Powder Movie Review: ಘಮ ಘಮ 'ಪೌಡರ್'ನಲ್ಲಿ ಲಾಜಿಕ್ ಪಕ್ಕಕ್ಕಿಡಿ.. ಕಾಮಿಡಿ ಎಂಜಾಯ್ ಮಾಡಿ
ಎರಡು ಬ್ಯಾಕ್ ಟು ಬ್ಯಾಕ್ ಸಿನಿಮಾಗಳನ್ನು ಕೊಟ್ಟು ಚೇತರಿಸಿಕೊಳ್ಳುತ್ತಿರುವ ಕನ್ನಡ ಚಿತ್ರರಂಗದಲ್ಲಿ ಮತ್ತೊಂದು ಸಿನಿಮಾ ಅದೃಷ್ಟ ಪರೀಕ್ಷೆಗೆ ಇಳಿದಿದೆ. ಅದುವೇ 'ಪೌಡರ್'. ಸುಮಾರು 6 ವರ್ಷಗಳ ಹಿಂದೆ 'ಗುಲ್ಟು' ಸಿನಿಮಾ ನಿರ್ದೇಶಿಸಿದ್ದ ಜನಾರ್ಧನ್ ಚಿಕ್ಕಣ್ಣ ಈ ಸಿನಿಮಾಗೆ ಆಕ್ಷನ್ ಕಟ್ ಹೇಳಿದ್ದಾರೆ.
ದಿಗಂತ್, ಧನ್ಯಾ ರಾಮ್‌ಕುಮಾರ್, ಶರ್ಮಿಳಾ ಮಾಂಡ್ರೆ, ರಂಗಾಯಣ ರಘು, ಗೋಪಾಲ್ ದೇಶಪಾಂಡೆ ಈ ಸಿನಿಮಾದ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಕೆಆರ್‌ಜಿ ಸ್ಟುಡಿಯೋ ನಿರ್ಮಿಸಿರುವ ಈ ಸಿನಿಮಾ ರೆಗ್ಯುಲರ್ ಕನ್ನಡ ಸಿನಿಮಾ ಅನ್ನೋದಕ್ಕಿಂತ ಯುವಕರನ್ನು ದೃಷ್ಟಿಯಲ್ಲಿ ಇಟ್ಟುಕೊಂಡೇ ಸಿನಿಮಾ ಮಾಡಿದ್ದಾರೆ ಅನ್ನೋದು ವಿಶೇಷ. ಹಾಗಿದ್ದರೆ, ಸಿನಿಮಾ ಹೇಗಿದೆ? ಎಷ್ಟು ಮಾರ್ಕ್ಸ್ ಕೊಡಬಹುದು?

ಪೌಡರ್ ಕಥೆ ಏನು?
ನವರಸ ನಾಯಕ ಜಗ್ಗೇಶ್ ಪಾತ್ರ ಪರಿಚಯ ಮಾಡಿಕೊಡುವುದರಿಂದ 'ಪೌಡರ್' ಸಿನಿಮಾದ ಕಥೆ ಆರಂಭ ಆಗುತ್ತೆ. ದಿಗಂತ್ (ಸೂರ್ಯ) ಸೂಪರ್ ಮಾರ್ಕೆಟ್‌ನಲ್ಲಿ ಮಾಡುವ ಹುಡುಗ. ಧನ್ಯಾ ರಾಮ್‌ಕುಮಾರ್ (ನಿತ್ಯಾ) ಇಲ್ಲಿ ನರ್ಸ್. ಇಬ್ಬರ ನಡುವೆ ಪ್ರೀತಿ ಮುರಿದು ಬಿದ್ದಿರುತ್ತೆ. ಮತ್ತೆ ಅದು ಕೂಡಿಕೊಂಡಿರುತ್ತೆ. ಈ ಬದುಕು ಸಾಕಾಗಿದೆ. ಜೀವನದಲ್ಲಿ ಹೇಗಾದರೂ ಮಾಡಿ ದುಡ್ಡು ಮಾಡಬೇಕು ಅಂತ ದಿಗಂತ್, ಧನ್ಯಾ ಹಾಗೂ ಗೆಳೆಯ ಅನಿರುದ್ಧ್ ನಿರ್ಧಾರ ಮಾಡುತ್ತಾರೆ. ಇಂತಹ ಆಲೋಚನೆಯಲ್ಲಿದ್ದ ಮೂವರಿಗೆ 'ಪೌಡರ್' (ಡ್ರಗ್ಸ್) ಸಿಗುತ್ತೆ. ಇಲ್ಲಿಂದ ಮುಂದೇನಾಗುತ್ತೆ ಅನ್ನೋದೇ ಕಥೆ.
ಯಾರ ಪಾತ್ರ ಹೇಗಿದೆ?
'ಪೌಡರ್' ಸಿನಿಮಾದಲ್ಲಿ ದಿಗಂತ್‌ಗೆ ಸೂಪರ್ ಮಾರ್ಕೆಟ್‌ನಲ್ಲಿ ಕೆಲಸ. ನರ್ಸ್ ಪಾತ್ರದಲ್ಲಿ ಧನ್ಯಾ ರಾಮ್‌ಕುಮಾರ್ ಇದ್ದಾರೆ. ಶರ್ಮಿಳಾ ಮಾಂಡ್ರೆ ಮೇಕಪ್ ಆರ್ಟಿಸ್ಟ್ ಇವರು ಮೇಕಪ್ ಮಲ್ಲಿಕಾ ಅಂತ ಫೇಮಸ್. ಹಾಗೇ ರಂಗಾಯಣ ರಘು ಹಾಗೂ ಗೋಪಾಲ್ ದೇಶಪಾಂಡೆ ಇಬ್ಬರೂ ಡ್ರಗ್ ಡೀಲರ್‌ಗಳಾಗಿ ಕಾಣಿಸಿಕೊಂಡಿದ್ದಾರೆ. ನಾಗಭೂಷಣ್ ಈ ಸಿನಿಮಾಗೆ ಪ್ರಮುಖ ಹಂತದಲ್ಲಿ ಟ್ವಿಸ್ಟ್ ಕೊಡುತ್ತಾರೆ. ಹಾಸ್ಯ ಪಾತ್ರದಲ್ಲಿ ರವಿಶಂಕರ್ ನಟಿಸಿದ್ದಾರೆ.

'ಪೌಡರ್' ಪ್ಲಸ್ ಪಾಯಿಂಟ್ಸ್
ಈ ಸಿನಿಮಾದಲ್ಲಿ ಬರುವ ಎಲ್ಲಾ ಕಲಾವಿದರ ನಟನೆಯೂ ಇಷ್ಟ ಆಗುತ್ತೆ. ತಮಗೆ ಕೊಟ್ಟಿರುವ ಪಾತ್ರದ ಮೂಲಕ ಎಲ್ಲರೂ ಗಮನ ಸೆಳೆಯುತ್ತಾರೆ. ಸಿನಿಮಾದಲ್ಲಿ ಲಾಜಿಕ್‌ಗಿಂತ ಹೆಚ್ಚಾಗಿ ಪ್ರೇಕ್ಷಕರನ್ನು ನಗಿಸಬೇಕು ಅಂತ ಹೆಚ್ಚು ಶ್ರಮ ಹಾಕಿದಂತೆ ಇದೆ. 'ಗುಲ್ಟು' ಅಂತಹ ಸಿನಿಮಾ ಮಾಡಿದ್ದ ನಿರ್ದೇಶಕರು ಇಲ್ಲಿ ಮನರಂಜನೆಯ ಕಡೆಗೆ ಹೆಚ್ಚು ಒತ್ತು ಕೊಟ್ಟಿದ್ದಾರೆ. ಡಾ.ಬ್ರೋ ಸ್ಟೈಲ್‌ನಲ್ಲಿ ನಾಗಭೂಷಣ್ ಎಂಟ್ರಿ ಕಿಕ್ ಕೊಡುತ್ತೆ. ಫಸ್ಟ್ ಹಾಫ್ ಬೇಗನೇ ಮುಗಿದು ಹೋಗುತ್ತೆ. ಸೆಕೆಂಡ್ ಹಾಫ್ ಗೊಂದಲ ಸೃಷ್ಟಿಸುತ್ತೆ. ಈ ಸಿನಿಮಾದಲ್ಲಿ ಬಳಸಿರುವ ವಿಎಫ್ ಎಕ್ಸ್ ಗಮನ ಸೆಳೆಯುತ್ತೆ.
'ಪೌಡರ್' ನೆಗೆಟಿವ್ ಪಾಯಿಂಟ್ಸ್
ಜನಾರ್ಧನ್ ಚಿಕ್ಕಣ್ಣ ನಿರ್ದೇಶನದ 'ಪೌಡರ್' ಸಿನಿಮಾದ ಸೆಕೆಂಡ್ ಹಾಫ್ ನೆಗೆಟಿವ್ ಅಂಶಗಳಲ್ಲೊಂದು. ಇಲ್ಲಿ ಜನರನ್ನು ಸಿನಿಮಾ ಎಂಗೇಜಿಂಗ್ ಆಗಿ ಇಡುವುದಿಲ್ಲ. ಮಧ್ಯದಲ್ಲಿ ಬರುವ ಒಂದಿಷ್ಟು ಕಾಮಿಡಿ ಹಾಗೂ ಪಂಚಿಂಗ್ ಡೈಲಾಗ್‌ಗಳು ಕಿಕ್ ಕೊಡುತ್ತವೆ. ಅದು ಬಿಟ್ಟರೆ, ಹೆಚ್ಚು ಮಜಾ ಕೊಡುವುದಿಲ್ಲ. ಈ ಸಿನಿಮಾದಲ್ಲಿ ನೆನಪಿನಲ್ಲಿ ಉಳಿಯುವಂತಹ ಮ್ಯೂಸಿಕ್ ಇಲ್ಲ. ಈ ಕಾರಣಕ್ಕೆ ಜನರಿಗೆ ಮಧ್ಯೆ ರಿಲ್ಯಾಕ್ಸ್ ಸಿಗುವುದಿಲ್ಲ.
ಕ್ಲೈಮ್ಯಾಕ್ಸ್ ಏನು?
'ಪೌಡರ್' ಸಿನಿಮಾ ಯುವ ಸಮುದಾಯವನ್ನು ಗಮನದಲ್ಲಿಟ್ಟುಕೊಂಡೇ ಮಾಡಿದಂತೆ ಇದೆ. ಚಿತ್ರಕಥೆ ಇನ್ನೂ ಸ್ಪಲ್ಪ ಎಂಗೇಜಿಂಗ್ ಆಗಿದ್ದರೆ, ಜನರು ಥಿಯೇಟರ್‌ಗೆ ಮುಗಿಬಿದ್ದು ಸಿನಿಮಾ ನೋಡುತ್ತಿದ್ದರು ಅಂತ ಅನಿಸುತ್ತೆ. ಆದರೆ, ಸಿನಿಮಾದ ಕ್ಲೈಮ್ಯಾಕ್ಸ್ ಚೆನ್ನಾಗಿದೆ. ಸಿನಿಮಾದ ಕೊನೆಯಲ್ಲಿ ಜಗ್ಗೇಶ್ ಕೊಡುವ ಟ್ವಿಸ್ಟ್ ಸಿನಿ ಪ್ರಿಯರಿಗೆ ಇಷ್ಟ ಆಗಬಹುದು.


Click it and Unblock the Notifications











