»   » ಚೈಲ್ಡ್‌ ಪ್ರೆಗ್ನೆನ್ಸಿಯ ಬಗೆಗೆ ಹೇಳುವ ಈ ಚಿತ್ರದಲ್ಲಿ ಕಾಲೇಜು ಓದುವ ಹುಡುಗ ಸಂಸಾರ ನಡೆಸುತ್ತಾನೆ. ಹದಿನಾರರ ಹುಡುಗಿ ಮಗುವಾಡಿಸುತ್ತಾಳೆ

ಚೈಲ್ಡ್‌ ಪ್ರೆಗ್ನೆನ್ಸಿಯ ಬಗೆಗೆ ಹೇಳುವ ಈ ಚಿತ್ರದಲ್ಲಿ ಕಾಲೇಜು ಓದುವ ಹುಡುಗ ಸಂಸಾರ ನಡೆಸುತ್ತಾನೆ. ಹದಿನಾರರ ಹುಡುಗಿ ಮಗುವಾಡಿಸುತ್ತಾಳೆ

Subscribe to Filmibeat Kannada

ಚಿತ್ರ : ಚಿತ್ರನಿರ್ದೇಶನ : ದಿನೇಶ್‌ ಬಾಬುತಾರಾಗಣ : ಪ್ರಸಾದ್‌, ರೇಖಾ, ಅನಂತ್‌, ಕಾಶೀನಾಥ್‌, ವನಿತಾ ವಾಸು, ರಮೇಶ್‌ ಭಟ್‌
*ಎಂ. ವಿನೋದಿನಿ

ರಿಮೇಕ್‌ ಪ್ರವಾಹದಲ್ಲಿ ತೇಲಿ ಬಂದ ಮತ್ತೊಂದು ಚಿತ್ರದ ಹೆಸರೇ ‘ಚಿತ್ರ’. ಆರೇನಂತೆ, ರಿಮೇಕು ಮಾಡಿದರೆ ಇಂಥಾ ಚಿತ್ರ ಮಾಡಬೇಕು ಅನ್ನುವಂತಿದೆ ಈ ಚಿತ್ರ.

ತೆಲುಗಿನಲ್ಲಿ ರಾಮೋಜಿರಾವ್‌ ನಿರ್ಮಿಸಿದ ಚಿತ್ರಂ ಚಿತ್ರವನ್ನು ಅವರೇ ಕನ್ನಡಕ್ಕೆ ತಂದಿದ್ದಾರೆ. ಆದರೆ ನಿರ್ದೇಶಕರ ಮತ್ತು ತಾರಾಗಣದ ಆಯ್ಕೆಯಲ್ಲಿ ಅವರು ಗೆದ್ದಿದ್ದಾರೆ. ಫಲಿತಾಂಶ - ಒಂದು ಅಚ್ಚುಕಟ್ಟಾದ, ಲವ್ಲೀ ಚಿತ್ರ ಈಚೆಗೆ ಬಂದಿದೆ. ಹದಿಹರೆಯದ ಹುಡುಗರ ಸುತ್ತ ಸುತ್ತುವ ಚಿತ್ರದಲ್ಲಿ ಆ ವಯೋಮಾನದ ಹುಡುಗರೇ ನಟಿಸಿದರೆ ಒಪ್ಪವಾಗಿರುತ್ತೆ ಅನ್ನುವ ಸತ್ಯ ತಡವಾಗಿಯಾದರೂ ನಮ್ಮ ನಿರ್ಮಾಪಕರಿಗೆ ಗೊತ್ತಾಗಿರುವುದು ಸ್ವಾಗತಾರ್ಹ. ‘ನನ್ನ ಪ್ರೀತಿಯ ಹುಡುಗಿ’ ಈ ಟ್ರೆಂಡ್‌ನಲ್ಲಿ ಬಂದ ಮೊದಲ ಚಿತ್ರ. ಈಗ ‘ಚಿತ್ರ’ ಬಂದಿದೆ.

