twitter
    For Quick Alerts
    ALLOW NOTIFICATIONS  
    For Daily Alerts

    The Gray Man Movie Review: ಅದೇ ಹಳೆ ಆಕ್ಷನ್ ಸಿನಿಮಾ, ಧನುಶ್‌ ಪ್ರತಿಭೆಗೆ ಇಲ್ಲ ಅವಕಾಶ

    |

    ತಮಿಳಿನ ಸ್ಟಾರ್ ನಟ ಧನುಶ್ ನಟಿಸಿ, 'ಅವೇಂಜರ್ಸ್', 'ಕ್ಯಾಪ್ಟನ್ ಅಮೆರಿಕ' ಸರಣಿ ಸಿನಿಮಾಗಳ ನಿರ್ದೇಶಕರಾದ ರೂಸ್ಸೊ ಬ್ರದರ್ಸ್ ನಿರ್ದೇಶಿಸಿದ್ದಾರೆ ಎಂಬ ಕಾರಣ ಭಾರತದಲ್ಲಿ 'ದಿ ಗ್ರೇ ಮ್ಯಾನ್' ಸಿನಿಮಾದ ಬಗ್ಗೆ ನಿರೀಕ್ಷೆ ಹುಟ್ಟಿಕೊಂಡಿತ್ತು.

    ಅಂತೆಯೇ 'ದಿ ಗ್ರೇ ಮ್ಯಾನ್' ಸಿನಿಮಾವು ನೆಟ್‌ಫ್ಲಿಕ್ಸ್‌ನಲ್ಲಿ ಬಿಡುಗಡೆ ಆಗಿದೆ. ಆದರೆ ನಿರೀಕ್ಷಿತ ಮಟ್ಟವನ್ನು ತಲುಪಲು ವಿಫಲವಾಗಿದೆ. ಧನುಶ್‌ಗಾಗಿ ಮಾತ್ರವೇ ಸಿನಿಮಾ ನೋಡಿದವರಿಗೂ ಹೆಚ್ಚಿನ ಸಂತೃಪ್ತಿಯಂತೂ ಸಿಕ್ಕಿಲ್ಲ.

    Rating:
    2.0/5

    ಅಂಡರ್‌ಗ್ರೌಂಡ್ ತನಿಖಾ ಸಂಸ್ಥೆಯೊಂದರಲ್ಲಿ ಕೆಲಸ ಮಾಡುವ ನಾಯಕ. ದುಷ್ಟರನ್ನು ಕೊಂದು ಪ್ರಪಂಚವನ್ನು ಕಾಪಾಡುವುದು ಅವನ ಕೆಲಸ. ಅವನ ಕೈಗೆ ಪೆನ್‌ಡ್ರೈವ್ ಒಂದು ಸಿಗುತ್ತದೆ ಅದರಲ್ಲಿ ಭಾರಿ ಮಹತ್ವದ ಮಾಹಿತಿ ಅಡಕವಾಗಿದೆ. ಈಗ ತನಿಖಾ ಸಂಸ್ಥೆಯೇ ಅವನ ಹಿಂದೆ ಬಿದ್ದಿದೆ. ಜೊತೆಗೆ ಅವನನ್ನು ನಂಬಿರುವ ಬಾಲಕಿಯೊಬ್ಬಳನ್ನು ಸಹ ಅವನು ವಿಲನ್‌ಗಳಿಂದ ರಕ್ಷಿಸಬೇಕಾಗಿದೆ. ಇದು 'ದಿ ಗ್ರೇ ಮ್ಯಾನ್' ಸಿನಿಮಾದ ಒನ್ ಲೈನರ್ ಕತೆ. ಇದೇ ಮಾದರಿಯ ಕತೆಯನ್ನು ಎಲ್ಲೋ ಕೇಳಿದಂತೆ ಎನಿಸುತ್ತದೆ ಅಲ್ಲದೆ, ಎಲ್ಲೋ ಅಲ್ಲ ಹಾಲಿವುಡ್‌ನ ಹಲವು ಆಕ್ಷನ್ ಸಿನಿಮಾಗಳ ಕತೆಯೇ ಇದು!

