Thangalaan Review: ಚಿನ್ನದ ಮಣ್ಣಲ್ಲಿ ವಿಭಿನ್ನ ದೃಶ್ಯಕಾವ್ಯ 'ತಂಗಲಾನ್'.. ಆದರೆ..
ಕೋಲಾರದ ಚಿನ್ನದ ಗಣಿ ಸುತ್ತಾ ಯಶ್ ನಟನೆಯ 'KGF' ಸರಣಿ ಸಿನಿಮಾ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಹಿಟ್ ಆಗಿತ್ತು. ಆದರೆ ಅದು ಕಂಪ್ಲೀಟ್ ಆಗಿ ಕಾಲ್ಪನಿಕ ಕಥೆ. ಇದೀಗ ಅದೇ 'KGF' ಸುತ್ತಾ ತಮಿಳಿನ 'ತಂಗಲಾನ್' ಸಿನಿಮಾ ತೆರೆಗೆ ಬಂದಿದೆ. ಪಾ. ರಂಜಿತ್ ನಿರ್ದೇಶನದ ಚಿತ್ರದಲ್ಲಿ ವಿಕ್ರಂ ಹೀರೊ ಆಗಿ ನಟಿಸಿದ್ದಾರೆ.
ಪ್ಯಾನ್ ಇಂಡಿಯಾ ಮಟ್ಟದಲ್ಲಿ ಈ ಐತಿಹಾಸಿಕ ಕಥಾಹಂದರದ ಸಿನಿಮಾ ಮೂಡಿ ಬಂದಿದೆ. ಬಹುಕೋಟಿ ವೆಚ್ಚದಲ್ಲಿ ನಿರ್ಮಾಣವಾಗಿರುವ ಚಿತ್ರದ ಟ್ರೈಲರ್, ಸಾಂಗ್ಸ್, ಮೇಕಿಂಗ್ ವೀಡಿಯೋಗಳಿಂದ ಹುಬ್ಬೇರಿಸಿತ್ತು. ಇದೀಗ 'ತಂಗಲಾನ್' ಸಿನಿಮಾ ತೆರೆಗೆ ಬಂದಿದೆ. ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ. ಅಷ್ಟಕ್ಕೂ ಸಿನಿಮಾ ಕಥೆಯೇನು? ಸಿನಿಮಾ ಹೇಗಿದೆ? ಯಾರ ನಟನೆ ಹೇಗಿದೆ? ಇಲ್ಲಿದೆ ರಿವ್ಯೂ ರಿಪೋರ್ಟ್.

'ತಂಗಲಾನ್' ಕಥೆ
18ನೇ ಶತಮಾನದಲ್ಲಿ ಬ್ರಿಟಿಷರ ಆಳ್ವಿಕೆಯ ಸಮಯದ ಕಥೆ ಇದು. ಕೋಲಾರದ ಚಿನ್ನದ ಗಣಿಯ ಸುತ್ತಾ ಕಥೆ ತೆರೆದುಕೊಳ್ಳುತ್ತದೆ. ವೆಪ್ಪುರ್ ಎನ್ನುವ ಹಳ್ಳಿಯಲ್ಲಿ 'ತಂಗಲಾನ್' ಬುಡಕಟ್ಟಿನ ಜನರು ಅಸ್ಪೃಶ್ಯರಂತೆ ಬದುಕುತ್ತಿರುತ್ತಾರೆ. ಆ ಬುಡಕಟ್ಟಿಗೆ ಸೇರಿದ 'ತಂಗಲಾನ್' (ವಿಕ್ರಮ್) ತನ್ನ ಹೆಂಡತಿ ಗಂಗಮ್ಮ (ಪಾರ್ವತಿ ಮೆನನ್) ಹಾಗೂ ಮಕ್ಕಳ ಜೊತೆ ವಾಸಿಸುತ್ತಿರುತ್ತಾನೆ. ತನ್ನ ಸಣ್ಣ ಭೂಮಿಯಲ್ಲಿ ವ್ಯವಸಾಯ ಮಾಡಿಕೊಂಡಿರುತ್ತಾನೆ. ಆದರೆ ಈ ಭೂಮಿಯನ್ನು ಸ್ಥಳೀಯ ಜಮೀನ್ದಾರ ವಶಪಡಿಸಿಕೊಳ್ಳುತ್ತಾನೆ.
'ತಂಗಲಾನ್' ಬುಡಕಟ್ಟಿನ ಜನರ ಜೀವನ ಸಂಕಷ್ಟಕ್ಕೆ ಸಿಲುಕಿದ ಸಮಯದಲ್ಲೇ ಬ್ರಿಟಿಷ್ ಅಧಿಕಾರಿ ಕ್ಲೆಮೆಂಟ್ ಗಣಿಯಿಂದ ಚಿನ್ನ ತೆಗೆಯಲು ಬಯಸುತ್ತಾನೆ. ತಾತನ ಕಾಲದಿಂದ ಅಲ್ಲಿ ದೆವ್ವ ಭೂತಗಳಿವೆ. ಚಿನ್ನ ತೆಗೆಯಲು ಹೋದವರನ್ನು ಸುಮ್ಮನೆ ಬಿಡಲ್ಲ ಎನ್ನುವ ಕಥೆಯನ್ನು ಅಲ್ಲಿನ ಜನ ಕೇಳಿಕೊಂಡು ಬಂದಿರುತ್ತಾರೆ. ಹಾಗಾಗಿ ಯಾರೊಬ್ಬರು ಅಲ್ಲಿಗೆ ಹೋಗಲು ಹೆದರುತ್ತಿರುತ್ತಾರೆ. ಚಿನ್ನ ತೆಗೆಯಲು ಬ್ರಿಟೀಷರಿಗೆ ಸಹಾಯ ಮಾಡಿದರೆ ತಮ್ಮ ಬುಡಕಟ್ಟಿನ ಜನರಿಗೆ ಸಹಾಯವಾಗುತ್ತದೆ ಎಂದು ನಂಬಿ ನಾಯಕ 'ತಂಗಲಾನ್' ಈ ಸಾಹಸಕ್ಕೆ ಮುಂದಾಗುತ್ತಾನೆ. ಮುಂದೇನಾಗುತ್ತದೆ? ಎನ್ನುವುದು ಇನ್ನುಳಿದ ಕಥೆ.
ಸಿನಿಮಾ ಹೇಗಿದೆ?
ಒಂದೊಳ್ಳೆ ಕಥೆಯನ್ನು ಪಾ. ರಂಜಿತ್ ಆರಿಸಿಕೊಂಡಿದ್ದಾರೆ. ಫಸ್ಟ್ ಹಾಫ್ ಬಹಳ ಚೆನ್ನಾಗಿ ಮೂಡಿ ಬಂದಿದೆ. ಅದರಲ್ಲೂ 'ತಂಗಲಾನ್' ಮುತ್ತಜ್ಜ(ವಿಕ್ರಂ) ಹಾಗೂ ಚಿನ್ನಕ್ಕೆ ರಕ್ಷಕರಾಗಿ ಇರುವ ಸಮುದಾಯದ ನಾಯಕಿ ಆರತಿ (ಮಾಳವಿಕಾ ಮೋಹನನ್) ನಡುವಿನ ಹೋರಾಟದ ಸನ್ನಿವೇಶ ಬಹಳ ರೋಚಕವಾಗಿದೆ. ಇನ್ನು ಚಿನ್ನಕ್ಕೆ ಆಸೆ ಬಿದ್ದವರನ್ನು ಆರತಿ ಹೇಗೆಲ್ಲಾ ಕಾಡುತ್ತಾಳೆ ಎನ್ನುವುದನ್ನು ಬಹಳ ಸೊಗಸಾಗಿ ತೆರೆಗೆ ತರಲಾಗಿದೆ. 'ತಂಗಲಾನ್' ಆಗಿ ವಿಕ್ರಂ ಅದ್ಭುತವಾಗಿ ನಟಿಸಿದ್ದಾರೆ.

