Landlord Review: ಸಮಾನತೆಯ ಸಂವಿಧಾನಕ್ಕಾಗಿ ಕೊಡಲಿ ಹಿಡಿದ ರಾಚಯ್ಯನ ಹೋರಾಟ
ದುನಿಯಾ ವಿಜಯ್ ಹಾಗೂ ಜಡೇಶ್ ಹಂಪಿ ಒಟ್ಟಿಗೆ ಸಿನಿಮಾ ಮಾಡ್ತಾರೆ ಅಂದಾಗ್ಲೆ ಕುತೂಹಲ ಮೂಡಿತ್ತು. 'ಜಂಟಲ್‌ಮನ್', 'ಗುರುಶಿಷ್ಯರು' ಸಿನಿಮಾಗಳನ್ನು ನಿರ್ದೇಶಿಸಿ ಗೆದ್ದಿದ್ದ ಜಡೇಶ್ 'ಕಾಟೇರ' ಚಿತ್ರಕ್ಕೆ ಕಥೆ ಒದಗಿಸಿದ್ದರು. 'ಲ್ಯಾಂಡ್‌ಲಾರ್ಡ್' ಸಿನಿಮಾ ನಿರೀಕ್ಷೆ ಹುಟ್ಟಾಕಲು ಇಷ್ಟು ಸಾಕಾಗಿತ್ತು.
ರಾಜ್ ಬಿ. ಶೆಟ್ಟಿ ಕೂಡ ಚಿತ್ರತಂಡ ಸೇರಿದ ಮೇಲೆ 'ಲ್ಯಾಂಡ್‌ಲಾರ್ಡ್' ಖದರ್ ಹೆಚ್ಚಾಗಿತ್ತು. ಅಂತೂ ಇಂತೂ ಸಿನಿಮಾ ತೆರೆಗಪ್ಪಳಿಸಿದೆ. ನಮ್ಮ ಮಣ್ಣಿನ ಕಥೆಯನ್ನು ಬಹಳ ಸೊಗಸಾಗಿ ತೆರೆಗೆ ತಂದು ಚಿತ್ರತಂಡ ಗೆದ್ದಿದೆ. ದೊಡ್ಡ ತಾರಾಗಣವೇ ಚಿತ್ರದಲ್ಲಿದ್ದು ಅದ್ಧೂರಿಯಾಗಿ ಸಿನಿಮಾ ನಿರ್ಮಾಣವಾಗಿದೆ.

'ಸಲಗ', 'ಭೀಮ' ಬಳಿಕ ದುನಿಯಾ ವಿಜಯ್ ಸಿನಿಮಾಗಳ ಮೇಲೆ ನಿರೀಕ್ಷೆ ಹೆಚ್ಚಿದೆ. ಅದಕ್ಕೆ ತಕ್ಕಂತೆ ವಿಭಿನ್ನ ಕಥೆಗಳನ್ನು ಅವರು ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ. ಈ ಚಿತ್ರವನ್ನು ಒಪ್ಪಿಕೊಂಡಾಗಲೇ ಅವರು ಗೆದ್ದಿದ್ದರು. 'ಲ್ಯಾಂಡ್‌ಲಾರ್ಡ್' ಸಿನಿಮಾ ಫಲಿತಾಂಶ ಏನೇ ಆಗಬಹುದು. ಆದರೆ ಒಂದೊಳ್ಳೆ ಪ್ರಯತ್ನ ಮಾಡಿರುವ ತಂಡಕ್ಕೆ ಅಭಿನಂದನೆ ತಿಳಿಸಲೇಬೇಕು.
