Flirt Review: ಇಲ್ಲಿ ನಾಯಕ 'ಫ್ಲರ್ಟಾ '? ಇಲ್ಲ ಇದೊಂದು ರಿವೇಂಜ್ ಸ್ಟೋರಿನಾ? ಚಂದನ್ ಚೊಚ್ಚಲ ನಿರ್ದೇಶನ ಹೇಗಿದೆ?
ಸಿನಿಮಾಗಳಲ್ಲಿ ನಾಯಕನಾಗಿ ಮಿಂಚಿದವರು ನಿರ್ದೇಶನಕ್ಕೆ ಇಳಿದ ಸಾಕಷ್ಟು ಉದಾಹರಣೆಗಳಿವೆ. ಅದರಲ್ಲೂ ಕನ್ನಡದಲ್ಲಿ ನಟನೆ ಜೊತೆಗೆ ನಿರ್ದೇಶನ ಮಾಡಿದ ಹೀರೋಗಳಿಗೇನು ಕಮ್ಮಿಯಿಲ್ಲ. ನಟ ಹಾಗೂ ನಿರ್ದೇಶನ ಎರಡನ್ನೂ ಒಟ್ಟೊಟ್ಟಿಗೆ ಮಾಡಿದವರಿಗೆ ಕನ್ನಡ ಚಿತ್ರರಂಗದಲ್ಲಿ ಒಂದೊಳ್ಳೆ ಸಕ್ಸಸ್ ಸಿಕ್ಕಿದೆ. ಶಂಕರ್ ನಾಗ್, ಕಾಶೀನಾಥ್, ಉಪೇಂದ್ರ, ಕಿಚ್ಚ ಸುದೀಪ್, ರಕ್ಷಿತ್ ಶೆಟ್ಟಿ, ರಿಷಬ್ ಶೆಟ್ಟಿ, ರಾಜ್ ಬಿ ಶೆಟ್ಟಿ, ದುನಿಯಾ ವಿಜಯ್, ಡಾರ್ಲಿಂಗ್ ಕೃಷ್ಣ ಈಗ ಚಂದನ್ ಕುಮಾರ್.
ಕಿರುತೆರೆ ಹಾಗೂ ಸಿನಿಮಾಗಳಲ್ಲಿ ನಾಯಕನಾಗಿ ಮಿಂಚಿದ ಬಳಿಕ ನಿರ್ದೇಶನಕ್ಕೆ ಇಳಿದಿದ್ದಾರೆ. ಇದೇ ಮೊದಲ ಬಾರಿಗೆ ನಿರ್ದೇಶನ ಮಾಡಿರುವ ಸಿನಿಮಾ 'ಫ್ಲರ್ಟ್' ಈ ವಾರ ರಾಜ್ಯದಾದ್ಯಂತ ಪ್ರದರ್ಶನ ಕಂಡಿದೆ. ಸಿನಿಮಾ ಟೈಟಲ್ ನೋಡಿದರೆ, ಇದು ಪಕ್ಕಾ ಯೂತ್‌ಫುಲ್ ಕಮರ್ಷಿಯಲ್ ಸಿನಿಮಾ ಅನ್ನೋದು ಗೊತ್ತಾಗಿತ್ತು. ಆದರೆ, ಟೈಟಲ್ ಎಲ್ಲಾ ವರ್ಗದ ಪ್ರೇಕ್ಷಕರನ್ನು ಸೆಳೆಯಬಹುದೇ? ಅನ್ನೋ ಪ್ರಶ್ನೆ ಅಂತೂ ಎದ್ದಿತ್ತು.

ಈ ವಾರ ಬಿಡುಗಡೆಯಾದ ಸಿನಿಮಾಗಳ ಪೈಕಿ ಚಂದನ್ ಕುಮಾರ್ ನಿರ್ದೇಶಿಸಿದ ಸಿನಿಮಾ ಟಾಪ್‌ನಲ್ಲಿದೆ. 'ಫ್ಲಟ್' ಟೈಟಲ್ ನೋಡಿ ಗೆಸ್ ಮಾಡುವಂತಹ ಸಿನಿಮಾ ಖಂಡಿತಾ ಅಲ್ಲ ಅನ್ನೋದನ್ನು ಇದು ಸಾಬೀತು ಮಾಡಿದೆ. ಹಾಗಿದ್ದರೆ, 'ಫ್ಲರ್ಟ್' ಸಿನಿಮಾದ ಕಥೆ ಹೇಗಿದೆ? ಈ ಸಿನಿಮಾದ ಪ್ಲಸ್ ಏನು? ಮೈನಸ್ ಏನು? ತಿಳಿಯುವುದಕ್ಕೆ ಮುಂದೆ ಓದಿ.
'ಫ್ಲರ್ಟ್' ಕಥೆಯೇನು?
ಸಿನಿಮಾ ಹೀರೋ ಕೃಷ್ಣ (ಚಂದನ್ ಕುಮಾರ್) ಮೇಲೆ ಗಂಭೀರ ಆರೋಪ ಮಾಡಲಾಗಿದೆ. ಹೀಗಾಗಿ ಕೋರ್ಟ್‌ನಲ್ಲಿ ಹೀರೋ ಮೇಲೆ ಮಾಡಲಾಗಿರುವ ಆರೋಪದ ಮೇಲೆ ವಿಚಾರಣೆ ನಡೆಯುತ್ತಿರುತ್ತೆ. ಸಿನಿಮಾ ನಾಯಕಿ ಮಾನ್ಯಾ (ಅಕ್ಷಿತಾ ಬೋಪಯ್ಯ) ಕೃಷ್ಣ ಒಬ್ಬ ಫ್ಲರ್ಟ್, ಆತ ತನಗೆ ಮೋಸ ಮಾಡಿರುವುದಾಗಿ ಆರೋಪ ಮಾಡಿರುತ್ತಾಳೆ. ಇಲ್ಲಿಂದ ಸಿನಿಮಾ ಕಥೆ ಒಂದೊಂದೇ ತಿರುವುಗಳನ್ನು ಪಡೆಯುತ್ತಾ ಮುಂದಕ್ಕೆ ಸಾಗುತ್ತೆ. ಪ್ರೇಕ್ಷಕರು ಹೀರೋ ಮೇಲೆ ಮಾಡಿರುವ ಆರೋಪಗಳನ್ನು ಮರೆಯುತ್ತಾ? ಹೊಸ ಹೊಸ ತಿರುವುಗಳನ್ನು ಅನುಭವಿಸುತ್ತಾ ಮುಂದೆ ಸಾಗುತ್ತಾರೆ. ಸಿನಿಮಾ ಮುಗಿಯುವ ಹೊತ್ತಿಗೆ, 'ಫ್ಲಟ್' ನಾವು ಅಂದುಕೊಂಡಂತ ಸಿನಿಮಾ ಅಲ್ಲ ಅನ್ನೋದು ಗೊತ್ತಾಗುತ್ತೆ.
ಹೇಗಿದೆ ನಿರ್ದೇಶನ?
'ಫ್ಲರ್ಟ್' ಚಂದನ್ ಕುಮಾರ್ ನಿರ್ದೇಶನದ ಚೊಚ್ಚಲ ಸಿನಿಮಾ. ಸಹಜವಾಗಿ ಪ್ರೇಕ್ಷಕರಲ್ಲಿ ಹೇಗೆ ನಿರ್ದೇಶನ ಮಾಡಿರಬಹುದೆಂಬ ಕುತೂಹಲವಿದ್ದೇ ಇರುತ್ತೆ. ಚಂದನ್ ಸಿನಿಮಾದ ಚಿತ್ರಕಥೆಯನ್ನು ಆಸಕ್ತಿಕರವಾಗಿ ಹೆಣೆದಿದ್ದಾರೆ. ಫಸ್ಟ್ ಹಾಫ್ ಸಿನಿಮಾದ ಕಥೆಯ ಬಗ್ಗೆ ಚಿಕ್ಕದೊಂದು ಸುಳಿವನ್ನು ಬಿಟ್ಟುಕೊಡದೆ, ಆಸಕ್ತಿಕರವಾಗಿ ಹೆಣೆದಿದ್ದಾರೆ. ಇನ್ನು ಸೆಕೆಂಡ್ ಹಾಫ್‌ನಲ್ಲಿ ಟ್ವಿಸ್ಟ್‌ಗಳ ಮೇಲೆ ಟ್ವಿಸ್ಟ್ ಇಟ್ಟಿದ್ದಾರೆ. ಚೊಚ್ಚಲ ಸಿನಿಮಾ ಆಗಿದ್ದರಿಂದ ಎಲ್ಲೂ ತಪ್ಪುಗಳು ಆಗದಂತೆ ಗಮನವಹಿಸಿದ್ದಾರೆ. ನೀಟ್ ಸಿನಿಮಾ ಮಾಡುವುದಕ್ಕೆ ಸಾಕಷ್ಟು ಶ್ರಮ ವಹಿಸಿರುವುದು ಎದ್ದು ಕಾಣುತ್ತೆ. ಚಂದನ್ ಸಿನಿಮಾವನ್ನು ಅದ್ಭುತವಾಗಿ ನಿರ್ದೇಶನ ಮಾಡಿದ್ದು, ಮೊದಲನೇ ಸಿನಿಮಾ ಅಂತ ಅನಿಸುವುದೇ ಇಲ್ಲ. ಡೈಲಾಗ್ ಕೂಡ ಅವರೇ ಬರೆದಿರುವುದರಿಂದ ಪಂಚ್ ಡೈಲಾಗ್ ವರ್ಕ್ ಆಗಿದೆ.
'ಫ್ಲರ್ಟ್' ಪ್ಲಸ್ ಪಾಯಿಂಟ್ ಏನು?
ಸಿನಿಮಾದ ಸ್ಕ್ರೀನ್‌ಪ್ಲೇ ಇಂಟ್ರೆಸ್ಟಿಂಗ್ ಆಗಿದೆ. ಟೆಕ್ನಿಕಲ್ ಆಗಿ ಸಿನಿಮಾ ವೀಕ್ ಇದೆ ಎಂದೂ ಎಲ್ಲೂ ಅನಿಸುವುದಿಲ್ಲ. ಇನ್ನು ಈ ಸಿನಿಮಾದಲ್ಲಿ ಬಂದು ಹೋಗುವ ಪಾತ್ರಗಳು ಚೆನ್ನಾಗಿಯೇ ವರ್ಕ್ ಆಗಿವೆ. ಚಂದನ್ ಹಾಗೂ ಗಿರಿ ಕಾಂಬಿನೇಷನ್ ಸಖತ್ ಆಗಿಯೇ ವರ್ಕ್‌ಔಟ್ ಆಗಿದೆ. ಚಂದನ್ ಪರ ವಕೀಲನಾಗಿ ಸಾಧು ಕೋಕಿಲಾ ಹಾಗೂ ನಾಯಕಿ ಅಕ್ಷಿತಾ ಬೋಪಯ್ಯ ಪರ ವಕೀಲೆಯಾಗಿ ಶ್ರುತಿ ಕಾಂಬಿನೇಷನ್ ಸಖತ್ ಆಗಿಯೇ ವರ್ಕ್ ಔಟ್ ಆಗಿದೆ. ಹಾಗೇ ರಂಗಾಯಣ ರಘು ಪಾತ್ರ ಕೂಡ ಪ್ರೇಕ್ಷಕರಿಗೆ ಸಿಕ್ಕಾಪಟ್ಟೆ ಇಷ್ಟ ಆಗುತ್ತೆ.

'ಫ್ಲರ್ಟ್' ಮೈನಸ್ ಪಾಯಿಂಟ್ ಏನು?
'ಫ್ಲಟ್' ಪರ್ಫೆಕ್ಟ್ ಸಿನಿಮಾ ಅಂತ ಹೇಳುವುದಕ್ಕೆ ಸಾಧ್ಯವಿಲ್ಲ. ಇಲ್ಲೂ ಕೆಲವು ಮೈನಸ್ ಪಾಯಿಂಟ್‌ಗಳು ಇವೆ. ಕೋರ್ಟ್ ರೂಮ್ ಸೀನ್‌ಗಳಿಗೆ ಹಾಸ್ಯದ ರೂಪ ಕೊಟ್ಟಿರುವುದು ಮನರಂಜನೆಗೆ ಅಂತ ಅನಿಸಿದರೂ, ಅಸಂಬದ್ದತೆಯನ್ನು ತೋರಿಸುತ್ತದೆ. ಕೆಲವೊಮ್ಮೆ ಚಂದನ್ ತುಂಬಾನೇ ವಿವರಣೆ ಕೊಡುವುದಕ್ಕೆ ಹೋಗಿದ್ದಾರೆಂದೂ ಅನಿಸುತ್ತೆ. ಹಾಗೇ ನಾಯಕನ ಮೇಲೆ ಆರೋಪ ಮಾಡಿದ ನಾಯಕಿಯೇ ಮತ್ತೆ ಆತನ ಪರವಾಗಿ ಹೇಳಿಕೆ ಕೊಡುವುದಕ್ಕೆ ಯಾಕೆ ಬಂದರು? ಅದಕ್ಕೆ ವಿವರಣೆ ಇಲ್ಲ. ಸಿನಿಮಾ ಕನ್ಫ್ಯೂಷನ್‌ನಲ್ಲಿಯೇ ಎಂಡ್ ಮಾಡಿದ್ದಾರೆ. ಆದರೆ, ಇದೆಲ್ಲವೂ ಮೈನರ್ ಮಿಸ್ಟೇಕ್ ಅಷ್ಟೇ.
ಕೊನೆಯಲ್ಲಿ ಏನು ಹೇಳಬಹುದು?
ಚಂದನ್ ಕುಮಾರ್ ಚೊಚ್ಚಲ ನಿರ್ದೇಶನದ ಸಿನಿಮಾ ಚೆನ್ನಾಗಿದೆ. ಒಂದು ನೀಟ್, ಎಂಟರ್‌ಟೈನರ್ ಅನ್ನಬಹುದು. ಮಾಡರ್ನ್ ಲವ್, ಫ್ರೆಂಡ್‌ಶಿಫ್, ದ್ವೇಷವನ್ನು ಫೋಕಸ್ ಮಾಡಿರುವ ಸಿನಿಮಾ. ಫ್ಲರ್ಟ್ ಸಿನಿಮಾವನ್ನು ಆರಾಮಾಗಿ ಥಿಯೇಟರ್‌ಗೆ ಹೋಗಿ ನೋಡಬಹುದು.


Click it and Unblock the Notifications











