಡುತ್ತೆ. ಅದರಲ್ಲಿಯೂ ಮೋನಿ ಎಂದು ಸಂತೈಸುವ ಆ ಧ್ವನಿ ಚಿತ್ರಮಂದಿರದಿಂದ ಹೊರ ಬಂದ ಮೇಲೆ ಅನುರಣಿಸುತ್ತಲೇ ಇರುತ್ತೆ. ಬಾನಿಗೊಂದು ಎಲ್ಲೆ ಎಲ್ಲಿದೆ ಹಾಗೂ ಹೀರೋ ಕೂಡ ಹೊಸ ಅನುಭವ ನೀಡುವಂತಹ ಕಥೆಗಳು.
ಅಂದ್ಹಾಗೇ ಈ ಚಿತ್ರವನ್ನು ಚಿತ್ರವನ್ನು ಪ್ರಜ್ಚಲ್ ರಾಜು, ಸಾಯಿ ಶ್ರೀನಿಧಿ, ಕುಲದೀಪ್ ಕಾರಿಯಪ್ಪ, ರಾಜೇಶ್ ಎನ್ ಶಂಕದ್, ಅಪೂರ್ವ ಭಾರದ್ವಾಜ್ ನಿರ್ದೇಶನ ಮಾಡಿದ್ದಾರೆ. ಇವರೇ ಎಲ್ಲರೂ ಸೇರಿ ಈ ಚಿತ್ರಕ್ಕೆ ಹಣ ಹೂಡಿರುವುದು ಚಿತ್ರದ ವಿಶೇಷತೆಗಳಲ್ಲೊಂದು. ವಿಜಯ್ ಕೃಷ್ಣ, ಮಹದೇವ ಪ್ರಸಾದ್, ಶ್ರೀಪ್ರಿಯ, ಕೌಶಿಕ್, ಚಂದನ, ಮೇದಿನಿ ಕೆಳಮನೆ, ಆಹನ್, ಜಹಾಂಗೀರ್, ನೀನಾಸಂ ಹೀಗೆ ಅನೇಕರು ಚಿತ್ರದ ತಮ್ಮ ಪಾತ್ರವನ್ನು ಜೀವಿಸಿದ್ದಾರೆ. ತಮಗೆ ನೀಡಿರುವ ಕೆಲಸವನ್ನು ಅಚ್ಚು ಕಟ್ಟಾಗಿ ನಿಭಾಯಿಸಿದ್ದಾರೆ.
ಹಾಗಂಥ ಚಿತ್ರದಲ್ಲಿ ಲೋಪದೋಷ ಇಲ್ಲವೆಂದು ಅಲ್ಲ. ಹೊಸಬರ ಈ ಹೊಸ ಪ್ರಯತ್ನದಲ್ಲಿ ಅಲ್ಲಲ್ಲಿ ಕೆಲವು ತಪ್ಪು ಕಂಡರು ಕೂಡ ಆ ತಪ್ಪು ಎದ್ದು ಕಾಣುವುದಿಲ್ಲ. ಮನವರಿಕೆ ಆಗುವುದಿಲ್ಲ. ಒಟ್ನಲ್ಲಿ ಚಿತ್ರ ನೋಡುವಾಗ ಈ ಚಿತ್ರಕ್ಕೆ ಈ ಚಿತ್ರತಂಡ ಕೇವಲ ಬೆವರಲ್ಲ ರಕ್ತವನ್ನೇ ಸುರಿಸಿದ್ದಾರೆ ಎನ್ನುವುದು ಗೊತ್ತಾಗುತ್ತೆ. ಚಿತ್ರಮಂದಿರದಲ್ಲಿ ಈ ಚಿತ್ರ ಹೊಸ ಅನುಭವ ನೀಡುತ್ತೆ. ಇಷ್ಟೇ ಅಲ್ಲ ಚಿತ್ರಮಂದಿರದಿಂದ ಹೊರಬಂದ ನಂತರ ಕೂಡ ಈ ಚಿತ್ರ ಕಾಡುತ್ತೆ.


Click it and Unblock the Notifications