ಚಿತ್ರದ ಕತೆ ನಮ್ಮ ಸಂದರ್ಭಕ್ಕೆ ತಕ್ಕಂತಿದೆ ಅನ್ನುವಂತಿಲ್ಲ. ವಿದೇಶಗಳಲ್ಲಿ ಹೆತ್ತವರಿಗೆ ತಲೆನೋವಾಗಿ ಪರಿಣಮಿಸಿರುವ ಚೈಲ್ಡ್‌ ಪ್ರೆಗ್ನೆನ್ಸಿ ಇದೀಗ ಭಾರತಕ್ಕೂ ಬಂದಿದೆ ಅನ್ನುವುದು ಕತೆಯ ಹಿನ್ನೆಲೆ. ಅಂದರೆ ಹದಿನಾರರ ಹುಡುಗಿ ಗರ್ಭವತಿಯಾಗುತ್ತಾಳೆ. ಮಗು ಬೇಕೂಂತ ಹಠ ಹಿಡೀತಾಳೆ. ಅದಕ್ಕೆ ಕಾರಣಕರ್ತನಾದ ಹುಡುಗನನ್ನೇ ಮದುವೆಯಾಗುತ್ತಾಳೆ. ಕಾಲೇಜು ಓದುತ್ತಿರುವ ಹುಡುಗ ಸಂಸಾರ ನಡೆಸುವ ದೃಶ್ಯವನ್ನು ಊಹಿಸಿಕೊಳ್ಳಿ. ಅದೇ ಥರ ಹುಡುಗಿ ಮಗುವಿಗೆ ಹಾಲು ಕೊಟ್ಟು ಮಲಗಿಸುವ ದೃಶ್ಯವನ್ನೂ ಊಹಿಸಿಕೊಳ್ಳಿ. ಯಾವ ವಯಸ್ಸಲ್ಲಿ ಏನು ಮಾಡಬೇಕೋ ಅದನ್ನು ಮಾಡಿದರೆ ಚೆನ್ನ ಅನ್ನುವ ಭಾರತೀಯ ಫಿಲಾಸಫಿ ನೆನಪಾಗುವುದೇ ಇಲ್ಲಿ. ಚಿತ್ರದ ಕ್ಲೈಮಾಕ್ಸ್‌ ದೃಶ್ಯದಲ್ಲಿ ನಾಯಕನ ಅಪ್ಪ ಕಾಲೇಜ್‌ ಕ್ಯಾಂಪಸ್‌ಲ್ಲಿ ಮಾಡುವ ಭಾಷಣದ ಸಾರಾಂಶವೂ ಇದೇ.

ಈ ಸಮಸ್ಯೆಯನ್ನು ನೆಪವಾಗಿಟ್ಟುಕೊಂಡು ‘ಚಿತ್ರ’ ಕಾಲೇಜು ಹುಡುಗರ ಜಾಲಿ ಬದುಕನ್ನು ನಿರೂಪಿಸುತ್ತದೆ, ಇನ್ನೊಂದೆಡೆ ಅವರ ಹೆತ್ತವರ ಮನೆ ಮನೆ ಕತೆಯೂ ಇದೇ. ಎಲ್ಲದಕ್ಕೂ ತಮಾಷೆಯ ಲೇಪವಿದೆ. ನಾಯಕನ ಅಪ್ಪ ಅಮ್ಮ ಸದಾ ಜಗಳವಾಡುತ್ತಿರುತ್ತಾರೆ. ಸೀರೆ ಕೊಡಿಸು ಅಂತ ಹಠ ಹಿಡಿಯುವ ಅಮ್ಮ, ಪೈಸೆ ಪೈಸೆಗೂ ಲೆಕ್ಕ ಹಾಕುವ ಜಿಪುಣ ಅಪ್ಪ . ಇನ್ನೊಂದೆಡೆ ನಾಯಕಿಯ ಅಜ್ಜಿ ಸದಾ ಅಳುತಿರುತ್ತಾಳೆ. ಚಿಕ್ಕಪ್ಪ ಚಿಕ್ಕಮ್ಮನೂ ಅವಳ ಜೊತೆ ಅಳುವ ಕಾಯಕ ಮಾಡುತ್ತಾರೆ. ಇದು ಕೊಂಚ ಅತಿಯೆನಿಸಿದರೂ ಮಧ್ಯಂತರದ ನಂತರ ಈ ಪಾತ್ರಗಳೇ ಗಾಯಬ್‌ ಆಗಿ ಬಿಡುತ್ತವೆ.