    ಸಿನಿಮಾದಲ್ಲಿ ತನಿಖಾ ಸಂಸ್ಥೆಯ ಏಜೆಂಟ್ ಪಾತ್ರದಲ್ಲಿ ರ್ಯಾನ್ ಗಾಸ್ಲಿಂಗ್ ನಟಿಸಿದ್ದಾರೆ. ಚಾಣಾಕ್ಷ, ಬುದ್ಧಿವಂತ, ಸಮರಕಲೆಗಳನ್ನು ಬಲ್ಲವ, ವಿಲನ್ನುಗಳನ್ನು ಕ್ಷಣಾರ್ಧದಲ್ಲಿ ಚಚ್ಚಿ ಚಿಂದಿ ಮಾಡಬಲ್ಲ. ಅವನ ಹಿಂದೆ ಬಿದ್ದ ಕ್ರಿಸ್ ಇವಾನ್‌ ಸಹ ಅವನಷ್ಟೆ ಚಾಣಾಕ್ಷ, ಬುದ್ಧಿವಂತ, ಶಕ್ತಿಶಾಲಿ ಜೊತೆಗೆ ಮಹಾನ್ ಹಠವಾದಿ, ಕ್ರೂರಿ. ಇವರಿಬ್ಬರ ನಡುವೆ ನಡೆವ ಹಾವು-ಮುಂಗುಸಿ ಕಿತ್ತಾಟವೇ 'ದಿ ಗ್ರೇ ಮ್ಯಾನ್'.

    ಹಾಲಿವುಡ್‌ನಲ್ಲಿ ಇದೇ ಮಾದರಿಯ ಹಲವಾರು ಆಕ್ಷನ್ ಸಿನಿಮಾಗಳು ಈವರೆಗೆ ಬಂದು ಹೋಗಿವೆ ಮುಂದಕ್ಕೂ ಬರುತ್ತವೆ. ಆದರೆ ಆ ಎಲ್ಲ ಸಿನಿಮಾಗಳಿಗಿಂತಲೂ ಭಿನ್ನವಾಗಿ ನಿಲ್ಲಬಲ್ಲ ಯಾವ ಅಂಶವೂ 'ದಿ ಗ್ರೇ ಮ್ಯಾನ್' ಸಿನಿಮಾದಲ್ಲಿಲ್ಲ. ಟಾಮ್ ಕ್ರೂಸ್‌ರ 'ಮಿಷನ್ ಇಂಪಾಸಿಬಲ್' ಸಹ ಇದೇ ಮಾದರಿಯ ಕತೆಯನ್ನು ಹೊಂದಿರುತ್ತದೆ ಆದರೂ ಆ ಸರಣಿಯ ಸಿನಿಮಾಗಳು ಜನರಿಗೆ ಹೆಚ್ಚು ಇಷ್ಟವಾಗುತ್ತದೆ ಮತ್ತು ಅವರ ಮನಸ್ಸಲ್ಲಿ ಉಳಿಯುತ್ತವೆ ಅದಕ್ಕೆ ಕಾರಣ ಅವರ ಬರವಣಿಗೆ ಶೈಲಿ, ಆಕ್ಷನ್ ದೃಶ್ಯಗಳ ಭಿನ್ನ ವಿನ್ಯಾಸ, ಪಾತ್ರಗಳಲ್ಲಿ ಅನನ್ಯತೆ.

    ಸಪ್ಪೆ ಆಕ್ಷನ್ ಸಿನಿಮಾ

    ಸಪ್ಪೆ ಆಕ್ಷನ್ ಸಿನಿಮಾ

    'ದಿ ಗ್ರೇ ಮ್ಯಾನ್' ಸಿನಿಮಾ ಕೇವಲ ಆಕ್ಷನ್ ಅನ್ನಷ್ಟೆ ನಂಬಿಕೊಂಡಿದೆ. ಆಕ್ಷನ್ ಸಿನಿಮಾಗಳು ಹಿಟ್ ಆಗಬೇಕೆಂದರೆ ಕೇವಲ ಆಕ್ಷನ್ ಇದ್ದರಷ್ಟೆ ಆಗಿಬಿಡುವುದಿಲ್ಲ. ಒಂದು ಆಕ್ಷನ್ ದೃಶ್ಯದಿಂದ ಇನ್ನೊಂದು ಆಕ್ಷನ್ ದೃಶ್ಯದ ನಡುವೆ ಕೊಂಡಿಯಂತೆ ಕೆಲಸ ಮಾಡುವ ದೃಶ್ಯಗಳು ಸಹ ಮುಖ್ಯ. ಆಕ್ಷನ್ ಸಿನಿಮಾ ಒಂದು ಒಳ್ಳೆಯ ಸಿನಿಮಾ ಆಗಬೇಕೆಂದರೆ ಒಂದೊಳ್ಳೆ ಚಿತ್ರಕತೆ ಅತ್ಯಂತ ಅವಶ್ಯಕ, ಚಿತ್ರಕತೆ, ಸಂಭಾಷಣೆ ಅತ್ಯಂತ ಮುಖ್ಯ ಆದರೆ 'ದಿ ಗ್ರೇ ಮ್ಯಾನ್' ಸೋತಿರುವುದು ಇಲ್ಲೆ. ಇಲ್ಲಿ ಆಕ್ಷನ್‌ ದೃಶ್ಯಗಳಿಗಷ್ಟೆ ಪ್ರಾಮುಖ್ಯತೆ ಇದೆ. ಪಾತ್ರಗಳ ವ್ಯಕ್ತಿತ್ವ, ಸಂಭಾಷಣೆ, ಚಿತ್ರಕತೆ ವಿಭಾಗದಲ್ಲಿ 'ದಿ ಗ್ರೇ ಮ್ಯಾನ್' ಸೋತಿದೆ. ಇದಕ್ಕೆ ಅತ್ಯುತ್ತಮ ಉದಾಹರಣೆ ಧನುಶ್ ಪಾತ್ರ.

    ಧನುಶ್‌ ಪಾತ್ರವನ್ನು ಬಳಸಿಕೊಳ್ಳುವಲ್ಲಿ ಎಡವಿರುವ ನಿರ್ದೇಶಕರು

    ಧನುಶ್‌ ಪಾತ್ರವನ್ನು ಬಳಸಿಕೊಳ್ಳುವಲ್ಲಿ ಎಡವಿರುವ ನಿರ್ದೇಶಕರು

    ಧನುಶ್ ಅನ್ನು ಸಿನಿಮಾದಲ್ಲಿ ಮೊದಲು ತೋರಿಸಿದಾಗ ಒಂದು ಜಪಮಾಲೆಯಲ್ಲಿ ಹಿಡಿದು ಕೂತಿರುತ್ತಾರೆ ಧನುಶ್, ಅವರನ್ನು 'ಜೆನ್ ಕಿಲ್ಲರ್' ಎಂದು ಕ್ರಿಸ್ ಇವಾನ್ ಪಾತ್ರ ಪರಿಚಯಿಸುತ್ತದೆ. ಆ ನಂತರ ಲೋನ್ ವೋಲ್ಫ್ ಎನ್ನಲಾಗುತ್ತದೆ. ಏಕೆಂದರೆ ಧನುಶ್ ಇತರರಂತೆ ಗುಂಪಿನಲ್ಲಿ ದಾಳಿ ಮಾಡುವುದಿಲ್ಲ. ಧನುಶ್ ಸಿನಿಮಾದಲ್ಲಿ ಕಿಲ್ಲರ್ ಆದರೆ ಮೌಲ್ಯಗಳಿರುವ, ಆದರ್ಶಗಳನ್ನು ಹೊಂದಿರುವ ಒಳಿತು-ಕೆಡುಕು ಗೊತ್ತಿರುವ ವ್ಯಕ್ತಿ. ಇಂಥಹಾ ಹಲವು ಭಿನ್ನತೆ, ವೈರುಧ್ಯತೆ ಇರುವ ಪಾತ್ರಕ್ಕೆ ಪ್ರಾಮುಖ್ಯತೆ ನೀಡದೆ ಕೇವಲ ಎರಡು ದೃಶ್ಯಗಳಿಗಷ್ಟೆ ಸೀಮಿತ ಮಾಡಿಬಿಟ್ಟಿದ್ದಾರೆ ನಿರ್ದೇಶಕ. ಇದರಲ್ಲೇ ಅರ್ಥವಾಗುತ್ತದೆ ಅವರಿಗೆ ಚಿತ್ರಕತೆಯ ಮೇಲಿರುವ ಹಿಡಿತ ಎಂಥಹುದು ಎಂಬುದು. ಆದರೆ ಧನುಶ್ ತಮಗೆ ಕೊಟ್ಟ ಅವಕಾಶದಲ್ಲಿಯೇ ಗಮನ ಸೆಳೆಯುತ್ತಾರೆ. ಅವರ ಆಕ್ಷನ್ ಅಂತೂ ಸೂಪರ್.

