»   » ಒಂದು ಸುಂದರ ಹುಡುಗಿಗೆ ಕಣ್ಣು , ಮೂಗು, ಬಾಯಿ ಎಲ್ಲ ಇದ್ದು ಜೀವವೇ ಇರದಿದ್ದರೆ? ಹಾಗಿದೆ ‘ಡ್ಯಾಡಿ ನಂ.1!

ಒಂದು ಸುಂದರ ಹುಡುಗಿಗೆ ಕಣ್ಣು , ಮೂಗು, ಬಾಯಿ ಎಲ್ಲ ಇದ್ದು ಜೀವವೇ ಇರದಿದ್ದರೆ? ಹಾಗಿದೆ ‘ಡ್ಯಾಡಿ ನಂ.1!

Posted By:
Subscribe to Filmibeat Kannada

ಒಂದೂವರೆ ಗಂಟೆಯಲ್ಲಿ ಮುಗಿಯಬೇಕಿದ್ದ ಈ ಚಿತ್ರದಲ್ಲಿ ಸತತ ಎರಡೂವರೆ ಗಂಟೆ ತೋರಿಸಿ ನಿಮ್ಮನ್ನು ತಲ್ಲಣಗೊಳಿಸಲಾಗುತ್ತದೆ. ನಾಯಕನ ಅತ್ತೆ-ಮಾವ, ಆತನ ಮಗಳನ್ನು ತೋರಿಸಲು ಐದು ಲಕ್ಷ ರೂಪಾಯಿ ಕೇಳುವುದು, ಅದಕ್ಕಾಗಿ ಅವನು ಕೊಲೆ ಮಾಡಲು ಒಪ್ಪುವುದು, ಕೊನೆಗೆ ಕೊಂದ ಹುಡುಗಿ ತನ್ನ ಮಗಳೆಂದು ತಿಳಿದು ಕಂಬಿ ಎಣಿಸುವುದು ಇದೆಲ್ಲವೂ ನೋಡುಗರು ಪಡೆದುಕೊಂಡು ಬಂದ ಏಳೇಳು ಜನ್ಮದ ಪುಣ್ಯ.

ವಾಸ್ತವಕ್ಕೆ ದೂರವಾದ ಕತೆಯಾದರೂ ಒಟ್ಟಿನಲ್ಲಿ ಒಂದು ಒಳ್ಳೆಯ ಕತೆ ಇಲ್ಲಿದೆ. ಆದರೆ ಅದನ್ನು ಮಕ್ಕಳಾಟದಂತೆ ಚಿತ್ರಿಸಿದ್ದೇ ಎಡವಟ್ಟಾಗಿದೆ. ಕೇವಲ ಮಗಳ ಮುಖ ನೋಡಲು ಕೊಲೆ ಮಾಡುವ ‘ಡ್ಯಾಡಿ’ಯನ್ನು ಎಲ್ಲಿಯೂ ನೀವು ನೋಡಿರದಿದ್ದರೆ ಇಲ್ಲಿ ಅಂತಹ ಪವಾಡ ಪುರುಷನನ್ನು ನೋಡಬಹುದು. ನೋಡಿ ಧಾರಾಕಾರ ಕಣ್ಣೀರು ಸುರಿಸಬಹುದು. ಚರಣ್‌ರಾಜ್‌ ಸಿಕ್ಕ ಅವಕಾಶವನ್ನು ಎಷ್ಟು ಕೆಟ್ಟದಾಗಿ ಬಳಸಿಕೊಳ್ಳಬೇಕೊ ಅಷ್ಟನ್ನೂ ಸಮರ್ಥವಾಗಿ ಉಪಯೋಗಿಸಿಕೊಂಡಿದ್ದಾರೆ. ಸದಾ ಒಂದೇ ಮುಖಭಾವ ಹೊತ್ತ ಅವರದು ಚಿಗುರದ ಕೊರಡಿನ ನಟನೆ!ವಿಜಯಲಕ್ಷ್ಮಿ ತನ್ನ ಕೆಲಸ ನೀಟಾಗಿ ಮಾಡಿದ್ದಾರೆ. ಆದರೆ ಮೊದಲಿನ ಲಕ್ಷ್ಮಿಯ ಫ್ರೆಶ್‌ನೆಸ್‌ ಅವರಿಂದ ಮಾಯವಾಗಿದೆ.

ಇದ್ದುದರಲ್ಲಿ ಅವಿನಾಶ್‌ ಮತ್ತು ಶೋಭರಾಜ್‌ ನಿಮ್ಮನ್ನು ಅಚ್ಚರಿಗೊಳಿಸುತ್ತಾರೆ. ಎಂಎಲ್‌ಎ ಕನಸು ಕಾಣುವ ಶೋಭರಾಜ್‌ ಕಾಮಿಡಿ ಪಾತ್ರದಲ್ಲಿ ಮಿಂಚಿದ್ದು ಕುತೂಹಲಕರ. ತಾರಾ ಮತ್ತು ಮೋಹನ್‌ ಆಟಕ್ಕುಂಟು ಲೆಕ್ಕಕ್ಕಿಲ್ಲ . ವಿ.ಮನೋಹರ್‌ ಸಂಗೀತದಲ್ಲಿ ಎರಡು ಹಾಡುಗಳು ಕೇಳುವಂತಿವೆ. ಜೊತೆಗೆ ಆ ಹಾಡಿನ ನೃತ್ಯ ನಿರ್ದೇಶನವೂ ಹೆಜ್ಜೆ ಹಾಕುವಂತಿದೆ. ಇಡೀ ಚಿತ್ರದ ಹೈಲೈಟ್‌ ಎ.ಸಿ.ಮಹೇಂದ್ರ ನೀಡಿದ ತಂಪು ತಂಪು ಛಾಯಾಗ್ರಹಣ. ಅದರಿಂದಲೇ ಕೆಲವು ದೃಶ್ಯಗಳಿಗೆ ಗಂಭೀರತೆ ಬಂದದ್ದೂ ನಿಜ. ದೃಶ್ಯಗಳಿಗೆ ಸಂಬಂಧವಿರದ ಹಿನ್ನೆಲೆ ಸಂಗೀತ ಮತ್ತು ಕೆಟ್ಟ ಸಂಕಲನದಿಂದ ಕಕ್ಕಾಬಿಕ್ಕಿಯಾಗುತ್ತದೆ.

ಮಂಗಳೂರು ಮತ್ತು ಬೆಂಗಳೂರು ನಿರ್ದೇಶಕರ ಪಾಲಿಗೆ ಅಲಸೂರು ಮತ್ತು ಕೆಂಗೇರಿಯಷ್ಟೇ ಸಮೀಪವಾಗಿದೆ. ಅನವಶ್ಯಕ ಹಾಡುಗಳು ಬೋರು ಹೊಡೆಸುತ್ತವೆ. ಒಂದು ಸುಂದರ ಹುಡುಗಿಗೆ ಕಣ್ಣು , ಮೂಗು, ಬಾಯಿ ಎಲ್ಲ ಇದ್ದು ಜೀವವೇ ಇರದಿದ್ದರೆ ಹೇಗಿರುತ್ತದೋ? ಹಾಗಿದೆ ‘ಡ್ಯಾಡಿ ನಂ.1.’
(ವಿಜಯ ಕರ್ನಾಟಕ)

ಮುಖಪುಟ / ಸ್ಯಾಂಡಲ್‌ವುಡ್‌

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada