»   » ಮೂಲ ಚಿತ್ರ ಚಾಲಾ ಬಾಗುಂದಿಗೆ ಚ್ಯುತಿ ಬಾರದಂತೆ ಕನ್ನಡೀಕರಿಸಲಾಗಿರುವ ಚಿತ್ರ ‘ಬಹಳ ಚೆನ್ನಾಗಿದೆ’

ಮೂಲ ಚಿತ್ರ ಚಾಲಾ ಬಾಗುಂದಿಗೆ ಚ್ಯುತಿ ಬಾರದಂತೆ ಕನ್ನಡೀಕರಿಸಲಾಗಿರುವ ಚಿತ್ರ ‘ಬಹಳ ಚೆನ್ನಾಗಿದೆ’

Posted By:
Subscribe to Filmibeat Kannada

ಇಲ್ಲಿ ಇಬ್ಬರು ಗೆಳೆಯರು, ಒಬ್ಬರಿಗೊಬ್ಬರು ಪ್ರಾಣ ಕೊಡುವಂತಹವರು. ಗೆಳೆತನದ ಸಾರವನ್ನೇ ಸಂಸಾರ ಸಾಗರದಲ್ಲಿ ತೇಲಿಸಿ, ‘ಬಹಳ ಚೆನ್ನಾಗಿದೆ’ ಎನ್ನುವಂತೆ ನಿರೂಪಿಸಲಾಗಿದೆ. ಈ ಇಬ್ಬರ ಸ್ನೇಹದ ನಡುವೆ ನಾಯಕಿಯ ಪ್ರವೇಶ. ಸ್ನೇಹ - ದ್ವೇಷದ ಮಿಕ್ಸಪ್‌. ಮೂಲಚಿತ್ರ ಚಾಲಾ ಬಾಗುಂದಿಗೆ ಚ್ಯುತಿ ಬಾರದ ರೀತಿಯಲ್ಲಿ ಎಂ.ಎಸ್‌. ರಾಜಶೇಖರ್‌ ರಿಮೇಕ್‌ ಸಹ ‘ಬಹಳ ಚೆನ್ನಾಗಿದೆ’ ಎನ್ನಿಸಿಕೊಂಡಿದ್ದಾರೆ.

ಋಷಿ ವಿಶ್ವಾಮಿತ್ರರು ಸತ್ವ ಪರೀಕ್ಷೆ ಮಾಡದಿದ್ದರೆ, ಸತ್ಯ ಹರಿಶ್ಚಂದ್ರನ ಸತ್ಯ ಲೋಕಕ್ಕೆ ತಿಳಿಯುತ್ತಲೇ ಇರಲಿಲ್ಲ. ಇಲ್ಲೂ ಹಾಗೆ, ಈ ಇಬ್ಬರ ನಡುವಿನ ಸ್ನೇಹ ಪರೀಕ್ಷೆಯೇ ನಡೆಯುತ್ತದೆ. ವಿಶ್ವಾಮಿತ್ರರ ಸ್ಥಾನವನ್ನು ನಾಯಕಿ ನಿರ್ವಹಿಸಿದ್ದಾಳೆ ಅಷ್ಟೇ. ನಾಯಕಿ ಇಬ್ಬರು ಗೆಳೆಯರ ಪೈಕಿ ಒಬ್ಬನಿಗೆ ಕುಲನಾರಿ, ಮತ್ತೊಬ್ಬಳಿಗೆ ಹೆಮ್ಮಾರಿ.

ಅತಿರೇಕದ ಪರಮಾವಧಿಯವರೆಗೆ ಮುಟ್ಟಿದ ಸ್ನೇಹಿತರ ನಡುವೆ ನಾಯಕಿ ಪ್ರತ್ಯಕ್ಷಳಾಗುತ್ತಾಳೆ. ತ್ಯಾಗವೇ ಬದುಕೆಂದು ತಿಳಿದ ಗೆಳೆಯರನ್ನು ಬೇರ್ಪಡಿಸಲು ಪ್ರಯತ್ನಿಸುತ್ತಾಳೆ. ಈಕೆ ಇಂತಹ ಹುಚ್ಚು ಸಾಹಸಕ್ಕೆ ಕೈಹಾಕಲು ಕಾರಣ ಬೇಕಲ್ಲ. ಅದಕ್ಕೂ ಒಂದು ಹಿನ್ನೆಲೆ ಇದೆ. ನಾಯಕ ಶಶಿಕುಮಾರ್‌ ಕುಡಿದ ಅಮಲಿನಲ್ಲಿ ನಾಯಕಿ ಜಯಸೀಲ್‌ಳ ಮೇಲೆ ಎರಗುತ್ತಾನೆ. ಆಗ ನಾಯಕಿಯ ಕತ್ತಿನ ಕೆಳಗೆ (ಚಿತ್ರ ಮುಗಿಯುವ ತನಕ ಆಗಾಗ್ಗೆ ಹೈಲೈಟ್‌ ಆಗಿ ತೋರಿಸುತ್ತಲೇ ಇರುವಂತಹ) ಉಗುರಿನ ಗುರುತು ಮೂಡುತ್ತದೆ. ಇದು ಆಕೆಗೆ ಆರದಗಾಯವಾಗಿ ಉಳಿಯುತ್ತದೆ. ಸೇಡು ತೀರಿಸಿಕೊಳ್ಳುವ ಛಲ ಮೂಡುತ್ತದೆ.

ಶಿವಣ್ಣನ ಪತ್ನಿಯಾಗಿ ಬರುವ ಮೂಲಕ ನಾಯಕಿ ಚಿತ್ರಕ್ಕೆ ತಿರುವು ನೀಡುತ್ತಾಳೆ. ತನ್ನ ತಪ್ಪಿನ ಅರಿವಾಗಿ ಶಶಿ ಕಾಲಿಗೆ ಬಿದ್ದರೂ, ಕುಡಿತ ಬಿಟ್ಟರೂ, ಜಯಸೀಲ್‌ ನಾನಿನ್ನ ಬಿಡಲಾರೆ ಎಂದು ಪಟ್ಟು ಹಿಡಿಯುತ್ತಾಳೆ. ಈ ಎಲ್ಲದರ ನಡುವೆ ನಾಲ್ಕಾರು ಹಾಡು, ಒಂದಿಷ್ಟು ಹಾಸ್ಯ ಸನ್ನಿವೇಶ, ಸೆಂಟಿಮೆಂಟ್‌ ಮೇಳೈಸಿ ಚಿತ್ರ ಓವರಾಲ್‌ ಓ.ಕೆ. ಎನಿಸಿಕೊಂಡಿದೆ.

ಮಧ್ಯಂತರದವರೆಗೂ ಮಂದಗತಿಯಲ್ಲೇ ಸಾಗುವ ಚಿತ್ರ ಆನಂತರ ಸೂಪರ್‌ ಫಾಸ್ಟ್‌ ರಾಜಧಾನಿ ಎಕ್ಸ್‌ಪ್ರೆಸ್‌ ಆಗುತ್ತದೆ. ಪ್ರೇಮಕ್ಕಾಗಿ ರಕ್ತದ ಕೋಡಿ ಹರಿದದ್ದನ್ನು ಕಂಡ ಪ್ರೇಕ್ಷಕರಿಗೆ ಪ್ರೇಮಕ್ಕಿಂತಲೂ ಅತಿಯಾದ ಸ್ನೇಹಕ್ಕೆ ರಕ್ತಪಾತ ಆಗುವುದನ್ನು ಕಾಣುವ ಯೋಗವಿದೆ. (ಸ್ನೇಹಿತ ಮನೆಬಿಟ್ಟು ಹೋದಾಗ ನಾಯಕ ಆತನ ಹೆಸರನ್ನು ರಕ್ತದಲ್ಲಿ ಗೋಡೆಯ ಮೇಲೆ ಬರೆಯುವುದೇ ಇದಕ್ಕೆ ಜ್ವಲಂತ ಸಾಕ್ಷಿಯಾಗಿದೆ.)

ರಿಮೇಕ್‌ ಚಿತ್ರದ ಮೇಲೆ ತೆಲುಗು ಚಿತ್ರದ - ಸೆಂಟಿಮೆಂಟ್‌ಗಳ ಪ್ರಭಾವ ಹಾಸುಹೊಕ್ಕಾಗಿದೆ. ಕತೆ, ತಾಂತ್ರಿಕತೆಯನ್ನು ಬದಿಗಿಟ್ಟು ಸಹಜ ಹಾಗೂ ಸಾಮಾನ್ಯವಾಗಿ ಚಿತ್ರ ನೋಡಿದರೆ, ಶಿವರಾಜ್‌ ಕುಮಾರ್‌ ಬಹಳ ದಿನಗಳ ಬಳಿಕ ಬಹಳ ಚೆನ್ನಾಗಿಯೇ ನಟಿಸಿದ್ದಾರೆ. ಸದಾ ಕುಡಿಯುತ್ತಲೇ ಸಾಗುವ ಶಶಿಕುಮಾರ್‌ ಕೂಡ ತಮಗೆ ಸಿಕ್ಕ ಪಾತ್ರವನ್ನು ಸಮರ್ಥವಾಗಿಯೇ ನಿರ್ವಹಿಸಿದ್ದಾರೆ.

ನಾಯಕರಿಬ್ಬರ ಸ್ನೇಹ ಹಾಗೂ ನಾಯಕಿಯ ದ್ವೇಷದ ನಡುವೆ ರಮೇಶ್‌ ಭಟ್‌, ಅಶೋಕ್‌ ಬಾದರದಿನ್ನಿ ಪ್ರೇಕ್ಷಕರನ್ನು ರಂಜಿಸಿ ಚಪ್ಪಾಳೆ ಗಿಟ್ಟಿಸುತ್ತಾರೆ. ಮೋಹನರ ಸಂಭಾಷಣೆಯೂ ಬಹಳ ಚೆನ್ನಾಗಿಯೇ ಇದೆ. ಕಲ್ಯಾಣ್‌ ಗೀತೆಗಳೂ ಅಷ್ಟೇ ಚೆನ್ನಾಗಿವೆ. ಮುಂಬೈ ಬೆಡಗಿ ಜಯಸೀಲ್‌ ಗ್ಲಾಮರ್‌ ಉಳಿಸಿಕೊಂಡರೆ, ರುಚಿತಾ ಪ್ರಸಾದ್‌ರ ಅಭಿನಯ ಹುಚ್ಚು ಬಿಟ್ಟ ಮೇಲೆ ಕೊಂಚ ವಾಸಿ. ಒಟ್ಟಾರೆ ಚಿತ್ರ ಹೆಸರಿಗೆ ತಕ್ಕಂತಿದೆ.

ಮುಖಪುಟ / ಸ್ಯಾಂಡಲ್‌ವುಡ್‌

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada