»   » ಎಲ್ಲರ ಮನೆಯಲ್ಲಿಯೂ ಕಷ್ಟಗಳಿರುತ್ತವೆ. ಅವನ್ನು ನಾವೇ ಪರಿಹರಿಸಿಕೊಳ್ಳಬೇಕು ಎಂಬ ನೀತಿಯಾಗಲೀ, ಗಂಡು ಹೆಣ್ಣು ಒಂದಾಗಿ ಬಾಳಬೇಕು ಎಂಬ ಶಾಂತಿ ಮಂತ್ರವಾಗಲೀ ಈ ಚಿತ್ರದಲ್ಲಿಲ್ಲ

ಎಲ್ಲರ ಮನೆಯಲ್ಲಿಯೂ ಕಷ್ಟಗಳಿರುತ್ತವೆ. ಅವನ್ನು ನಾವೇ ಪರಿಹರಿಸಿಕೊಳ್ಳಬೇಕು ಎಂಬ ನೀತಿಯಾಗಲೀ, ಗಂಡು ಹೆಣ್ಣು ಒಂದಾಗಿ ಬಾಳಬೇಕು ಎಂಬ ಶಾಂತಿ ಮಂತ್ರವಾಗಲೀ ಈ ಚಿತ್ರದಲ್ಲಿಲ್ಲ

Subscribe to Filmibeat Kannada

ಚಿತ್ರ : ಎಲ್ಲರ ಮನೆ ದೋಸೇನೂ...ನಿರ್ದೇಶನ : ಎಚ್‌. ಎಸ್‌. ಪ್ರಕಾಶ್‌ತಾರಾಗಣ : ರಾಮ್‌ಕುಮಾರ್‌, ಶ್ರುತಿ, ಭಾವನಾ, ಉಮಾಶ್ರೀ, ಕಾಶಿ, ಮೋಹನ್‌
*ಸುಂದರ್‌

ಕಳೆದ ವರ್ಷ ಬಿಡುಗಡೆಯಾದ ಯಾರಿಗೆ ಸಾಲುತ್ತೆ ಸಂಬಳ ಚಿತ್ರದ ಯಶಸ್ಸಿನಿಂದ ಪ್ರಭಾವಿತರಾಗಿ ನಿರ್ಮಾಪಕ ಗಂಗಾಧರ್‌ ಅಂಥದ್ದೇ ಮತ್ತೊಂದು ರೀಮೇಕ್‌ ಸರಕನ್ನು ಕನ್ನಡಕ್ಕೆ ತಂದಿದ್ದಾರೆ. ಇದೂ ಮೂರು ಜೋಡಿಗಳ ಬಡತನ, ಹುಂಬತನ ಮತ್ತು ತರಲೆಗಳ ಸುತ್ತ ಸುತ್ತುವ ಚಿತ್ರ.

ಎಲ್ಲರ ಮನೆ ದೋಸೇನೂ... ಚಿತ್ರದ ಕತೆ ಸರಳವಾಗಿ ಹೀಗಿದೆ. ಜಿಪುಣ ಅಪ್ಪನೊಬ್ಬ ವರದಕ್ಷಿಣೆ ಕೊಡಬೇಕಾಗುತ್ತದೆ ಎಂಬ ಕಾರಣಕ್ಕೆ ತನ್ನ ಮೂವರು ಮಕ್ಕಳನ್ನು ಆಟೋ ಓಡಿಸುವ ಮುತ್ತುರಾಜನಿಗೆ, ಅಡಿಗೆ ಭಟ್ಟ ಐತಾಳನಿಗೆ, ಸೊಳ್ಳೆ ಔಷಧಿ ಹೊಡೆಯುವ ರಾಚನಿಗೆ ಕೊಟ್ಟು ಮದುವೆ ಮಾಡುತ್ತಾನೆ. ಈ ಮೂರು ಅತೃಪ್ತ ಜೋಡಿಗಳು, ರಾಮ್‌ಕುಮಾರ್‌- ಶ್ರುತಿ, ಕಾಶಿ- ಉಮಾಶ್ರೀ, ಮೋಹನ್‌- ಭಾವನಾ, ಪರಸ್ಪರ ಜಗಳ ಆಡುತ್ತಾ, ಹೊಡೆದಾಡುತ್ತಾ, ಪ್ರೇಮಿಸುತ್ತಾ ಬದುಕುತ್ತಿದ್ದರೆ, ಜಿಪುಣಾಗ್ರೇಸರ ಅಪ್ಪ ತನ್ನೆಲ್ಲ ಆಸ್ತಿಯನ್ನೂ ಮಗನ ಹೆಸರಿಗೆ ಬರೆಯುತ್ತಾನೆ. ಮಗ ಕೊನೆಗೆ ಅಪ್ಪನನ್ನೇ ಬೀದಿ ಪಾಲು ಮಾಡುತ್ತಾನೆ. ಈ ನಡುವೆ ತಾಯಿ ಸಾಯುತ್ತಾಳೆ. ಗಂಡಂದಿರು ದಂಡಪಿಂಡಗಳಾಗುತ್ತವೆ. ಅಪ್ಪ ಅಬ್ಬೇಪಾರಿಯಾಗುತ್ತಾನೆ.

ಎಲ್ಲರ ಮನೆಯಲ್ಲಿಯೂ ಕಷ್ಟಗಳಿರುತ್ತವೆ. ಅವನ್ನು ನಾವು ನಾವಾಗಿಯೇ ಪರಿಹರಿಸಿಕೊಳ್ಳಬೇಕು ಎನ್ನುವ ನೀತಿಯಾಗಲೀ, ಗಂಡು ಹೆಣ್ಣು ಒಂದಾಗಿ ಬಾಳಬೇಕು ಎಂಬ ಶಾಂತಿ ಮಂತ್ರವಾಗಲೀ ಈ ಚಿತ್ರದಲ್ಲಿಲ್ಲ . ಇದು ಹಾಗೆ ನೋಡಿದರೆ ಹಾಸ್ಯದ ಹೊಳೆ ಹರಿಸಲಿಕ್ಕಾಗಿಯೇ ಜೋಕುಗಳನ್ನು ತುಂಬಿದ ಸಿನಿಮಾ.

ಛಾಯಾಗ್ರಹಣ ಅತ್ಯಂತ ಕೆಟ್ಟದಾಗಿದೆ. ಸಂಕಲನ ಹೆಸರಿಗಿಲ್ಲ. ಸದಭಿರುಚಿಯ ಗಂಧಗಾಳಿಯೂ ಇಲ್ಲ. ಕತೆಯೆಂಬುದು ಮೊದಲೇ ಇಲ್ಲ. ಹೀಗಾಗಿ ಇಡೀ ಚಿತ್ರ ಅಗತ್ಯಕ್ಕಿಂತ ಹೆಚ್ಚು ಡೈಲ್ಯೂಟ್‌ ಮಾಡಿದ ಹುಳಿ ಮಜ್ಜಿಗೆಯಂತಿದೆ.

ಇವೆಲ್ಲದರ ಮಧ್ಯೆ ಹೆಂಗಸರ ಹಕ್ಕಿಗಾಗಿ ಹೋರಾಡುವ ಪಾತ್ರವೊಂದಿದೆ. ಅದನ್ನು ಸುಹಾಸಿನಿ ನಿರ್ವಹಿಸಿದ್ದಾರೆ. ಆ ಪಾತ್ರದ ತೂಕಕ್ಕೆ ಅದನ್ನು ಯಾರು ಬೇಕಿದ್ದರೂ ನಿರ್ವಹಿಸಬಹುದಿತ್ತು. ಆದರೆ ಸುಹಾಸಿನಿಯೇ ಯಾಕೆ ಎಂದರೆ ಆಕೆ ನಟಿಸಿದ ಹಿಂದಿನ ಚಿತ್ರ ಯಾರಿಗೆ ಸಾಲುತ್ತೆ ಸಂಬಳ ಗೆದ್ದಿತ್ತು !

ರಾಮ್‌ಕುಮಾರ್‌ ಅವರಿಗೆ ಹೇಳಿ ಮಾಡಿಸಿದ ಪಾತ್ರ ಅದಲ್ಲ. ಕಾಶಿ ಇದುವರೆಗಿನ ಚಿತ್ರದಲ್ಲಿ ಮಿಂಚಿದವರು ಇಲ್ಲಿ ಡಲ್ಲಾಗಿದ್ದಾರೆ ಅನ್ನುವುದಕ್ಕೂ ಕತೆಯೇ ಕಾರಣ.

ಶ್ರುತಿ ಸೊಗಸಾಗಿ ನಟಿಸಿದ್ದಾರೆ ಅನ್ನುವುದನ್ನು ಬಿಟ್ಟರೆ ಚಿತ್ರದಲ್ಲಿ ವಿಶೇಷತೆಯೇನೂ ಇಲ್ಲ. ಆದರೆ ದುರಂತವೆಂದರೆ ಇದು ಶ್ರುತಿ ನಟಿಸಬಹುದಾದ ಚಿತ್ರ ಅಲ್ಲ.

ಮೋಹನ್‌ ಎಂಬ ಹಾಸ್ಯನಟ ಅತಿಯಾದ ಆತ್ಮವಿಶ್ವಾಸದಿಂದಾಗಿ ಬೋರು ಹೊಡೆಸಿದರೆ, ಹಂಸಲೇಖಾ ಸಂಗೀತ ಅಪಹಾಸ್ಯದಷ್ಟೇ ಅಗ್ಗವಾಗಿದೆ.

ಗಂಗಾಧರ್‌, ಎಲ್ಲರ ಮನೆಯ ದೋಸೇನೂ ತೂತು ಇರಬಹುದು. ಹಾಗೇ ಎಲ್ಲ ಭಾಷೆಯ ಚಿತ್ರಗಳೂ ತೋಪೇ,... ಅಂದಹಾಗೆ ಚಿತ್ರದ ನಿರ್ದೇಶಕ ಎಚ್‌. ಎಸ್‌. ಪ್ರಕಾಶ್‌. ಈತ ನಿರ್ದೇಶನ ಅರಿಯದ ಮುಗ್ಧ.

ಮುಖಪುಟ / ಸ್ಯಾಂಡಲ್‌ವುಡ್‌

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada