Cocktail 2 Review : ರಿಯಾಲಿಟಿ ಶೋ ನೆನಪಿಸುವ ಹಳಸಲು ತ್ರಿಕೋನ ಪ್ರೇಮಕಥೆ, ಕಿಕ್ಕೇರಿಸದ ಕಾಕ್‌ಟೇಲ್
ಬೆಳ್ಳಿತೆರೆಗೆ ಮತ್ತು ಪ್ರೇಕ್ಷಕರಿಗೆ ಲವ್ ಸ್ಟೋರಿ ಹೊಸದಲ್ಲ. ವಾರದಲ್ಲಿ ಅಲ್ಲದೇ ಇದ್ದರೂ ಕೊನೆ ಪಕ್ಷ ತಿಂಗಳಿಗೊಮ್ಮೆ ಇಲ್ಲಿ ಯಾರಾದರೂ ಒಬ್ಬರು ಪ್ರೇಮ ಕಥೆ ಮತ್ತು ವ್ಯಥೆ ಹೇಳುವ ಪ್ರಯತ್ನ ಮಾಡುತ್ತಾರೆ. ಆ ಪೈಕಿ ನಾಯಕ ಬಹುತೇಕ ಬಾರಿ ನಿನ್ನ ಪ್ರೀತಿಗೆ, ಅದರ ರೀತಿಗೆ ಈ ಕಣ್ಣ ಹನಿಗಳೆ ಕಾಣಿಕೆ ಎಂದರೆ, ನಾಯಕಿಯದ್ದು ಹುಚ್ಚು ಪ್ರೀತಿ.
ಆದರೆ.. ಈ ಹುಚ್ಚು ಪ್ರೀತಿಗೆ ನಮ್ಮ ಚಿತ್ರರಂಗ ನೀಡುತ್ತಿರುವ ವ್ಯಾಖ್ಯಾನ ತುಂಬಾನೇ ಮಾರಕ. ಯಾಕೆಂದರೆ.. ನಾಯಕಿಯಲ್ಲಿ ವಿವೇಚನಾ ಶಕ್ತಿಯೂ ಇರಲ್ಲ. ಸ್ವಾಭಿಮಾನವೂ ಇರಲ್ಲ. ಪುರುಷ ಪ್ರಧಾನ ಚಿತ್ರರಂಗದಲ್ಲಿ ಗಂಡಸರೇ ಕುಂತು ಹೆಣೆಯುವ ಇಂತಹ ಪಾತ್ರಗಳಲ್ಲಿ ಇನ್ನೂ ಕೆಲ ಒಮ್ಮೆ ಹುಚ್ಚು ಎಷ್ಟಿರುತ್ತೆ ಅಂದರೆ ಪ್ರೇಮದ ಅಮಲಿನಲ್ಲಿ ಹುಡುಗಿ ಸೈಕೋ ರೀತಿ ವರ್ತಿಸಲು ಶುರು ಮಾಡುತ್ತಾಳೆ. ಹಲವಾರು ವರ್ಷಗಳಿಂದ ಹಲವರು ಇದನ್ನೇ ''ಮಾಡರ್ನ್ ಲವ್'' ಹೆಸರಿನಲ್ಲಿ ಸಕ್ಕರೆ ಸವರಿ ಮನರಂಜನೆ ಎಂದು ಉಣಿಸುತ್ತಾ ಬಂದಿದ್ದಾರೆ. ಉದಾಹರಣೆಗೆ ''ಕಾಕ್‌ಟೇಲ್ 2'' .

ಹೌದು. ''ಕಾಕ್‌ಟೇಲ್ 2''.. 2012ರ ''ಕಾಕ್ ಟೇಲ್'' ಚಿತ್ರದ ಸೀಕ್ವೆಲ್. ಹೋಮಿ ಅದಜಾನಿಯಾ ನಿರ್ದೇಶನದ ಈ ಚಿತ್ರ ಆ ಕಾಲದಲ್ಲಿ ಪ್ರೇಕ್ಷಕರ ಗಮನ ಸೆಳೆದಿತ್ತು. ಬಾಕ್ಸಾಫೀಸ್‌ನಲ್ಲಿ ಕೂಡ ಗೆದ್ದಿತ್ತು. ಇದೀಗ 14 ವರ್ಷಗಳ ನಂತರ ತಮ್ಮದೇ ಚೆಂದದ ಚಿತ್ರದ ಎರಡನೇ ಭಾಗವನ್ನು ಹೋಮಿ ಮಾಡಿದ್ದಾರೆ. ಆದರೆ, ದುರಾದೃಷ್ಟವಶಾತ್ ಎಡವಿದ್ದಾರೆ. ಹಾಗಿದ್ದರೆ ಹೇಗಿದೆ ''ಕಾಕ್‌ಟೇಲ್ 2''..? ಕಥಾಹಂದರವೇನು..? ಎಂದು ತಿಳಿಯಲು ಮುಂದೆ ಓದಿ.
ಕಥಾಹಂದರ
ಕುನಾಲ್ ( ಶಾಹಿದ್ ಕಪೂರ್ ) ದಿಯಾ (ರಶ್ಮಿಕಾ ಮಂದಣ್ಣ) ಈ ಕಥೆಯ ಕೇಂದ್ರ ಬಿಂದು. ಇಬ್ಬರ ನಡುವೆ 16 ವರ್ಷದ ಸಂಬಂಧ ಇದೆ. ಮದುವೆಯಾಗದೇ ಒಂದೇ ಮನೆಯಲ್ಲಿ ವಾಸ ಮಾಡುವ ಇವರ ಪ್ರಕಾರ ಮದುವೆ ಎನ್ನುವುದು ಕಾನೂನಿನ ಪ್ರಕಾರ ಪೇಪರ್ ನಲ್ಲಿರುವ ಬದುಕಿನ ಒಂದು ದಾಖಲೆ ಮಾತ್ರ.
ಆದರೆ, ಎಷ್ಟೇ ಪ್ರಗತಿಪರರಾಗಿದ್ದರು ಕೂಡ ಸಮಾಜದ ಒತ್ತಡ ಇದ್ದೇ ಇರುತ್ತೆ. ಈ ಹಿನ್ನೆಲೆ ಮದುವೆಯಾಗುವಂತೆ ದುಂಬಾಲು ಬೀಳುತ್ತಾಳೆ ದಿಯಾ. ಆದರೆ.. ಕುನಾಲ್ ಮಾತ್ರ ಸುತಾರಾಂ ಒಪ್ಪುವುದಿಲ್ಲ. ಬದಲಿಗೆ ಎಣ್ಣೆಯ ಮತ್ತಿನಲ್ಲಿ ನಿನಗೆ ನಾನು ಮೋಸ ಮಾಡಿದರು ಕೂಡ ಗೊತ್ತಾಗಲ್ಲ ಎನ್ನುತ್ತಾನೆ.
ಇದರಿಂದ ಅನುಮಾನಗೊಳ್ಳುವ ದಿಯಾ, ತನ್ನ ಪ್ರಿಯಕರನ ಪ್ರೇಮವನ್ನು ಪರೀಕ್ಷೆ ಮಾಡಲು ನಿರ್ಧರಿಸುತ್ತಾಳೆ. ಇಲ್ಲಿಂದ ಕಣ್ಮುಂದೆ ಇಟಲಿಯಲ್ಲಿನ ಸಿಸಿಲಿಯ ಸುಂದರ ದೃಶ್ಯಾವಳಿ ಕಣ್ಮುಂದೆ ಬರುತ್ತೆ. ಇಲ್ಲಿ ಅಂದರೆ ಸಿಸಿಲ್‌ನಲ್ಲಿ ದಿಯಾ ತನ್ನ ಗೆಳತಿ ಆಲಿಯನ್ನೇ (ಕೃತಿ ಸನೋನ್) ಕುನಾಲ್ ಹಿಂದೆ ಛೂ ಬೀಡುತ್ತಾಳೆ. ಹೇಗಾದರೂ ಮಾಡಿ ಮೋಹದ ಬಲೆ ಬೀಸುವಂತೆ ಹೇಳುತ್ತಾಳೆ. ನಿರೀಕ್ಷೆಯಂತೆ ಕುನಾಲ್ ಮೇಲೆ ಆಲಿಗೆ ನಿಜವಾಗಿಯೂ ಆ ನಂತರ ಪ್ರೇಮಾಂಕುರವಾಗುತ್ತೆ. ಮುಂದೇನು..? ಎಂಬ ಕುತೂಹಲ ನಿಮ್ಮಲ್ಲಿ ಇದ್ದರೆ ಚಿತ್ರಮಂದಿರದಲ್ಲಿ ನೀವು ಉತ್ತರವನ್ನು ಪಡೆಯಬೇಕು.

ಅಭಿನಯ ಹೇಗಿದೆ..?
ಶಾಹಿದ್ ಕಪೂರ್ ಅವರ ಅಭಿನಯಕ್ಕೆ ಮಾತ್ರ ಇಲ್ಲಿ ಚೂರು ಪಾರು ಅಂಕ ನೀಡಬಹುದು. ನಿಜ ಹೇಳಬೇಕು ಅಂದರೆ ಇಡೀ ಚಿತ್ರದಲ್ಲಿ ಇವರ ಪಾತ್ರ ಪೋಷಣೆಯತ್ತ ಮಾತ್ರ ನಿರ್ದೇಶಕರು ಮತ್ತು ಬರಹಗಾರರು ಗಮನ ವಹಿಸಿದಂತೆ ಇದೆ. ಪ್ರೀತಿ ಅಂದರೆ ಬಾಹ್ಯ ಆಕರ್ಷಣೆ ಅಲ್ಲ. ಬದಲಿಗೆ ಪರಸ್ಪರ ನಂಬಿಕೆ ಎನ್ನುವುದನ್ನು ನೆನಪಿಸುವ ಇವರ ಪಾತ್ರ ಚಿಕ್ಕ ಚಿಕ್ಕ ವಿಷಯಗಳಲ್ಲಿ ಖುಷಿ ಕಾಣುತ್ತೆ. ಆದರೆ. ಅಭಿನಯ ಇವರ ಇತ್ತೀಚಿನ ಚಿತ್ರಗಳ ಶೈಲಿಯಲ್ಲಿಯೇ ಇರುವುದರಿಂದ ಹೆಚ್ಚಿನ ಪ್ರಭಾವ ಬೀರುವುದಿಲ್ಲ.
ಕೃತಿ ಸನೋನ್ ಅವರ ಆಲಿಸ್ ಪಾತ್ರಕ್ಕೆ ಪ್ರಾಮುಖ್ಯತೆ ಇದೆ. ಆದರೆ ಅಭಿನಯ ಅಷ್ಟಕಷ್ಟೇ. ಗ್ಲಾಮರ್ ಗೊಂಬೆಯಂತೆ ಇವರನ್ನು ಇಲ್ಲಿ ಬಳಸಿಕೊಳ್ಳುವ ಪ್ರಯತ್ನವನ್ನು ಮಾಡಲಾಗಿದೆ. ಸುಂದರವಾಗಿದ್ದರೂ, ಜಾಣೆಯಾಗಿದ್ದರೂ ಕೂಡ ಇವರ ಪಾತ್ರವನ್ನು ಚಿತ್ರದೂದಕ್ಕೂ ಬೇರೆಯವರ ಜೀವನ ಹಾಳು ಮಾಡುವ ಸ್ವಾರ್ಥಿಯಂತೆ ಬಿಂಬಿಸಲಾಗಿದೆ.
ಇನ್ನು ರಶ್ಮಿಕಾ ಮಂದಣ್ಣ ಈ ಇಡೀ ಚಿತ್ರದ ಬಹುದೊಡ್ಡ ಹಿನ್ನೆಡೆಗೆ ಕಾರಣವಾಗುವ ಪ್ರಮುಖ ಅಂಶ. ಈ ಪಾತ್ರವನ್ನು ರಶ್ಮಿಕಾ ಅದ್ಹೇಗೆ ಒಪ್ಪಿಕೊಂಡರು..? ರಶ್ಮಿಕಾ ಅವರನ್ನು ಚಿತ್ರತಂಡದವರು ಹೇಗೆ ಆಯ್ಕೆ ಮಾಡಿಕೊಂಡರು..? ಎನ್ನುವ ಮಿಲಿಯನ್ ಡಾಲರ್ ಪ್ರಶ್ನೆ ಚಿತ್ರ ನೋಡುವಾಗ ಮೂಡದಿರದು. ಅತಿಯಾದ ಪೊಸೆಸಿವ್‌ನೆಸ್, ಇನ್ ಸೆಕ್ಯೂರ್‍ಡ್, ಪಾತ್ರವನ್ನು ಇಲ್ಲಿ ನಿರ್ವಹಿಸಿರುವ ರಶ್ಮಿಕಾ ಹುಚ್ಚು ಹುಚ್ಚುರಂತೆ ಅಭಿನಯಿಸಲು ಹೋಗಿ ಪ್ರೇಕ್ಷಕರನ್ನೇ ಹುಚ್ಚಿಡಿಸುತ್ತಾರೆ. ತಾಳ್ಮೆಯ ಪರೀಕ್ಷೆ ಮಾಡುತ್ತಾರೆ. ಇನ್ನು ಇವರ ಹಿಂದಿ ಉಚ್ಚಾರಣೆ ಇಡೀ ಪಾತ್ರದ ಗಂಭೀರತೆಯನ್ನೇ ನಾಶ ಮಾಡಿ ನಗೆಪಾಟಲಿಗೆ ಇಡಾಗಿದೆ.