'ಲ್ಯಾಂಡ್‌ಲಾರ್ಡ್' ಕಥೆ
ರಾಮದುರ್ಗದ ರಾಚಯ್ಯ(ವಿಜಯ್) ಈಗ ಹುಲಿದುರ್ಗದ ಕೂಲಿ ಕಾರ್ಮಿಕ. 2 ಎಕರೆ ಜಮೀನು ಮಾಡಿ ವ್ಯವಸಾಯ ಮಾಡಬೇಕು ಎನ್ನುವುದು ಅವನ ಕನಸು. ಅದಕ್ಕಾಗಿ ಏನು ಮಾಡಲು ಸಿದ್ಧ. ಆದರೆ ಹುಲಿದುರ್ಗದ ಜಮೀನ್ದಾರ ಚಿಕ್ಕೆಜಮಾನ್ರು(ರಾಜ್ ಬಿ ಶೆಟ್ಟಿ) ಅದಕ್ಕೆ ಆಸ್ಪದ ಕೊಡಲ್ಲ. ಊರಲ್ಲಿ ಅವನು ಮಾಡಿದ್ದೇ ಕಾನೂನು, ಹೇಳಿದ್ದೇ ಶಾಸನ. ತಿರುಗಿಬಿದ್ದವರನ್ನು ಸಿಗಿದಾಕುವ ಮನುಷ್ಯರೂಪದ ಮೃಗ. ಕೂಲಿಗಳೆಲ್ಲಾ ಸ್ವಂತ ಜಮೀನು ಮಾಡಿ ಹುತ್ತಿ ಬಿತ್ತಿಬಿಟ್ಟರೆ ಜಮೀನ್ದಾರಿಕೆಗೆ ಬೆಲೆ ಇರಲ್ಲ, ಕೂಲಿಗಳು ಕೂಲಿಗಳಾಗಿಯೇ ಇರಬೇಕು, ನಮ್ಮ ಕಾಲಡಿ ಜೀತದಾಳುಗಳಂತೆ ಬಿದ್ದಿರಬೇಕು ಎನ್ನುವುದು ಅವನ ಹಠ.

ಹುಲಿದುರ್ಗದಲ್ಲಿ ಚಿಕ್ಕೆಜಮಾನ ಆಡಿದ್ಧೇ ಆಟ. ಹೆಸರಿಗೆ ಪೊಲೀಸ್ ಠಾಣೆ ಇದ್ದರೂ ನ್ಯಾಯ ಪಂಚಾಯ್ತಿ ಎಲ್ಲಾ ಅವನದ್ದೇ. ಅದೇ ಠಾಣೆಗೆ ರಾಚಯ್ಯನ ಮಗಳು ಭಾಗ್ಯ(ರಿತನ್ಯಾ) ಪೊಲೀಸ್ ಕಾನ್ಸ್‌ಸ್ಟೇಬಲ್ ಆಗಿ ಬರ್ತಾಳೆ. ತಂದೆ- ಮಗಳು ಸೇರಿ ಚಿಕ್ಕೆಜಮಾನನ ರಾಜಪ್ರಭುತ್ವಕ್ಕೆ ಅಂತ್ಯ ಹಾಡಿ, ಸಮಾನತೆಯ ಸಂವಿಧಾನವನ್ನು ಜಾರಿಗೆ ತರಲು ಹೊರಡುತ್ತಾರೆ. ಕಾನೂನಿನ ತಾಕತ್ತು ತೋರಿಸುತ್ತಾರೆ. ಅದಕ್ಕಾಗಿ ಮತ್ತೆ ರಾಚಯ್ಯ ಆಯುಧ ಹಿಡಿಯುವಂತಾಗುತ್ತದೆ. ಮುಂದೇನು? ಎನ್ನುವುದು ಇನ್ನುಳಿದ ಕಥೆ.
ಸಿನಿಮಾ ಹೇಗಿದೆ?
ಕೋಲಾರದ ಭಾಗದಲ್ಲಿ 80-90ರ ದಶಕದ ಕಾಲಘಟ್ಟದಲ್ಲಿ 'ಲ್ಯಾಂಡ್‌ಲಾರ್ಡ್' ಕಥೆ ಸಾಗುತ್ತದೆ. ಬಹಳ ರಿಯಲಿಸ್ಟಿಕ್ ಆಗಿ ಜಡೇಶ್ ಚಿತ್ರವನ್ನು ಕಟ್ಟಿಕೊಟ್ಟಿದ್ದಾರೆ. ಅದಕ್ಕಾಗಿ ಒಳ್ಳೆ ಕಥೆ, ಚಿತ್ರಕಥೆ ಆಯ್ಕೆ ಮಾಡಿಕೊಂಡಿದ್ದಾರೆ. ಜಮೀನ್ದಾರನನ್ನು ಎದುರಿಸುವ ಬಡ ರೈತನ ಕಥೆ ಸಾಕಷ್ಟು ಸಿನಿಮಾಗಳಲ್ಲಿ ಬಂದಿದೆ. ಅದನ್ನೇ ಮತ್ತಷ್ಟು ಆಳಕ್ಕೆ ಈ ಚಿತ್ರದಲ್ಲಿ ಕೊಂಡೊಯ್ದಿದ್ದಾರೆ. ಸಾಕಷ್ಟು ಪಾತ್ರಗಳು ಚಿತ್ರದಲ್ಲಿವೆ. ಅದಕ್ಕೆಲ್ಲಾ ನ್ಯಾಯ ದೊರಕಿಸಿಕೊಟ್ಟಿದ್ದಾರೆ. ವಿಜಯ್, ರಾಜ್. ಬಿ ಶೆಟ್ಟಿ, ರಿತನ್ಯಾ, ಉಮಾಶ್ರೀ, ರಚಿತಾ ರಾಮ್ ಎಲ್ಲರೂ ಪೈಪೋಟಿಗೆ ಬಿದ್ದು ನಟಿಸಿದ್ದಾರೆ.
ಕಲಾವಿದರ ಅಭಿನಯವೇ 'ಲ್ಯಾಂಡ್‌ಲಾರ್ಡ್' ಚಿತ್ರದ ಹೈಲೆಟ್. ಇಲ್ಲರೂ ಕಥೆಗೆ ಒಗ್ಗಿಕೊಂಡಿದ್ದಾರೆ. ಹೆಚ್ಚುಕಮ್ಮಿ 20 ನಿಮಿಷದ ಬಳಿಕ ದುನಿಯಾ ವಿಜಯ್ ಪಾತ್ರವನ್ನು ಪರಿಚಯಿಸುತ್ತಾರೆ. ಆರಂಭದಲ್ಲಿ ತಣ್ಣನೆಯ ಜ್ವಾಲಾಮುಖಿಯಂತೆ ತೋರಿಸಿ ಬಳಿಕ ಫ್ಲ್ಯಾಶ್‌ಬ್ಯಾಕ್‌ನಲ್ಲಿ ರಾಚಯ್ಯನ ಆರ್ಭಟ ಮೆರೆಸಿದ್ದಾರೆ. ವಿಲನ್ ಪಾತ್ರ ಗಟ್ಟಿಯಾಗಿ ಇದ್ದಷ್ಟು ಹೆಚ್ಚು ಅಬ್ಬರಿಸಿದಷ್ಟು ನಾಯಕನ ಹೋರಾಟ ಮಜಾ ಕೊಡುತ್ತದೆ. ಅದೇ ಪ್ರಯತ್ನವನ್ನು ಇಲ್ಲಿ ಮಾಡಿದ್ದಾರೆ. ರಾಜ್ ಬಿ ಶೆಟ್ಟಿ ಅಬ್ಬರಿಸಿ ಬೊಬ್ಬರಿದಿದ್ದಾರೆ. ಕೆಲವೆಡೆ ವಿಜಯ್ ನಟನೆಯನ್ನು ಮರೆಸಿಬಿಡುತ್ತಾರೆ.
ಜಬರ್ದಸ್ತ್ ಆಕ್ಷನ್ ಜೊತೆಗೆ ರಾಜ್ ಪಾತ್ರ ಪರಿಚಯವಾಗುತ್ತದೆ. ಜಮೀನ್ದಾರನಾಗಿ ಆತನ ಕ್ರೌರ್ಯ, ದರ್ಪ ಹೆಚ್ಚುತ್ತಾ ಹೋಗುತ್ತದೆ. ಒಂದು ಹಂತದವರೆಗೆ ತಡೆದುಕೊಳ್ಳಬಹುದು. ಇನ್ನು ಸಾಧ್ಯವೇ ಇಲ್ಲ ಎಂದಾಗ ತಿರುಗಿಬೀಳಬೇಕಾಗುತ್ತದೆ. ಕೊನೆಗೆ ತಕ್ಕ ಶಾಸ್ತಿ ಅನುಭವಿಸುತ್ತಾನೆ. ಸೀದಾಸಾದಾ ಕಥೆ ಚಿತ್ರದಲ್ಲಿದೆ. ಹಳ್ಳಿಯಲ್ಲಿ ಒಂದಷ್ಟು ಘಟನೆಗಳನ್ನು ನಡೆಯುತ್ತದೆ. ಅದು ಎಲ್ಲಿಂದ ಎಲ್ಲಿಗೋ ಕರೆದುಕೊಂಡು ಹೋಗಿ ನಿಲ್ಲುತ್ತದೆ.
