Paid Review ; ಚಿತ್ರ ಚೆನ್ನಾಗಿದೆ ಎಂದು ನಾಲ್ಕು ಸಾಲು ಬರೆಯಲು ₹60,000 ರೂಪಾಯಿ ಕೇಳಿದ ವಿಮರ್ಷಕ.. !
ಎಲ್ಲೆಲ್ಲಿಂದಲೋ ಹಣ ಹೊಂದಿಸಿಕೊಂಡು ಬಂದು ನಿರ್ದೇಶಕ, ನಾಯಕ, ನಾಯಕಿ, ತಂತ್ರಜ್ಞರು ಮತ್ತು ಪೋಷಕ ಕಲಾವಿದರನ್ನೆಲ್ಲ ಒಂದು ಕಡೆ ಸೇರಿಸಿ ಚಿತ್ರ ಮಾಡುವ ಹೊತ್ತಿಗೆ ನಿರ್ಮಾಪಕನ ಪರಿಸ್ಥಿತಿ ಅಕ್ಷರಶಃ ಹೆಣ ಬಿದ್ದಂತಾಗಿರುತ್ತದೆ.
ಆದರೆ, ಇದನ್ನು ಅರ್ಥ ಮಾಡಿಕೊಳ್ಳದ ಆಫ್ ಲೈನ್ ಹಾಗೂ ಆನ್ ಲೈನ್ ವಂಚಕರು ನಿರ್ಮಾಪಕನ ರಕ್ತವನ್ನು ಹೀರಲು ಹೊಂಚು ಹಾಕಿ ಕುಂತಿರುತ್ತಾರೆ. ಪ್ರಚಾರದ ಹೆಸರಿನಲ್ಲಿ ಪಂಗನಾಮ ಹಾಕಲು ಶುರು ಮಾಡುತ್ತಾರೆ. ಹಾಗಂಥ ಎಲ್ಲರು ಇಲ್ಲಿ ಒಂದೇ ವರ್ಗಕ್ಕೆ ಸೇರಿರಲ್ಲ. ಬಹುತೇಕರು ಚಿತ್ರದ ಹಿಂದೆ ಇರುವ ಶ್ರಮಕ್ಕೆ ಬೆಲೆ ನೀಡುತ್ತಾರೆ. ಪ್ರಾಮಾಣಿಕವಾಗಿ ಚಿತ್ರದ ಕುರಿತು ಮಾತನಾಡುತ್ತಾರೆ. ಆದರೆ, ಈ ವೆರೈಟಿ ವೆರೈಟಿ ಜನರ ನಡುವೆ ಯಾರು ಉತ್ತಮರು, ಯಾರು ಕಳ್ಳರು ಎಂದು ಕವಡೆ ಹಾಕಿ ನಿರ್ಮಾಪಕ ನಿರ್ಧಾರ ಮಾಡುವಷ್ಟರಲ್ಲಿ ಕನಸಿನ ಅರಮನೆ ಕಣ್ಮುಂದೆಯೇ ನೆಲಕ್ಕೆ ಉರುಳಿರುತ್ತೆ. ನಿರ್ಮಾಪಕನ ಬದುಕು ಬಿದ್ದಿಗೆ ಬಿದ್ದಿರುತ್ತೆ.

ಇದಕ್ಕೆ ಇನ್ನೊಂದು ಉದಾಹರಣೆ ಎಂಬಂತೆ ಬಾಲಿವುಡ್‌ನಲ್ಲಿ ನಡೆಯುವ ಡೀಲು ಒಂದು ಬಹಿರಂಗವಾಗಿದೆ. ಚಿತ್ರದ ಕುರಿತು ನಾಲ್ಕು ಒಳ್ಳೆಯ ಸಾಲು ಬರೆಯಲು 60.000 ರೂಪಾಯಿಯನ್ನು ನಿರ್ಮಾಪಕರಿಂದ ವಿಮರ್ಷಕರು ವಸೂಲಿ ಮಾಡುತ್ತಾರೆ ಎನ್ನುವ ಸುದ್ದಿ ಜಗಜ್ಜಾಹೀರಾಗಿದೆ
ಹೌದು, ಅಸಲಿಗೆ ಈ ವಾರ ಹಿಂದಿಯಲ್ಲಿ ಜಿಗ್ರಾ ಚಿತ್ರ ಬಿಡುಗಡೆಯಾಗಿದೆ. ಆಲಿಯಾ ಭಟ್ ಈ ಚಿತ್ರದ ನಾಯಕಿ ಕಂ ನಿರ್ಮಾಪಕಿ. ನಿರ್ಮಾಣದಲ್ಲಿ ಹಿಂದಿ ಚಿತ್ರರಂಗದ ಖ್ಯಾತ ನಿರ್ಮಾಪಕ ಮತ್ತು ನಿರ್ದೇಶಕ ಕರಣ್ ಜೋಹರ್ ಕೂಡ ಆಲಿಯಾ ಜೊತೆ ಕೈ ಜೋಡಿಸಿದ್ದಾರೆ. ದುರಂತ ಅಂದರೆ, ಅನೇಕ ದಶಕಗಳಿಂದ ಹಿಂದಿ ಚಿತ್ರರಂಗದಲ್ಲಿ ಮಣ್ಣು ಹೊತ್ತಿರುವ ಕರಣ್ ಜೋಹರ್ ಅವರನ್ನೇ ವಿಮರ್ಶೆ ಹೆಸರಿನಲ್ಲಿ ಒಂದು ವರ್ಗ ಬ್ಲ್ಯಾಕ್ ಮೇಲ್ ಮಾಡಿದೆ. ಚಿತ್ರದ ಕುರಿತು ಒಂದು ಟ್ವಿಟ್ ಮಾಡಲು 60.000 ರೂಪಾಯಿಯ ಬೇಡಿಯನ್ನು ಇಟ್ಟಿದೆ. ಕೇಳಿದ ಹಣ ನೀಡದೇ ಇದ್ದರೆ ಬಿಡುಗಡೆಯಾದ ಜಿಗ್ರಾ ಚಿತ್ರದ ಕುರಿತು ನೆಗೆಟಿವ್ ಪಬ್ಲಿಸಿಟಿ ಮಾಡುವುದಾಗಿ ಹೇಳಿದೆ.

ಇದರಿಂದ ಬೆಚ್ಚಿ ಬಿದ್ದಿರುವ ಕರಣ್ ಜೋಹರ್ ತಮ್ಮ ಜಿಗ್ರಾ ಚಿತ್ರದ ಪತ್ರಿಕಾ ಪ್ರದರ್ಶನವನ್ನೇ ರದ್ದು ಮಾಡಿದ್ದಾರೆ. ಭವಿಷ್ಯದಲ್ಲಿ ತಮ್ಮ ಯಾವ ಚಿತ್ರದ ಪ್ರದರ್ಶನಕ್ಕೂ ಪತ್ರಿಕೆಯವರನ್ನು ಕರೆಯದಿರಲು ನಿರ್ಧಾರ ಮಾಡಿದ್ದಾರೆ. ವಿಮರ್ಶೆ ಹೆಸರಿನಲ್ಲಿ ಹಗಲು ದರೋಡೆಗಿಳಿದವರನ್ನು ತಮ್ಮ ನಿರ್ಮಾಣ ಸಂಸ್ಥೆಯಿಂದ ದೂರ ಇಡಲು ಸಿದ್ಧರಾಗಿದ್ದಾರೆ. ಹೀಗೊಂದು ಸುದ್ದಿಯನ್ನು ದಿ ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ.
ಇನ್ನೂ.. ಚಿತ್ರದ ಭವಿಷ್ಯವನ್ನು ನಿರ್ಧಾರ ಮಾಡುವುದು ಪ್ರೇಕ್ಷಕರೇ ಹೊರತು, ವಿಮರ್ಷಕರಲ್ಲ ಎನ್ನುವುದನ್ನು ಕರಣ್ ಜೋಹರ್ ಒಡೆತನದ ಧರ್ಮ ಪ್ರೊಡಕ್ಷನ್ ನಿರ್ಮಾಣ ಸಂಸ್ಥೆಯಡಿ ಕೆಲಸ ಮಾಡುವ ವ್ಯಕ್ತಿಯೊಬ್ಬ ಹೇಳಿರುವುದಾಗಿ ಉಲ್ಲೇಖಿಸಿರುವ ದಿ ಇಂಡಿಯನ್ ಎಕ್ಸ್‌ಪ್ರೆಸ್, ಈ ಮೂಲಕ ಸಿನಿಮಾ ವಿಭಾಗದಲ್ಲಿ ನಡೆಯುವ ಭ್ರಷ್ಟಾಚಾರಕ್ಕೆ ಮುಕ್ತಿ ಹಾಡಲು ಧರ್ಮ ಪ್ರೊಡಕ್ಷನ್ಸ್ ಹೆಜ್ಜೆಯನ್ನು ಇಟ್ಟಿದೆ ಎಂದು ಕೂಡ ಆ ವ್ಯಕ್ತಿ ಹೇಳಿದ್ದಾರೆ ಎಂದು ವರದಿಯಲ್ಲಿ ಉಲ್ಲೇಖಿಸಿದೆ.
ಇನ್ನೂ ಬಾಲಿವುಡ್‌ನಲ್ಲಿ ವಿಮರ್ಷೆಯ ಹೆಸರಿನಲ್ಲಿ ಸಗಣಿ ಹುಳಗಳಂತೆ ಅನೇಕರು ಜನ್ಮ ಪಡೆದಿದ್ದು, ಚಿತ್ರದ ಕುರಿತು ಒಳ್ಳೆಯ ವಿಚಾರ ಬರೆಯಲು ಒಂದು ಟ್ವಿಟ್‌ಗೆ ₹15,000 ರೂಪಾಯಿಯಿಂದ ₹60,000ರೂಪಾಯಿಯವರೆಗೆ ಸುಲಿಗೆಯನ್ನು ಮಾಡುತ್ತಾರೆ ಎಂದು ಕೂಡ ದಿ ಇಂಡಿಯನ್ ಎಕ್ಸ್‌ಪ್ರೆಸ್ ತನ್ನ ವರದಿಯಲ್ಲಿ ಹೇಳಿದೆ. ಇಷ್ಟೇ ಅಲ್ಲದೇ ಬಾಲಿವುಡ್‌ನಲ್ಲಿ ಅನೇಕರು ಈ ಸಂಪ್ರದಾಯಕ್ಕೆ ಒಗ್ಗಿಕೊಂಡಿದ್ದು ಡಿಜಿಟಲ್ ಇನ್ಫ್ಲುಯೆನ್ಸರ್‌ಗಳಿಗೆ ಮತ್ತು ವಿಮರ್ಷಕರಿಗೆ ಈ ರೀತಿ ಅವರು ಕೇಳಿದಷ್ಟು ಹಣವನ್ನು ಅನೇಕರು ನೀಡುತ್ತಿದ್ದಾರೆ ಎಂದು ಕೂಡ ತನ್ನ ವರದಿಯಲ್ಲಿ ತಿಳಿಸಿದೆ. ಈ ಮೂಲಕ ಪ್ರೇಕ್ಷಕರನ್ನು ತಪ್ಪು ದಾರಿಗೆ ಎಳೆಯುವ ಪ್ರಯತ್ನ ಬಾಲಿವುಡ್‌ನಲ್ಲಿ ಹೇಗೆಲ್ಲ ಆಗುತ್ತೆ ಎನ್ನುವುದನ್ನು ಬಹಿರಂಗ ಪಡಿಸಿದೆ.


Click it and Unblock the Notifications











