ಮಾಸ್ ಪ್ರೇಕ್ಷಕರಿಗೆ 'ಅಂಬರೀಶ' ಹಬ್ಬದೂಟ
ಬರೋಬ್ಬರಿ ಒಂದು ವರ್ಷದ ನಂತ್ರ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಬಹುನಿರೀಕ್ಷಿತ ಚಿತ್ರ 'ಅಂಬರೀಶ' ಇಂದು(ನವೆಂಬರ್ 20) ತೆರೆಗೆ ಬಂದಿದೆ. ರೆಬೆಲ್ ಸ್ಟಾರ್ ಅಂಬರೀಷ್ ಮತ್ತು ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿಮಾನಿಗಳ ಸಂಭ್ರಮ ಚಿತ್ರಮಂದಿರಗಳಲ್ಲಿ ಇಂದು ಮುಂಜಾನೆಯಿಂದಲೇ ಮುಗಿಲು ಮುಟ್ಟಿದೆ.
ಬೆಂಗಳೂರಿನ ಮಾಗಡಿ ರಸ್ತೆಯಲ್ಲಿರುವ ಪ್ರಸನ್ನ ಚಿತ್ರಮಂದಿರದಲ್ಲಿ ಬೆಳ್ಳಗ್ಗೆ 8 ಗಂಟೆಯಿಂದಲೇ ಪ್ರದರ್ಶನ ಶುರುವಾಗಿದೆ. ಚಿಂತನ್ ರಚಿಸಿರುವ ಕಥೆಗೆ, ನಿರ್ದೇಶನದ ಹೊಣೆ ಹೊತ್ತಿರುವ ನಿರ್ದೇಶಕ ಮಹೇಶ್ ಸುಖಧರೆ, ಬೆಂಗಳೂರನಲ್ಲಿ ವ್ಯಾಪಕವಾಗಿ ಹಬ್ಬಿರುವ ಭೂ ಮಾಫಿಯಾ ಜಾಲದ ಬಗ್ಗೆ ಚಿತ್ರದಲ್ಲಿ ಅರಿವು ಮೂಡಿಸುವ ಪ್ರಯತ್ನ ಪಟ್ಟಿದ್ದಾರೆ.
ಕೈಯಲ್ಲಿ ಕರಣೆ ಹಿಡಿದು ಕೂಲಿ ಕಾರ್ಮಿಕನ ಪಾತ್ರ ಮಾಡಿರುವ ದರ್ಶನ್ ಆರ್ಭಟ ಚಿತ್ರದ ಮೊದಲಾರ್ಧದಲ್ಲಿ ಜೋರಾಗಿದೆ. ರೆಬೆಲ್ ಸ್ಟಾರ್ ಅಂಬರೀಷ್ ಜೊತೆ ಮೂರನೇ ಬಾರಿಗೆ ನಟಿಸುತ್ತಿರುವ ದರ್ಶನ್, ಚಿತ್ರದಲ್ಲಿ 'ಅಂಬಿ' ಅಂತಲೇ ಕರೆಸಿಕೊಂಡು ಅನ್ಯಾಯದ ವಿರುದ್ಧ ರೆಬೆಲ್ ಆಗಿ ಹೋರಾಡುತ್ತಾರೆ. [ಕಡೆಗೂ 'ಪ್ರಸನ್ನ'ನಾದ ದರ್ಶನ್ 'ಅಂಬರೀಶ']

ಸಾಹಸ ದೃಶ್ಯಗಳಲ್ಲಿ ದರ್ಶನ್ ಎಂದಿನಂತೆ ಲೀಲಾಜಾಲ. ದರ್ಶನ್ ಬಾಯಿಂದ ಬರುವ ಖಡಕ್ ಡೈಲಾಗ್ಸ್, ಮಾಸ್ ಪ್ರೇಕ್ಷಕರಿಗೆ ಇಷ್ಟವಾಗುತ್ತೆ. ದರ್ಶನ್ ಸಾಮರ್ಥ್ಯಕ್ಕೆ ಸವಾಲು ಹಾಕಿ ಜಂಬದ ಹುಡುಗಿಯ ಪಾತ್ರದಲ್ಲಿ ಪ್ರಿಯಾಮಣಿ ನಟನೆ ಬಗ್ಗೆ ಎರಡು ಮಾತಿಲ್ಲ. [ದರ್ಶನ್ 'ಅಂಬರೀಶ'ನಿಗೆ 'ಭೂತ'ದ ಕಾಟ]
ಚಿತ್ರದ ಮೊದಲಾರ್ಧ ಪ್ರೇಕ್ಷಕರನ್ನ ಹಿಡಿದಿಡುವಲ್ಲಿ ಯಶಸ್ವಿಯಾಗಿದೆ. ಅಕ್ರಮವಾಗಿ ಕ್ಯಾಂಟೀನ್ ಕಟ್ಟುವುದಕ್ಕೆ ಮುಂದಾಗುವ ಕನ್ಸ್ ಟ್ರಕ್ಷನ್ ಕಂಪನಿಯಲ್ಲಿ ಕೂಲಿ ಮಾಡುವ ದರ್ಶನ್, ಭೂ ಮಾಫಿಯಾ ವಿರುದ್ಧ ತಿರುಗಿಬೀಳುತ್ತಾನೆ. ಅಕ್ರಮಗಳ ವಿರುದ್ಧ ದನಿಯೆತ್ತೋ ಧೀರ 'ಅಂಬಿ' ಕಥೆಯೇ 'ಅಂಬರೀಶ'. ['ನಾಡಪ್ರಭು' ಗೆಟಪ್ ನಲ್ಲಿ ರೆಬೆಲ್ ಸ್ಟಾರ್ ಅಂಬರೀಶ್]
ಮೊದಲಾರ್ಧದಲ್ಲಿ ಹಾಡು, ಫೈಟುಗಳದ್ದೇ ಅಬ್ಬರವಾಗಿರುವುದರಿಂದ ಅಸಲಿ ಕಥೆ ಶುರುವಾಗುವುದು ಇಂಟರ್ವಲ್ ಬಳಿಕ. ಕೆಂಪೇಗೌಡರ ಹೆಸರು ಹೇಳಿ 'ಅಂಬಿ'ಯನ್ನ ಕೆಲವೇ ಸೆಕೆಂಡ್ ಗಳಷ್ಟೇ ಇಲ್ಲಿವರೆಗೂ ತೆರೆಮೇಲೆ ತೋರಿಸಿರುವ ನಿರ್ದೇಶಕರು, ಇಂಟರ್ವಲ್ ನಲ್ಲಿ ಕೆಂಪೇಗೌಡರ ಜಪ ಮಾಡಿ ಬ್ರೇಕ್ ಕೊಟ್ಟಿದ್ದಾರೆ.
ಒಟ್ನಲ್ಲಿ 'ಅಂಬರೀಶ' ಚಿತ್ರದ ಮೊದಲಾರ್ಧ ಮಾಸ್ ಪ್ರೇಕ್ಷಕರಿಗೆ ಹೇಳಿಮಾಡಿಸಿದಂತಿದೆ. ಸಂಪೂರ್ಣ ಚಿತ್ರ ವಿಮರ್ಶೆಗಾಗಿ ನಿರೀಕ್ಷಿಸಿ (ಫಿಲ್ಮಿಬೀಟ್ ಕನ್ನಡ)


Click it and Unblock the Notifications











