ಹಣದ ಹಿಂದೆ ಬಿದ್ದು ಸೋತು ಗೆದ್ದ 'ಲಕ್ಕಿ ಭಾಸ್ಕರ'ನ ಕಥೆ ಏನು?

ಓಟಿಟಿಯಲ್ಲಿ ಟ್ರೆಂಡ್ ಶುರುವಾದ ಬಳಿಕ ಪರಭಾಷಾ ಸಿನಿಮಾಗಳನ್ನು ಕನ್ನಡ ಸಿನಿರಸಿಕರು ಹೆಚ್ಚು ಹೆಚ್ಚು ನೋಡಲು ಆರಂಭಿಸಿದ್ದಾರೆ. ಕನ್ನಡಕ್ಕೂ ಡಬ್ ಆಗಿ ಓಟಿಟಿಯಲ್ಲಿ ಸ್ಟ್ರೀಮಿಂಗ್ ಆಗುವುದರಿಂದ ಬೇರೆ ಭಾಷೆಯ ಉತ್ತಮ ಸಿನಿಮಾಗಳು ನಮ್ಮವರಿಗೂ ಹತ್ತಿರವಾಗುತ್ತಿದೆ. ಇತ್ತೀಚೆಗೆ ತಮಿಳಿನ 'ಮೇಯಳಗನ್' ಇದೇ ರೀತಿ ಸದ್ದು ಮಾಡಿತ್ತು.

ಸದ್ಯ ತೆಲುಗಿನ 'ಲಕ್ಕಿ ಭಾಸ್ಕರ್' ಸಿನಿಮಾ ನೆಟ್‌ಫ್ಲಿಕ್ಸ್‌ನಲ್ಲಿ ವೀಕ್ಷಣೆಗೆ ಲಭ್ಯವಿದೆ. ಕನ್ನಡಕ್ಕೂ ಸಿನಿಮಾ ಡಬ್ ಆಗಿ ಬಂದಿದೆ. ದುಲ್ಕರ್ ಸಲ್ಮಾನ್ ನಟನೆಯ ಕ್ರೈಂ ಡ್ರಾಮಾ ಸಿನಿಮಾ ಪ್ರೇಕ್ಷಕರ ಮನಗೆದ್ದಿದೆ. ತಿಂಗಳ ಹಿಂದೆ ದೀಪಾವಳಿ ಸಂಭ್ರಮದಲ್ಲಿ ಈ ಸಿನಿಮಾ ತೆರೆಗಪ್ಪಳಿಸಿತ್ತು. ಆ ಸಮಯದಲ್ಲೇ ಒಳ್ಳೆ ಮಾತುಗಳು ಕೇಳಿಬಂದಿತ್ತು. ಇದೀಗ ಓಟಿಟಿಯಲ್ಲಿ ಮತ್ತಷ್ಟು ಒಳ್ಳೆ ಪ್ರತಿಕ್ರಿಯೆ ಪಡೆದುಕೊಳ್ಳುತ್ತಿದೆ.

Dulquer Salmaan starrer Lucky Baskhar review in Kannada

ವೆಂಕಿ ಅಟ್ಲೂರಿ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ. ದುಲ್ಕರ್ ಸಲ್ಮಾನ್ ಮಡದಿ ಪಾತ್ರದಲ್ಲಿ ಮೀನಾಕ್ಷಿ ಚೌಧರಿ ನಟಿಸಿದ್ದಾರೆ. ರಾಮ್ಕಿ, ಟಿನ್ನು ಆನಂದ್, ಸಾಯಿಕುಮಾರ್ ಚಿತ್ರದ ಮುಖ್ಯಭೂಮಿಕೆಯಲ್ಲಿದ್ದಾರೆ. ಅಷ್ಟಕ್ಕೂ 'ಲಕ್ಕಿ ಭಾಸ್ಕರ್' ಚಿತ್ರದ ಕಥೆಯೇನು? ಸಿನಿಮಾ ಹೇಗಿದೆ? ರಿವ್ಯೂ ಮುಂದೆ ಓದಿ.

'ಲಕ್ಕಿ ಭಾಸ್ಕರ್' ಕಥೆ

ತೊಂಬತ್ತರದ ದಶಕದ ಆರಂಭದಲ್ಲಿ ಮುಂಬೈನಲ್ಲಿ ನಡೆಯುವ ಕಥೆ ಇದು. ಭಾಸ್ಕರ್ ತನ್ನದೇ ಕಥೆ ಹೇಳಿಕೊಳ್ಳುವುದರೊಂದಿಗೆ ಸಿನಿಮಾ ಶುರುವಾಗುತ್ತದೆ. ಮಧ್ಯಮ ವರ್ಗದ ಕುಟುಂಬದ ಆಧಾರಸ್ತಂಭ ಭಾಸ್ಕರ್,(ದುಲ್ಕರ್ ಸಲ್ಮಾನ್) ಮಗಧ ಬ್ಯಾಂಕ್ ಉದ್ಯೋಗಿ. ತಂದೆ, ಸಹೋದರ, ಸಹೋದರಿಯ ಜೊತೆಗೆ ತಮ್ಮ ಮಡದಿ ಮಗನನ್ನು ಪೋಷಿಸುವ ಜವಾಬ್ದಾರಿ ಆತನದ್ದು. ಆದರೆ ಬೇಕಾದ ಆದಾಯ ಇಲ್ಲ. ಹಾಗಾಗಿ ಊರೆಲ್ಲಾ ಸಾಲ ಮಾಡಿಕೊಂಡಿರುತ್ತಾನೆ.

Dulquer Salmaan starrer Lucky Baskhar review in Kannada

ಮಡದಿ, ಮಗನ ಸಣ್ಣ ಸಣ್ಣ ಆಸೆಗಳನ್ನು ಈಡೇರಿಸಲು ಕಷ್ಟಪಡುತ್ತಿರುತ್ತಾನೆ. ಎಷ್ಟೇ ಕೆಲಸ ಮಾಡಿದರೂ ಬ್ಯಾಂಕ್‌ನಲ್ಲಿ ಬಡ್ತಿ ಕೂಡ ಸಿಗದೇ ಭಾಸ್ಕರ್ ಸಂಕಷ್ಟಕ್ಕೆ ಸಿಲುಕುತ್ತಾನೆ. ತೀರಾ ಕುಗ್ಗಿದಾಗ ಆ ಸಂಕಷ್ಟದಿಂದ ಪಾರಾಗಲು ರಿಸ್ಕ್ ತೆಗೆದುಕೊಳ್ಳುತ್ತಾನೆ. ಬ್ಯಾಂಕಿಂಗ್ ವ್ಯವಸ್ಥೆಯ ಲೋಪಗಳನ್ನು ಬಳಸಿಕೊಂಡು ಸ್ಕ್ಯಾಮ್‌ ಮಾಡಲು ಮುಂದಾಗುತ್ತಾನೆ. ಆತ ಮುಟ್ಟಿದೆಲ್ಲಾ ಚಿನ್ನ ಎನ್ನುವಂತಾಗುತ್ತದೆ.

ಒಂದು ಹೊತ್ತಿನ ಊಟಕ್ಕೂ ಪರದಾಡುತ್ತಿದ್ದ ಭಾಸ್ಕರ್ ಮುಂದೆ 100 ಕೋಟಿ ರೂ. ಸಂಪಾದಿಸುತ್ತಾನೆ. ನಾನು ಶ್ರೀಮಂತ ಎಂಬ ಅಹಂ ಮೈಗೂಡಿಸಿಕೊಳ್ಳುತ್ತಾನೆ. ಆದರೆ ಬಳಿಕ ತಪ್ಪಿನ ಅರಿವಾಗಿ ಬದಲಾಗುತ್ತಾನೆ. ಮೋಸದಿಂದ ಭಾಸ್ಕರ್ ಕೂಡಿಟ್ಟ ಹಣ ಉಳಿಯುತ್ತಾ? ಅಷ್ಟಕ್ಕೂ ಆತನಲ್ಲಾದ ಬದಲಾವಣೆಗೆ ಕಾರಣವೇನು? ದೊಡ್ಡ ಸ್ಕ್ಯಾಮ್ ಮಾಡಿ ತಪ್ಪಿಸಿಕೊಳ್ತಾನಾ? ಈ ಎಲ್ಲಾ ಪ್ರಶ್ನೆಗಳಿಗೆ ಉತ್ತರ ಬೇಕು ಅಂದ್ರೆ 'ಲಕ್ಕಿ ಭಾಸ್ಕರ್' ಸಿನಿಮಾ ನೋಡಬೇಕು.

ಸಿನಿಮಾ ಹೇಗಿದೆ?

ಹಣದ ಹಿಂದೆ ಬಿದ್ದ ಭಾಸ್ಕರನ ಕಥೆಯನ್ನು ಬಹಳ ಸೊಗಸಾಗಿ ನಿರ್ದೇಶಕರು ಕಟ್ಟಿಕೊಟ್ಟಿದ್ದಾರೆ. 90ರ ದಶಕದ ಹರ್ಷದ್ ಮೆಹ್ತಾ ಸ್ಕ್ಯಾಮ್ ಬಗ್ಗೆ ಕೆಲವರಿಗೆ ಗೊತ್ತಿರುತ್ತದೆ. ಅದೇ ಸ್ಕ್ಯಾಮ್‌ಗೆ ಹತ್ತಿರ ಎನ್ನುವಂತೆ 'ಲಕ್ಕಿ ಭಾಸ್ಕರ್' ಕಥೆಯನ್ನು ತಿದ್ದಿ ತೀಡಲಾಗಿದೆ. ಮಧ್ಯಮ ವರ್ಗದ ಜನರ ನೋವು ನಲಿವು, ಸ್ಟಾಕ್ ಮಾರ್ಕೆಟ್, ಬ್ಯಾಂಕಿಂಗ್ ವ್ಯವಸ್ಥೆ ಹಾಗೂ ಮನಿ ಲ್ಯಾಂಡರಿಂಗ್ ರೀತಿಯ ವಿಚಾರಗಳು ಈ ಕಥೆಯಲ್ಲಿದೆ.

ಮಧ್ಯಮ ವರ್ಗದ ಕುಟುಂಬದ ವ್ಯಕ್ತಿ ಕಥೆ ಆಗಿರುವುದರಿಂದ ಬಹಳ ಬೇಗ ನೋಡುಗರು ಭಾಸ್ಕರನ ಪ್ರಪಂಚದೊಳಗೆ ಪ್ರವೇಶಿಸಿಬಿಡುತ್ತಾರೆ. ಬ್ಯಾಂಕಿಂಗ್ ವ್ಯವಸ್ಥೆಯ ಬಗ್ಗೆ ಬಹಳ ತಿಳಿದುಕೊಂಡು ಚಿತ್ರದ ಕಥೆ, ಚಿತ್ರಕಥೆ, ಸನ್ನಿವೇಶಗಳನ್ನು ಬರೆದುಕೊಂಡು ಬಹಳ ನೀಟ್ ಆಗಿ ಸಿನಿಮಾ ಮಾಡಿರುವುದು ಗೊತ್ತಾಗುತ್ತದೆ. ಇನ್ನು ಭಾಸ್ಕರನ ಸ್ಕ್ಯಾಮ್‌ಗಳನ್ನು ತೋರಿಸಲು ಸಿಸಿಟಿವಿ, ಮೊಬೈಲ್ ಇಲ್ಲದ 90ರ ದಶಕದ ಆರಂಭದ ವರ್ಷಗಳನ್ನು ಆಯ್ಕೆ ಮಾಡಿಕೊಂಡು ನಿರ್ದೇಶಕರು ಗೆದ್ದಿದ್ದಾರೆ.

ಪ್ರಪಂಚದಲ್ಲಿ ಹಣವೇ ಮುಖ್ಯ. ಹಣ ಇಲ್ಲದೇ ಇದ್ದರೆ ಯಾರು ಗೌರವ ಕೊಡಲ್ಲ. ನಮ್ಮವರು ಕೂಡ ನಮ್ಮನ್ನು ಹೀನಾಯವಾಗಿ ನಡೆಸಿಕೊಳ್ಳುತ್ತಾರೆ. ಹಣ ಇದ್ದರೆ ಎಲ್ಲಾ ಎನ್ನುವುದನ್ನು ಚಿತ್ರದಲ್ಲಿ ಹೇಳಲಾಗಿದೆ. ಪ್ರತಿಯೊಬ್ಬ ಮಧ್ಯಮ ವರ್ಗದ ಕುಟುಂಬದ ವ್ಯಕ್ತಿ ಭಾಸ್ಕರನ ಪಾತ್ರದೊಂದಿಗೆ ತಮ್ಮನ್ನು ತಾವು ನೋಡಿಕೊಳ್ಳುತ್ತಾರೆ. ಆತನ ಗೆಲುವನ್ನು ನೋಡಿ ಸಂಭ್ರಮಿಸುತ್ತಾರೆ. ಆತ ಯಾವುದೇ ಕಾರಣಕ್ಕೂ ತಗ್ಲಾಕಿಕೊಳ್ಳಬಾರದು ಎಂದು ಬಯಸುತ್ತಾರೆ. ಅಷ್ಟರಮಟ್ಟಿಗೆ ಸಿನಿಮಾ ನೋಡುಗರನ್ನು ತನ್ನೊಳಗೆ ಸೆಳೆದುಕೊಳ್ಳುತ್ತದೆ.

ಕಲಾವಿದರ ಅಭಿನಯ

ನಟನೆ ವಿಚಾರಕ್ಕೆ ಬಂದರೆ ದುಲ್ಕರ್ ಸಲ್ಮಾನ್ ಇಡೀ ಸಿನಿಮಾ ಆವರಿಸಿಕೊಂಡಿದ್ದಾರೆ. ಮಧ್ಯಮ ವರ್ಗದ ಕುಟುಂಬ ವ್ಯಕ್ತಿಯಾಗಿ ಪಾತ್ರದಲ್ಲಿ ಪರಕಾಯ ಪ್ರವೇಶ ಮಾಡಿದ್ದಾರೆ. ಇಡೀ ಸಿನಿಮಾ ಭಾಸ್ಕರ್ ಪಾತ್ರದ ಸುತ್ತಾ ಸುತ್ತುತ್ತದೆ. ಭಾವನಾತ್ಮಕ ಸನ್ನಿವೇಶಗಳಲ್ಲಿ ಪೂರ್ಣ ಅಂಕ ಗಳಿಸುತ್ತಾರೆ. ಗ್ಲಾಮರ್ ಬೊಂಬೆ ಮೀನಾಕ್ಷಿಗೆ ಇಲ್ಲಿ ಒಂದು ಡೀಸೆಂಟ್ ರೋಲ್ ಸಿಕ್ಕಿದೆ. ಭಾಸ್ಕರನ ಮಡದಿ ಪಾತ್ರದಲ್ಲಿ ಇಷ್ಟವಾಗುತ್ತಾರೆ. ಇನ್ನುಳಿದಂತೆ ಸಾಯಿಕುಮಾರ್, ರಾಮ್ಕಿ, ಟಿನ್ನು ಆನಂದ್ ತಮ್ಮ ತಮ್ಮ ಪಾತ್ರಗಳಿಗೆ ನ್ಯಾಯ ಒದಗಿಸಿದ್ದಾರೆ.

ತಾಂತ್ರಿಕವಾಗಿ ಸಿನಿಮಾ

ವೆಂಕಿ ಅಟ್ಲೂರಿ ಕಥೆ, ಚಿತ್ರಕಥೆ ಚಿತ್ರದ ಹೈಲೆಟ್. ಇನ್ನು ಕ್ಯಾಮರಾ, ಸೆಟ್ ಎಲ್ಲವೂ ಕಥೆಗೆ ಪೂರಕವಾಗಿದೆ. 90ರ ಕಾಲಘಟ್ಟದ ಮುಂಬೈಯನ್ನು ಬಹಳ ಸೊಗಸಾಗಿ ಕಟ್ಟಿಕೊಡಲಾಗಿದೆ. ಇನ್ನು ಜಿ. ವಿ ಪ್ರಕಾಶ್ ಕುಮಾರ್ ಸಂಗೀತ ಚಿತ್ರದ ಮತ್ತೊಂದು ಹೈಲೆಟ್. ಇಡೀ ಕಥೆಯನ್ನು ನೋಡುಗರಿಗೆ ಮತ್ತಷ್ಟು ಹತ್ತಿರವಾಗಿಸುವುದು ಹಿನ್ನೆ ಸಂಗೀತ.

ಕೊನೆ ಮಾತು

ಲಕ್ಕಿ ಭಾಸ್ಕರ್ ಚಿತ್ರದಲ್ಲಿ ಸಣ್ಣಪುಟ್ಟ ತಪ್ಪುಗಳಿವೆ. ಸೆಕೆಂಡ್ ಹಾಫ್ ಕೆಲ ಸನ್ನಿವೇಶಗಳು ಬೋರ್ ಹೊಡೆಸುತ್ತದೆ. ಆದರೂ ಒಂದು ಅದ್ಭುತ ಪ್ರಯತ್ನ. ನೋಡುಗರನ್ನು ತನ್ನೊಳಗೆ ಸೆಳೆದುಕೊಳ್ಳುವ ಶಕ್ತಿ ಎಲ್ಲಾ ಚಿತ್ರಗಳಿಗೆ ಇರುವುದಿಲ್ಲ. ಅಂತಹ ಶಕ್ತಿ 'ಲಕ್ಕಿ ಭಾಸ್ಕರ್' ಚಿತ್ರಕ್ಕಿದೆ. ನಾಯಕ ಮೋಸ ಮಾಡಿ ಸಂಪಾದಿಸಿದ್ದನ್ನೆಲ್ಲಾ ತೆಗೆದುಕೊಂಡು ಹೋಗಿ ವಿದೇಶದಲ್ಲಿ ಸುಖವಾಗಿ ಬಾಳುವ ಸಂದೇಶ ಮಾತ್ರ ಯಾಕೋ ಒಪ್ಪುವುದು ಕಷ್ಟ. ಒಟ್ಟಾರೆ ಮಿಸ್ ಮಾಡದೇ ಸಿನಿಮಾ ನೋಡಿ.

More from Filmibeat

English summary
Crime Drama Lucky Baskhar movie review and Rating;
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X