De De Pyaar De 2 Review ; ಅಜಯ್ ದೇವಗನ್, ಮಾಧವನ್ ಕಾಮಿಡಿ ಕಿಕ್- ಸಿನಿಮಾ ನಗಿಸುತ್ತೆ, ಆದರೆ? ಇಲ್ಲಿದೆ ವಿಮರ್ಶೆ
ಸಿನಿಮಾ ಈಗ ಕಲೆ ಮಾತ್ರ ಅಲ್ಲ. ವ್ಯಾಪಾರ ಕೂಡ ಹೌದು. ಉದ್ಯಮವಾಗಿ ಬೆಳೆದಿರುವ ಈ ಚಿತ್ರರಂಗದಲ್ಲಿ ಬಹುಕೋಟಿ ವ್ಯವಹಾರ ನಡೆಯುತ್ತೆ. ಇಂಥಾ ವಲಯದಲ್ಲಿ ಬೆಳೆದು ನಿಂತ ಸೂಪರ್ ಸ್ಟಾರ್‌ಗಳ ಮೇಲೆ ಹೆಚ್ಚಿನ ಜವಾಬ್ದಾರಿ ಇರುತ್ತೆ. ಇವರ ಚಿತ್ರಗಳ ಮೇಲೆ ಸಾಕಷ್ಟು ನಿರೀಕ್ಷೆಗಳಿರುತ್ತೆ. ಆದರೆ.. ಈಗೀಗ ಜವಾಬ್ಧಾರಿಗಳನ್ನು ನಿರ್ವಹಿಸುವಲ್ಲಿ.. ನಿರೀಕ್ಷೆಯ ಪರೀಕ್ಷೆಯಲ್ಲಿ ಪಾಸಾಗುವುದರಲ್ಲಿ ಹಲವು ಸೂಪರ್ ಸ್ಟಾರ್‌ಗಳು ಎಡವುತ್ತಿದ್ದಾರೆ.
ಹೊಸತನದ ಅಲೆಯ ಎದುರು.. ಹೊಸಬರ ಎದುರು.. ಮಂಕಾಗುತ್ತಿದ್ದಾರೆ. ಆ ಭಾಷೆ ಈ ಭಾಷೆ ಅಲ್ಲ ಎಲ್ಲಾ ಭಾಷೆಯಲ್ಲಿ ಕೂಡ ಬಹುತೇಕ ಸೂಪರ್ ಸ್ಟಾರ್‌ಗಳಿಗೆ ಕೇವಲ ನಿರಾಸೆ ಮತ್ತು ಸೋಲೇ ದಕ್ಕುತ್ತಿದೆ. ಹೀಗಿರುವಾಗ ಇದೀಗ ಅಜಯ್ ದೇವಗನ್ ಈ ವರ್ಷದಲ್ಲಿ ಮೂರನೇ ಬಾರಿ ಬೆಳ್ಳಿ ತೆರೆಯ ಮೇಲೆ ಪ್ರತ್ಯಕ್ಷರಾಗಿದ್ದಾರೆ. ''ದೇ ದೇ ಪ್ಯಾರ್ ದೇ 2'' ಚಿತ್ರದ ಮೂಲಕ ಮನರಂಜನೆಯ ರಸದೌತಣ ಸವಿಯಲು ಬನ್ನಿ ಎಂಬ ಆಮಂತ್ರಣ ಪತ್ರ ನೀಡಿದ್ಧಾರೆ. ಹಾಗಿದ್ದರೆ.. ಹೇಗಿದೆ ಅಜಯ್ ದೇವಗನ್ ಅಭಿನಯದ ''ದೇ ದೇ ಪ್ಯಾರ್ ದೇ 2'' ? ಚಿತ್ರದ ಕಥಾಹಂದರವೇನು..? ಈ ವಾರಾಂತ್ಯಕ್ಕೆ ಈ ಸಿನಿಮಾವನ್ನು ಕುಟುಂಬ ಸಮೇತ ನೋಡಬಹುದಾ..? ಎಂದು ತಿಳಿಯಲು ಮುಂದೆ ಓದಿ

ಕಥಾಹಂದರ
2019ರಲ್ಲಿ ತೆರೆಗೆ ಬಂದಿದ್ದ ''ದೇ ದೇ ಪ್ಯಾರ್ ದೇ'' ಚಿತ್ರ ಎಲ್ಲಿಗೆ ಮುಕ್ತಾಯವಾಗಿತ್ತೋ, ಅಲ್ಲಿಂದಲೇ ''ದೇ ದೇ ಪ್ಯಾರ್ ದೇ 2'' ಚಿತ್ರದ ಕಥೆ ಶುರುವಾಗುತ್ತೆ. ಮೊದಲ ಭಾಗದಲ್ಲಿ ಆಶಿಶ್ ( ಅಜಯ್ ದೇವಗನ್ ) ತನ್ನ ಮನೆಯವರಿಗೆ ಆಯೇಷಾ ( ರಕುಲ್ ಪ್ರೀತ್ ಸಿಂಗ್ ) ಪರಿಚಯ ಮಾಡಿಸಿರುತ್ತಾನೆ. ತನಗಿಂತ ಚಿಕ್ಕ ಹುಡುಗಿ ಜೊತೆ ತಾನು ಮದುವೆಯಾಗಲು ಮನೆಯವರ ಮನ ಒಲಿಸಿರುತ್ತಾನೆ. ಈ ಬಾರಿ ಆಯೇಷಾ ಸರದಿ.
ತಾನು ಮನ ಮೆಚ್ಚಿದ ಹುಡುಗ ಆಶಿಶ್‌ನ ಆಯೇಷಾ ತನ್ನ ಮನೆಯವರಿಗೆ ಪರಿಚಯ ಮಾಡಿಸಲು ಸಿದ್ಧವಾಗುತ್ತಾಳೆ. ಈ ಮೂಲಕ ಚಿತ್ರದ ಕಥೆ ತೆರೆದುಕೊಳ್ಳುತ್ತೆ. ಆಯೇಶಾ ತನ್ನ ತಂದೆ ರಾಕೇಶ್ ಖುರಾನ ( ಆರ್ ಮಾಧವನ್ ) ಮತ್ತು ತಾಯಿ ಅಂಜು ಖುರಾನಾ ( ಗೌತಮಿ ಕಪೂರ್ ) ಅವರ ಎದುರು ಕರೆತರಲು ಮುಂದಾದಾಗ, ಇಬ್ಬರ ನಡುವೆ ಇರುವ ವಯಸ್ಸಿನ ಅಂತರ ತಿಳಿಯರ ಆಯೇಶಾ ಪೋಷಕರು ಖುಷಿಯಿಂದ ಮನೆಗೆ ಕರೆತರುವಂತೆ ಹೇಳುತ್ತಾರೆ. ಮಗಳು ಮೆಚ್ಚಿದ ಹುಡುಗನ ಜೊತೆ ಮದುವೆ ಮಾಡಬೇಕೆಂದುಕೊಂಡಿರುತ್ತಾರೆ.
ಆದರೆ.. ಆಶಿಶ್‌ನ ಆಯೇಶಾ ಕರೆದುಕೊಂಡು ಬಂದಾಗ ಆಯೇಶಾ ಪೋಷಕರಿಗೆ ಆಘಾತವಾಗುತ್ತೆ. ತನ್ನ ವಯಸ್ಸಿನ ವ್ಯಕ್ತಿಯ ಜೊತೆ ತನ್ನ ಮಗಳು ಮದುವೆಯಾಗುವ ಯೋಚನೆ ಮಾಡಿದ್ದಾಳೆ ಎಂದು ತಿಳಿದು ತಂದೆಗೆ ಮುಜುಗರವಾಗುತ್ತೆ.
ಹೀಗಾಗಿಯೇ ಆಯೇಶಾ ಮತ್ತು ಆಶಿಶ್‌ನ ಹೇಗಾದರೂ ಮಾಡಿ ದೂರ ಮಾಡಬೇಕೆಂದು ಆಯೇಶಾ ತಂದೆ ಮತ್ತು ತಾಯಿ ನಿರಂತರ ಪ್ರಯತ್ನ ಮಾಡಲು ಶುರು ಮಾಡುತ್ತಾರೆ. ತಮ್ಮ ಈ ಪ್ರಯತ್ನದಲ್ಲಿ ಇವರು ಯಶಸ್ವಿಯಾಗ್ತಾರಾ..? ಆಯೇಶಾ ಜೊತೆ 51 ವರ್ಷದ ಆಶಿಶ್ ಮದುವೆಯಾಗುತ್ತಾನಾ ..? ಎನ್ನುವುದೇ ಚಿತ್ರದ ತಿರುಳು.

ಅಭಿನಯ ಹೇಗಿದೆ ?
ಅಜಯ್ ದೇವಗನ್ ತಾನು ಕೇವಲ ಆಕ್ಷನ್ ಸ್ಟಾರ್ ಮಾತ್ರ ಅಲ್ಲ. ತನ್ನೊಳಗೊಬ್ಬ ಹಾಸ್ಯ ಕಲಾವಿದ ಕೂಡ ಇದ್ದಾನೆ ಎನ್ನುವುದನ್ನು ಮತ್ತೊಮ್ಮೆ ಸಾಬೀತು ಮಾಡಿದ್ದಾರೆ. ಆದರೆ ಈ ಚಿತ್ರದ ನಿಜವಾದ ಆಕರ್ಷಣೆ ಆರ್ ಮಾಧವನ್. ಹಲವು ಮಾಧವನ್ ಅಭಿನಯದ ಮುಂದೆ ಅಜಯ್ ದೇವಗನ್ ಮಂಕಾಗುತ್ತಾರೆ.
ಆರ್ ಮಾಧವನ್ ಅವರ ಹಾಸ್ಯ ಪ್ರಜ್ಞೆ.. ಅವರ ಹಾವ ಭಾವ.. ಅವರ ಡೈಲಾಗ್ ಡಿಲಿವರಿ ಪ್ರೇಕ್ಷಕರಿಗೆ ನಗು ತರಿಸುತ್ತೆ. ಗೌತಮಿ ಕಪೂರ್ ಅವರದ್ದು ಎಂದಿನಂತೆ ಸಹಜ ಅಭಿನಯ. ರಕುಲ್ ಪ್ರೀತ್ ಸಿಂಗ್ ಈ ಚಿತ್ರದ ಮತ್ತೊಂದು ಅಚ್ಚರಿ. ಕೇವಲ ಗ್ಲ್ಯಾಮರ್ ಗೊಂಬೆ ಎಂದವರಿಗೆ ತಮ್ಮ ಅಭಿನಯದ ಮೂಲಕ ರಕುಲ್ ಇಲ್ಲಿ ಉತ್ತರ ನೀಡಿದ್ಧಾರೆ.
ಜಾವೇದ್ ಜಾಫ್ರಿ ತಮಗೆ ನೀಡಿರುವ ಪಾತ್ರಕ್ಕೆ ನ್ಯಾಯ ಸಲ್ಲಿಸಿದ್ದಾರೆ. ಇನ್ನು ವಿಶೇಷ ಅಂದರೆ ಈ ಚಿತ್ರದಲ್ಲಿ ಜಾವೇದ್ ಜಾಫ್ರಿಯವರ ಮಗ ಮೀಜಾನ್ ಜಾಫ್ರಿ ಕೂಡ ಇದ್ದಾರೆ. ಸಹಾಯಕ ನಿರ್ದೇಶಕನಾಗಿ ಕಳೆದೊಂದು ದಶಕದಿಂದ ಬಾಲಿವುಡ್‌ನಲ್ಲಿ ಸೈಕಲ್ ಹೊಡೆದಿರುವ ಮೀಜಾನ್ ಅವರ ಅಭಿನಯ ಶ್ಲಾಘನೀಯ.
ಮೈನಸ್ ಪಾಯಿಂಟ್ ಏನು..?
ಚಿತ್ರದ ಕಥೆ ಊಹಿಸುವಂತೆ ಇದ್ದರೂ ಕೂಡ ಮೊದಲಾರ್ಧ ಚಕಚಕನೆ ಸಾಗುತ್ತದೆ. ಆದರೆ.. ಚಿತ್ರದ ದ್ವೀತಿಯಾರ್ಧ ಪ್ರೇಕ್ಷಕರ ತಾಳ್ಮೆಯ ಪರೀಕ್ಷೆಯನ್ನು ಮಾಡುತ್ತೆ. ಕ್ಲೈಮ್ಯಾಕ್ಸ್ ಎಳೆದಂತೆ ಭಾಸವಾಗುತ್ತೆ. ಚಿತ್ರದ ಕಥೆ ಮತ್ತು ಚಿತ್ರಕಥೆಯನ್ನು ಬರೆದಿರುವ ಲವ್ ರಂಜನ್ ಮತ್ತು ತರುಣ್ ಜೈನ್ ಚಿತ್ರದ ಸೆಕೆಂಡ್ ಹಾಫ್ ಮೇಲೆ ಗಮನ ನೀಡಿದ್ದರೆ ಈ ಚಿತ್ರದ ಫಲಿತಾಂಶ ಬೇರೆಯಾಗಿರುತ್ತಿತ್ತು. ಕೆಲ ಕಡೆ ರಕುಲ್ ಪ್ರೀತ್ ಮತ್ತು ಮಾಧವನ್ ನಡುವಿನ ಸಂಭಾಷಣೆಗಳು ಕಿರುಚಿದಂತೆ ಇವೆ. ಇನ್ನು ಇಂತಹ ಚಿತ್ರಗಳಲ್ಲಿ ಹಾಡುಗಳು ಅವನಶ್ಯಕ. ಆದರೆ ಇಲ್ಲಿ ಹಾಡುಗಳನ್ನು ಸೇರಿಸಿ ನೋಡುವ ಪ್ಲೋಗೆ ಬ್ರೇಕ್ ಹಾಕಲಾಗಿದೆ.
ಕೊನೆ ಮಾತು
''ದೇ ದೇ ಪ್ಯಾರ್ ದೇ 2'' ಚಿತ್ರಕ್ಕೆ ಈ ವರ್ಷದ ಅತ್ಯುತ್ತಮ ಮನರಂಜನಾತ್ಮಕ ಚಿತ್ರ ಎನ್ನುವ ಹೆಗ್ಗಳಿಕೆಗೆ ಪಾತ್ರವಾಗುವ ಎಲ್ಲ ಸಾಮರ್ಥ್ಯ ಇತ್ತು. ಆದರೆ. ಊಹಿಸಬಹುದಾದ ಆಸಕ್ತಿದಾಯಕ ಕಥೆ ಹೊರತಾಗಿಯೂ.. ಮೊದಲಾರ್ಧ ನೀಡುವ ಮನರಂಜನೆಯ ನಡುವೆಯೂ.. ದ್ವೀತಿಯಾರ್ಧ ಚಿತ್ರವನ್ನು ಕಳೆಗುಂದಿಸಿದೆ. ಹಲವು ನ್ಯೂನತೆಗಳನ್ನು ಹೊಂದಿರುವ ಈ ಚಿತ್ರವನ್ನು ಎವರೇಜ್ ಸಿನಿಮಾ ಎನ್ನಬಹುದು. ಆರ್ ಮಾಧವನ್ ಮತ್ತು ಅಜಯ್ ದೇವಗನ್ ಅವರ ಅಭಿಮಾನಿಗಳು ನೋಡಲೇಬೇಕೆಂಬ ತೀರ್ಮಾನ ಮಾಡಿದ್ದರೆ ನೋಡಬಹುದು. ಉಳಿದವರು ಓಟಿಟಿಯಲ್ಲಿ ಬರುವವರೆಗೆ ಕಾಯಬಹುದು.


Click it and Unblock the Notifications











