Chambal Review : ಡಿ ಕೆ ರವಿ ಸಾವಿನ ರಹಸ್ಯ ಹೇಳಿದ 'ಚಂಬಲ್'!
ಸತೀಶ್ ನೀನಾಸಂ ಅಭಿನಯದ 'ಚಂಬಲ್' ಜಿಲ್ಲಾಧಿಕಾರಿ ಡಿಕೆ ರವಿ ಅವರ ಜೀವನಾಧಾರಿತ ಸಿನಿಮಾನ ಎಂಬ ಕುತೂಹಲ ಎಲ್ಲರಿಗೆ ಇತ್ತು. ಆ ಪ್ರಶ್ನೆಗೆ ಇಂದು ಸಿನಿಮಾನೇ ಉತ್ತರ ನೀಡಿದೆ. 'ಚಂಬಲ್' ಸಿನಿಮಾ ಡಿಕೆ ರವಿ ಅವರ ಜೀವನದಲ್ಲಿ ನಡೆದ ಘಟನೆಯನ್ನು ಇಟ್ಟುಕೊಂಡು ಮಾಡಿರುವ ಸಿನಿಮಾ. ಚಿತ್ರದ 90 ರಷ್ಟು ದೃಶ್ಯಗಳು ಅವರಿಗೆ ಸಂಬಂಧಪಡುತ್ತದೆ.
ಸಿನಿಮಾ - ಚಂಬಲ್
ತಾರಾ ಬಳಗ- ಸತೀಶ್ ನೀನಾಸಂ, ಸೋನು ಗೌಡ, ಅಚ್ಚುತ್ ಕುಮಾರ್, ಪವನ್ ಕುಮಾರ್, ಕಿಶೋರ್ ಮುಂತಾದವರು
ನಿರ್ದೇಶನ - ಜೇಗಬ್ ವರ್ಗೀಸ್
ಇದು ಡಿಕೆ ರವಿ ಜೀವನ
ಚಿತ್ರತಂಡ 'ಚಂಬಲ್' ಸಿನಿಮಾ ಡಿಕೆ ರವಿ ಅವರ ಲೈಫ್ ಸ್ಟೋರಿ ಸಿನಿಮಾ ಎನ್ನುವುದನ್ನು ಇದುವರೆಗೆ ಎಲ್ಲಿಯೂ ಹೇಳಿರಲಿಲ್ಲ. ಆದರೆ, ಸಿನಿಮಾ ನೋಡುವ ಪ್ರತಿ ಪ್ರೇಕ್ಷಕರಿಗೆ ಅದು ಅರ್ಥ ಆಗುತ್ತದೆ. ಕೋಲಾರದಿಂದ ಶುರುವಾಗುವ ರವಿ ಕಥೆ ಬೆಂಗಳೂರಿನಲ್ಲಿ ಅಂತ್ಯವಾಗುತ್ತದೆ. ಚಿತ್ರದಲ್ಲಿ ರವಿ ಅವರ ಅನೇಕ ವಿಷಯಗಳನ್ನು ತೋರಿಸಿದ್ದಾರೆ. ಮುಖ್ಯವಾಗಿ ಸಾವಿನ ವಿಷಯವನ್ನು ಹೇಳಿದ್ದಾರೆ.
ರವಿಗೆ ಸಂಬಂಧ ಪಡುವ ವಿಷಯಗಳು
ನಾಯಕನ ಹಿನ್ನಲೆ, ಜಿಲ್ಲಾಧಿಕಾರಿಯಾಗಿ ಕೋಲಾರದಲ್ಲಿ ಕೆಲಸ, ಜಿಲ್ಲೆಯ ಜನರ ಜೊತೆಗೆ ಹೊಂದಿರುವ ಪ್ರೀತಿ, ಕೆಲಸದಲ್ಲಿ ನಿಷ್ಟೆ, ಪ್ರಾಮಾಣಿಕತೆ, ಬೆಂಗಳೂರಿಗೆ ವರ್ಗಾವಣೆ, ಸಾವಿನ ರಹಸ್ಯ ಹೀಗೆ ಅನೇಕ ವಿಷಯಗಳು ಡಿಕೆ ರವಿ ಅವರ ಜೀವನಕ್ಕೆ ನೇರವಾಗಿ ಹೋಲುತ್ತದೆ. ಸಿನಿಮಾದ ಕೊನೆಯಲ್ಲಿ ಅವರ ಫೋಟೋವನ್ನು ಸಹ ಬಳಸಿಕೊಳ್ಳಲಾಗಿದೆ.
ಕೊಲೆನಾ...? ಆತ್ಮಹತ್ಯೆನಾ..?
ಡಿಕೆ ರವಿ ಅವರ ಸಾವು ಕೊಲೆನಾ ಅಥವಾ ಆತ್ಮಹತ್ಯೆನಾ..? ಎನ್ನುವ ಪ್ರಶ್ನೆಗೆ ಸಿನಿಮಾ ಉತ್ತರ ನೀಡಿದೆ. ತನ್ನ ಅಧ್ಯಯನ ಹಾಗೂ ಚಿತ್ರಕ್ಕಾಗಿ ಕಲೆ ಹಾಕಿದ ಮಾಹಿತಿ ಪ್ರಕಾರ ನಿರ್ದೇಶಕರು ಕೊಲೆನಾ...? ಆತ್ಮಹತ್ಯೆನಾ..? ಎನ್ನುವ ಅನುಮಾನಕ್ಕೆ ಉತ್ತರ ಕೊಟ್ಟಿದ್ದಾರೆ.
ಸತೀಶ್ ಪಾತ್ರಕ್ಕೆ ತಕ್ಕ ನಟನೆ
ಸಿನಿಮಾದಲ್ಲಿ ಪರದೆ ಮೇಲೆ ಸತೀಶ್ ಬದಲಿಗೆ ಡಿಕೆ ರವಿ ಅವರೇ ಕಾಣುತ್ತಾರೆ. ಅವರ ಪಾತ್ರದ ಹೆಸರು ಸುಭಾಷ್. ಸತೀಶ್ ಮ್ಯಾನರಿಸಂ ಡಿಕೆ ರವಿ ಅವರ ರೀತಿಯೇ ಬಂದಿದೆ. ಅತ್ತ ಹೆಚ್ಚು ಅಲ್ಲದೆ, ಇತ್ತ ಕಡಿಮೆಯೂ ಅಲ್ಲದೆ ಪಾತ್ರಕ್ಕೆ ಎಷ್ಟು ಬೇಕೋ ಅಷ್ಟು ಮಾತ್ರ ನಟಿಸಿದ್ದಾರೆ ಸತೀಶ್. ಅವರ ರಂಗಭೂಮಿ ಅನುಭವ ಈ ಪಾತ್ರಕ್ಕೆ ಸಹಾಯ ಆಗಿರಬಹುದು.
ಉಳಿದ ಪಾತ್ರಗಳು
ಎಲ್ಲ ಪಾತ್ರಗಳು ನೈಜವಾಗಿ ಮೂಡಿಬಂದಿವೆ. ಡಿ ಕೆ ರವಿ ಪತ್ನಿ ಪಾತ್ರದಲ್ಲಿ ನಟಿ ಸೋನುಗೌಡ ಹಾಗೂ ತಾಯಿಯ ಪಾತ್ರದಲ್ಲಿ ಗಿರಿಜಾ ಲೋಕೇಶ್ ನಟನೆ ಉತ್ತಮವಾಗಿದೆ. ಉಳಿದಂತೆ, ಅಚ್ಛುತ್ ಕುಮಾರ್, ಪವನ್ ಕುಮಾರ್, ಸತ್ಯ, ಕಿಶೋರ್ ಎಲ್ಲರ ಅನುಭವ ಚಿತ್ರಕ್ಕೆ ಸಹಾಯವಾಗದೆ.
ನೈಜತೆಯೂ ಇದೆ, ನಿಗೂಡತೆಯೂ ಇದೆ
ಸಿನಿಮಾದಲ್ಲಿ ಅನೇಕ ನೈಜ ಅಂಶಗಳು ಇವೆ. ಅದೇ ರೀತಿ ನಿಗೂಡತೆಯನ್ನು ಸಿನಿಮಾ ಅಡಗಿಸಿಕೊಂಡಿದೆ. ಡಿ ಕೆ ರವಿ ಸಾವಿನ ಬಗ್ಗೆ ಇದ್ದ ಅನುಮಾನಗಳಿಗೆ ಸಿನಿಮಾ ಉತ್ತರ ನೀಡಿದೆ. ಜೊತೆ ಜೊತೆಗೆ ಸಿನಿಮಾ ಮುಗಿದರೂ ಅನೇಕ ಪ್ರಶ್ನೆಗಳು ಹಾಗೆಯೇ ಉಳಿದುಬಿಡುತ್ತದೆ.
ಒಳ್ಳೆಯ ಸಿನಿಮಾ
ಒಂದು ರಿಯಲ್ ಸ್ಟೋರಿ ಸಿನಿಮಾವನ್ನು ಎಷ್ಟು ಸೂಕ್ಷವಾಗಿ ಹೇಳಬೇಕೋ ಅಷ್ಟು ಚೆನ್ನಾಗಿ ನಿರ್ದೇಶಕ ಜೇಗಬ್ ವರ್ಗೀಸ್ ಹೇಳಿದ್ದಾರೆ. ಈ ರೀತಿ ಸಿನಿಮಾಗಳಲ್ಲಿ ತಾವು ಮಾಸ್ಟರ್ ಎನ್ನುವುದನ್ನು ಸಾಬೀತು ಮಾಡಿದ್ದಾರೆ. ಕಮರ್ಷಿಯಲ್ ಅಂಶಗಳ ಬಗ್ಗೆ ತಲೆ ಕೊಡಿಸಿಕೊಳ್ಳದೆ ಮಾಡಿರುವ ನೈಜ ಸಿನಿಮಾ ಚಂಬಲ್.


Click it and Unblock the Notifications











