Dasara Review: ಹೊಸತನವಿಲ್ಲದ ಕಥೆಗೆ ಗೆಲುವಿನ ಮಾಲೆ ತೊಡಿಸಿದ ನಾನಿ ನಟನೆ, ಮೇಕಿಂಗ್ ಹಾಗೂ ಬಿಜಿಎಂ!
ಚಿತ್ರ: ದಸರಾ ( ಮೂಲ ತೆಲುಗು ಚಿತ್ರ. ಕನ್ನಡ, ತಮಿಳು, ಮಲಯಾಳಂ ಹಾಗೂ ಹಿಂದಿಯಲ್ಲೂ ರಿಲೀಸ್ )
ರನ್‌ಟೈಮ್: 2 ಗಂಟೆ 32 ನಿಮಿಷ
ತಾರಾಗಣ: ನಾನಿ, ದೀಕ್ಷಿತ್ ಶೆಟ್ಟಿ, ಕೀರ್ತಿ ಸುರೇಶ್, ಸಮುದ್ರ ಕಣಿ, ಸಾಯಿಕುಮಾರ್, ಪೂರ್ಣ ಹಾಗೂ ಶೈನ್ ಟಾಮ್ ಚಾಕೊ.
ದಸರಾ. ಜೆರ್ಸಿ ಬಳಿಕ ನಾನಿಗೆ ನಿರೀಕ್ಷಿಸಿದ ರೆಸ್ಪಾನ್ಸ್ ಕೊಡಿಸಿರುವ ಚಿತ್ರ. ಬಿಡುಗಡೆಗೂ ಮುನ್ನ ದೊಡ್ಡ ಮಟ್ಟದ ನಿರೀಕ್ಷೆ ಹುಟ್ಟುಹಾಕಿದ್ದ ಈ ಚಿತ್ರ ನಿರೀಕ್ಷೆಯನ್ನು ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ. 60 ಕೋಟಿ ಬಜೆಟ್‌ನಲ್ಲಿ ತಯಾರಾಗಿರುವ ಈ ಚಿತ್ರ ನಾನಿ ಕೆರಿಯರ್‌ನಲ್ಲೇ ದೊಡ್ಡ ಬಜೆಟ್‌ನ ಚಿತ್ರ ಹಾಗೂ ಓಪನಿಂಗ್ ವಿಚಾರದಲ್ಲೂ ಸಹ ಚಿತ್ರ ದೊಡ್ಡದೇ. ಚಿತ್ರಕ್ಕೆ ನಿರ್ದೇಶಕ ಸುಕುಮಾರ್ ಜತೆ ನಾನಕು ಪ್ರೇಮತೋ ಹಾಗೂ ರಂಗಸ್ಥಳಂ ಚಿತ್ರಗಳಲ್ಲಿ ಸಹಾಯಕ ನಿರ್ದೇಶಕನಾಗಿ ಕೆಲಸ ಮಾಡಿದ್ದ ಶ್ರೀಕಾಂತ್ ಓಡೆಲಾ ನಿರ್ದೇಶನವಿದೆ.

ಇನ್ನು ಶ್ರೀಕಾಂತ್ ಓಡೆಲಾ ನಿರ್ದೇಶನದ ಮೊದಲ ಚಿತ್ರ ಇದಾಗಿದ್ದು, ಎಲ್ಲಿಯೂ ಸಹ ಇದು ನಿರ್ದೇಶಕನ ಮೊದಲ ಸಿನಿಮಾ ಎನಿಸುವುದಿಲ್ಲ. ಅಷ್ಟರ ಮಟ್ಟಿಗೆ ಚಿತ್ರವನ್ನು ಕಟ್ಟಿಕೊಟ್ಟಿದ್ದಾರೆ. ಮೇಕಿಂಗ್‌ನಲ್ಲಿ ಜಾಗರೂಕತೆ ವಹಿಸಿರವ ನಿರ್ದೇಶಕರ ವಿಭಾಗದ ಮೈನಸ್ ಪಾಯಿಂಟ್ ಕಥೆ ಮಾತ್ರ. ಇಂತಹ ಕಥೆಯನ್ನು ಈ ಹಿಂದೆ ಹಲವಾರು ಸಿನಿಮಾಗಳಲ್ಲಿ ನೋಡಿದ್ದೇವೆ ಎನಿಸಿದರೂ ಬೇಸರ ಮಾಡುವುದಿಲ್ಲ.
ತೆಲಂಗಾಣದ ವೀರ್ಲಪಲ್ಲಿ ಎಂಬ ಗ್ರಾಮದಲ್ಲಿ ನಡೆಯುವ ಕಥೆ ಇದಾಗಿದೆ. ನಾಯಕ ಧರಣಿ (ನಾನಿ), ನಾಯಕಿ ವೆನ್ನೆಲಾ ( ಕೀರ್ತಿ ಸುರೇಶ್) ಹಾಗೂ ಮತ್ತೋರ್ವ ನಾಯಕ ಎಂದೇ ಹೇಳಬಹುದಾದ ಸೂರಿ ( ದೀಕ್ಷಿತ್ ಶೆಟ್ಟಿ) ಈ ಮೂವರೂ ಸ್ನೇಹಿತರು. ಬಾಲ್ಯದಲ್ಲೇ ನಾಯಕಿ ವೆನ್ನೆಲಾ ಮೇಲೆ ನಾಯಕ ಧರಣಿಗೆ ಪ್ರೀತಿಯಾದರೂ ಅದನ್ನು ಹೇಳುವ ಧೈರ್ಯವಿರುವುದಿಲ್ಲ. ಮುಂದಿನ ದಿನಗಳಲ್ಲಿ ನಾಯಕಿ ವೆನ್ನೆಲಾ ಮತ್ತು ಸೂರಿ ಪರಸ್ಪರ ಪ್ರೀತಿಸುವ ವಿಷಯ ತಿಳಿದ ನಾಯಕ ಗೆಳೆಯನಿಗಾಗಿ ತನ್ನ ಪ್ರೀತಿಯನ್ನು ಮುಚ್ಚಿಡುತ್ತಾನೆ. ಅಲ್ಲದೇ ನಾಯಕಿ ಮನೆಯಲ್ಲಿ ಇಬ್ಬರ ಮದುವೆಗೆ ಒಪ್ಪಿಗೆ ಸಿಗದಿದ್ದಾಗ ತಾನೇ ಮುಂದೆ ನಿಂತು ತನ್ನ ಗೆಳೆಯನಿಗೆ ಒಳ್ಳೆಯ ಕೆಲಸ ಸಿಗಲಿದೆ ಎಂದು ಮದುವೆಗೆ ಒಪ್ಪಿಸುತ್ತಾನೆ.
ಇನ್ನು ಆ ಊರಿನಲ್ಲಿ ಸಹೋದರರಾದ ಶಿವಣ್ಣ ( ಸಮುದ್ರಕಣಿ ), ರಾಜಣ್ಣ ( ಸಾಯಿಕುಮಾರ್ ) ಹಾಗೂ ರಾಜಣ್ಣನ ಮಗ ನಂಬಿ ( ಟಾಮ್ ಚಾಕೋ ) ಪಂಚಾಯತ್ ರಾಜಕೀಯದ ಜತೆಗೆ ಆಲ್ಕೋಹಾಲ್ ಮಾಫಿಯಾ ಸಹ ನಡೆಸುತ್ತಿರುತ್ತಾರೆ. ಮದ್ಯಪಾನವನ್ನು ಸಂಪ್ರದಾಯವೆಂದು ಅನುಸರಿಸಿ ಬದುಕುವ ಊರಿನ ಜನರ ಮೇಲೆ ಈ ರಾಜಕೀಯ ಯಾವ ರೀತಿ ಪರಿಣಾಮ ಬೀರುತ್ತೆ, ನಾಯಕನ ಸ್ನೇಹಿತ ಹಾಗೂ ನಾಯಕಿ ಮದುವೆಯಾಗ್ತಾರಾ ಎಂಬುದೇ ಚಿತ್ರದ ಕಥೆ.

ಚಿತ್ರದ ಮೊದಲಾರ್ಧ ಅಚ್ಚುಕಟ್ಟಾಗಿ ಮೂಡಿಬಂದಿದ್ದು, ಇಲ್ಲಿ ಗೆಳೆತನವನ್ನು ಆಳವಾಗಿ ತೋರಿಸಲಾಗಿದೆ. ಮಧ್ಯಂತರದ ಸಮಯಕ್ಕೆ ಕಥೆ ದೊಡ್ಡ ಟ್ವಿಸ್ಟ್ ಪಡೆದುಕೊಳ್ಳಲಿದ್ದು, ದ್ವಿತೀಯಾರ್ಧ ಸಂಪೂರ್ಣ ಎಮೋಷನಲ್ ಜರ್ನಿ ಎಂದೇ ಹೇಳಬಹುದು. ಚಿತ್ರದ ಕ್ಲೈಮ್ಯಾಕ್ಸ್ ರೋಮಾಂಚನ ನೀಡುವುದು ಖಚಿತ.
ಚಿತ್ರದ ಪ್ಲಸ್ ಪಾಯಿಂಟ್: ಚಿತ್ರದ ಬಿಗ್ಗೆಸ್ಟ್ ಪ್ಲಸ್ ಪಾಯಿಂಟ್ ಎಂದರೆ ನಾನಿ, ಕೀರ್ತಿ ಸುರೇಶ್, ದೀಕ್ಷಿತ್ ಕುಮಾರ್ ಹಾಗೂ ಎಲ್ಲಾ ಸಹ ಕಲಾವಿದರ ಅಚ್ಚುಕಟ್ಟಾದ ನಟನೆ. ಅದರಲ್ಲೂ ವಿಶೇಷವಾಗಿ ನಾನಿ ನಟನೆ ಮಾತ್ರ ಕೆರಿಯರ್ ಬೆಸ್ಟ್. ಎಮೋಷನಲ್ ದೃಶ್ಯ, ರಗಡ್ ಲುಕ್‌ಗಳು ಎಲ್ಲದ್ದರಲ್ಲೂ ಸಹ ಎಲ್ಲಾ ಕಲಾವಿದರೂ ಪರ್ಫೆಕ್ಟ್. ಇದನ್ನೆಲ್ಲಾ ಕಲಾವಿದರಿಂದ ಹೊರಬರುವಂತಹ ಜವಾಬ್ದಾರಿಯುತ ಕೆಲಸ ನಿರ್ವಹಿಸಿರುವ ನಿರ್ದೇಶಕರ ಜಾಣ್ಮೆ ಸಹ ಇಲ್ಲಿ ಪ್ಲಸ್ ಪಾಯಿಂಟ್. ಇನ್ನುಳಿದಂತೆ ಚಿತ್ರದ ಬ್ಯಾಕ್‌ಗ್ರೌಂಡ್ ಮ್ಯೂಸಿಕ್, ಛಾಯಾಗ್ರಹಣ, ರಿಚ್ ಮೇಕಿಂಗ್, ಸಂಕಲನ ಹಾಗೂ ಮೇಕಿಂಗ್ ಪ್ಲಸ್ ಪಾಯಿಂಟ್‌ಗಳಾಗಿವೆ.
ಮೈನಸ್ ಪಾಯಿಂಟ್: ಚಿತ್ರದ ಕಥೆಯಲ್ಲಿ ಹೊಸತನವಿಲ್ಲದೇ ಇರುವುದು ಚಿತ್ರದ ಮೈನಪ್ ಪಾಯಿಂಟ್‌ಗಳಲ್ಲಿ ಒಂದು. ಕಥೆಯನ್ನು ಸುಲಭವಾಗಿ ಊಹಿಸಬಹುದಾಗಿದ್ದು, ಕೆಲವೊಂದು ಕಡೆ ಕಥೆ ನಿಧಾನ ಎನಿಸುವ ಫೀಲ್ ನೀಡಲಿದೆ. ಇನ್ನು ಬ್ಯಾಕ್‌ಗ್ರೌಂಡ್ ಮ್ಯೂಸಿಕ್‌ನಲ್ಲಿ ಗೆದ್ದಿರುವ ಸಂಗೀತ ನಿರ್ದೇಶಕ ಸಂತೋಷ್ ನಾರಾಯಣನ್ ಹಾಡುಗಳಲ್ಲಿ ಎಡವಿದ್ದಾರೆ. ಚಮಕೀಲ ಅಂಗಿಲೇಸಿ ಹಾಡು ಚಿತ್ರ ನೋಡುವ ಸಮಯದಲ್ಲಿ ಚೆನ್ನಾಗಿದೆ ಎನಿಸಿದರೂ ಚಿತ್ರ ಮುಗಿಯುವಷ್ಟರಲ್ಲಿ ತಲೆಯಿಂದ ಹೊರಗುಳಿದುಬಿಡುತ್ತೆ.
ಒಟ್ಟಾರೆಯಾಗಿ ಹೇಳಬೇಕಂದ್ರೆ ಕೊಡುವ ಕಾಸಿಗೆ ದಸರಾ ಪಕ್ಕಾ ಪೈಸಾ ವಸೂಲ್ ಸಿನಿಮಾ. ಹಳೇ ಕಥೆ ಎನಿಸಿದರೂ ಕೊನೆವರೆಗೂ ಪ್ರೇಕ್ಷಕನನ್ನು ಹಿಡಿದಿಟ್ಟುಕೊಳ್ಳುವಲ್ಲಿ ನಿರ್ದೇಶಕ ಗೆದ್ದಿದ್ದಾರೆ. ಹಳೆ ಕಥೆಗೆ ನಾನಿ ಹಾಗೂ ಕಲಾವಿದರ ನಟನೆ, ಛಾಯಾಗ್ರಹಣ, ಮೇಕಿಂಗ್, ಬ್ಯಾಕ್‌ಗ್ರೌಂಡ್ ಮ್ಯೂಸಿಕ್ ಹಾಗೂ ಸಂಕಲನ ಗೆಲುವಿನ ಹಾರ ಹಾಕಿವೆ.


Click it and Unblock the Notifications