ಸ್ವಾತಂತ್ರ್ಯ ಬಂದ್ರು, ಸಂವಿಧಾನ ರಚನೆ ಆದ್ರು, ಕೆಲ ಹಳ್ಳಿಗಳಲ್ಲಿ ಜಮೀನ್ದಾರರು ಸಾಮಾನ್ಯ ಜನರನ್ನು ಜೀತದಾಳುಗಳಂತೆ ನೋಡುತ್ತಿದ್ದರು. ಅಂಥದ್ದೇ ಚಿತ್ರಣವನ್ನು ಚಿತ್ರದಲ್ಲಿ ತೋರಿಸಲಾಗಿದೆ. ಇಡೀ ಸಿನಿಮಾ ಕೋಲಾರ ಭಾಷೆಯನ್ನು ಬಳಸಿಕೊಂಡಿರುವುದು ವಿಶೇಷ. ಕನ್ನಡದಲ್ಲಿ ಇಂತಹ ಪ್ರಯತ್ನ ತೀರ ಕಡಿಮೆ ಎನ್ನಬಹುದು. ಇನ್ನು ಚಿತ್ರದಲ್ಲಿ ದೇವದಾಸಿ ಸೇರಿದಂತೆ ಕೆಲ ಅನಿಷ್ಟ ಪದ್ಧತಿಗಳ ಬಗ್ಗೆ ಚರ್ಚಿಸಲಾಗಿದೆ. ಕೊನೆಗೆ ಒಂದೊಳ್ಳೆ ಸಂದೇಶವನ್ನು ಕೊಟ್ಟಿದ್ದಾರೆ.
ಹೆಚ್ಚು ತಿರುವುಗಳಿಲ್ಲದೇ ಏರಿಳಿತವಿಲ್ಲದೇ ಸಿನಿಮಾ ಸಾಗುತ್ತದೆ. ಮುಂದೇನು ಎಂದು ಪ್ರೇಕ್ಷಕರು ಊಹಿಸಿಬಿಡಬಹುದು. ಇನ್ನು 40 ವರ್ಷಗಳ ಹಿಂದಿನ ಕಾಲಘಟ್ಟವನ್ನು ಕಟ್ಟಿಕೊಡಲು ಫ್ರೇಮ್‌ನಲ್ಲಿ ಕತ್ತಲು ತುಂಬಿದಂತೆ ಭಾಸವಾಗುತ್ತದೆ. ರಾಜ್ ಬಿ ಶೆಟ್ಟಿ ಎಂಟ್ರಿ, ಆಸ್ಪತ್ರೆ ಸೀಕ್ವೆನ್ಸ್, ಜಮೀನ್ದಾರನನ್ನು ಬಂಧಿಸುವ ದೃಶ್ಯಗಳು ಹೈಲೆಟ್ ಎನಿಸಿಕೊಳ್ಳುತ್ತದೆ.
ಕಲಾವಿದರ ಅಭಿನಯ
ಮೊದಲೇ ಹೇಳಿದಂತೆ ಎಲ್ಲರೂ ಬಹಳ ಸೊಗಸಾಗಿ ನಟಿಸಿದ್ದಾರೆ. ರಾಚಯ್ಯನಾಗಿ ದುನಿಯಾ ವಿಜಯ್ ಅಬ್ಬರಿಸಿದ್ದಾರೆ. ಆಕ್ಷನ್ ಸನ್ನಿವೇಶಗಳಲ್ಲಿ, ಭಾವನಾತ್ಮಕ ಸನ್ನಿವೇಶಗಳಲ್ಲಿ ಲೀಲಾಜಾಲವಾಗಿ ನಟಿಸಿದ್ದಾರೆ. ಜಮೀನ್ದಾರನಾಗಿ ರಾಜ್ ಬಿ ಶೆಟ್ಟಿ ಎಲ್ಲರನ್ನು ತಿಂದು ಹಾಕಿದ್ದಾರೆ. ರಾಕ್ಷಸನಂತೆ ಆ ಪಾತ್ರವೇ ತಾವಾಗಿ ಜೀವಿಸಿದ್ದಾರೆ. ಸು ಫ್ರಂ ಸೋ ಚಿತ್ರದ ಗುರೂಜಿ, '45' ಚಿತ್ರದ ಮುಗ್ಧ ವಿನಯ್ ಪಾತ್ರಗಳನ್ನು ಮರೆಸಿ 'ಗರುಡಗಮನ ವೃಷಭವಾಹನ' ಚಿತ್ರದ ಶಿವನನ್ನು ನೆನಪಿಸುತ್ತಾರೆ. ಇನ್ನು ತಾವೇ ತಮ್ಮ ಪಾತ್ರಕ್ಕೆ ಡಬ್ ಮಾಡಿ ಜೀವ ತುಂಬಿದ್ದಾರೆ.
ನಿಂಗವ್ವ ಆಗಿ ರಚಿತಾ ರಾಮ್, ಭಾಗ್ಯ ಆಗಿ ರಿತನ್ಯ ಇಷ್ಟವಾಗುತ್ತಾರೆ. ಶಿಶಿರ್ ಬೈಕಾಡಿ ಪಾತ್ರ ಚಿತ್ರಕ್ಕೆ ದೊಡ್ಡ ತಿರುವು ಕೊಡುತ್ತದೆ. ಇನ್ನು ಜಮೀನ್ದಾರನ ಸಹೋದರರಾಗಿ ರಾಕೇಶ್ ಶೆಟ್ಟಿ ಹಾಗೂ ಅಭಿಷೇಕ್ ಅಣ್ಣನ ಕ್ರೌರ್ಯಕ್ಕೆ ಸಾಥ್ ಕೂಡುವ ಪಾತ್ರಗಳಲ್ಲಿ ನಟಿಸಿದ್ದಾರೆ. ರಾಚಯ್ಯನ ತಾಯಿ ಪಾತ್ರದಲ್ಲಿ ಉಮಾಶ್ರೀ ನಟನೆ ನೆನಪಿನಲ್ಲಿ ಉಳಿಯುತ್ತದೆ.
ತಾಂತ್ರಿಕವಾಗಿ ಸಿನಿಮಾ
ಕಥೆ, ಚಿತ್ರಕಥೆ ನಿರ್ದೇಶನ ವಿಚಾರದಲ್ಲಿ ಜಡೇಶ್ ಗೆದ್ದಿದ್ದಾರೆ. ಸ್ವಾಮಿ ಗೌಡ ಛಾಯಾಗ್ರಹಣ ಚಿತ್ರಕ್ಕೆ ಪೂರಕವಾಗಿದೆ. ಅಜನೀಶ್ ಲೋಕನಾತ್ ಹಿನ್ನೆಲೆ ಸಂಗೀತ ಚಿತ್ರಕ್ಕೆ ಮತ್ತಷ್ಟು ಬಲ ತುಂಬಿದೆ. ಆರ್ಟ್ ವರ್ಕ್ ಬಹಳ ಚೆನ್ನಾಗಿದೆ. ಹಳ್ಳಿ ಪರಿಸರದ ಸೆಟ್‌ಗಳು ಬಹಳ ನೈಜವಾಗಿ ಮೂಡಿ ಬಂದಿದೆ. ಎಲ್ಲಕ್ಕಿಂತ ಮುಖ್ಯವಾಗಿ ಮಾಸ್ತಿ ಉಪ್ಪರಹಳ್ಳಿ, ಎಂ. ಎಂ.ಶ್ರೀಕಂಠ ಸಂಭಾಷಣೆ ಚಿತ್ರದ ತೂಕ ಹೆಚ್ಚಿಸಿದೆ. ಅವರ ಸಂಭಾಷಣೆಯನ್ನು ಕೋಲಾರದ ಭಾಷೆಗೆ ತಿದ್ದಿರುವ ಮಂಜು ಶ್ರಮವನ್ನು ಮೆಚ್ಚಲೇಬೇಕು. ಒನ್‌ಲೈನರ್‌ಗಳು ಸಿಡಿಯುತ್ತಾ ಹೋಗುತ್ತದೆ.
ಕೊನೆ ಮಾತು
ಜೀತದಾಳು ಪದ್ಧತಿ ವಿರುದ್ಧ ಸಮಾನತೆಯ ಸಂದೇಶ ಸಾರುವ ಸಿನಿಮಾ ಇದು. ಎಲ್ಲಾ ಕಮರ್ಷಿಯಲ್ ಅಂಶಗಳನ್ನು ಹದವಾಗಿ ಬರೆಸಿ ಜಡೇಶ್ ಚಿತ್ರವನ್ನು ಕಟ್ಟಿಕೊಟ್ಟಿದ್ದಾರೆ. ದುನಿಯಾ ವಿಜಯ್ ಹಾಗೂ ರಾಜ್ ಬಿ ಶೆಟ್ಟಿ ಜಿದ್ದಾಜಿದ್ದಿ ನೋಡುಗರಿಗೆ ಥ್ರಿಲ್ ಕೊಡುತ್ತದೆ. ಬಹಳ ದಿನಗಳ ಬಳಿಕ ನಮ್ಮದೇ ಮಣ್ಣಿನ ಕಥೆಯ ಸಿನಿಮಾ ತೆರೆಗೆ ಬಂದಿದೆ.


Click it and Unblock the Notifications











