Kaantha Review: ಗುರು-ಶಿಷ್ಯರ ಜಿದ್ದಾಜಿದ್ದಿನ 'ಕಾಂತ'; ಪ್ಲಸ್ ಹಾಗೂ ಮೈನಸ್ ಏನು?
ಸಿನಿಮಾದೊಳಗೊಂದು ಸಿನಿಮಾ ನಿರ್ಮಾಣದ ಕಥೆಯನ್ನು ತೆರೆಗೆ ತರುವ ಪ್ರಯತ್ನ ಸಾಕಷ್ಟು ಬಾರಿ ನಡೆದಿದೆ. ಸಿನಿಮಂದಿ ಕೂಡ ಸಮಾಜದ ಒಂದು ಭಾಗವೇ ಆಗಿರುವುದರಿಂದ ಅವರ ಕಥೆ ಕೂಡ ದೃಶ್ಯ ರೂಪ ಪಡೆದುಕೊಂಡಿದೆ. 'ಕಾಂತ' ಚಿತ್ರದಲ್ಲಿ ನಿರ್ದೇಶಕ ಸೆಲ್ವಮಣಿ ಸೆಲ್ವರಾಜ್ ಅದೇ ಸಾಹಸ ಮಾಡಿದ್ದಾರೆ. ಆ ಪ್ರಯತ್ನದಲ್ಲಿ ಭಾಗಶಃ ಗೆದ್ದಿದ್ದಾರೆ.
ಮಲಯಾಳಂ ನಟ ದುಲ್ಕರ್ ಸಲ್ಮಾನ್ ಹಾಗೂ ತೆಲುಗು ನಟ ರಾಣಾ ದುಗ್ಗುಬಾಟಿ ಚಿತ್ರದ ಮುಖ್ಯಭೂಮಿಕೆಯಲ್ಲಿ ನಟಿಸಿದ್ದಾರೆ. ಸಮುದ್ರ ಖನಿ ಮತ್ತೊಂದು ಮುಖ್ಯ ಪಾತ್ರದಲ್ಲಿ ಮಿಂಚಿದ್ದಾರೆ. 50-60ರ ಕಾಲಘಟ್ಟದ ಕಥೆ ಚಿತ್ರದಲ್ಲಿದೆ. ಮದ್ರಾಸ್ ಸ್ಟುಡಿಯೋಗಳಲ್ಲಿ ಆಗ ಸಿನಿಮಾಗಳ ನಿರ್ಮಾಣ ಹೆಚ್ಚು ನಡೆಯುತ್ತಿತ್ತು. ಅದೇ ವಾತಾವರಣದಲ್ಲಿ 'ಕಾಂತ' ಚಿತ್ರದ ಕಥೆ ಕಟ್ಟಿಕೊಡಲಾಗಿದೆ.

'ಕಾಂತ' ಸಿನಿಮಾ ಬಿಡುಗಡೆಯಾಗಿ ಒಳ್ಳೆ ರೆಸ್ಪಾನ್ಸ್ ಪಡೆದುಕೊಳ್ತಿದೆ. ಇವತ್ತಿನ ಪ್ರೇಕ್ಷಕರಿಗೆ ಈ ರೆಟ್ರೋ ಕಥೆ ಹೊಸ ಅನುಭವ ನೀಡುವಂತಿದೆ. ಗುರು ಅಯ್ಯ ಹಾಗೂ ಶಿಷ್ಯ ಟಿ. ಕೆ ಮಹಾದೇವನ್ ನಡುವಿನ ಜಿದ್ದಾಜಿದ್ದಿನ ಕಥೆಯಲ್ಲಿ ಒಂದು ಲವ್ ಸ್ಟೋರಿ, ಮರ್ಡರ್ ಮಿಸ್ಟರಿ ಕೂಡ ಇದೆ. ಸಿನಿಮಾ ಕಥೆ ಏನು? ಸಿನಿಮಾ ಹೇಗಿದೆ? ರಿವ್ಯೂ ಮುಂದೆ ಓದಿ.
'ಕಾಂತ' ಕಥೆ
ಅಯ್ಯ(ಸಮುದ್ರಖನಿ) ಒಬ್ಬ ಖ್ಯಾತ ಚಿತ್ರ ನಿರ್ದೇಶಕ. ತನ್ನ ಶಿಷ್ಯ ನಟ ಟಿ. ಕೆ ಮಹಾದೇವನ್(ದುಲ್ಕರ್ ಸಲ್ಮಾನ್) ನನ್ನು ಹೀರೊ ಮಾಡಿ 'ಶಾಂತ' ಎಂಬ ಚಿತ್ರ ನಿರ್ಮಾಣಕ್ಕೆ ಮುಂದಾಗುತ್ತಾನೆ. ಆದರೆ ಕೆಲ ಭಿನ್ನಾಭಿಪ್ರಾಯಗಳಿಂದ ಸಿನಿಮಾ ಅರ್ಧದಲ್ಲೇ ನಿಂತು ಹೋಗುತ್ತದೆ. ಕೆಲ ವರ್ಷಗಳ ಬಳಿಕ ಇಬ್ಬರೂ ಮತ್ತೆ ಸಿನಿಮಾ ಪುನರಾರಂಭಿಸುತ್ತಾರೆ. ಆದರೆ ಈ ಬಾರಿ ನಾನು ಹೇಳಿದಂತೆ ಸಿನಿಮಾ ಮೂಡಿ ಬರಬೇಕು ಎಂದು ಮಹಾದೇವನ್ ಹಠ ಮಾಡುತ್ತಾನೆ.

ಅಯ್ಯ ಈ ಚಿತ್ರಕ್ಕೆ ಕುಮಾರಿ(ಭಾಗ್ಯಶ್ರೀ)ಯನ್ನು ನಾಯಕಿಯಾಗಿ ಆಯ್ಕೆ ಮಾಡುತ್ತಾನೆ. ಚಿತ್ರದ ಹೆಸರು 'ಕಾಂತ' ಎಂದು ಬದಲಿಸಲು ಪಟ್ಟು ಹಿಡಿಯುತ್ತಾನೆ. ಮುಂದೆ ಮಹದೇವನ್ ಹಾಗೂ ಕುಮಾರಿ ಪ್ರೀತಿಯಲ್ಲಿ ಬೀಳುತ್ತಾರೆ. ಇಬ್ಬರೂ ಮದುವೆ ಆಗಬೇಕು ಎಂದುಕೊಳ್ಳುವ ವೇಳೆಗೆ ಹತ್ಯೆಯೊಂದು ನಡೆಯುತ್ತದೆ. ಅಷ್ಟಕ್ಕೂ ಸತ್ತಿದ್ದು ಯಾರು? ಕಾರಣ ಯಾರು? ಇನ್ಸ್‌ಪೆಕ್ಟರ್ ದೇವರಾಜ್(ರಾಣ ದಗ್ಗುಬಾಟಿ) ಪ್ರಕರಣ ಭೇದಿಸುತ್ತಾನಾ? ಎನ್ನುವ ಪ್ರಶ್ನೆಗಳಿಗೆ ಉತ್ತರ ಸಿನಿಮಾದಲ್ಲೇ ನೋಡಬೇಕು.
ಸಿನಿಮಾ ಹೇಗಿದೆ?
ಮೊದಲೇ ಹೇಳಿದಂತೆ ಸಿನಿಮಾದೊಳಗಿನ ಸಿನಿಮಾ ಕಥೆ ಹೊಸದಲ್ಲ. ಆದರೆ 'ಕಾಂತ' ಚಿತ್ರದಲ್ಲಿ ಹೇಳಿರುವ ಕಥೆ ವಿಭಿನ್ನವಾಗಿದೆ. ಇಲ್ಲಿ ನಿರ್ದೇಶಕ ಹಾಗೂ ಸ್ಟಾರ್ ನಟನ ನಡುವಿನ ಸಂಘರ್ಷದ ಕಥೆ ಇದೆ. ಆರಂಭದಲ್ಲಿ 50-60ರ ದಶಕದ ಸಿನಿಮಾ ಮೇಕಿಂಗ್ ವಿಚಾರಗಳನ್ನು ತೋರಿಸುತ್ತಾ ಬಳಿಕ 'ಕಾಂತ' ಚಿತ್ರದ ಕಥೆ ಹೇಳಲು ಆರಂಭಿಸುತ್ತಾರೆ. ಅಲ್ಲಿಂದ ಮುಂದೆ ಸಿನಿಂಆ ಎಂಗೇಜಿಂಗ್ ಅನ್ನಿಸಲು ಶುರುವಾಗುತ್ತದೆ.
ಆರಂಭದಲ್ಲಿ ಮಹಾದೇವನ್ ಹಾಗೂ ಕುಮಾರಿ ನಡುವೆ ಎಲ್ಲವೂ ಸರಿ ಇರುವುದಿಲ್ಲ. ಆದರೆ ನಿಧಾನವಾಗಿ ಆತನನ್ನು ಪ್ರೀತಿಸಲು ಆರಂಭಿಸುತ್ತಾಳೆ. ಅರೇ ಈ ವಿಚಾರ ಅಯ್ಯಗೆ ಗೊತ್ತಾದರೆ ಮುಂದೇನು ಎನ್ನುವ ಕುತೂಹಲ ಪ್ರೇಕ್ಷಕರನ್ನು ಕಾಡುತ್ತಿರುತ್ತದೆ. ಆರಂಭದಲ್ಲಿ ಈ ಸಿನಿಮಾ ತಮಿಳಿನ 'ಇರುವರ್', ತೆಲುಗಿನ 'ಮಹಾನಟಿ' ಸಿನಿಮಾಗಳನ್ನು ಅಲ್ಲಲ್ಲಿ ನೆನಪಿಸುತ್ತದೆ. ಎನ್‌ಟಿಆರ್ 'ಕಥಾನಾಯಕುಡು' ಚಿತ್ರದಂತೆ ಭಾಸವಾಗುತ್ತದೆ.
ಸಿನಿಮಾ ಸೆಟ್‌ಗಳಲ್ಲೇ ಬಹುತೇಕ ಸಿನಿಮಾ ಕಥೆ ಸಾಗುತ್ತದೆ. 60 ವರ್ಷಗಳ ಹಿಂದಿನ ಕಾಲಘಟ್ಟವನ್ನು ಕಟ್ಟಿಕೊಡಲು ಚಿತ್ರತಂಡ ಬಹಳ ಶ್ರಮಿಸಿದೆ. ಅಷ್ಟು ಸುಲಭವಾಗಿ ಈ ಸಿನಿಮಾ ಎಲ್ಲರಿಗೂ ಇಷ್ಟವಾಗುವುದಿಲ್ಲ. ರೆಗ್ಯುಲರ್ ಕಮರ್ಷಿಯಲ್ ಸಿನಿಮಾ ರೀತಿ ಭಾಸವಾಗುವುದಿಲ್ಲ. ಹಳೇ ಕಾಲದ ಸಿನಿಮಾ ಮೇಕಿಂಗ್, ಅವತ್ತಿನ ಸೆಟ್‌ಗಳು, ಫಿಲ್ಮ್ ಮೇಕರ್ಸ್ ಬಗ್ಗೆ ಗೊತ್ತಿರುವವರಿಗೆ ಸಿನಿಮಾ ಕನೆಕ್ಟ್ ಆಗುತ್ತದೆ. ಇನ್ನುಳಿದಂತೆ ಕೆಲವರಿಹೆ ಕಲಾತ್ಮಕ ಸಿನಿಮಾ ರೀತಿ ಭಾಸವಾಗುತ್ತದೆ.
ಸೆಕೆಂಡ್ ಆಫ್‌ನಲ್ಲಿ ರಾಣಾ ಎಂಟ್ರಿ ಬಳಿ ಮರ್ಡರ್ ಕೇಸ್ ಸುತ್ತಾ ಸಿನಿಮಾ ಕಥೆ ಸಾಗುತ್ತದೆ. ಮುಖ್ಯವಾಗಿ ಇಬ್ಬರು ಪುರುಷರ ಈಗೋ, ಸಂಘರ್ಷ 'ಕಾಂತ' ಚಿತ್ರದ ಹೈಲೆಟ್.
ಕಲಾವಿದರ ನಟನೆ
ಎಂದಿನಂತೆ ತಮ್ಮ ನಟನೆ ಮೂಲಕ ದುಲ್ಕರ್ ಇಷ್ಟವಾಗುತ್ತಾರೆ. ಇಡೀ ಸಿನಿಮಾ ಅವರ ಮಹಾದೇವನ್ ಪಾತ್ರವನ್ನು ಆವರಿಸಿಕೊಂಡುಬಿಟ್ಟಿದ್ದಾರೆ. 'ಮಹಾನಟಿ' ಚಿತ್ರದ ಜೆಮಿನಿ ಗಣೇಶನ್ ಪಾತ್ರದಂತೆ ಇಲ್ಲಿದೆ ಕಾಣುತ್ತಾರೆ. ಇನ್ನು ಚಿತ್ರ ನಿರ್ದೇಶಕನಾಗಿ ಸಮುದ್ರ ಖನಿ ಪೈಪೋಟಿಗೆ ಬಿದ್ದು ನಟಿಸಿದ್ದಾರೆ. ನಿಜ ಜೀವನದಲ್ಲಿ ಕೂಡ ಅವರು ಚಿತ್ರ ನಿರ್ದೇಶಕರಾಗಿ ಇರುವುದರಿಂದ ಅಯ್ಯ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ.
ಪೊಲೀಸ್ ಆಫೀಸರ್ ಆಗಿ ರೆಟ್ರೋ ಲುಕ್‌ನಲ್ಲಿ ರಾಣಾ ದಗ್ಗುಬಾಟಿ ಮೋಡಿ ಮಾಡಿದ್ದಾರೆ. ಸೆಕೆಂಡ್ ಹಾಫ್‌ನಲ್ಲಿ ಅವರ ಪಾತ್ರವೇ ಹೈಲೆಟ್. ಸಿನಿಮಾ ನಾಯಕಿಯಾಗಿ ಭಾಗ್ಯಶ್ರೀ ಇಷ್ಟವಾಗುತ್ತಾರೆ. ದುಲ್ಕರ್ ಜೊತೆ ಅವರ ಕೆಮೆಸ್ಟ್ರಿ ಚೆನ್ನಾಗಿದೆ. ಇನ್ನುಳಿದಂತೆ ಸಣ್ಣ ಸಣ್ಣ ಪಾತ್ರಗಳು ಕಲಾವಿದರೆಲ್ಲಾ ಅಚ್ಚುಕಟ್ಟಾಗಿ ನಟಿಸಿ ಗಮನ ಸೆಳೆದಿದ್ದಾರೆ.
ಟೆಕ್ನಿಕಲಿ ಸಿನಿಮಾ
ನಿರ್ದೇಶಕ ಸೆಲ್ವಮಣಿ ಒಂದೊಳ್ಳೆ ಕಥೆ ಮಾಡಿಕೊಂಡು ಅದನ್ನು ಸೊಗಸಾಗಿ ತೆರೆಗೆ ತರುವ ಪ್ರಯತ್ನ ಮಾಡಿದ್ದಾರೆ. ಈ ಹಾದಿಯಲ್ಲಿ ಒಂದು ಹಂತಕ್ಕೆ ಗೆದ್ದಿದ್ದಾರೆ ಕೂಡ. ಇನ್ನುಳಿದಂತೆ ಚಿತ್ರದ ಆರ್ಟ್ ಡಿಪಾಟ್ಮೆಂಟ್ ಬಗ್ಗೆ ಮಾತನಾಡಲೇ ಬೇಕು. ಇಡೀ ಸಿನಿಮಾ ಆ ಫೀಲ್ ಉಳಿಸಿಕೊಳ್ಳಲು ಸೆಟ್‌ಗಳು ಬಹಳ ಮುಖ್ಯ ಪಾತ್ರ ವಹಿಸುತ್ತದೆ. ಜಾನು ಚಾಂತರ್ ಸಂಗೀತದಲ್ಲಿ ಹಾಡುಗಳು ಹಾಗೂ ಜೇಕ್ಸ್ ಬಿಜಾಯ್ ಹಿನ್ನೆಲೆ ಸಂಗೀತ ಸೊಗಸಾಗಿದೆ.
ಕೊನೆ ಮಾತು
ಕಥೆಯಲ್ಲಿರುವ ತಿರುವುಗಳು, ದುಲ್ಕರ್ ನಟನೆ, ಅದ್ಭುವ ವಿಷ್ಯುವಲ್ಸ್ ಎಲ್ಲವೂ ಚೆನ್ನಾಗಿದೆ. ಆದರೆ ಸುಧೀರ್ಘವಾಗಿ ಸಾಗುವ ಕಥೆ ಪ್ರೇಕ್ಷಕರ ತಾಳ್ಮೆ ಪರೀಕ್ಷಿಸುತ್ತದೆ. ಒಂದು ಸಿನಿಮಾ ಆಗಿ 'ಕಾಂತ' ಚಿತ್ರ, ತಂಡದ ಪ್ರಯತ್ನ ಗೆದ್ದಿದೆ, ಆದರೆ ಪ್ರೇಕ್ಷಕರನ್ನು ಎಷ್ಟರಮಟ್ಟಿಗೆ ರಂಜಿಸಿ ಗೆಲ್ಲುತ್ತದೆ ಎನ್ನುವುದನ್ನು ಕಾದು ನೋಡಬೇಕಿದೆ.


Click it and Unblock the Notifications











