ಕಬ್ಜ ಪ್ರೀಮಿಯರ್ ಶೋ ಮುಕ್ತಾಯ; ಚಿತ್ರ ನೋಡಿದ ಸೆಲೆಬ್ರಿಟಿಗಳಿಗೆ ಚಿತ್ರ ಇಷ್ಟವಾಯಿತಾ, ಇಲ್ವಾ?
ಆರ್ ಚಂದ್ರು ನಿರ್ದೇಶನದ ಬಹು ನಿರೀಕ್ಷಿತ ಸಿನಿಮಾ ಕಬ್ಜ ಬಿಡುಗಡೆ ದಿನ ಬಂದೇ ಬಿಟ್ಟಿದೆ. ಹೌದು, ಚಂದ್ರು ದೊಡ್ಡ ಮಟ್ಟದಲ್ಲಿ ಸಿನಿಮಾ ಮಾಡಬೇಕು ಎಂಬ ಕನಸನ್ನು ಕಂಡು ಈ ಚಿತ್ರವನ್ನು ಶುರು ಮಾಡಿದ್ದರು. ಹೀಗೆ ಮೂರು ವರ್ಷಗಳ ಹಿಂದೆ ಸೆಟ್ಟೇರಿದ ಕಬ್ಜ ಚಿತ್ರ ಬಹಳ ಅದ್ದೂರಿಯಾಗಿ ಚಿತ್ರೀಕರಣಗೊಂಡು ಇಂದು ( ಮಾರ್ಚ್ 17 ) ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಹುಟ್ಟುಹಬ್ಬದ ಪ್ರಯುಕ್ತ ಬೆಳ್ಳಿ ತೆರೆಗೆ ಅಪ್ಪಳಿಸಿದೆ.
ಇನ್ನು ಬಿಡುಗಡೆ ದಿನಕ್ಕೂ ಮುನ್ನ ನಿನ್ನೆ ( ಮಾರ್ಚ್ 16 ) ಕಬ್ಜ ಚಿತ್ರದ ಪ್ರೀಮಿಯರ್ ಪ್ರದರ್ಶನವನ್ನೂ ಸಹ ಆಯೋಜಿಸಲಾಗಿತ್ತು. ಈ ವಿಶೇಷ ಪ್ರದರ್ಶನದಲ್ಲಿ ಕನ್ನಡ ಚಿತ್ರರಂಗದ ಹಲವಾರು ಸ್ಟಾರ್‌ಗಳು, ನಿರ್ದೇಶಕರು ಹಾಗೂ ಗಾಯಕರು ಸೇರಿದಂತೆ ಹಲವಾರು ಕಲಾವಿದರು ಪಾಲ್ಗೊಂಡು ಕಬ್ಜ ಚಿತ್ರವನ್ನು ವೀಕ್ಷಿಸಿದ್ದಾರೆ. ಹೀಗೆ ಪ್ರೀಮಿಯರ್ ಶೋನಲ್ಲಿ ಕಬ್ಜ ಚಿತ್ರವನ್ನು ನೋಡಿದ ಚಂದನವನದ ತಾರೆಯರು ಚಿತ್ರ ಹೇಗಿದೆ ಎಂಬುದನ್ನು ಚಿತ್ರ ಮುಗಿದ ಬಳಿಕ ಮಾಧ್ಯಮಗಳ ಜತೆಗೆ ಹಂಚಿಕೊಂಡಿದ್ದಾರೆ. ಹಾಗಿದ್ದರೆ, ಕಬ್ಜ ಚಿತ್ರವನ್ನು ನೋಡಿದ ಯಾವ ಸೆಲೆಬ್ರಿಟಿ ಏನು ಹೇಳಿದ್ರು ಎಂಬ ಮಾಹಿತಿ ಈ ಕೆಳಕಂಡಂತಿದೆ..

ಚಿತ್ರ ನೋಡಿದ ಪ್ರಥಮ್ ಚಿತ್ರವನ್ನು ಹಾಡಿ ಹೊಗಳಿದ್ರು. ಇಲ್ಲಿಯವರೆಗೂ ಬಿಡುಗಡೆಯಾಗಿರುವ ಎಲ್ಲಾ ಚಿತ್ರಗಳೂ ಸಹ ಪುನೀತ್ ರಾಜ್‌ಕುಮಾರ್ ಅವರಿಗೆ ಗೌರವ ಸಲ್ಲಿಸಿದ್ರು, ಆದರೆ ಈ ಚಿತ್ರ ವಿಶೇಷವಾಗಿ ಗೌರವ ಸಲ್ಲಿಸಿರುವುದು ಎಲ್ಲರಿಗೂ ಇಷ್ಟವಾಗಲಿದೆ ಎಂದು ಪ್ರಥಮ್ ತಿಳಿಸಿದರು. ಅಲ್ಲದೇ ಚಂದನವನದ ಮೂವರು ದೊಡ್ಡ ನಟರನ್ನು ಒಂದೆಡೆ ಸೇರಿಸುವುದಂತೂ ತೀರ ಕಷ್ಟದ ಕೆಲಸ, ಚಿತ್ರದಲ್ಲಿ ಯಾರ ಪಾತ್ರ ಏನು ಎಂಬುದನ್ನು ಚಿತ್ರಮಂದಿರಕ್ಕೆ ಬಂದು ನೋಡಿ, ಚಂದ್ರು ಅವರು ಮೂರು ವರ್ಷ ಚಿತ್ರಕ್ಕಾಗಿ ಪಟ್ಟಿರುವ ಕಷ್ಟ ಕಾಣಿಸುತ್ತಿದೆ, ಚಂದ್ರು ಅವರು ಗೆಲ್ಲಲಿ, ಚಿತ್ರವನ್ನು ಮಿಸ್ ಮಾಡದೇ ನೋಡಿ, ವೈಟಿಂಗ್ ಫಾರ್ ಕಬ್ಜ 2 ಎಂದು ಪ್ರಥಮ್ ಹೇಳಿದರು.
ಸಿನಿಮಾ ನೋಡಿದ ಉಪೇಂದ್ರ ಪತ್ನಿ ಪ್ರಿಯಾಂಕಾ ಉಪೇಂದ್ರ ತುಂಬಾ ದಿನಗಳಿಂದ ಚಿತ್ರದ ಮೇಕಿಂಗ್ ಹಾಗೂ ಕೆಲ ದೃಶ್ಯಗಳನ್ನು ನೋಡುತ್ತಿದ್ದೆವು, ಈ ಚಿತ್ರವನ್ನು ನೋಡಿದ್ವಿ, ಆಕ್ಷನ್ ದೃಶ್ಯಗಳನ್ನು ಅದ್ಭುತವಾಗಿ ತೆಗೆದಿದ್ದಾರೆ, ಎಲ್ಲರೂ ಅದ್ಭುತವಾಗಿ ನಟಿಸಿದ್ದಾರೆ, ನಮಗೆ ನಿಜವಾಗಿಯೂ ಈ ಚಿತ್ರ ಹಬ್ಬ ತರಹ ಎನಿಸಿತು, ಎಲ್ಲರ ಅಭಿನಯ ಸೂಪರ್ ಆಗಿದೆ, ನೀವೆಲ್ಲರೂ ಎಂಜಾಯ್ ಮಾಡ್ತೀರ ಎಂಬ ವಿಶ್ವಾಸವಿದೆ ಎಂದು ಹೇಳಿದರು.
ನಟಿ ಅನಿತಾ ಭಟ್ ಚಿತ್ರ ವೀಕ್ಷಿಸಿ ಮಾತನಾಡಿದ್ರು. ತುಂಬಾ ಹೈಪ್ ಕ್ರಿಯೇಟ್ ಮಾಡಿದ್ದ ಚಿತ್ರವಿದು ಎಂದ ಅನಿತಾ ಭಟ್ ಅಭಿಮಾನಿಗಳ ಕಣ್ಣಿಗೆ ಹಬ್ಬ ಕೊಡುವಂತಹ ಸಿನಿಮಾ ಇದು, ಟೆಕ್ನಿಕಲ್ಲಿ ಈ ಚಿತ್ರ ತುಂಬಾ ಬಲಿಷ್ಠವಾಗಿದ್ದು, ನಮ್ಮ ಕನ್ನಡ ಇಂಡಸ್ಟ್ರಿ ಎಲ್ಲೋ ಹೋಗ್ತಾ ಇದೆ, ಚಿತ್ರರಂಗ ರೀಚ್ ಆಗ್ತಿರೋ ಲೆವೆಲ್ ನೋಡಿ ತುಂಬಾ ಖುಷಿಯಾಗ್ತಿದೆ, ಚಿತ್ರಕಥೆಯನ್ನು ತುಂಬಾ ಅಚ್ಚುಕಟ್ಟಾಗಿ ಹೆಣೆದಿದ್ದಾರೆ, ಒಂದೇ ಒಂದು ಬೇಸರದ ವಿಷಯ ಎಂದರೆ ಕಬ್ಜ 2 ಸಿನಿಮಾಗಾಗಿ ನಾವು ಮತ್ತೊಂದಷ್ಟು ವರ್ಷ ಕಾಯಬೇಕು, ಚಂದ್ರು ಸರ್ ದಯವಿಟ್ಟು ಬೇಗ ಈ ಚಿತ್ರ ಮಾಡಿ ಎಂದು ಹೇಳಿದರು.
ಉಪ್ಪಿ ಕುಟುಂಬದ ನಟ ನಿರಂಜನ್ ಸುಧೀಂದ್ರ ಸಹ ಚಿತ್ರವನ್ನು ವೀಕ್ಷಿಸಿದ ಬಳಿಕ ಮಾತನಾಡಿದ್ದು, ಸೂಪರ್ ಆಗಿದೆ, ಮೇಕಿಂಗ್ ಚೆನ್ನಾಗಿ ಮಾಡಿದಾರೆ, ಹಾಡುಗಳು ಹಾಗೂ ಆಕ್ಷನ್ ದೃಶ್ಯಗಳು ಅದ್ಭುತವಾಗಿ ಮೂಡಿ ಬಂದಿವೆ ಎಂದು ತಿಳಿಸಿದರು. ಬ್ರೋ ಗೌಡ ಎಂದೇ ಖ್ಯಾತಿಯನ್ನು ಪಡೆದಿರುವ ಶಮಂತ್ ಸಹ ಚಿತ್ರವನ್ನು ವೀಕ್ಷಿಸಿದ್ದು, ಸಿನಿಮಾ ಸಖತ್ತಾಗಿತ್ತು, ಮೇಕಿಂಗ್ ಅಂತೂ ಅದ್ಭುತವಾಗಿತ್ತು ಎಂದಿದ್ದಾರೆ. ಇನ್ನುಳಿದಂತೆ ಆಲ್‌ಓಕೆ ಸಹ ಚಿತ್ರವನ್ನು ವೀಕ್ಷಿಸಿದ್ದು, ಚಿತ್ರ ಸೂಪರ್ ಆಗಿದೆ, ಎಲ್ಲರೂ ನೋಡಲೇಬೇಕ ಎಂದರು ಹಾಗೂ ಚಿತ್ರದಲ್ಲಿ ಆರ್ ಚಂದ್ರು ಇಟ್ಟಿರುವ ಸಸ್ಪೆನ್ಸ್ ಏನು ಎಂಬುದನ್ನು ಬಿಟ್ಟುಕೊಡದ ಆಲ್‌ಓಕೆ ಎಲ್ಲರೂ ಬಂದು ಚಿತ್ರ ನೋಡಲೇಬೇಕು ಎಂದರು.


Click it and Unblock the Notifications











