For Quick Alerts
  ALLOW NOTIFICATIONS  
  For Daily Alerts

  Pogaru Kannada Movie Review: ಹೊಡೆದಾಟದ ಅಬ್ಬರದಲ್ಲಿ ಪೇಲವವಾದ ಕತೆ

  |

  ಮಲತಂದೆ-ತಾಯಿ ಜೊತೆಗಿನ ಮಕ್ಕಳ ಸಂಬಂಧ ಬಹಳ ಸಂಕೀರ್ಣವಾದ, ಚರ್ಚಿಸಬೇಕಾದ ವಿಷಯ. ಇಂಥಹುದೇ ವಿಷಯವನ್ನು ಆಯ್ದುಕೊಂಡಿರುವ 'ಪೊಗರು' ನಿರ್ದೇಶಕ, ನಾಯಕನ ವೈಭವೀಕರಣದ ಹಿಂದೆ ಬಿದ್ದು ಒಂದೊಳ್ಳೆ ಭಾವನಾತ್ಮಕ ಸಿನಿಮಾ ಆಗಿಸಬಹುದಾಗಿದ್ದ ಅವಕಾಶವನ್ನು ಕೈಚೆಲ್ಲಿದ್ದಾರೆ. ಆದರೆ ಧ್ರುವ ಸರ್ಜಾ ಅಭಿಮಾನಿಗಳ ಮನಗೆಲ್ಲಲು ಯಶಸ್ವಿಯಾಗಿದ್ದಾರೆ.

  ಧ್ರುವ ಸರ್ಜಾ ನಟನೆಯ 'ಪೊಗರು' ಸಿನಿಮಾ, ಮಲತಂದೆಯ ಮೇಲೆ ದ್ವೇಷ ಬೆಳೆಸಿಕೊಂಡ, ಸ್ವಂತ ತಾಯಿಯನ್ನು ಪಡೆಯಲು ಹಠಕ್ಕೆ ಬಿದ್ದ ಬಹು ಒರಟು ಯುವಕ ಶಿವನ ಕತೆ.

  ಕರುಣೆ ಇಲ್ಲದ, ಹಣವೇ ಎಲ್ಲಾ ಎಂದುಕೊಂಡಿರುವ, ದಬ್ಬಾಳಿಕೆ ಮಾಡಿಯೇ ಗೌರವ ಪಡೆಯಬೇಕು ಎಂಬುದನ್ನು ನಂಬಿದ ಯುವಕನಲ್ಲಿ ಮಾನವೀಯತೆ ಹುಟ್ಟುವ, ಪ್ರೀತಿ-ಪ್ರೇಮಗಳನ್ನು ಅರ್ಥಪಡಿಸುವ ಕೆಲವು ಸನ್ನಿವೇಶಗಳು ಸೃಷ್ಟಿಯಾಗುತ್ತವೆ. 'ವಿಲನ್' ಆಗಿದ್ದ ಯುವಕ 'ನಾಯಕ'ನಾಗಿ ಬದಲಾಗುತ್ತಾನೆ. ಈ ಬದಲಾವಣೆಗೆ ಕಾರಣಗಳೇನು, ನಾಯಕನಾಗಿ ಹೇಗೆ ಸಿಡಿದೆದ್ದು ನಿಲ್ಲುತ್ತಾನೆ ಎಂಬುದನ್ನು ತಿಳಿಯಲು ಸಿನಿಮಾ ನೋಡಬೇಕು.

  Rating:
  3.0/5

  ಅಭಿಮಾನಿಗಳಿಗೆ ಪ್ಯಾಕೆಜ್ ನೀಡಿರುವ ನಂದ ಕಿಶೋರ್

  ಅಭಿಮಾನಿಗಳಿಗೆ ಪ್ಯಾಕೆಜ್ ನೀಡಿರುವ ನಂದ ಕಿಶೋರ್

  'ಪೊಗರು' ಸಿನಿಮಾದಲ್ಲಿ ಧ್ರುವ ಸರ್ಜಾ ಅಭಿಮಾನಿಗಳಿಗೆ ಬೇಕಾದ ಹಲವು ವಿಷಯಗಳಿವೆ. ಭರ್ಜರಿ ಫೈಟ್, ಚುರುಕಾದ ಸಂಭಾಷಣೆಗಳು, ಧ್ರುವ ಸರ್ಜಾರ ಟ್ರೇಡ್ ಮಾರ್ಕ್ ಎನಿಸಿಕೊಂಡಿರುವ ಉದ್ದುದ್ದ ಭಾಷಣ ಮಾದರಿಯ ಸಂಭಾಷಣೆ, ಹಾಸ್ಯ, ಹಾಡುಗಳು, ಸೆಂಟಿಮೆಂಟ್. ಈ ಸಿನಿಮಾ ಧ್ರುವ ಸರ್ಜಾ ಅಭಿಮಾನಿಗಳಿಗೆ ಒಳ್ಳೆಯ 'ಪ್ಯಾಕೇಜ್' ಆದರೆ ಒಟ್ಟಾರೆ ಸಿನಿಮಾ ಆಗಿ ಕೆಲವೊಂದು ಕೊರತೆಗಳು ಎದ್ದು ಕಾಣುತ್ತವೆ.

  ಪಾತ್ರಗಳ ವರ್ತನೆಯಲ್ಲಿ ಬದಲಾವಣೆಗೆ ಶಕ್ತ ಕಾರಣಗಳಿಲ್ಲ

  ಪಾತ್ರಗಳ ವರ್ತನೆಯಲ್ಲಿ ಬದಲಾವಣೆಗೆ ಶಕ್ತ ಕಾರಣಗಳಿಲ್ಲ

  ಸಿನಿಮಾ ಕ್ಲೈಮ್ಯಾಕ್ಸ್ ಹಂತಕ್ಕೆ ಬರುವ ವೇಳೆಗೆ ನಿರ್ದೇಶಕರಿಗೆ ಆತುರ ಹೆಚ್ಚಾದಂತಿದೆ. ಕ್ಲೈಮ್ಯಾಕ್ಸ್‌ನಲ್ಲಿ ಪಾತ್ರಗಳ ವರ್ತನೆಯಲ್ಲಿ ಚಕ-ಚಕನೆ ಬದಲಾವಣೆಗಳಾಗುತ್ತವೆ. ಹಿಂದಿನ ದೃಶ್ಯದಲ್ಲಿ ಕೊಲ್ಲುತ್ತೇನೆ ಎಂದಿದ್ದ ತಾಯಿ ಹಠಾತ್ತನೆ ಮಗನ ಮೇಲೆ ಪ್ರೀತಿ ಉಕ್ಕಿ ಹರಿಸುತ್ತಾಳೆ. ಜೀವನ ಪರ್ಯಂತ ದ್ವೇಷಿಸುತ್ತಿದ್ದ ಅಪ್ಪನನ್ನು ಶಿವ ಅಪ್ಪಿಕೊಳ್ಳುತ್ತಾನೆ. ಸಿನಿಮಾಕ್ಕೆ ಭಾವುಕ ಅಂತ್ಯ ನೀಡಲೇಬೇಕೆಂಬ ಹಂಬಲದಲ್ಲಿ ನಿರ್ದೇಶಕರು ಪಾತ್ರಗಳೊಂದಿಗೆ ಆಟವಾಡಿದ್ದಾರೆ. ಪಾತ್ರಗಳ ವರ್ತನೆ ಬದಲಾಗಲು ಶಕ್ತ ಕಾರಣವನ್ನು ನಿರ್ದೇಶಕರು ನೀಡುವುದಿಲ್ಲ. ನೀಡಿರುವ ಕಾರಣಗಳು ಪೇಲವವಾಗಿವೆ. ಹೆಣ ಇಟ್ಟುಕೊಂಡು ಸಾಲ ವಸೂಲಿ ಮಾಡುವ, ಅಪ್ಪನನ್ನು ಹೊಡೆಯುವ ವ್ಯಕ್ತಿ, ಒಂದು ಹನಿ ಕಣ್ಣೀರಿಗೆ ಬದಲಾಗುವುದು ಬುದ್ಧಿವಂತ ಪ್ರೇಕ್ಷಕನಿಗೆ 'ಕನ್ವಿನ್ಸ್' ಆಗುವುದು ಕಷ್ಟ.

  ಯಾರು ಹೇಗೆ ನಟಿಸಿದ್ದಾರೆ

  ಯಾರು ಹೇಗೆ ನಟಿಸಿದ್ದಾರೆ

  ನಟನೆಯ ವಿಷಯಕ್ಕೆ ಬಂದರೆ, ಧ್ರುವ ಸರ್ಜಾ ಎಂದಿನಂತೆ ಫ್ರೆಶ್ ಆಗಿ ನಟಿಸಿದ್ದಾರೆ, ಭಾವನಾತ್ಮಕ ದೃಶ್ಯಗಳಿಗಿಂತಲೂ ಹಾಸ್ಯ, ದರ್ಪ ಪ್ರದರ್ಶಿಸುವ ಸನ್ನಿವೇಶಗಳಲ್ಲಿ ಅವರ ನಟನೆ ಚೆನ್ನಾಗಿದೆ. ನಾಯಕಿ ರಶ್ಮಿಕಾಗೆ ಸಿನಿಮಾದಲ್ಲಿ ಹೆಚ್ಚಿನ ಪ್ರಾಮುಖ್ಯತೆ ಇಲ್ಲ. ಹಾಗಾಗಿ ಅವರು ಪಾತ್ರದ ತೂಕದಷ್ಟೇ ಅಭಿನಯಿಸಿದ್ದಾರೆ. ಪವಿತ್ರಾ ಲೋಕೇಶ್ ಹಾಗೂ ರವಿಶಂಕರ್ ಇಬ್ಬರೂ ಗಮನ ಸೆಳೆಯುತ್ತಾರೆ. ರಾಘವೇಂದ್ರ ರಾಜ್‌ಕುಮಾರ್, ಡಾಲಿ ಧನಂಜಯ್ ಹಾಗೂ ನಟಿ ಮಯೂರಿ ತಮ್ಮ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ. ಚಿಕ್ಕಣ್ಣ, ಕುರಿ ಪ್ರತಾಪ್ ಮತ್ತು ಇತ್ತೀಚೆಗೆ ನಿಧನರಾದ ಬುಲೆಟ್ ಪ್ರಕಾಶ್ ಕಾಮಿಡಿ ತುಸು ರಿಲೀಫ್ ನೀಡುತ್ತದೆ.

  ಫೈಟ್ ದೃಶ್ಯಗಳಲ್ಲಿ ಮಿಂಚಿರುವ ಧ್ರುವ ಸರ್ಜಾ

  ಫೈಟ್ ದೃಶ್ಯಗಳಲ್ಲಿ ಮಿಂಚಿರುವ ಧ್ರುವ ಸರ್ಜಾ

  ಹಾಡುಗಳ ಬಗ್ಗೆ ವಿಶೇಷವಾಗಿ ಹೇಳುವುದೇನಿಲ್ಲ, ಅವು ಈಗಾಗಲೇ ಹಿಟ್ ಆಗಿವೆ. ಫೈಟ್ ದೃಶ್ಯಗಳ ಹಿನ್ನೆಲೆ ಸಂಗೀತ ಫೈಟ್ ದೃಶ್ಯಗಳಿಗೆ ಇನ್ನಷ್ಟು ಎನರ್ಜಿ ಒದಗಿಸಿದೆ. ಫೈಟ್ ದೃಶ್ಯಗಳಲ್ಲಿ ಧ್ರುವ ಸರ್ಜಾ ಮಿಂಚಿದ್ದಾರೆ. ಕ್ಲೈಮ್ಯಾಕ್ಸ್ ದೃಶ್ಯದಲ್ಲಿ ಬರುವ ವಿದೇಶಿ ದಾಂಡಿಗರ ಜೊತೆಗಿನ ಫೈಟ್ ಚೆನ್ನಾಗಿದೆ. ಧ್ರುವ ಸರ್ಜಾರ ಅದ್ಧೂರಿ ದೇಹದಾರ್ಡ್ಯ ಪರದೆ ಮೇಲೆ ಅದ್ಭುತವಾಗಿ ಕಾಣುತ್ತದೆ. ಇದೇ ಸಿನಿಮಾದಲ್ಲಿ 17 ರ ಯುವಕನ ಪಾತ್ರ ನಿರ್ವಹಿಸಲು ಸಣ್ಣಗಾಗಿರುವ ಧ್ರುವ ಸರ್ಜಾರ ಶ್ರಮವನ್ನು ಮೆಚ್ಚಲೇ ಬೇಕು.

  ನಾಲ್ಕು ವರ್ಷಗಳಿಂದ ಭಾರಿ ನಿರೀಕ್ಷೆ ಹುಟ್ಟಿಸಿದ್ದ ಸಿನಿಮಾ

  ನಾಲ್ಕು ವರ್ಷಗಳಿಂದ ಭಾರಿ ನಿರೀಕ್ಷೆ ಹುಟ್ಟಿಸಿದ್ದ ಸಿನಿಮಾ

  ಒಟ್ಟಾರೆಯಾಗಿ ಹೇಳುವುದಾದರೆ 'ಪೊಗರು' ಚಿತ್ರತಂಡ ನಾಲ್ಕು ವರ್ಷದಿಂದ ಹುಟ್ಟಿಸಿದ್ದ ನಿರೀಕ್ಷೆಗಳನ್ನು ಉಳಿಸಿಕೊಳ್ಳುವಲ್ಲಿ ವಿಫಲವಾಗಿದೆ. ಆಕ್ಷನ್, ಕೌಟುಂಬಿಕ ಸೆಂಟಿಮೆಂಟ್, ಪ್ರೀತಿ, ಹಾಸ್ಯ ಹೀಗೆ ನಾಲ್ಕು ಭಾವಗಳನ್ನು ಮಿಕ್ಸ್ ಮಾಡಲು ಹೋಗಿ ಯಾವೊಂದಕ್ಕೂ ಪೂರ್ಣ ನ್ಯಾಯ ಒದಗಿಸಿಲ್ಲ. ಆದರೆ ಧ್ರುವ ಸರ್ಜಾರ ಮಾಸ್ ಅಭಿಮಾನಿಗಳಿಗೆ ಇಷ್ಟವಾಗುವಂತೆ ಸಿನಿಮಾವನ್ನು ಪ್ರೆಸೆಂಟ್ ಮಾಡಿರುವುದು ಕೆಲವರಿಗಾದರೂ ಹಿಡಿಸಬಹುದಾಗಿದೆ.

  English summary
  Dhruva Sarja, Rashmika Mandanna's Pogaru Kannada movie review in Kannada.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X