Devara review: 'ದೇವರ' ಕೆಂಪು ಸಮುದ್ರ ಮಂಥನ; ಅಭಿಮಾನಿಗಳಿಗೆ ಮನರಂಜನೆಯ ಔತಣ
ಜ್ಯೂ. ಎನ್‌ಟಿಆರ್ ನಟನೆಯ 'ದೇವರ' ಸಿನಿಮಾ ತೆರೆಗಪ್ಪಳಿಸಿದೆ. ಬೆಳ್ಳಂ ಬೆಳಗ್ಗೆ ಸಿನಿಮಾ ನೋಡಿ ಅಭಿಮಾನಿಗಳು ಸಂಭ್ರಮಿಸಿದ್ದಾರೆ. ಬಹಳ ವರ್ಷಗಳ ಬಳಿಕ ಸೋಲೊ ಹೀರೊ ಆಗಿ ತಾರಕ್ ನಟಿಸಿರುವ ಸಿನಿಮಾ ಇದು. ಸೋಲೊ ಹೀರೊ ಆಗಿದ್ದರೂ ಡಬಲ್ ರೋಲ್‌ನಲ್ಲಿ ಡಬಲ್ ಧಮಾಕ ಎಂಟರ್‌ಟೈನ್‌ಮೆಂಟ್ ಕೊಟ್ಟಿದ್ದಾರೆ.
ಗೆಲ್ಲಲೇಬೇಕು ಎನ್ನುವ ಹಠಕ್ಕೆ ಬಿದ್ದಿದ್ದ ನಿರ್ದೇಶಕ ಕೊರಟಾಲ ಶಿವ ಮೆಸೇಜ್ ಜೊತೆಗೆ ಒಂದೊಳ್ಳೆ ಕಮರ್ಷಿಯಲ್ ಚಿತ್ರವನ್ನು ಪ್ರೇಕ್ಷಕರ ಮುಂದೆ ತಂದಿದ್ದಾರೆ. ಸೈಫ್ ಅಲಿಖಾನ್, ಪ್ರಕಾಶ್ ರಾಜ್, ಶ್ರೀಕಾಂತ್‌ರಂಗ ಅನುಭವಿ ಕಲಾವಿದರ ಸಾಥ್ ಸಿಕ್ಕಿದೆ. ಜಾನ್ವಿ ಕಪೂರ್ ಗ್ಲಾಮರ್ ಟಚ್ ಕೂಡ ಸೇರಿದೆ. ಕಾಲಿವುಡ್ ರಾಕ್‌ಸ್ಟಾರ್ ಅನಿರುದ್ಧ್ ರವಿಚಂದರ್ ಮ್ಯೂಸಿಕ್ ಜೊತೆಯಾಗಿದೆ.

ಸ್ಯಾಂಪಲ್‌ಗಳಿಂದ ದೊಡ್ಡಮಟ್ಟದಲ್ಲಿ ಹೈಪ್ ಕ್ರಿಯೇಟ್ ಮಾಡದಿದ್ದರೂ 'ದೇವರ' ನೋಡಲು ಅಭಿಮಾನಿಗಳು ಮುಗಿಬಿದ್ದಿದ್ದಾರೆ. ತಾರಕ್ ಕ್ರೇಜ್, 'RRR' ಸಕ್ಸಸ್ ಬಳಿಕ ಬಂದಿರುವ ಸಿನಿಮಾ ಆಗಿರುವುದರಿಂದ ಸಹಜವಾಗಿಯೇ ಸಿನಿಮಾ ಪ್ರೇಕ್ಷಕರ ಗಮನ ಸೆಳೆದಿದೆ. ಅಂತೂ ಇಂತೂ ದೇವರ ಕಥೆ ತೆರೆಮೇಲೆ ಅನಾವರಣವಾಗಿದೆ. ಸಿನಿಮಾ ಹೇಗಿದೆ? ಪ್ಲಸ್, ಮೈನಸ್ ಏನು? ಇಲ್ಲಿದೆ ಕಂಪ್ಲೀಟ್ ರಿವ್ಯೂ ರಿಪೋರ್ಟ್.
'ದೇವರ' ಕಥೆ
ಅದು ಕೆಂಪು ಸಮುದ್ರ.. ತಮಿಳುನಾಡು-ಆಂಧ್ರ ಗಡಿಯ ರತ್ನಗಿರಿಯ ಭಾಗದಲ್ಲಿ ನಡೆಯುವ ಕಥೆ. ಅಲ್ಲಿನ ನಾಲ್ಕು ಊರುಗಳಿಗೆ ದೇವರ(ಜ್ಯೂ. ಎನ್‌ಟಿಆರ್), ಭೈರವ(ಸೈಫ್ ಅಲಿಖಾನ್) ದೊಡ್ಡ ದಿಕ್ಕು ಎನ್ನುವಂತೆ ಇರುತ್ತಾರೆ. ಜೀವನಕ್ಕಾಗಿ ಸಮುದ್ರವನ್ನೇ ನಂಬಿಕೊಂಡ ಜನ ಬಳಿಕ ಅಕ್ರಮವಾಗಿ ಸರಕನ್ನು ಕದಿಯುವ ಕಾಯಕಕ್ಕೆ ಇಳಿಯುತ್ತಾರೆ.
ಒಂದು ಹಂತದಲ್ಲಿ ತಾವು ಮಾಡುತ್ತಿರುವುದು ತಪ್ಪು ಎಂದು ದೇವರಗೆ ಗೊತ್ತಾಗುತ್ತದೆ. ಆದರೆ ಅದಕ್ಕೆ ಒಗ್ಗಿಕೊಂಡ ಕೆಲವರು ಭೈರವನ ಜೊತೆ ಅದನ್ನು ಮುಂದುವರೆಸಲು ಹೋಗುತ್ತಾರೆ. ಒಂದ್ಕಾಲದಲ್ಲಿ ಸ್ನೇಹಿತರು ಎನ್ನುವಂತಿದ್ದ ದೇವರ-ಭೈರವ ನಡುವೆ ಬಳಿಕ ತಿಕ್ಕಾಟ ಶುರುವಾಗುತ್ತದೆ. ಆದರೆ ಇದ್ದಕ್ಕಿಂದ್ದಂತೆ ದೇವರ ಊರಿಗೆ ದೂರವಾಗುತ್ತಾನೆ. ಭೈರವ ಗ್ಯಾಂಗ್‌ಗೆ ಕಂಕಟವಾಗುತ್ತಾನೆ.

ಸೆಕೆಂಡ್ ಆಫ್‌ನಲ್ಲಿ ದೇವರನ ಮಗ ವರ(ಜ್ಯೂ. ಎನ್‌ಟಿಆರ್) ಎಂಟ್ರಿ ಆಗುತ್ತದೆ. ತಂದೆ ಬಹಳ ಧೈರ್ಯವಂತನಾಗಿದ್ದರೆ ಮಗ ದೊಡ್ಡ ಪುಕ್ಕಲನಾಗಿರುತ್ತಾನೆ. ಅಷ್ಟಕ್ಕೂ ದೇವರ ಏನಾದ? ವರ ಯಾಕೆ ಅಷ್ಟು ಪುಕ್ಕಲ? ಪಾರ್ಟ್-2ಗೆ ಲಿಂಕ್ ಕೊಡುವ ಕ್ಲೈಮ್ಯಾಕ್ಸ್ ಏನು? ಎನ್ನುವುದನ್ನು ತೆರೆಮೇಲೆ ನೋಡಬೇಕು.
'ದೇವರ' ಸಿನಿಮಾ ಹೇಗಿದೆ?
ಕೊರಟಾಲ ಶಿವ ಆಯ್ಕೆ ಮಾಡಿಕೊಂಡಿರುವ ಕಥೆಯಲ್ಲಿ ಹೊಸದೇನು ಇಲ್ಲ. ಆದರೆ 'ದೇವರ' ಚಿತ್ರಕಥೆಯಲ್ಲಿ ಒಂದಷ್ಟು ಆಟ ಆಡುತ್ತಾ ಹೋಗಿದ್ದಾರೆ. ಎಲಿವೇಷನ್ಸ್ ಸೀನ್ಸ್ ಜೋಡಿಸುತ್ತಾ ಸಿಂಪಲ್ ಕಥೆಯನ್ನು ಪರಿಣಾಮಕಾರಿಯಾಗಿ ಪ್ರೆಸೆಂಟ್ ಮಾಡುವ ಪ್ರಯತ್ನ ಮಾಡಿದ್ದಾರೆ. ಅದಕ್ಕೆ ಕಲಾವಿದರು ಹಾಗೂ ತಂತ್ರಜ್ಞರ ಸಾಥ್ ಸಿಕ್ಕಿದೆ. ಕಮರ್ಷಿಯಲ್ ಕಥೆಗಳನ್ನು ಹೇಳಲು ಬಳಸುವ ಫ್ಲಾಶ್‌ಬ್ಯಾಕ್ ತಂತ್ರವನ್ನೇ ನಿರ್ದೇಶಕರು ಇಲ್ಲೂ ಅಳವಡಿಸಿಕೊಂಡಿದ್ದಾರೆ.
ಏಕಾಏಕಿ ಕೆಂಪು ಸಮುದ್ರಕ್ಕೆ ಪ್ರೇಕ್ಷಕರನ್ನು ಕರೆದುಕೊಂಡು ಹೋಗದೇ ಅದಕ್ಕೊಂದು ಪೀಠಿಕೆ ಹಾಕಿಕೊಂಡಿದ್ದಾರೆ. ಕ್ರಿಕೆಟ್ ಸ್ಟೇಡಿಯಂ ಮೇಲೆ ಬಾಂಬ್ ದಾಳಿಗೆ ನಡೆಯುವ ಯೋಜನೆ, ಅದಕ್ಕೆ ಕಾರಣವಾದವನನ್ನು ಹುಡುಕಿ ರತ್ನಗಿರಿಗೆ ಹೋದಾಗ ಸಿಂಗಪ್ಪ(ಪ್ರಕಾಶ್ ರಾಜ್) ಹೇಳುವ ಕಥೆಯೊಂದಿಗೆ ದೇವರ ಪ್ರಪಂಚಕ್ಕೆ ಪ್ರೇಕ್ಷಕರು ಎಂಟ್ರಿ ಆಗುತ್ತಾರೆ. ಹೆಚ್ಚು ಕಮ್ಮಿ 20 ನಿಮಿಷಗಳ ನಂತರ ತಾರಕ್ ತೆರೆಮೇಲೆ ಬರುತ್ತಾರೆ.
ಕೊರಟಾಲ ಶಿವ ತಮ್ಮ ಸಿನಿಮಾಗಳಲ್ಲಿ ಮೆಸೇಜ್ ಜೊತೆಗೆ ಒಂದು ಕಮರ್ಷಿಯಲ್ ಪ್ಯಾಕೇಟ್ ಕಟ್ಟಿಕೊಡುತ್ತಾರೆ. "ಮನುಷ್ಯನಿಗೆ ಬದುಕೋ ಅಷ್ಟು ಧೈರ್ಯ ಸಾಕು ಕೊಲ್ಲೋ ಅಷ್ಟು ಬೇಕಿಲ್ಲ" ಎನ್ನುವ ಡೈಲಾಗ್ ಚಿತ್ರದಲ್ಲಿದೆ. ಅದೇ ಸಂದೇಶವನ್ನು 'ದೇವರ' ಚಿತ್ರದಲ್ಲಿ ಹೇಳಿದ್ದಾರೆ. ಫಸ್ಟ್ ಹಾಫ್ ಎಲಿವೇಷನ್ ಸೀನ್ಸ್ ಹಾಗೂ ಆಕ್ಷನ್ ಸೀನ್ಸ್‌ನಿಂದ ಗೆಲ್ಲಿಸಿಕೊಂಡಿರುವ ನಿರ್ದೇಶಕರು, ಸೆಕೆಂಡ್ ಹಾಫ್‌ನಲ್ಲಿ ಕೊಂಚ ಪ್ರೇಕ್ಷಕರ ತಾಳ್ಮೆ ಪರೀಕ್ಷಿಸುತ್ತಾರೆ. ಕ್ಲೈಮ್ಯಾಕ್ಸ್ ವೇಳೆಗೆ ಮತ್ತೆ ಸಿನಿಮಾ ಟ್ರ್ಯಾಕ್‌ಗೆ ಮರಳುತ್ತದೆ.
ಪ್ರೀಕ್ಲೈಮ್ಯಾಕ್ಸ್‌ನಲ್ಲಿ ಸಮುದ್ರದ ತಳದಲ್ಲಿ ಒಂದು ಆಕ್ಷನ್ ಸೀಕ್ವೆನ್ ಇದೆ. ಅಲ್ಲಿಂದ ಮುಂದೆ ಸಿನಿಮಾ ಕ್ಲೈಮ್ಯಾಕ್ಸ್ ಟ್ವಿಸ್ಟ್‌ಗೆ ಬಂದು ನಿಲ್ಲುತ್ತದೆ. 'ಬಾಹುಬಲಿ' ಪಾರ್ಟ್-1 ಕೊನೆಯ ಟ್ವಿಸ್ಟ್ ರೀತಿಯಲ್ಲೇ 'ದೇವರ' ಪಾರ್ಟ್-1 ದೊಡ್ಡ ಪ್ರಶ್ನೆಯೊಂದಿಗೆ ಮುಗಿಯುತ್ತದೆ. ಆದರೆ ಅದು ಎಷ್ಟರಮಟ್ಟಿಗೆ ಸೀಕ್ವೆಲ್ ಬಗ್ಗೆ ಕುತೂಹಲವನ್ನು ಉಳಿಸಿಕೊಳ್ಳುತ್ತದೆ ಎನ್ನುವುದನ್ನು ಮುಂದೆ ನೋಡಬೇಕು.
ಕಲಾವಿದರ ಅಭಿನಯ
ಜ್ಯೂ. ಎನ್‌ಟಿಆರ್ ಸ್ಕ್ರೀನ್ ಪ್ರಸೆನ್ಸ್ 'ದೇವರ' ಚಿತ್ರದ ಪ್ಲಸ್ ಪಾಯಿಂಟ್. ದ್ವಿಪಾತ್ರದಲ್ಲಿ ಇಡೀ ಸಿನಿಮಾ ತಾರಕ್ ಆವರಿಸಿಕೊಂಡಿದ್ದಾರೆ. ತಂದೆ- ಮಗನಾಗಿ ಎಂದಿನ ತಮ್ಮ ನಟನೆಯಿಂದ ಅವರು ಮೋಡಿ ಮಾಡುತ್ತಾರೆ. ಸೈಫ್ ಅಲಿಖಾನ್ ಕೂಡ ಉತ್ತಮವಾಗಿ ನಟಿಸಿದ್ದಾರೆ. ಆದರೆ ತಾರಕ್ ಎದುರು ಹೆಚ್ಚು ಅವಕಾಶ ಸಿಕ್ಕಿಲ್ಲ. ಜಾನ್ವಿ ಕಪೂರ್ ಕಥೆಗೆ ಒಗ್ಗಿಕೊಂಡರೂ ಹೆಚ್ಚು ಹೊತ್ತು ತೆರೆಮೇಲೆ ಕಾಣಿಸಿಕೊಳ್ಳಲ್ಲ. ಇನ್ನುಳಿದಂತೆ ಪ್ರಕಾಶ್ ರಾಜ್, ಶ್ರೀಕಾಂತ್ ಎಲ್ಲರೂ ತಮ್ಮ ತಮ್ಮ ಪಾತ್ರಗಳನ್ನು ಸೊಗಸಾಗಿ ನಿಭಾಯಿಸಿದ್ದಾರೆ.
ತಾಂತ್ರಿಕವಾಗಿ ಸಿನಿಮಾ
ಅನಿರುದ್ದ್ ರವಿಚಂದರ್ ಮ್ಯೂಸಿಕ್ 'ದೇವರ' ಚಿತ್ರಕ್ಕೆ ಪ್ಲಸ್ ಪಾಯಿಂಟ್ ಆಗಿದೆ. ಆದರೆ ಹಾಡುಗಳು ದೊಡ್ಡಮಟ್ಟದಲ್ಲಿ ಗೆಲ್ಲಲಿಲ್ಲ. ಇನ್ನು 70-80ರ ದಶಕದ ಕಾಲಘಟ್ಟವನ್ನು ಕಟ್ಟಿಕೊಡಲು ಚಿತ್ರತಂಡ ಶ್ರಮಿಸಿರುವುದು ಗೊತ್ತಾಗುತ್ತದೆ. ಅದಕ್ಕೆ ರತ್ನವೇಲು ಛಾಯಾಗ್ರಹಣ ಶಕ್ತಿ ತುಂಬಿದೆ. ಬಹಳ ಅದ್ಧೂರಿಯಾಗಿ ಚಿತ್ರವನ್ನು ನಿರ್ಮಿಸಲಾಗಿದೆ. ಇನ್ನು ಶಾರ್ಕ್ ಮೀನಿನ ಮೇಲೇರಿ ತಾರಕ್ ಬರುವ ಸನ್ನಿವೇಶದ ಬಗ್ಗೆ ಭಾರೀ ನಿರೀಕ್ಷೆ ಇತ್ತು. ಸಿಜಿಯಲ್ಲಿ ಆ ಸನ್ನಿವೇಶ ಒಳ್ಳೆ ಅನುಭವ ನೀಡುತ್ತದೆ. ಸಂಭಾಷಣೆ ಕಥೆ ಪೂರಕವಾಗಿದೆ ಆದರೆ ಮನಸ್ಸಿನಲ್ಲಿ ಉಳಿಯುವ ಒನ್‌ಲೈನರ್‌ಗಳು ಕಮ್ಮಿ.
ಕೊನೆಯ ಮಾತು
ಎರಡೂ ಮುಕ್ಕಾಲು ಗಂಟೆ ಸಿನಿಮಾ ಕೊಂಚ ದೊಡ್ಡದಾಯಿತು ಎನಿಸುತ್ತದೆ. ಒಂದೇ ಸಿನಿಮಾದಲ್ಲಿ ಹೇಳಬೇಕಾದ ಕಥೆಯನ್ನು ಎರಡು ಭಾಗಗಳಾಗಿ ಎಳೆಯುತ್ತಿದ್ದಾರೆ ಎನ್ನಿಸದೇ ಇರದು. ಅದೇ ಕಾರಣಕ್ಕೆ ಕಂಪ್ಲೀಟ್ ಕಥೆ ನೋಡಿದ ಫೀಲ್ ದೇವರ ಕೊಡಲ್ಲ. ಆದರೂ ಅದಲ್ಲವನ್ನು ಮೀರಿ 'ದೇವರ' ಸಿನಿಮಾ ರಂಜಿಸುತ್ತದೆ. ದೊಡ್ಡ ಪರದೆಯಲ್ಲಿ ಅದ್ಭುತ ಅನುಭವ ನೀಡುತ್ತದೆ. ಅಭಿಮಾನಿಗಳಿಗಂತೂ ಹಬ್ಬದೂಟ. ಫ್ಯಾಮಿಲಿ ಸಮೇತ ಸಿನಿಮಾ ನೋಡಿ ಎಂಜಾಯ್ ಮಾಡಬಹುದು.


Click it and Unblock the Notifications











