Love Mocktail 3 Review: 'ಲವ್ ಮಾಕ್ಟೇಲ್ 3' ನಗಿಸುತ್ತಾ ಸಾಗುವ ತಂದೆ-ಮಗಳ ಭಾವನಾತ್ಮಕ ಜರ್ನಿ
ಡಾರ್ಲಿಂಗ್ ಕೃಷ್ಣ ನಟಿಸಿ, ನಿರ್ದೇಶಿಸಿರುವ ಸಿನಿಮಾ 'ಲವ್ ಮಾಕ್ಟೇಲ್ 3' ಇಂದು (ಮಾರ್ಚ್ 19) ಬಿಡುಗಡೆಯಾಗಿದೆ. 'ಲವ್ ಮಾಕ್ಟೇಲ್' ಹಾಗೂ 'ಲವ್ ಮಾಕ್ಟೇಲ್ 2' ಸೀಕ್ವೆಲ್ ಇದು. 'ಲವ್ ಮಾಕ್ಟೇಲ್' ಸಿನಿಮಾ ಅಭಿಮಾನಿಗಳಿಗೆ ಇಂದು ಹಬ್ಬ ಅಂತಲೇ ಹೇಳಬಹುದು. ಇದು ಕೊನೆಯ ಸರಣಿ ಆಗಿರುವುದರಿಂದ ಸಿನಿಮಾ ಪ್ರೇಮಿಗಳಲ್ಲಿ ನಿರೀಕ್ಷೆ ದುಪ್ಪಟ್ಟು ಇತ್ತು. ಕೊನೆಗೂ ಯುಗಾದಿ ಹಬ್ಬದ ಸಂಭ್ರಮದಲ್ಲಿ ಈ ಸಿನಿಮಾವೀಗ ಥಿಯೇಟರ್‌ಗೆ ಲಗ್ಗೆ ಇಟ್ಟಿದೆ.
'ಲವ್ ಮಾಕ್ಟೇಲ್' ಒಂದೊಂದು ಸೀಕ್ವೆಲ್ ಬಂದಾಗಲೂ ಡಾರ್ಲಿಂಗ್ ಕೃಷ್ಣ ಒಂದೊಂದು ಭಾವನೆಗಳನ್ನು ಹೊತ್ತು ಬಂದಿದ್ದಾರೆ. ಪ್ರೀತಿ ಸುತ್ತ ಹುಟ್ಟಬಹುದಾದ, ಕಟ್ಟಿಕೊಡಬಹುದಾದ ಭಾವನಾತ್ಮಕ ಸನ್ನಿವೇಶಗಳನ್ನು ಪ್ರೇಕ್ಷಕರ ಮುಂದಿಟ್ಟಿದ್ದಾರೆ. ಈ ಕಾರಣಕ್ಕೆ ಈ ಹಿಂದೆ ಬಂದಿದ್ದ 'ಲವ್ ಮಾಕ್ಟೇಲ್'ನ ಎರಡೂ ಸೀಕ್ವೆಲ್‌ಗಳು ಸಿನಿಪ್ರಿಯರಿಗೆ ಇಷ್ಟ ಆಗಿದ್ದವು.

ಹೀಗಾಗಿ 'ಲವ್ ಮಾಕ್ಟೇಲ್ 3' ಕುತೂಹಲವನ್ನು ಕೆರಳಿಸಿದೆ. 'ಲವ್ ಮಾಕ್ಟೇಲ್' ಮೊದಲ ಸೀಕ್ವೆಲ್‌ನಲ್ಲಿ ತುಂಟಾಟ, ತರ್ಲೆ ಮಾಡಿದ್ದ ಡಾರ್ಲಿಂಗ್ ಕೃಷ್ಣ, 'ಲವ್ ಮಾಕ್ಟೇಲ್ 2'ನಲ್ಲಿ ಭಾವನಾತ್ಮಕ ಸನ್ನಿವೇಶಗಳಲ್ಲೇ ತೇಲಿಸಿದ್ದರು. ಖಿನ್ನತೆಗೆ ಜಾರಿದ್ದ ಯುವಕನ ಪಾತ್ರದಲ್ಲಿ ನಟಿಸಿದ್ದರು. ಇನ್ನು 'ಲವ್ ಮಾಕ್ಟೇಲ್ 3'ನಲ್ಲಿ ಡಾರ್ಲಿಂಗ್ ಕೃಷ್ಣ ಏನು ಹೇಳುತ್ತಿದ್ದಾರೆ? ಸಿನಿಮಾದ ಕಥೆಯೇನು? ಪ್ಲಸ್ ಏನು? ಮೈನಸ್ ಏನು? ತಿಳಿಯುವುದಕ್ಕೆ ಮುಂದೆ ಓದಿ.
'ಲವ್ ಮಾಕ್ಟೇಲ್ 3' ಸ್ಟೋರಿ ಏನು?
'ಲವ್ ಮಾಕ್ಟೇಲ್' ಹಾಗೂ 'ಲವ್ ಮಾಕ್ಟೇಲ್ 2'ರ ಸೀಕ್ವೆಲ್ ಆಗಿದ್ದರಿಂದ ಒಂದಷ್ಟು ಭಾವನೆಗಳ ಜೊತೆ ಡಾರ್ಲಿಂಗ್ ಕೃಷ್ಣ ಬಂದಿದ್ದಾರೆ. 'ಲವ್ ಮಾಕ್ಟೇಲ್ 1' ಹಾಗೂ 'ಲವ್ ಮಾಕ್ಟೇಲ್ 2'ನಲ್ಲಿ ಆದಿ ಜೊತೆಯಲ್ಲಿ ಇರುವ ಸ್ನೇಹಿತನ ಪತ್ನಿಯ ಸೀಮಂತ ನಡೆಯುತ್ತಿರುತ್ತೆ. ಆ ಸಮಾರಂಭದಲ್ಲಿ ಅಮೃತಾ ಅಯ್ಯಗಾರ್, 'ಲವ್ ಮಾಕ್ಟೇಲ್ 2'ನ ಸಿಹಿ ಸೇರಿದಂತೆ ಇನ್ನಿಬ್ಬರು ಆದಿ ಎಲ್ಲಿ ಎಂದು ಕೇಳಿದಾಗ ಆದಿಯ ಸ್ಟೋರಿ ಅರ್ಥಾಥ್ ಲವ್ ಮಾಕ್ಟೇಲ್ 3 ಕಥೆ ಶುರುವಾಗುತ್ತೆ.'ಲವ್ ಮಾಕ್ಟೇಲ್ 2'ನಲ್ಲಿ ಕೃಷ್ಣ ಪಾರ್ಟ್ 3ಗೆ ಲೀಡ್ ಕೊಟ್ಟಿದ್ದಾರೆ. ಮಗುವನ್ನು ದತ್ತು ತೆಗೆದುಕೊಳ್ಳುವ ಮೂಲಕ ಸಿನಿಮಾ ಎಂಡ್ ಆಗಿರುತ್ತೆ. 'ಲವ್ ಮಾಕ್ಟೇಲ್ 3' ಶುರುವಾಗುವಾಗ ಹೊತ್ತಿಗಾಗಲೇ ಆ ಮಗುಗೆ 7 ವರ್ಷ ಆಗಿರುತ್ತೆ. ಫಸ್ಟ್ ಹಾಫ್‌ನಲ್ಲಿ ಆ ಮಗುವಿನ ತುಂಟಾಟ, ತರ್ಲೆ ಕಾಣಿಸುತ್ತೆ. ಅಷ್ಟೊತ್ತಿಗಾಗಲೇ ಇದು ಅಪ್ಪ-ಮಗಳ ಬಾಂಧವ್ಯದ ಕಥೆ ಅನ್ನೋದು ಅರಿವಾಗುತ್ತೆ.
ಪರ್ಫಾಮೆನ್ಸ್ ಹೇಗಿದೆ?
ಮೊದಲ ಲವ್ ಮಾಕ್ಟೇಲ್‌ನಲ್ಲಿ ಕೃಷ್ಣನ ತುಂಟಾಟ ನೋಡುತ್ತೇವೆ. ಲವ್ ಮಾಕ್ಟೇಲ್ 2ನಲ್ಲಿ ಕೃಷ್ಣ ಖಿನ್ನತೆಗೆ ಜಾರಿದನ್ನು ನೋಡುತ್ತೇವೆ. ಲವ್ ಮಾಕ್ಟೇಲ್ 3ನಲ್ಲಿ ಒಬ್ಬ
ತಂದೆಯಾಗಿ ಡಾರ್ಲಿಂಗ್ ಕೃಷ್ಣನ ಪ್ರಬುದ್ಧತೆಯನ್ನು ಕಾಣುತ್ತೇವೆ. ಆದಿ (ಡಾರ್ಲಿಂಗ್ ಕೃಷ್ಣ) ಮಗಳಾಗಿ ಬಾಲನಟಿ ಸಂವೃತಾ ಪ್ರೇಕ್ಷಕರಿಗೆ ತುಂಬಾನೇ ಇಷ್ಟ ಆಗುತ್ತೆ. ವಿಶೇಷ ಅಂದರೆ, ಇಡೀ ಸಿನಿಮಾದ ಹೈಲೈಟ್ ಈ ಮಗುವೇ.

ಹೇಗಿದೆ ನಿರ್ದೇಶನ?
ಡಾರ್ಲಿಂಗ್ ಕೃಷ್ಣ ಮತ್ತೊಮ್ಮೆ ನಿರ್ದೇಶನದಲ್ಲಿನ ತನ್ನ ಪ್ರಬುದ್ಧತೆಯನ್ನು ಸಾಬೀತು ಮಾಡಿದ್ದಾರೆ. ಫಸ್ಟ್ ಹಾಫ್ ನಗುವಿದ್ದರೆ, ಸೆಕೆಂಡ್ ಹಾಫ್ ಎಮೋಷನಲ್ ಸನ್ನಿವೇಶಗಳೇ ಹೆಚ್ಚಿರುತ್ತೆ. ಎಲ್ಲಕ್ಕಿಂತ ಹೆಚ್ಚಾಗಿ ಮಗಳ ಪಾತ್ರಕ್ಕೆ ಎರಡು ಹೆಸರು. ಎರಡು ಸನ್ನಿವೇಶ. ಮಗಳು ನಿಧಿಮಾ ಆಗಿದ್ದಾಗ ಪ್ರೇಕ್ಷಕರ ಮುಖದಲ್ಲಿ ನಗುವಿನ ಹೊಳೆಯೇ ಹರಿಯುತ್ತೆ. ಯಾವಾಗ ರಮ್ಯಾ ಆಗುತ್ತಾಳೋ ಆಗ ಪ್ರೇಕ್ಷಕರ ಕಣ್ಣುಗಳಲ್ಲಿ ನೀರು ಉಕ್ಕುವುದಕ್ಕೆ ಶುರುವಾಗುತ್ತೆ.
ಪ್ಲಸ್ ಏನು?