ಕಾಲೇಜು ಹುಡುಗರು ಅಂದಾಕ್ಷಣ ಹೊಡೆದಾಟ ಇರಬೇಕು, ಡ್ರಗ್ಸ್‌ ಸೇವಿಸುವ ದೃಶ್ಯಗಳಿರಬೇಕು, ಮೊದಲಾದ ಕಲ್ಪನೆಗಳನ್ನು ಚಿಂದಿ ಮಾಡುವ ಚಿತ್ರವಿದು. ಇಲ್ಲಿರುವುದು ತಮಾಷೆ, ವಯಸ್ಸಿಗೆ ಸಹಜವಾದ ತರಲೆ, ಕೀಟಲೆ. ನಾಯಕನ ಬಾಲಂಗೋಚಿಗಳಾಗಿ ಬರುವ ಐದು ಮಂದಿ ಹುಡುಗರು ಹಾಡ್ತಾರೆ, ಕುಣೀತಾರೆ, ನಾಯಕನ ಕಷ್ಟದಲ್ಲಿ ನೆರವಾಗ್ತಾರೆ, ನಾಯಕಿಯನ್ನು ಅಣ್ಣಂದಿರಂತೆ ಸಲಹುತ್ತಾರೆ. ಸಣ್ಣ ಪುಟ್ಟ ದೃಶ್ಯಗಳಲ್ಲಿ ನಗೆಯುಕ್ಕಿಸುವ ಕಲೆಯಲ್ಲಿ ನಿರ್ದೇಶಕ ದಿನೇಶ್‌ ಬಾಬು ನಿಷ್ಣಾತರು. ಅದಕ್ಕೆ ಉದಾರಹಣೆಯಾಗಿ ಇಲ್ಲಿ ನಾಯಕ- ನಾಯಕಿ ನಡುವೆ ಪ್ರೇಮಾಂಕುರವಾಗುವ ದೃಶ್ಯವಿದೆ, ಆಟೋದವನ ಜೊತೆ ಅನಂತ್‌ ಜಗಳಾಡುವ ದೃಶ್ಯವಿದೆ. ಅಂಥಾದ್ದೇ ಅಸಂಖ್ಯ ದೃಶ್ಯಗಳಿವೆ. ಪರೀಕ್ಷೆ ಹಾಲ್‌ನಲ್ಲಿ ನಾಯಕ ಬರೀತಾ ಕೂತಿದ್ದಾಗ, ಅವನ ಮಗುವೇ ಅಲ್ಲಿಗೆ ಬರೋದಂತೂ ತುಂಬಾ ತಮಾಷೆಯಾಗಿದೆ.

ಹೀಗೆ ಗಂಭೀರ ಸಮಸ್ಯೆಯನ್ನು ನಗುನಗುತ್ತಾನೇ ಹೇಳೋ ಪ್ರಯತ್ನದಲ್ಲಿ ನಿರ್ದೇಶಕರು ಯಶಸ್ವಿಯಾಗಿದ್ದಾರೆ. ಅವರಿಗೆ ನೆರವಾಗಿ ನಿಲ್ಲುತ್ತಾರೆ ಸಂಗೀತ ನಿರ್ದೇಶಕ ಗುರುಕಿರಣ್‌, ಗೀತರಚನೆಕಾರ ಕಲ್ಯಾಣ್‌ ಮತ್ತು ಛಾಯಾಗ್ರಾಹಕ ದಿನೇಶ್‌ಬಾಬು. ತಾಂತ್ರಿಕವಾಗಿ ಫರ್‌ಫೆಕ್ಟ್‌ ಅನ್ನ ಬಹುದಾದ ಚಿತ್ರವಿದು. ಮೂರು ಗೀತೆಗಳು ಪಡ್ಡೆ ಹುಡುಗರನ್ನು ಕುಣಿದಾಡುವಂತೆ ಮಾಡುತ್ತವೆ.

ಹುಡುಗರ ಚಿತ್ರ ಅಂದಮೇಲೆ ಅಲ್ಲಿ ನಟನೆಯನ್ನು ಹುಡುಕಬೇಕಿಲ್ಲ. ಅವರು ಹೇಗಿರ್ತಾರೋ ಅದೇ ಅಭಿನಯ ಆಗಿಬಿಡುತ್ತದೆ. ಹಾಗಾಗಿ ವಿನಾಯಕ ಜೋಶಿ, ಆನಂದ್‌, ಅನಿರುದ್ಧ್‌ , ಸುನಿಲ್‌, ಹರ್ಷ ಮೊದಲಾದ ಆರು ಹುಡುಗರ ಗ್ಯಾಂಗ್‌ನ ನಡೆನುಡಿಯೇ ಚಿತ್ರದ ಹೈಲೈಟಾಗಿ ಬಿಡುತ್ತದೆ. ನವನಾಯಕಿ ರೇಖಾ ಅವರ ಬೊಗಸೆ ಕಣ್ಣುಗಳನ್ನು ದಿನೇಶ್‌ ಬಾಬು ಪದೇ ಪದೇ ಕ್ಲೋಸ್‌ ಅಪ್‌ನಲ್ಲಿ ಸೆರೆಹಿಡಿದಿದ್ದಾರೆ. ಈ ಹುಡುಗಿಗೆ ಇನ್ನಷ್ಟು ಅವಕಾಶಗಳು ಹರಿದು ಬರಬಹುದು. ರೇಖಾಗಿರುವ ಚಾರ್ಮ್‌ ನಾಯಕ ಪ್ರಸಾದ್‌ ಅವರಲ್ಲಿ ಮಿಸ್‌ ಆಗಿದೆ. ಈತ ಪ್ರಭುದೇವ್‌ ತಮ್ಮನಾದರೂ ಡ್ಯಾನ್ಸ್‌ನಲ್ಲಿ ಸುಮಾರು. ಆ ಕಾರಣಕ್ಕೋ ಏನೋ ಚಿತ್ರದಲ್ಲಿ ಡ್ಯಾನ್ಸ್‌ ನಂಬರ್‌ಗಳೇ ಕಡಿಮೆಯಿದೆ.

ಆದರೆ ಅನಂತ್‌, ವನಿತಾವಾಸು, ರಮೇಶ್‌ ಭಟ್‌, ಕಾಶಿನಾಥ್‌ ಮೊದಲಾದ ಪೋಷಕರು ಚಿತ್ರದ ಸಣ್ಣಪುಟ್ಟ ದೋಷಗಳನ್ನು ಮರೆಸುತ್ತಾರೆ.

ಕಾಲೇಜು ಹುಡುಗರು ಕನ್ನಡ ಸಿನಿಮಾ ನೋಡೋದಿಲ್ಲ ಎಂಬ ಆರೋಪ ಈ ಚಿತ್ರದಿಂದ ದೂರವಾಗಬಹುದು. ಇದು ಯುವಕರಿಗಾಗಿ ಯುವಕರೇ ನಟಿಸಿದ ಚಿತ್ರ.

ಮುಖಪುಟ / ಸ್ಯಾಂಡಲ್‌ವುಡ್‌

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada