»   » ವಿಮರ್ಶೆ: 'ಬಹದ್ದೂರ್' ಹುಡುಗನ 'ಭರ್ಜರಿ' ಪ್ರೇಮ ಕಥೆ

ವಿಮರ್ಶೆ: 'ಬಹದ್ದೂರ್' ಹುಡುಗನ 'ಭರ್ಜರಿ' ಪ್ರೇಮ ಕಥೆ

Posted By:
Subscribe to Filmibeat Kannada

ಡೈಲಾಗ್ 1 - ''ಕೋಳಿ ಕೂಗಿದ್ರೆ ಬೆಳಗಾಯಿತು ಅಂತ... ಪಲ್ಲಿ ನುಡಿದ್ರೆ ಶುಭ ಶಕುನ ಅಂತ... ಈ ಸೂರ್ಯ ಮೈ ಮುರಿತಾಯಿದಾನಂದ್ರೆ, ಎದುರುಗಡೆ ನಿಂತ್ಕೊಂಡಿರೋನ ನಸೀಬು ಖರಾಬ್ ಆಗಿದೆ ಅಂತಾನೇ ಲೆಕ್ಕ''


ಡೈಲಾಗ್ 2 - ''ಚಿರತೆ ಬಂದ್ರೆ ವೇಗ ಇರುತ್ತೆ... ಹುಲಿ ಬಂದ್ರೆ ಗಾಂಭೀರ್ಯ ಇರುತ್ತೆ... ಸಿಂಹ ಬಂದ್ರೆ ಘರ್ಜನೆ ಇರುತ್ತೆ... ಈ ಸೂರ್ಯ ಬಂದ್ರೆ ಮೂರು ಇರುತ್ತೆ''

ಡೈಲಾಗ್ 3 - ''ತುಂಬಾ ಜನ ಹೊಡುದ್ರೆ ಮಾಸ್ ಆಗಿರುತ್ತೆ... ಸ್ವಲ್ಪ ಜನ ಹೊಡುದ್ರೆ ಕ್ಲಾಸ್ ಆಗಿರುತ್ತೆ... ಕೆಲವರು ಹೊಡುದ್ರೆ ಸಪ್ಪೆ ಆಗಿರುತ್ತೆ... ಇನ್ನೂ ಕೆಲವರು ಹೊಡುದ್ರೆ ಕಾಮಿಡಿ ಆಗಿರುತ್ತೆ... ನಾ ಹೊಡುದ್ರೆ ಯಾವತ್ತೂ ಭರ್ಜರಿಯಾಗಿರುತ್ತೆ''


ಇವು ಬರೀ ಸ್ಯಾಂಪಲ್ ಅಷ್ಟೇ. ಇಂತಹ 'ಭರ್ಜರಿ' ಡೈಲಾಗ್ ಗಳು ಚಿತ್ರದುದ್ದಕ್ಕೂ ಇವೆ. ಇವುಗಳ ಜೊತೆ ಧ್ರುವ ಸರ್ಜಾ 'ಭರ್ಜರಿ' ಪರ್ಫಾಮೆನ್ಸ್ ನಿಂದ 'ಭರ್ಜರಿ' ಸಿನಿಮಾ 'ಭರ್ಜರಿ'ಯಾಗಿ ಮೂಡಿಬಂದಿದೆ.


Rating:
3.5/5

ಚಿತ್ರ: ಭರ್ಜರಿ
ನಿರ್ಮಾಣ: ಆರ್.ಎಸ್.ಪ್ರೊಡಕ್ಷನ್ಸ್
ನಿರ್ದೇಶನ: ಚೇತನ್ ಕುಮಾರ್
ಸಂಗೀತ: ವಿ.ಹರಿಕೃಷ್ಣ
ಛಾಯಾಗ್ರಹಣ: ಶ್ರೀಷಾ ಕುಡುವಲ್ಲಿ
ತಾರಾಗಣ: ಧ್ರುವ ಸರ್ಜಾ, ರಚಿತಾ ರಾಮ್, ಹರಿಪ್ರಿಯಾ, ವೈಶಾಲಿ ದೀಪಕ್, ತಾರಾ, ಸುಧಾರಾಣಿ, ಶ್ರೀನಿವಾಸ್ ಮೂರ್ತಿ, ಸಾಯಿ ಕುಮಾರ್, ಅವಿನಾಶ್, ಅನಿಲ್, ಉದಯ್, ಸಾಧು ಕೋಕಿಲ ಮತ್ತಿತರರು.
ಬಿಡುಗಡೆ: ಸೆಪ್ಟೆಂಬರ್ 15, 2017


'ಭರ್ಜರಿ' ಹುಡುಗನ ಸುತ್ತ....

ಹೆಸರು ಸೂರ್ಯ (ಧ್ರುವ ಸರ್ಜಾ)... 'ಭರ್ಜರಿ' ಹುಡುಗ... ಲೋಕಲ್ ನಾಯಕ... ಸೈನಿಕ ಆಗಬೇಕು ಅಂತ ಚಿಕ್ಕವಯಸ್ಸಿನಲ್ಲಿ ಕನಸು ಕಂಡು, ಕೈಮೇಲೆ 'SOLDIER' ಅಂತ ಹಚ್ಚೆ ಹಾಕಿಸಿಕೊಳ್ಳುವ ಸೂರ್ಯನಿಗೆ ಬೆಳೆದು ನಿಂತ್ಮೇಲೆ 'ತಂದೆ'ಯಾಗಬೇಕೆನ್ನುವ ಆಸೆ. ಪ್ರೀತಿಸಿ ಮದುವೆ ಆಗ್ಬೇಕೆನ್ನುವ ಸೂರ್ಯನಿಗೆ 'ಡಿಂಪಲ್' ಫೋಬಿಯಾ ಬೇರೆ.


ಆಕ್ಷನ್ ಪ್ರಿನ್ಸ್-ಡಿಂಪಲ್ ಕ್ವೀನ್ ಗೆ ಲವ್ ಆಯ್ತು.!

'ಡಿಂಪಲ್' ಹುಡುಗಿಯರ ಹಿಂದೆ ಹೋಗ್ಬಾರ್ದು ಎಂದುಕೊಂಡರೂ, ಸೂರ್ಯನಿಗೆ ಗೌರಿ (ರಚಿತಾ ರಾಮ್) ಮೇಲೆ ಲವ್ ಆಗುತ್ತೆ. ಇದೇ ಗ್ಯಾಪ್ ನಲ್ಲಿ ಎಂಟ್ರಿಕೊಡುವ ಹಾಸಿನಿ (ಹರಿಪ್ರಿಯಾ) ಸೂರ್ಯನ ಜೊತೆ 'ಸಿಂಹದಟ್ಟಿ'ಗೆ ಕಾಲಿಡುತ್ತಾಳೆ. ಈ ಹಾಸಿನಿ ಯಾರು.? ಸೂರ್ಯನಿಗೂ ಹಾಸಿನಿಗೂ ಏನು ಸಂಬಂಧ.? 'ಸಿಂಹದಟ್ಟಿ'ಗೂ ಸೂರ್ಯನಿಗೂ ಇರುವ ಅನುಬಂಧ ಎಂಥದ್ದು ಎಂಬುದು ಮುಂದಿನ ಕಥೆ. ಅದನ್ನ ನಾವು ಬಿಟ್ಟುಕೊಡಲ್ಲ. ಚಿತ್ರಮಂದಿರದಲ್ಲಿಯೇ ವೀಕ್ಷಿಸಿ....


'ಭರ್ಜರಿ' ಹುಡುಗ ಧ್ರುವ ಸರ್ಜಾ

ಸಿನಿಮಾದಲ್ಲಿ ಧ್ರುವ ಸರ್ಜಾ ಪರ್ಫಾಮೆನ್ಸ್ ಭರ್ಜರಿ ಆಗಿದೆ ಅಂದ್ರೆ ಖಂಡಿತ ಅತಿಶಯೋಕ್ತಿ ಅಲ್ಲ. ಡೈಲಾಗ್ ಡೆಲಿವರಿ, ಡ್ಯಾನ್ಸ್, ಫೈಟ್, ಸೆಂಟಿಮೆಂಟ್... ಎಲ್ಲದರಲ್ಲೂ ಧ್ರುವ ಸರ್ಜಾ ಚಿಂದಿ.


'ಬೇಬಿ' ರಚಿತಾ ರಾಮ್

ಸ್ವಲ್ಪ ಕ್ಲಾಸ್, ಸ್ವಲ್ಪ ಮಾಸ್, ಫುಲ್ ಬಿಂದಾಸ್ ಆಗಿರುವ ಗೌರಿ ಪಾತ್ರದಲ್ಲಿ ನಟಿ ರಚಿತಾ ರಾಮ್ ಅಭಿನಯ ಅಚ್ಚುಕಟ್ಟಾಗಿದೆ.


ಗಮನ ಸೆಳೆಯುವ ಹರಿಪ್ರಿಯಾ

ಎರಡು ಕುಟುಂಬಗಳನ್ನು ಒಂದು ಮಾಡಲು ಪಣ ತೊಟ್ಟಿರುವ ಹಾಸಿನಿ ಪಾತ್ರದಲ್ಲಿ ನಟಿ ಹರಿಪ್ರಿಯಾ ಗಮನ ಸೆಳೆಯುತ್ತಾರೆ.


ನೆನಪಲ್ಲಿ ಉಳಿಯುವ ವೈಶಾಲಿ

ಸಣ್ಣ ಪಾತ್ರ ಆದರೂ, ನಟಿ ವೈಶಾಲಿ ದೀಪಕ್ ನೆನಪಲ್ಲಿ ಉಳಿಯುತ್ತಾರೆ. ಅಮ್ಮನಾಗಿ ನಟಿ ತಾರಾ ಇಷ್ಟ ಆಗ್ತಾರೆ. ರಂಗಾಯಣ ರಘು, ಶ್ರೀನಿವಾಸ್ ಮೂರ್ತಿ, ಸುಚೇಂದ್ರ ಪ್ರಸಾದ್, ಸಾಯಿ ಕುಮಾರ್, ಅವಿನಾಶ್ ತಮ್ಮ ತಮ್ಮ ಪಾತ್ರಗಳಿಗೆ ನ್ಯಾಯ ಒದಗಿಸಿದ್ದಾರೆ. ತೆರೆಮೇಲೆ ಇದ್ದಷ್ಟು ಕಾಲ ಸಾಧು ಕೋಕಿಲ ಕಿಸಕ್ ಅಂತ ನಗಿಸುತ್ತಾರೆ.


ಘರ್ಜಿಸುವ ಅನಿಲ್, ಉದಯ್

'ಮಾಸ್ತಿ ಗುಡಿ' ಚಿತ್ರದ ಶೂಟಿಂಗ್ ವೇಳೆ ದುರಂತ ಸಾವಿಗೀಡಾದ ಅನಿಲ್ ಹಾಗೂ ಉದಯ್ 'ಭರ್ಜರಿ' ಚಿತ್ರದಲ್ಲಿ ಅಬ್ಬರಿಸಿದ್ದಾರೆ.


ಮಸಾಲೆ ಪ್ಯಾಕೇಜ್.!

ಮಾಸ್ ಆಡಿಯನ್ಸ್ ಗೆ 'ಭರ್ಜರಿ' ಹೇಳಿ ಮಾಡಿಸಿದ ಸಿನಿಮಾ. ಒಂದು ಸಿನಿಮಾದಲ್ಲಿ ಇರಬೇಕಾದ ಅಷ್ಟೂ ಮಸಾಲೆ 'ಭರ್ಜರಿ' ಚಿತ್ರದಲ್ಲಿದೆ. ಎಂಟರ್ ಟೇನ್ಮೆಂಟ್ ಮಾತ್ರ ಬಯಸುವವರಿಗೆ 'ಭರ್ಜರಿ' ಭರಪೂರ ಮನರಂಜನೆ ನೀಡುತ್ತದೆ.


ಸಿದ್ಧ ಫಾರ್ಮುಲಾ

ಧ್ರುವ ಸರ್ಜಾ ರವರ 'ಅದ್ಧೂರಿ' ಹಾಗೂ 'ಬಹದ್ದೂರ್' ಸಿನಿಮಾ ನೋಡಿರುವವರಿಗೆ 'ಭರ್ಜರಿ' ಚಿತ್ರಕಥೆಯಲ್ಲಿ ಹೊಸತನ ಕಾಣಿಸುವುದಿಲ್ಲ. ಒಂದು ಲವ್ ಸ್ಟೋರಿ, ಒಂದು ಫ್ಲ್ಯಾಶ್ ಬ್ಯಾಕ್, ಪೂರ್ವಜರ ಕಥೆಯ ಸಿದ್ಧ ಫಾರ್ಮುಲಾ ಇಲ್ಲಿದೆ. ಆದ್ರೆ, ಚಿತ್ರದ ಮೇಕಿಂಗ್ ಹಾಗೂ ಧ್ರುವ ಸರ್ಜಾ ಪರ್ಫಾಮೆನ್ಸ್ 'ಭರ್ಜರಿ' ಚಿತ್ರವನ್ನ 'ಭರ್ಜರಿ'ಯನ್ನಾಗಿಸಿದೆ.


ಹಳೇ ಹಾಡುಗಳನ್ನು ನೆನಪಿಸುವ ವಿ.ಹರಿಕೃಷ್ಣ ಸಂಗೀತ

ವಿ.ಹರಿಕೃಷ್ಣ ಸಂಗೀತ ಸಂಯೋಜಿಸಿರುವ ಹಾಡುಗಳು 'ಬಹದ್ದೂರ್' ಚಿತ್ರದ ಹಾಡುಗಳನ್ನ ನೆನಪಿಸುತ್ತೆ. ಶೀರ್ಷಿಕೆ ಹಾಡು ಮತ್ತು 'ಪುಟ್ಟಗೌರಿ' ಸಾಂಗ್ ಪಡ್ಡೆ ಹುಡುಗರಿಗೆ ಇಷ್ಟ ಆಗುತ್ತೆ.


ಫೈನಲ್ ಸ್ಟೇಟ್ ಮೆಂಟ್

ಡಬಲ್ ಮೀನಿಂಗ್ ಡೈಲಾಗ್ಸ್ ಇಲ್ಲದ, ಐಟಂ ಸಾಂಗ್ಸ್ ತುರುಕದ, ಅಸಭ್ಯ ಸನ್ನಿವೇಶಗಳು ಇಲ್ಲದ 'ಭರ್ಜರಿ' ಕಂಪ್ಲೀಟ್ ಎಂಟರ್ ಟೇನರ್. ಧ್ರುವ ಸರ್ಜಾ ಅಭಿಮಾನಿಗಳಿಗೆ 'ಭರ್ಜರಿ' ಮನರಂಜನೆ ನೀಡುವ ಈ ಚಿತ್ರವನ್ನ ಆರಾಮಾಗಿ ಇಡೀ ಫ್ಯಾಮಿಲಿ ಕೂತು ನೋಡಬಹುದು.


English summary
Read Dhruva Sarja starrer Kannada Movie 'Bharjari' review

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada