Dhadak 2 Twitter {X} Review ; ಹೇಗಿದೆ ಜಾತಿ ಮೀರಿದ ಪ್ರೀತಿಯ ಕಥೆ ? ಓರಿಜನಲ್ ಚಿತ್ರವನ್ನು ಮೀರಿಸುತ್ತಾ ಧಡಕ್ 2 ?
ಹೇಳಿ ಕೇಳಿ ಇದು ಪ್ಯಾನ್ ಇಂಡಿಯಾ ಕಾಲ. ಭಾಷೆಯ ಭೇದ ಭಾವ ಇಲ್ಲದೇ ಎಲ್ಲರು ಎಲ್ಲ ಭಾಷೆಯ ಚಿತ್ರಗಳನ್ನು ಅವರ ಅವರ ಭಾಷೆಯಲ್ಲಿಯೇ ನೋಡುತ್ತಿದ್ದಾರೆ. ಇಂತಹ ಕಾಲದಲ್ಲಿ ರಿಮೇಕ್ ಚಿತ್ರಗಳಿಗೆ ಬೆಲೆ ಇಲ್ಲ. ಒಂದು ವೇಳೆ ಮಾಡಿದರೂ ಕೂಡ ಪ್ರೇಕ್ಷಕರು ಆ ಚಿತ್ರವನ್ನು ನೋಡುವ ಮನಸು ಮಾಡುವುದಿಲ್ಲ ಎಂಬ ಅಭಿಪ್ರಾಯ ಸದ್ಯ ಹಲವರದ್ದು.
ಇದಕ್ಕೆ ಪೂರಕವಾಗಿ ಇತ್ತೀಚೆಗೆ ರಿಮೇಕ್ ಆದ ಹಲವು ಚಿತ್ರಗಳು ಬಾಕ್ಸಾಫೀಸ್‌ನಲ್ಲಿ ಸೋತಿವೆ. ಆದರೂ ಕೂಡ .. ರಿಮೇಕ್ ಸಂಪ್ರದಾಯ ಅಂತ್ಯವಾಗಿಲ್ಲ. ಅಂತ್ಯವಾಗುವುದು ಇಲ್ಲ ಎನ್ನುವ ಬಲವಾದ ನಂಬಿಕೆ ಕೆಲವರಲ್ಲಿದೆ. ಇದಕ್ಕೆ ''ಧಡಕ್ 2'' ಚಿತ್ರ ಸದ್ಯದ ಉದಾಹರಣೆ.

ಹೌದು, ''ಧಡಕ್ 2'' 2018ರಲ್ಲಿ ತೆರೆಗೆ ಬಂದ ಮಾರಿ ಸೆಲ್ವರಾಜ್ ನಿರ್ದೇಶನದ ''ಪರಿಯೇರುಂ ಪೆರುಮಾಳ್'' ಚಿತ್ರದ ರಿಮೇಕ್. ಕಾಲಿವುಡ್‌ನಲ್ಲಿ ಬ್ಲಾಕ್‌ಬಸ್ಟರ್ ಆಗಿದ್ದ ಈ ಚಿತ್ರವನ್ನು ಯಥಾವತ್ತಾಗಿ ಹಿಂದಿಯಲ್ಲಿ ಶಾಜಿಯಾ ಇಕ್ಬಾಲ್ ಭಟ್ಟಿ ಇಳಿಸಿದ್ದು ಸಿದ್ಧಾಂತ್ ಚತುರ್ವೇದಿ ಮತ್ತು ತೃಪ್ತಿ ದಿಮ್ರಿ ಚಿತ್ರದ ಪ್ರಮುಖ ಪಾತ್ರಗಳನ್ನು ನಿರ್ವಹಿಸಿದ್ದಾರೆ. ಕರಣ್ ಜೋಹರ್ ನಿರ್ಮಾಣದಲ್ಲಿ ಚಿತ್ರ ಮೂಡಿ ಬಂದಿದ್ದು ಇಂದು ಈ ಚಿತ್ರವನ್ನು ಬಿಡುಗಡೆ ಮಾಡಲಾಗಿದೆ.
ಹಾಗಿದ್ದರೆ ಹೇಗಿದೆ ಧಡಕ್ 2..? ಅಂತರ್ಜಾತಿ ಪ್ರೇಮಕಥನಕ್ಕೆ ಪ್ರೇಕ್ಷಕರು ಕಣ್ಣೀರಾದರಾ ? ಚಿತ್ರವನ್ನು ಮೊದಲ ದಿನವೇ ನೋಡಿದ ಪ್ರೇಕ್ಷಕರು ಹೇಳಿದ್ದೇನು ? ಎಂದು ತಿಳಿಯಲು ಮುಂದೆ ಓದಿ.
ಭಾವನಾತ್ಮಕವಾದ ಚಿತ್ರ
ಗ್ರಾಮೀಣ ಹಿನ್ನಲೆಯಲ್ಲಿ ನಡೆಯುವ ಜಾತಿಯ ಅಡೆತಡೆಗಳ ನಡುವೆ ಅರಳುವ ಪ್ರೇಮಕಥೆಯನ್ನು ಹೃದಯಕ್ಕೆ ನಾಟುವಂತೆ ಇಲ್ಲಿ ಹೇಳಲಾಗಿದೆ. ಮೊದಲಾರ್ಧ ತೀವೃತೆಯಿಂದ ಕೂಡಿದ್ದು ದ್ವೀತಿಯಾರ್ಧ ಭಾವನಾತ್ಮಕವಾದ ಸಂಘರ್ಷಗಳನ್ನು ಹೊಂದಿದೆ. ಹಾಡುಗಳು ಮತ್ತು ಹಿನ್ನೆಲೆ ಸಂಗೀತ ಚಿತ್ರದ ತೂಕವನ್ನು ಹೆಚ್ಚಿಸಿವೆ. ಚಿತ್ರದ ಟೈಟಲ್ ಟ್ರ್ಯಾಕ್ ಈಗಾಗಲೇ ಟ್ರೆಂಡಿಂಗ್‌ನಲ್ಲಿದೆ. ವಾಸ್ತವಕ್ಕೆ ಹತ್ತಿರವೆಂಬಂತೆ ನಿರ್ದೇಶಕರು ಚಿತ್ರದ ಚಿತ್ರೀಕರಣವನ್ನು ಮಾಡಿದ್ದಾರೆ. ಸಿದ್ಧಾಂತ್ ಚತುರ್ವೇದಿ ಮತ್ತು ತೃಪ್ತಿ ದಿಮ್ರಿಯ ಅಭಿನಯ ಸೊಗಸಾಗಿದೆ.
Rating: ⭐⭐⭐⭐☆ (4/5
ಹೃದಯ ಹಿಂಡಿದಂತಾಯಿತು
ಧಡಕ್ 2 ನೋಡಿ ನನ್ನ ಹೃದಯ ಹಿಂಡಿದಂತಾಯಿತು. ಇದು ಕೇವಲ ಪ್ರೇಮಕಥೆಯಲ್ಲ ನಮ್ಮ ಸಮಾಜದ ಕೈಗನ್ನಡಿ. ವಿಧಿ ಮತ್ತು ನಿಲೇಶ್ ಅವರ ಪ್ರೀತಿ ನಿಮ್ಮನ್ನು ಅಳಿಸುತ್ತೆ. ನಡುಗಿಸುತ್ತೆ. ಕೆಲವು ಕಥೆಗಳು ಚಲನಚಿತ್ರಗಳಿಂದಲ್ಲ, ಜೀವನದಿಂದ ಬಂದಿರುತ್ತವೆ.
ನೋಡಲೇಬೇಕಾದ ಚಿತ್ರ
ಈಗಷ್ಟೇ ಧಡಕ್ 2 ಚಿತ್ರ ನೋಡಿ ಬಂದೆ. ಜಾತಿ ಮತ್ತು ಅಧಿಕಾರಕ್ಕೆ ಸೆಡ್ಡು ಹೊಡೆಯುವಂತಹ ಈ ಪ್ರೇಮಕಥೆಯಲ್ಲಿ ಸಿದ್ಧಾಂತ್ ಚತುರ್ವೇದಿ ಮತ್ತು ತೃಪ್ತಿ ದಿಮ್ರಿ ಮಿಂಚಿದ್ದಾರೆ. ಟ್ರೇಲರ್‌ನಲ್ಲಿ ತುಸು ಹೆಚ್ಚೇ ವಿಷಯ ಬಹಿರಂಗಗೊಳಿಸಲಾಗಿದೆಯಾದರೂ ನೋಡಲೇಬೇಕಾದ ಚಿತ್ರ ಇದು.
ಸರಳವಾದ ಕಥೆಯಲ್ಲಿ ಭಾವನೆಗಳ ಗೊಂಚಲು
ಮೊದಲ ನೋಟದಲ್ಲಿ ಅರಳುವ ಪ್ರೀತಿಯಿಂದ ಹಿಡಿದು ಆ ಸಂಬಂಧ ಆಳವಾಗಿ ಬೇರೂರುವ ತನಕ ಎಲ್ಲವೂ ಸಹಜವಾಗಿ ಮೂಡಿ ಬಂದಿದೆ. ಸಿದ್ಧಾಂತ್ ಚತುರ್ವೇದಿ ಮತ್ತು ತೃಪ್ತಿ ದಿಮ್ರಿಯ ಕೆಮೆಸ್ಟ್ರೀ ಚಿತ್ರದ ತಾಜಾತನ ಹೆಚ್ಚಿಸಿದೆ. ಮಧ್ಯಂತರದ ನಂತರ ವಾಸ್ತವಕ್ಕೆ ಕೈಗನ್ನಡಿಯಂತೆ ಇದ್ದರೆ ಕ್ಲೈಮ್ಯಾಕ್ಸ್ ಪಂಚ್‌ದಿಂದ ಕೂಡಿದೆ. ಚಿತ್ರದಲ್ಲಿನ ಒಂದು ದೃಶ್ಯ ಬೆಚ್ಚಿ ಬೀಳಿಸುತ್ತೆ. ಈ ಚಿತ್ರದ ಮೈನಸ್ ಪಾಯಂಟ್ ಅಂದರೆ ಅದು ಸಂಗೀತ. ಧಡಕ್ ಮೊದಲ ಭಾಗದಂತೆ ಹಾಡುಗಳು ನೆನಪಿನಲ್ಲಿ ಉಳಿಯಲ್ಲ. ಆದರೂ ಕಥೆಯಾಧಾರಿತ ಚಿತ್ರಗಳು ಗೆಲ್ಲುತ್ತವೆ.
ಹೀಗೆ ಹಲವಾರು ಜನ ಧಡಕ್ 2 ಚಿತ್ರವನ್ನು ಮೆಚ್ಚಿಕೊಂಡು ಸೋಶಿಯಲ್ ಮೀಡಿಯಾದಲ್ಲಿ ತಮ್ಮ ತಮ್ಮ ವಿಮರ್ಶೆಗಳನ್ನು ಹಂಚಿಕೊಂಡಿದ್ದಾರೆ. ಬಹುತೇಕರಿಗೆ ಚಿತ್ರ ಇಷ್ಟವಾಗಿದ್ದು ''ಸೈಯಾರ'' ಚಿತ್ರಕ್ಕೆ ಸಿಕ್ಕ ಜನ ಬೆಂಬಲ ಈ ಚಿತ್ರಕ್ಕೂ ಸಿಕ್ಕರೆ ಈ ಚಿತ್ರ ಕೂಡ ಅದ್ಭುತ ಯಶಸ್ಸನ್ನು ಗಳಿಸುತ್ತೆ ಎಂದು ಕೂಡ ಹಲವರು ಹೇಳಿದ್ದಾರೆ. ಧಡಕ್ 2 ಗೆಲ್ಲುತ್ತಾ ? ಕಾದು ನೋಡಬೇಕಿದೆ.


Click it and Unblock the Notifications