ಪ್ಲಸ್ ಪಾಯಿಂಟ್ಸ್
ಆಗಲೇ ಹೇಳಿದಂತೆ ಸಿಸಿಲಿಯಲ್ಲಿನ ದೃಶ್ಯಗಳು ಮನಮೋಹಕವಾಗಿವೆ. ಸಂತಾನ ಕೃಷ್ಣನ್ ರವಿಚಂದ್ರನ್ ಅವರ ಕ್ಯಾಮರಾ ಕಣ್ಣಿಗೆ ಈ ಶ್ರೇಯ ಸಲ್ಲಬೇಕು. ಅದ್ದೂರಿತನ ಇಡೀ ಚಿತ್ರದೂದಕ್ಕೂ ಹಾಸು ಹೊಕ್ಕಿದೆ. ಪ್ರೀತಂ ಸಂಗೀತ ನಿರ್ದೇಶನದಲ್ಲಿ ಮೂಡಿ ಬಂದ ಹಾಡುಗಳು ಮತ್ತು ಹಾಡಿನ ಚಿತ್ರೀಕರಣ ಸೊಗಸಾಗಿದೆ.
ಮೈನಸ್ ಪಾಯಿಂಟ್ಸ್
2012ರಲ್ಲಿ ತೆರೆಗೆ ಬಂದಿದ್ದ ''ಕಾಕ್‌ಟೇಲ್'' ಚಿತ್ರಕ್ಕೆ ಹೋಲಿಸಿದರೆ ''ಕಾಕ್‌ಟೇಲ್ 2'' ಸತ್ವ ಇಲ್ಲದ ಸೊರಗಿದ ಸಿನಿಮಾ. ಅಲ್ಲಿ ದೀಪಿಕಾ ಪಡುಕೋಣೆ ನಿರ್ವಹಿಸಿದ್ದ ವರೋನಿಕಾ ಪಾತ್ರದಲ್ಲೊಂದು ಜೀವ ಇತ್ತು. ನೈಜತೆ ಇತ್ತು. ಆಕೆ ಸ್ನೇಹ ಮತ್ತು ಕೋಪ ಪ್ರೇಕ್ಷಕರ ಮನ ಮುಟ್ಟಿತ್ತು. ಆದರೆ ಇಲ್ಲಿ ಯಾವ ಹಿನ್ನೆಲೆ ಇಲ್ಲ. ಗಾಂಭೀರ್ಯ ಇಲ್ಲ. ಪ್ರತಿಯೊಂದು ಪಾತ್ರದಲ್ಲಿ ಕಾಣಿಸುವುದು ಕೃತಕತೆ ಮಾತ್ರ. ನೈಜ ಭಾವನೆ ಯಾರಲ್ಲಿಯೂ ಹೊರ ಹೊಮ್ಮಿಲ್ಲ.
ರಿಯಾಲಿಟಿ ಶೋ ನೆನಪಿಸುವ ಕಾಕ್‌ಟೇಲ್ 2
''ಕಾಕ್‌ಟೇಲ್ 2'' ಒಂದು ತ್ರಿಕೋನ ಪ್ರೇಮಕಥೆ ಎಂದು ನೋಡಲು ಹೋದರೆ, ಅಲ್ಲಿ ಈ ಹಿಂದೆ ಕಿರುತೆರೆಯಲ್ಲಿ ಪ್ರಸಾರವಾಗುತ್ತಿದ್ದ ''ಎಮೋಷನಲ್ ಅತ್ಯಾಚಾರ್'' ಅಂತಹ ರಿಯಾಲಿಟಿ ಶೋ ನಮಗೆ ಕಾಣಿಸುತ್ತೆ.16 ವರ್ಷ ಲಿವ್ ಇನ್ ಸಂಬಂಧದಲ್ಲಿ ಇದ್ದ ಮೇಲೂ ಬಾಯ್‌ಫ್ರೆಂಡ್‌ನ ನಿಯತ್ತು-ಪ್ರಾಮಾಣಿಕತೆಯ ಪರೀಕ್ಷೆ ಮಾಡಲು ತನ್ನದೇ ಗೆಳತಿಗೆ ಸುಪಾರಿ ಕೊಡೋ ನಾಯಕಿ, ಅದಕ್ಕೆ ತಕ್ಕ ಹಾಗೆ ಆಡೋ ನಾಯಕ. ಇವರನ್ನ ನೋಡಿದ್ರೆ ಇವರು ಪ್ರೇಮಿಗಳಾ ಅಥವಾ ಯಾವುದೋ ಚೀಪ್ ರಿಯಾಲಿಟಿ ಶೋನ ಕಾಂಟೆಸ್ಟೆಂಟ್‌ಗಳಾ ಅನ್ನೋ ಅನುಮಾನ ಖಂಡಿತವಾಗಿಯೂ ಬರುತ್ತೆ.
ಇನ್ನು ಸಿನಿಮಾದಲ್ಲಿ ಕಿರಿಕಿರಿ ಉಂಟು ಮಾಡುವ ಹಲವಾರು ದೃಶ್ಯಗಳಿವೆ. ಉದಾಹರಣೆಗೆ ಆಲಿಗೆ ದಿಯಾ ಕರೆ ಮಾಡಿ ಕುನಾಲ್ ತನಗೆ ಮೋಸ ಮಾಡಿದನಾ ಎಂದು ಅತ್ಯಂತ ಉತ್ಸಾಹದಿಂದ ಕೇಳುವ ದೃಶ್ಯ. ತನ್ನ ಪ್ರಿಯಕರ ತನ್ನ ಸ್ನೇಹಿತೆಯ ಜೊತೆ ಹಾಸಿಗೆ ಹಂಚಿಕೊಂಡನಾ ಇಲ್ವಾ ಎಂದು ತಿಳಿದುಕೊಳ್ಳುವ ಈ ಜಿಜ್ಞಾಸೆ ಪ್ರೇಕ್ಷಕರಿಗೆ ವಿಕೃತಿಯಂತೆ ಭಾಸವಾದರೆ ಅಚ್ಚರಿ ಇಲ್ಲ.
ಕೊನೆ ಮಾತು
ಒಟ್ನಲ್ಲಿ ತಾಂತ್ರಿಕವಾಗಿ ಚಿತ್ರ ಸುಂದರವಾಗಿದೆ. ಆದರೆ ಕಥೆಯಲ್ಲಿ ಯಾವ ಧಮ್ಮು ಇಲ್ಲ. ಪ್ರೀತಿಯ ಬೆಲೆಯನ್ನು ತಿಳಿಸದ ಈ ಹಳಸಲು ತ್ರಿಕೋನ ಪ್ರೇಮಕಥೆ ಯಾವ ಪ್ರಭಾವವನ್ನು ಕೂಡ ಬೀರುವುದಿಲ್ಲ. ಇನ್ನು ಚಿತ್ರದ ಬಿಡುಗಡೆಗೆ ಮುನ್ನ ಚಿತ್ರದಲ್ಲಿ ಸಲಿಂಗ ಕಾಮ ಅಂತಹ ಸೂಕ್ಷ್ಮ ವಿಚಾರ ಕುರಿತು ಕಥೆ ಇದೆ ಎಂದು ಹೇಳಲಾಗಿತ್ತು. ವದಂತಿ ಹಬ್ಬಿತ್ತು. ಆದರೆ ಇಲ್ಲಿ ಹೊಸ ರೀತಿಯ ಕಥೆಯನ್ನು ಆಯ್ಕೆ ಮಾಡದೇ ಅದೇ ಹಳೆಯ ಸವಕಲು ಕಥೆಯ ಮೊರೆ ಹೋಗಿರುವುದು ದುರಂತ. ಈ ಕಾಕ್‌ಟೇಲ್ ನೋಡಲು ಹೋದರೆ ತಲೆ ನೋವು ಬರುತ್ತೆ ಹೊರತು ಕಿಕ್ಕೇರಲ್ಲ.


Click it and Unblock the Notifications