ಸೆಕೆಂಡ್ ಹಾಫ್‌ನಲ್ಲಿ ಕೆಲ ಸನ್ನಿವೇಶಗಳು ಪುನರಾವರ್ತನೆ ಆಗಿ ಪ್ರೇಕ್ಷಕರ ತಾಳ್ಮೆ ಪರೀಕ್ಷಿಸುತ್ತದೆ. ಅಲ್ಲಿಂದ ಮುಂದೆ ಏನಾಗುತ್ತದೆ ಎನ್ನುವ ಆಸಕ್ತಿಯನ್ನು ಪ್ರೇಕ್ಷಕರು ಕಳೆದುಕೊಳ್ಳುತ್ತಾರೆ. ಪಾ. ರಂಜಿತ್ ಸಿನಿಮಾಗಳಲ್ಲಿ ಸಾಮಾನ್ಯವಾಗಿ ದಲಿತರು, ಜಾತಿ, ವರ್ಣಭೇದ, ಜಾತಿ ತಾರತಮ್ಯ ರೀತಿಯ ವಿಚಾರಗಳು ಇರುತ್ತವೆ. 'ತಂಗಲಾನ್' ಚಿತ್ರದಲ್ಲೂ ಅದನ್ನು ಗಮನಿಸಬಹುದು. ಇನ್ನು ಪ್ರಕೃತಿಯನ್ನು ಬಳಸಿಕೊಂಡು ಬದುಕಬೇಕು ಎಂದುಕೊಂಡಿರುವ ನಾವು ಅದನ್ನು ಉಳಿಸಿಕೊಳ್ಳುವ ಜವಾಬ್ದಾರಿ ಕೂಡ ಇದೆ ಎನ್ನುವ ಸಂದೇಶವನ್ನು ದಾಟಿಸುತ್ತಾರೆ.
ಒಂದೊಳ್ಳೆ ಕಥೆ ಇದೆ. ಅದಕ್ಕೆ ಫ್ಯಾಂಟಸಿ ಅಂಶಗಳನ್ನು ಸೇರಿಸುವುದು ಚೆನ್ನಾಗಿದೆ. ಬಲವಾದ ಪಾತ್ರಗಳಿವೆ. ಆದರೆ ಅದನ್ನೆಲ್ಲಾ ಸೇರಿಸಿ ತೆರೆಮೇಲೆ ಮ್ಯಾಜಿಕ್ ಕ್ರಿಯೇಟ್ ಮಾಡುವಲ್ಲಿ ನಿರ್ದೇಶಕರು ಸಂಪೂರ್ಣವಾಗಿ ಯಶಸ್ವಿಯಾಗಲಿಲ್ಲ ಎನ್ನಬಹುದು. ಅದೇ ಕಾರಣಕ್ಕೆ ಸಿನಿಮಾ ಕೊಂಚ ಬೇಸರ ಮೂಡಿಸುತ್ತದೆ. ಚಿತ್ರಮಂದಿರದಿಂದ ಹೊರಬರುವಾಗ ಸಿನಿಮಾದಲ್ಲಿ ಇನ್ನು ಏನೋ ಬೇಕಿತ್ತು ಎನಿಸುವಂತೆ ಭಾಸವಾಗುತ್ತದೆ.
ಕಲಾವಿದರ ನಟನೆ
ನಟನೆ ವಿಚಾರಕ್ಕೆ ಬಂದರೆ ಚಿಯಾನ್ ವಿಕ್ರಂ ನಟ ರಾಕ್ಷಸನೇ ಸರಿ. 'ತಂಗಲಾನ್' ಆಗಿ ಆತನ ಲುಕ್, ಗೆಟಪ್ ಹುಬ್ಬೇರಿಸುವಂತಿದೆ. ಆತನ ಡೆಡಿಕೇಷನ್ ಬಗ್ಗೆ ಎಷ್ಟು ಹೇಳಿದರೂ ಕಮ್ಮಿನೇ. ಮೂರು ಮತ್ತೆರಡು ಪಾತ್ರಗಳಲ್ಲಿ ವಿಕ್ರಂ ಕಾಣಿಸಿಕೊಂಡಿದ್ದಾರೆ. 'ಅನ್ನಿಯನ್', 'ಐ' ಸಿನಿಮಾಗಳ ಗೆಟಪ್‌ಗಳು ಅಭಿನಯ ಮತ್ತೊಮ್ಮೆ ನೋಡಬಹುದು. ಇನ್ನು ಗಂಗಮ್ಮ ಆಗಿ ಪಾರ್ವತಿ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ. ಆರತಿ ಆಗಿ ಮಾಳವಿಕಾ ಮೋಹನನ್ ಆಕ್ಷನ್ ಸೀನ್‌ಗಳಲ್ಲಿ ಅಬ್ಬರಿಸಿದ್ದಾರೆ. ಹಿಂದೆ ಆಕೆಗೆ ಇಂತಾದೊಂದು ಅವಕಾಶ ಸಿಕ್ಕಿರಲಿಲ್ಲ. ಇನ್ನುಳಿದಂತೆ ಎಲ್ಲರೂ ಸೊಗಸಾಗಿ ನಟಿಸಿದ್ದಾರೆ.
ತಾಂತ್ರಿಕವಾಗಿ ಸಿನಿಮಾ
'ತಂಗಲಾನ್' ಬಹುಕೋಟಿ ವೆಚ್ಚ ಸಿನಿಮಾ. ಆದರೆ ಗ್ರಾಫಿಕ್ಸ್ ಅಲ್ಲಲ್ಲಿ ಕೈಕೊಟ್ಟಿದೆ. ವಿಷ್ಯುವಲ್ ಎಫೆಕ್ಟ್ ವಿಚಾರದಲ್ಲಿ ತಂಡ ಮತ್ತಷ್ಟು ಜಾಗ್ರತೆ ವಹಿಸಬೇಕಿತ್ತು. ಕಿಶೋರ್ ಕುಮಾರ್ ಛಾಯಾಗ್ರಹಣ ಸೊಗಸಾಗಿದೆ. ಜಿ. ವಿ ಪ್ರಕಾಶ್ ಕುಮಾರ್ ಸಂಗೀತ ಚಿತ್ರಕ್ಕೆ ಪ್ಲಸ್ ಆಗಿದೆ. ಕೆಲ ಎಲಿವೇಷನ್ಸ್ ಸೀನ್‌ಗಳಲ್ಲಿ ಬಿಜಿಎಂ ಮೈ ಜುಮ್ ಎನಿಸುವಂತಿದೆ. ಆರ್ಟ್ ವರ್ಕ್, ಕಾಸ್ಟ್ಯೂಮ್ ಡಿಸೈನ್ ಎಲ್ಲವೂ ಕಥೆಗೆ ಪೂರಕವಾಗಿದೆ.
ಕೊನೆಯ ಮಾತು
ಒಟ್ಟಾರೆಯಲ್ಲಿ 'ತಂಗಲಾನ್' ಒಳ್ಳೆ ಪ್ರಯತ್ನ ಎನ್ನಬಹುದು. ಆದರೆ ಇನ್ನು ಚೆನ್ನಾಗಿ ಮಾಡಬಹುದಾಗಿದ್ದ ಅವಕಾಶವನ್ನು ನಿರ್ದೇಶಕರು ಕೈ ಚೆಲ್ಲಿದ್ದಾರೆ ಎನ್ನಬಹುದು. ಒಂದೊಳ್ಳೆ ಕಥೆ, ಅದ್ಭುತ ಕಲಾವಿದರ ತಂಡ ಎಲ್ಲಾ ಇದ್ದೂ ಮತ್ತಷ್ಟು ಗಟ್ಟಿಯಾಗಿ ಸಿನಿಮಾ ಮಾಡಬಹುದಾಗಿತ್ತು ಎನಿಸದೇ ಇರದು. ಮುಖ್ಯವಾಗಿ ಸೆಕೆಂಡ್ ಹಾಫ್ ಲ್ಯಾಗ್ ಚಿತ್ರಕ್ಕೆ ದೊಡ್ಡ ಹಿನ್ನಡೆ ಎನ್ನಬಹುದು. ಒಂದಷ್ಟು ಸನ್ನಿವೇಶಗಳಿಗೆ ಕತ್ತರಿ ಹಾಕಿದ್ದರೆ ಚೆನ್ನಾಗಿರುತ್ತಿತ್ತು.
ಕೊನೆಯದಾಗಿ ಹೇಳಬೇಕು ಅಂದರೆ 'ತಂಗಲಾನ್' ಎಲ್ಲರಿಗೂ ಇಷ್ಟವಾಗುವ ಸಿನಿಮಾ ಅಲ್ಲ. ವಿಭಿನ್ನ ಸಿನಿಮಾಗಳನ್ನು ಇಷ್ಟಪಡುವವರಿಗೆ ಇಷ್ಟವಾಗುತ್ತದೆ. ವೀಕೆಂಡ್ ರಜೆಯಲ್ಲಿ ಸಿನಿಮಾ ನೋಡುವ ಆಸೆ ಇರುವವರು ಯಾವುದೇ ನಿರೀಕ್ಷೆ ಇಲ್ಲದೇ ಹೋದರೆ 'ತಂಗಲಾನ್' ನಿಮ್ಮನ್ನು ರಂಜಿಸುತ್ತಾನೆ.


Click it and Unblock the Notifications