'ಲವ್ ಮಾಕ್ಟೇಲ್ 3' ಸಿನಿಮಾದ ಪ್ಲಸ್ ಕಾಮಿಡಿ ಹಾಗೂ ಎಮೋಷನಲ್ ಸೀನ್‌ಗಳು. ಮನೆಕೆಲಸದವನ ಜಗ್ಗ ಮಮ್ಮಿ ಪಾತ್ರ ಈ ಸಿನಿಮಾದ ಹೈಲೈಟ್‌ಗಳಲ್ಲೊಂದು. ಜಗ್ಗನ ಪಾತ್ರದಲ್ಲಿ ಜಗದೀಶ್ ಹೊಟ್ಟೆ ಹುಣ್ಣಾಗಿಸುವಷ್ಟು ನಗಿಸುತ್ತಾರೆ. ಇವರು ಸಿನಿಮಾದಲ್ಲಿ ಇರುವವರೆಗೂ ಸಿನಿಮಾದಲ್ಲಿ ಕಾಮಿಡಿ ಇರುತ್ತೆ. ಸೆಕೆಂಡ್ ಹಾಫ್‌ನಲ್ಲಿ ನಡೆಯೋ ಕೋರ್ಟ್ ಡ್ರಾಮಾ ದೃಶ್ಯಗಳು ತುಂಬಾನೇ ಪ್ರೇಕ್ಷಕರನ್ನು ಭಾವುಕರನ್ನಾಗಿಸುವಲ್ಲಿ ಯಶಸ್ವಿಯಾಗುತ್ತೆ. ಇದನ್ನು ಡಾರ್ಲಿಂಗ್ ಕೃಷ್ಣ ತುಂಬಾನೇ ಚೆನ್ನಾಗಿ ತೋರಿಸಿಕೊಟ್ಟಿದ್ದಾರೆ. ದಿಲೀಪ್ ರಾಜ್ ಹಾಗೂ ಶ್ವೇತಾ ಪ್ರಸಾದ್ ವಕೀಲರಾಗಿ, ದಂಪತಿಯಾಗಿ ಗಮನ ಸೆಳೆಯುತ್ತಾರೆ. ಕೃಷ್ಣನ ಮಗಳ ಪಾತ್ರದಲ್ಲಿ ನಟಿಸಿರುವ ಬಾಲ ನಟಿ ಸಂವೃತಾ ಇಡೀ ಸಿನಿಮಾವನ್ನು ಆವರಿಸಿಕೊಂಡಿದ್ದಾಳೆ. ಆಕೆಯ ಅಭಿನಯ ತುಂಬಾನೇ ಚೆನ್ನಾಗಿದೆ.
ಮೈನಸ್ ಏನು?
ಸಿನಿಮಾ ಅಂದ್ಮೇಲೆ ಮೈನಸ್ ಇರಲೇಬೇಕು. ಇದರಲ್ಲೂ ಒಂದೆರಡು ಮೈನಸ್‌ಗಳಿವೆ ಮಿಲನಾ ನಾಗರಾಜ್ ಕೇವಲ ಒಂದು ಹಾಡಿನಲ್ಲಿ ಕಾಣಿಸಿಕೊಳ್ಳೋದು ಪ್ರೇಕ್ಷಕರಿಗೆ ನಿರಾಸೆ ಮೂಡಿಸುತ್ತೆ. ಮಧ್ಯದಲ್ಲಿ ಕಲೆ ಕಡೆ ಸೀನ್‌ಗಳನ್ನು ಎಳೆದಿದ್ದಾರೆ ಅನಿಸುತ್ತೆ. ಅದು ಬಿಟ್ಟರೆ ಡಾರ್ಲಿಂಗ್ ಕೃಷ್ಣ ಬೇರೆ ಎಲ್ಲವನ್ನೂ ನೀಟಾಗಿ ಮಾಡಿದ್ದಾರೆ.
ಕೊನೆಯಲ್ಲಿ...
ಯುಗಾದಿ ಹಬ್ಬಕ್ಕೆ ನೀಟ್ ಆಗಿರೋ ಫ್ಯಾಮಿಲಿ ಓರಿಯೆಂಟೆಡ್ ಸಿನಿಮಾ ನೋಡಬೇಕು ಅಂತಿದ್ರೆ, ಆರಾಮಾಗಿ 'ಲವ್ ಮಾಕ್ಟೇಲ್ 3' ಸಿನಿಮಾ ನೋಡಬಹುದು. ಸಣ್ಣ ಪುಟ್ಟ ನ್ಯೂನ್ಯತೆಗಳನ್ನು ಹೊರತು ಪಡಿಸಿದರೆ, ಪ್ರೇಕ್ಷಕರಿಗೆ ಈ ಸಿನಿಮಾ ಯಾವುದೇ ರೀತಿ ಬೇಸರ ಆಗುವುದಿಲ್ಲ.


Click it and Unblock the Notifications