    ಅದ್ಭುತ ಆಕ್ಷನ್ ದೃಶ್ಯಗಳಿಲ್ಲ

    ಅದ್ಭುತ ಆಕ್ಷನ್ ದೃಶ್ಯಗಳಿಲ್ಲ

    'ದಿ ಗ್ರೇ ಮ್ಯಾನ್' ಆಕ್ಷನ್ ಅನ್ನೇ ನಂಬಿಕೊಂಡಿರುವ ಸಿನಿಮಾ, ಅದಾಗ್ಯೂ ದಿ ಬೆಸ್ಟ್ ಆಕ್ಷನ್ ದೃಶ್ಯಗಳನ್ನು ಕಟ್ಟಿಕೊಡಲು ನಿರ್ದೇಶಕ ಎಡವಿದ್ದಾರೆ. 'ಮಿಷನ್ ಇಂಪಾಸಿಬಲ್', 'ಜೇಮ್ಸ್ ಬಾಂಡ್', ಫಾಸ್ಟ್ ಆಂಡ್ ಫ್ಯೂರಿಯಸ್', ರೋಸ್ಸೋ ಅವರೇ ನಿರ್ದೇಶಿಸಿರುವ 'ಅವೇಂಜರ್ಸ್', 'ಕ್ಯಾಪ್ಟನ್ ಅಮೆರಿಕ' ಸಿನಿಮಾಗಳಿಗೆ ಹೋಲಿಸಿದರೆ ಈ ಸಿನಿಮಾ ಆಕ್ಷನ್ ಅದ್ಭುತ ಎನ್ನಲಾಗುವುದಿಲ್ಲ. ಆದರೆ ಮಾರ್ವೆಲ್‌ನವರ ಸೂಪರ್ ಹೀರೋ ಸಿನಿಮಾಗಳನ್ನೇ ನೋಡಿ ಬೇಸರವಾದವರಿಗೆ ಈ ಸಿನಿಮಾ ಖಂಡಿತ ಒಂದು ರಿಲೀಫ್ ಎನ್ನಬಹುದು.

    ತಂತ್ರಜ್ಞರ ಪ್ರತಿಭೆ ಪ್ರದರ್ಶನಕ್ಕೆ ಅವಕಾಶ ನೀಡದ ಚಿತ್ರಕತೆ

    ತಂತ್ರಜ್ಞರ ಪ್ರತಿಭೆ ಪ್ರದರ್ಶನಕ್ಕೆ ಅವಕಾಶ ನೀಡದ ಚಿತ್ರಕತೆ

    'ದಿ ಟಕ್ಸಿಡೊ', 'ಜಿಐ ಜೋ', 'ಫಾಸ್ಟ್ ಆಂಡ್ ಫ್ಯೂರಿಯಸ್' ಸರಣಿಯ ಮೂರು ಸಿನಿಮಾಗಳಿಗೆ ಕ್ಯಾಮೆರಾ ಹಿಡಿದಿರುವ ಸ್ಪಿಫನ್ ಎಫ್ ವಿಂಡಾನ್‌ಗೆ ಈ ಸಿನಿಮಾ ಸವಾಲು ಎನಿಸಿಯೇ ಇಲ್ಲ. ಹಲವು ಗ್ಲೋಬಲ್ ಹಿಟ್ ಸಿನಿಮಾಗಳಿಗೆ ಸಂಗೀತ ನೀಡಿರುವ ಹೆನ್ರಿ ಜಾಕ್‌ಮನ್ ಈ ಸಿನಿಮಾಕ್ಕೆ ಸಂಗೀತ ನೀಡಿದ್ದಾರೆ. ತಂತ್ರಜ್ಞರಿಗೆ ತಮ್ಮ ಪ್ರತಿಭೆ ಪ್ರದರ್ಶಿಸಲು ಸೂಕ್ತ ಅವಕಾಶವನ್ನೇ ಚಿತ್ರಕತೆ ನೀಡಿಲ್ಲ ಎನ್ನಬಹುದು. ಹಾಗಾಗಿ ದೊಡ್ಡ ತಂತ್ರಜ್ಞರಿದ್ದರೂ ಅವರ ಕೆಲಸ ಪ್ರೇಕ್ಷಕನ ಸ್ಮೃತಿ ಪಟಲದ ಮೇಲೆ ಅಚ್ಚೊತ್ತುವುದಿಲ್ಲ.

    ಹೆಚ್ಚು ಗಮನ ಸೆಳೆಯುವುದು ಕ್ರಿಸ್ ಇವಾನ್ಸ್

    ಹೆಚ್ಚು ಗಮನ ಸೆಳೆಯುವುದು ಕ್ರಿಸ್ ಇವಾನ್ಸ್

    ಇನ್ನು ನಟನೆ ವಿಷಯಕ್ಕೆ ಬಂದರೆ ರ್ಯಾನ್ ಗೊಸ್ಲಿಂಗ್ ಸಿನಿಮಾದ ನಾಯಕನಾದರೂ ಹೆಚ್ಚು ಗಮನ ಸೆಳೆಯುವುದು ವಿಲನ್ ಪಾತ್ರಧಾರಿ ಕ್ರಿಸ್ ಇವಾನ್ಸ್. ರ್ಯಾನ್ ಗೊಸ್ಲಿಂಗ್ ನಟನೆ ಸಹ ಚೆನ್ನಾಗಿಯೇ ಇದೆ. ಇವರೆಡರ ಹೊರತಾಗಿ ಇನ್ನಾವ ಪಾತ್ರಕ್ಕೂ ಹೆಚ್ಚಿನ ಪ್ರಾಮುಖ್ಯತೆಯೇ ಇಲ್ಲ. ಆದರೆ ನಟ ಧನುಶ್ ತಮಗೆ ಧಕ್ಕಿದ ಅತ್ಯಲ್ಪ ಅವಕಾಶದಲ್ಲಿಯೇ ಗಮನ ಸೆಳೆಯುತ್ತಾರೆ. ನಟನೆ ಹಾಗೂ ಆಕ್ಷನ್ ದೃಶ್ಯಗಳಲ್ಲಿ ಅವರು ಪರ್ಫೆಕ್ಟ್. ಒಟ್ಟಾರೆಯಾಗಿ ಹೇಳುವುದಾದರೆ ಸಿನಿಮಾವನ್ನು ಒಮ್ಮೆ ನೋಡಬಹುದಾದರೂ ನೋಡಿದ ಮೇಲೆ ನೆನಪಿನಲ್ಲಿ ಉಳಿಯುವ ಯಾವ ಅಂಶವೂ ಸಿನಿಮಾದಲ್ಲಿಲ್ಲ.

    English summary
    Dhanush, Chris Evans, Ryan Gosling Starrer The Gray Man Movie Review In Kannada. Russo brothers directed this movie.
    Monday, July 25, 2022, 10:21
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X