twitter
    For Quick Alerts
    ALLOW NOTIFICATIONS  
    For Daily Alerts

    ವಿಷ್ಣು ಹುಟ್ಟು ಹಬ್ಬಕ್ಕೆ ಅಂಬರೀಷ್‌ ಫುಲ್‌ ಬಾಟಲ್‌ ಸ್ಕಾಚ್‌ ಕೊಂಡೊಯ್ಯುತ್ತಾರೆ. ಅಂಬರೀಷ್‌ ಮನೆಗೆ ವಿಷ್ಣು ಬರಿಗೈಯ್ಯಲ್ಲಿ ಬರುತ್ತಾರೆ. ಅದೇ ಕಾರಣಕ್ಕೆ ಇವರಿಬ್ಬರನ್ನೂ ರಾಕ್‌ಲೈನ್‌ ಒಂದಾಗಿಸಿದ್ದಾ-ರೆ

    By Staff
    |

    ಚಿತ್ರ: -ದಿಗ್ಗಜರುನಿರ್ದೇಶನ: ಡಿ. ರಾಜೇಂದ್ರಬಾಬು, ಸಂಗೀತ: ಹಂಸಲೇಖತಾರಾಗಣ : ಅಂಬರೀಷ್‌, ವಿಷ್ಣುವರ್ಧನ್‌, ಸಾಂಘವಿ
    *ಸತ್ಯವ್ರತ ಹೊಸಬೆಟ್ಟು

    • ಅಂಬರೀಷ್‌ ಎಷ್ಟು ದಪ್ಪ ಕಾಣ್ತಾರೆ ಅಲ್ವಾ ?
    • ಏನ್‌ ಊದ್ಕೊಂಡಿದ್ದಾನೆ ಅಂತೀ ... ಏನ್‌ ತಿಂತಾನಂತೆ ?
    • ಲೊಡ್ಡೆ.... ಹಾಗೆಲ್ಲಾ ಮಾಡ್ಬಾರದಿತ್ತು ಕಣಯ್ಯಾ ? ಚಪ್ಲಿ ಎತ್ತಿಡೋದು, ಕೈ ಕಟ್ಟಿಕೊಂಡು ನಿಲ್ಲೋದು... ಛೆ..ಛೆ..
    • ಹಂಸಲೇಖ ಏನ್ರೀ... ಹಾಗಾ ಸಂಗೀತ ನೀಡೋದು.. ಒಂದಾದರೂ ಕೇಳೊ ಹಾಡಿದ್ಯಾ ?
    • ಅವಳೊಬ್ಬಳು ಹೀರೋಯಿನ್ನಾ ? ಹಲ್ಲುಬ್ಬಿ !
    ಕಳೆದ ವಾರ ಬಿಡುಗಡೆಯಾದ ದಿಗ್ಗಜರು ಚಿತ್ರ ನೋಡಿದವರ ಪ್ರತಿಕ್ರಿಯೆಗಳಿವು. ಅಂಬರೀಷ್‌ ಅದ್ಭುತವಾಗಿ ನಟಿಸಿದ್ದನ್ನು ಅವರ ದೇಹ ನುಂಗಿ ಹಾಕಿದರೆ, ವಿಷ್ಣುವರ್ಧನ್‌ ಅವರ ಪ್ರಬುದ್ಧ ಅಭಿನಯವನ್ನು ಅವರ ಇಮೇಜು ಕಬಳಿಸಿದೆ. ಮೂಲ ಚಿತ್ರದ ಹೊಳಪನ್ನು ಹಂಸಲೇಖ ಕಳಪೆಯಾಗಿಸಿದರೆ, ನಾಯಕಿ ಸಾಂಘವಿ, ಚಿತ್ರಕ್ಕೆ ದೃಷ್ಟಿ ಬೊಟ್ಟಿನಂತೆ ಕಾಣಿಸುತ್ತಿದ್ದಾಳೆ.

    ರಾಕ್‌ಲೈನ್‌ ಚಿತ್ರದಲ್ಲಿ ಸಾಮಾನ್ಯವಾಗಿ ಕಂಡುಬರುವ ಅದ್ದೂರಿ ಇಲ್ಲಿಲ್ಲ. ಚೀನಾಕ್ಕೆ ಶೂಟಿಂಗ್‌ಗೆ ಹೋಗಬೇಕಾಗಿದ್ದ ರಾಕ್‌ಲೈನ್‌, ರಾಜ್‌ ಅಪಹರಣದಿಂದಾಗಿ ರಾಮೋಜಿ ರಾವ್‌ ಸಿಟಿಗೆ ಹೋಗಿ ಬಂದರು. ಚೀನಾದ ಮಹಾಗೋಡೆಯ ಬದಲು ಸಾಂಘವಿ ತೊಡೆಗಳನ್ನು ತೋರಿಸಿ ಸಮಾಧಾನ ಪಡಬೇಕಾದ ಪರಿಸ್ಥಿತಿ ನಿರ್ಮಾಣವಾಯಿತು. ಈ ನಡುವೆ ನಿರ್ದೇಶಕ ರಾಜೇಂದ್ರ ಬಾಬು, ತಾವು ನಿರ್ದೇಶನ ಮರೆತಿರುವುದನ್ನು ಮತ್ತೊಮ್ಮೆ ಎಲ್ಲರಿಗೂ ನೆನಪಿಸಿಕೊಟ್ಟರು. ಮೂಲ ಚಿತ್ರದ ದೃಶ್ಯಗಳನ್ನಷ್ಟೇ ಅಲ್ಲ , ಖಳನಾಯಕರನ್ನೂ ಕ್ಯಾಮರಾ ಆ್ಯಂಗಲ್‌ಗಳನ್ನೂ ರಿಮೇಕ್‌ ಮಾಡಿದರು.

    ವಿಷ್ಣುವರ್ಧನ್‌ ದ್ವಿ ಪಾತ್ರದಲ್ಲಿ , ಅಂಬರೀಷ್‌ ಅಲ್‌ಮೋಸ್ಟ್‌ ದ್ವಿ ಪಾತ್ರದಲ್ಲಿ ಕಾಣಿಸಿಕೊಂಡಿರುವ ಚಿತ್ರ ಇದು. ಒಡೆಯ ತನ್ನ ಸೇವಕರನ್ನು ಗೆಳೆಯರಂತೆ ಕಾಣುವ, ಸೇವಕನ ತ್ಯಾಗದ ಒಡೆಯನ ಭೋಗದ.... ಅಕ್ಕರದ ಚಿತ್ರ ಇದು. ಇಲ್ಲಿ ಗೆಳೆತನ ಹಾಗೂ ಆಳ್ತನದ ಗೆರೆ ತೆಳುವಾಗಿದೆ. ಅಲ್ಲಲ್ಲಿ ಮಾಸಿಹೋಗಿದೆ. ಹೀಗಾಗಿ ಸ್ನೇಹವೇ ಮೆರೆದಿದೆ. ಅಂಬರೀಷ್‌ ಹಾಗೂ ವಿಷ್ಣು ವರ್ಧನ್‌ ನಿಜ ಜೀವನದಲ್ಲೂ ಆಪ್ತರು. ಪರಸ್ಪರ ಸ್ನೇಹದ ಬಗ್ಗೆ ಇಬ್ಬರೂ ಸಾಕಷ್ಟು ಹೇಳಿಕೊಂಡಿದ್ದಾರೆ. ವಿಷ್ಣು ವರ್ಧನ್‌ ಹುಟ್ಟು ಹಬ್ಬಕ್ಕೆ ಅಂಬರೀಷ್‌ ಫುಲ್‌ ಬಾಟಲ್‌ ಸ್ಕಾಚ್‌ ಕೊಂಡೊಯ್ಯುತ್ತಾರೆ. ಅಂಬರೀಷ್‌ ಮನೆಗೆ ವಿಷ್ಣು ಬರಿಗೈಯ್ಯಲ್ಲಿ ಬರುತ್ತಾರೆ. ಹೀಗೆ ಇಬ್ಬರ ಗೆಳೆತನ ಪತ್ರಿಕೆಗಳಲ್ಲಿ, ಚಾನೆಲ್ಲುಗಳಲ್ಲಿ ಪ್ರಿಂಟಾಗಿದೆ, ಪ್ರಸಾರವಾಗಿದೆ. ಅದೇ ಕಾರಣಕ್ಕೆ ಇವರಿಬ್ಬರನ್ನೂ ಒಂದಾಗಿಸಿದ ರಾಕ್‌ಲೈನ್‌ ಗೆಲುವಿನ ಹಾದಿಯಲ್ಲಿದ್ದರು.

    ಆದರೆ ಒಂದು ಚಿತ್ರಕ್ಕೆ ಇವ್ಯಾವುದೂ ನೆರವಾಗುವುದಿಲ್ಲ ಅನ್ನೋದು ಮತ್ತೊಮ್ಮೆ ಸಾಬೀತಾಗಿದೆ. ಜನ ನೋಡುವುದು ಪಾತ್ರವನ್ನು ಮತ್ತು ಪಾತ್ರಪೋಷಣೆಯನ್ನು.

    ಹಾಗೆ ನೋಡುತ್ತಾ ಹೋದರೆ ದಿಗ್ಗಜರು ಕಳಪೆ ಚಿತ್ರವೇನಲ್ಲ. ಅದು ಯಜಮಾನಕ್ಕಿಂತ ಚೆನ್ನಾಗಿದೆ ಎನ್ನುವವರೂ ಇದ್ದಾರೆ. ಯಜಮಾನದಲ್ಲಿ ಕರುಣೆ ಮತ್ತು ತ್ಯಾಗ ಕುಟುಂಬದ ಕಣ್ಣಾದರೆ, ಇಲ್ಲಿ ತ್ಯಾಗವೊಂದೇ ಎಲ್ಲವನ್ನೂ ಕಾಯುತ್ತದೆ. ಜೊತೆಗೆ ಟೆನಿಸ್‌ ಕೃಷ್ಣ , ದೊಡ್ಡಣ್ಣ ಮುಂತಾದವರಿದ್ದಾರೆ. ಪಿ.ಕೆ.ಎಚ್‌. ದಾಸ್‌ ಅವರ ಸಹನೀಯ ಛಾಯಾಗ್ರಹಣವಿದೆ. ರಿಮೇಕ್‌ ಮಾಡುವುದರಲ್ಲಿ ಎತ್ತಿದ ಕೈ ಎನ್ನಬಹುದಾದ ರಾಜೇಂದ್ರ ಬಾಬು ಇದ್ದಾರೆ.

    ಹಾಗಿದ್ದರೂ ಯಜಮಾನ ಮೇಲಿದ್ದಾನೆ. ದಿಗ್ಗಜರು ಕೆಳಗಿದ್ದಾರೆ.

    ಆದರೆ, ಗ್ರಾಮೀಣ ಪ್ರೇಕ್ಷಕರು ಇನ್ನೂ ಚಿತ್ರಮಂದಿರಕ್ಕೆ ಬರುವುದಕ್ಕೆ ಆರಂಭಿಸಿಲ್ಲ. ಅವರೇನಾದರೂ ಬಂದರೆ ಚಿತ್ರ ಗೆಲುವಿನ ಹಾದಿ ಹಿಡಿಯಬಹುದು - ಮೈಸೂರಿನ, ಮಂಡ್ಯದ ವರದಿ ಹೀಗೆ ಹೇಳುತ್ತದೆ.

    ಮುಖಪುಟ / ಸ್ಯಾಂಡಲ್‌ವುಡ್‌

    Friday, April 19, 2024, 11:08
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X