Brat Movie Review: ದುಡ್ಡಿನ ಆಟದಲ್ಲಿ ಎಷ್ಟು ನಗುವಿದೆಯೋ.. ಅಷ್ಟೇ ಅಳುನೂ ಇದೆ
'ಕೌಸಲ್ಯ ಸುಪ್ರಜಾ ರಾಮ' ಯಶಸ್ಸಿನ ಬಳಿಕ ಮತ್ತೆ ಕಾಂಬಿನೇಷನ್‌ನಲ್ಲಿ ಇನ್ನೊಂದು ಸಿನಿಮಾ ಬಂದಿದೆ. ನಿರ್ದೇಶಕ ಶಶಾಂಕ್ ಹಾಗೂ ಡಾರ್ಲಿಂಗ್ ಕೃಷ್ಣ ಜೋಡಿ' 'ಬ್ರ್ಯಾಟ್' ಮೂಲಕ ಮತ್ತೆ ಥಿಯೇಟರ್‌ಗೆ ಇಂದು (ಅಕ್ಟೋಬರ್ 31) ಎಂಟ್ರಿ ಕೊಟ್ಟಿದೆ. ಈ ಸಿನಿಮಾದಲ್ಲಿ ಡಾರ್ಲಿಂಗ್ ಕೃಷ್ಣರನ್ನು ಹಿಂದೆಂದಿಗಿಂತಲೂ ವಿಭಿನ್ನವಾಗಿ ತೋರಿಸುವ ಪ್ರಯತ್ನ ಶಶಾಂಕ್ ಮಾಡಿದ್ದಾರೆ.
ಶಶಾಂಕ್ ಇದೂವರೆಗೂ ನಿರ್ದೇಶಿಸಿದ ಸಿನಿಮಾಗಳಿಗೆ ಹೋಲಿಸಿದರೆ, ಅವರ ವೃತ್ತಿ ಬದುಕಿನಲ್ಲಿ ಇದು ವಿಭಿನ್ನವಾಗಿ ನಿಲ್ಲುತ್ತೆ. ಸಿನಿಮಾ ಹಾಗೂ ಕ್ರಿಕೆಟ್ ಎರಡನ್ನೂ ಬ್ಲೆಂಡ್ ಮಾಡಿಕೊಂಡು ಶಶಾಂಕ್ ಕಥೆ ಹೆಣೆದಿದ್ದಾರೆ. ರಿಯಲ್ ಲೈಫ್‌ನಲ್ಲೂ ಕೂಡ ಸಿನಿಮಾ ಹಾಗೂ ಕ್ರಿಕೆಟ್ ಜಗತ್ತಿಗೊಂದು ನಂಟು ಇದೆ. ಹಾಗೇ ಈ ಸಿನಿಮಾದಲ್ಲಿ ಎರಡೂ ಬೆಸೆದುಕೊಂಡಿದೆ. ಹಾಗಂತ ಇದು ಸಿನಿಮಾ ಕ್ರಿಕೆಟ್ ತಾರೆಯ ನಡುವಿನ ಸಂಬಂಧದ ಕಥೆಯಲ್ಲ.

ಸಾಮಾನ್ಯ ವ್ಯಕ್ತಿಯೊಬ್ಬನ ಮಗ ಕ್ರಿಕೆಟ್ ಬೆಟ್ಟಿಂಗ್ ಹಿಂದೆ ಬಿದ್ದರೆ ಏನಾಗುತ್ತೆ ಅನ್ನೋದನ್ನು ಆಳವಾಗಿ ಹೇಳುವುದಕ್ಕೆ ಶಶಾಂಕ್ ಹೊರಟಿದ್ದಾರೆ. ಹಾಗಿದ್ದರೆ, ಶಶಾಂಕ್-ಡಾರ್ಲಿಂಗ್ ಕೃಷ್ಣ ಜೋಡಿಯ 'ಬ್ರ್ಯಾಟ್' ಸಿನಿಮಾ ಹೇಗಿದೆ? ಈ ಸಿನಿಮಾದಲ್ಲಿ ಏನು ಇಷ್ಟ ಆಗುತ್ತೆ? ಏನು ಇಷ್ಟ ಆಗುವುದಿಲ್ಲ? ತಿಳಿಯುವುದಕ್ಕೆ ಮುಂದೆ ಓದಿ.
ಬ್ರ್ಯಾಟ್ ಕಥೆಯೇನು?
ಸಿನಿಮಾದ ನಾಯಕ ಕ್ರಿಸ್ಟಿಗೆ (ಡಾರ್ಲಿಂಗ್ ಕೃಷ್ಣ) ಕ್ರಿಕೆಟ್, ಜೂಜಾಟ ಮೇಲೆ ಆಸಕ್ತಿ. ಇವನ ಅಪ್ಪ ನಿಷ್ಠಾವಂತ ಅಧಿಕಾರಿ ಕಾನ್‌ಸ್ಟೇಬಲ್. ಹೆಸರು ಮಹದೇವಯ್ಯ (ಅಚ್ಯುತ್ ಕುಮಾರ್). ಅಪ್ಪನ ನ್ಯಾಯ-ನೀತಿ-ಧರ್ಮ ಅಂತ ಬದುಕುತ್ತಿರುವ ವ್ಯಕ್ತಿ. ಆದರೆ, ಮಗ ಅಡ್ಡದಾರಿ ಹಿಡಿದಿದ್ದಾನೆ. ಅವನನ್ನು ಹೇಗಾದರೂ ಮಾಡಿ ಒಳ್ಳೆಯ ವ್ಯಕ್ತಿಯನ್ನಾಗಿ ಮಾಡಬೇಕು ಅನ್ನೋ ಆಸೆ. ಅಪ್ಪನ ಮಾತಿಗೆ ಬೆಲೆಕೊಟ್ಟು ಅಡ್ಡದಾರಿ ಹಿಡಿದು ಹಣ ಮಾಡುವುದಕ್ಕೆ ಹೊರಟಿದ್ದ ಕ್ರಿಸ್ಟಿ ಬದಲಾಗುತ್ತಾನೆ. ಓದು ತಲೆಗೆ ಹತ್ತದ ಕ್ರಿಸ್ಟಿ ಡಿಲೆವರಿ ಬಾಯ್ ಆಗಿ ಕೆಲಸ ಮಾಡುತ್ತಾನೆ. ರಸ್ತೆಯಲ್ಲಿ ಬಿಸಿಲಿನಲ್ಲಿ ನಿಂತಿದ್ದ ಕ್ರಿಸ್ಟಿ ಐಷಾರಾಮಿ ಕಾರಿನಲ್ಲಿ ಕೂತಿದ್ದ ನಾಯಿ ನೋಡಿ ಮತ್ತೆ ತಲೆ ತಿರುಗುತ್ತೆ. ಆ ಮೇಲೆ ಈತನ ಜೀವನದಲ್ಲಿ ಏನೆಲ್ಲ ಆಗುತ್ತೆ ಅನ್ನೋದೇ ಕಥೆ.
ಆಕ್ಟಿಂಗ್ ಹೇಗಿದೆ?
'ಬ್ರ್ಯಾಟ್' ಸಿನಿಮಾದ ಹೈಲೈಟ್ ಡಾರ್ಲಿಂಗ್ ಕೃಷ್ಣ. ಈ ಹಿಂದೆ ಸಿನಿಮಾಗಳಲ್ಲಿ ಕಾಣಿಸಿಕೊಂಡಿದ್ದಕ್ಕಿಂತ ವಿಭಿನ್ನ ಪಾತ್ರ. ಕೆಲವೊಮ್ಮೆ ಸಾಮಾನ್ಯ ಮನುಷ್ಯನಾಗಿ, ಇನ್ನು ಕೆಲವೊಮ್ಮೆ ಸ್ಟೈಲಿಷ್ ಲುಕ್‌ನಲ್ಲಿ ಡಾರ್ಲಿಂಗ್ ಕೃಷ್ಣರನ್ನು ನೋಡಹುದು. ತಮ್ಮ ಪಾತ್ರವನ್ನು ಈ ಸಿನಿಮಾದಲ್ಲಿ ಅಚ್ಚುಕಟ್ಟಾಗಿ ನಿಭಾಯಿಸಿದ್ದಾರೆ. ಇನ್ನು ಸಿನಿಮಾ ಹೀರೋಯಿನ್ ಮನಿಶಾ ನೋಡಲು ಸುಂದರ. ಅಲ್ಲಲ್ಲಿ ಆಗಾಗ ಬಂದು ಹೋಗುತ್ತಾರೆ. ಕಾನ್‌ಸ್ಟೇಬಲ್ ಪಾತ್ರದಲ್ಲಿ ಅಚ್ಯುತ್ ಕುಮಾರ್ ಇಷ್ಟ ಆಗುತ್ತಾರೆ. ರಮೇಶ್ ಇಂದಿರಾ, ಡ್ರ್ಯಾಗನ್ ಮಂಜು ಇಬ್ಬರೂ ಗಮನ ಸೆಳೆಯುತ್ತಾರೆ.
'ಬ್ರ್ಯಾಟ್' ಪ್ಲಸ್ ಪಾಯಿಂಟ್ ಏನು?
ಶಶಾಂಕ್ ನಿರ್ದೇಶಿಸಿದ 'ಬ್ರ್ಯಾಟ್' ಕನ್ನಡದ ಮಟ್ಟಿಗೆ ಹೊಸ ಪ್ರಯತ್ನವೆಂದು ಹೇಳಬಹುದು. ಕ್ರಿಕೆಟ್ ಬೆಟ್ಟಿಂಗ್ ಬಗ್ಗೆ ಬೇರೆ ಭಾಷೆಗಳಲ್ಲಿ ಸಿನಿಮಾ ಬಂದಿದೆ. ಆದರೆ, ಕನ್ನಡದಲ್ಲಿ ಇಷ್ಟು ಆಳವಾಗಿ ತೋರಿಸಿದ್ದು ಇದೇ ಮೊದಲೆನ್ನೆಬಹುದು. ಹೀಗಾಗಿ ಕಥೆಗೆ ಬೇಕಿರೋ ಸಂಶೋಧನೆ ಆಗಿದೆ. ಹಾಗೇ ಅಪ್ಪ ಮತ್ತು ಮಗನ ಸಂಬಂಧ,
ಅಮ್ಮ ಮತ್ತು ಮಗನ ಸಂಬಂಧವನ್ನೂ ಭಾವನಾತ್ಮಕವಾಗಿ ಕಟ್ಟಿಕೊಟ್ಟಿದೆ. ಈ ಮೂಲಕ ಫ್ಯಾಮಿಲಿಯನ್ನು ಸೆಳೆಯುವ ಪ್ರಯತ್ನ ಆಗಿದೆ. ಎರಡು ಹಾಡುಗಳು ಚೆನ್ನಾಗಿವೆ. ಅದರಲ್ಲೊಂದು "ನಾನೇ ನಿನ್ನಂತೆ.." ಸಾಂಗ್ ಗುನುಗುವಂತೆ ಮಾಡುತ್ತವೆ. ಕೊನೆಯಲ್ಲಿ ಪ್ರೇಕ್ಷಕರಿಗೆ ಒಂದು ಸರ್ಪ್ರೈಸ್ ಕೂಡ ಸಿಗುತ್ತೆ.
'ಬ್ರ್ಯಾಟ್' ಮೈನಸ್ ಪಾಯಿಂಟ್ ಏನು?
ಸಿನಿಮಾದಲ್ಲಿ ಪಾಸಿಟಿವ್ ಇರುವಂತೆ ಕೆಲವು ನೆಗೆಟಿವ್ ಅಂಶಗಳು ಕೂಡ ಇವೆ. ಕೆಲವು ಪಾತ್ರಗಳನ್ನು ಇನ್ನೂ ಚೆನ್ನಾಗಿ ಹೆಣೆಯಬಹುದಿತ್ತು. ಖಳನಾಯಕನ ಇಂಗ್ಲಿಷ್ ಭಾಷೆ ಕಿರಿಕಿರಿ ಮಾಡುತ್ತೆ. ಕೆಲವು ಪಾತ್ರಗಳಿಗೆ ಲಾಜಿಕ್ ಇಲ್ಲ ಅಂತಾನೂ ಅನಿಸುತ್ತೆ.
ಕೊನೆಯಲ್ಲಿ ಏನು?
ಶಶಾಂಕ್ ಹಾಗೂ ಡಾರ್ಲಿಂಗ್ ಕೃಷ್ಣ ಅವರ 'ಬ್ರ್ಯಾಟ್' ಸಿನಿಮಾ ಕನ್ನಡ ಚಿತ್ರರಂಗಕ್ಕೆ ಹೊಸತು. ಹೀಗಾಗಿ ಯೂತ್ಸ್ ಜೊತೆ ಫ್ಯಾಮಿಲಿ ಕೂಡ ಕೂತು ಸಿನಿಮವನ್ನು ನೋಡಬಹುದು. ಹೀಗಾಗಿ ಒಮ್ಮೆ ಆರಾಮಾಗಿ ಸಿನಿಮಾ ನೋಡುವುದಕ್ಕೆ ಅಡ್ಡಿಯಿಲ್ಲ.


Click it and Unblock the Notifications











