Bheema Review: ದುನಿಯಾ ವಿಜಯ್ 'ಭೀಮ' ಮಾಸ್ ಪ್ರೇಕ್ಷಕರಿಗೆ ಹೇಳಿ ಮಾಡಿಸಿದ ಸಿನಿಮಾ
ಕನ್ನಡ ಚಿತ್ರರಂಗದಲ್ಲಿ ಬಹಳ ನಿರೀಕ್ಷೆ ಹುಟ್ಟಾಕ್ಕಿದ್ದ 'ಭೀಮ' ಸಿನಿಮಾ ಕೊನೆಗೂ ತೆರೆಗೆ ಬಂದಿದೆ. ಸ್ವತಃ ದುನಿಯಾ ವಿಜಯ್ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿ ನಟಿಸಿದ್ದಾರೆ. ಈ ಹಿಂದೆ 'ಸಲಗ' ಚಿತ್ರವನ್ನು ನಿರ್ದೇಶಿಸಿ ನಟಿಸಿ ಅವರು ಗೆದ್ದಿದ್ದರು. ಹಾಗಾಗಿ ಸಹಜವಾಗಿಯೇ 'ಭೀಮ' ಕುತೂಹಲ ಮೂಡಿಸಿದ್ದು ಸುಳ್ಳಲ್ಲ.
ಏನೇ ಪ್ಯಾನ್ ಇಂಡಿಯಾ ಭರಾಟೆ ಇದ್ದರೂ ಪಕ್ಕಾ ಲೋಕಲ್ ಕಂಟೆಂಟ್‌ಗೆ ಇನ್ನು ಆಯಸ್ಸು ಇದೆ ಎನ್ನುವುದನ್ನು ಕೆಲ ಚಿತ್ರಗಳು ಆಗಾಗ್ಗೆ ಸಾಬೀತು ಮಾಡುತ್ತಿರುತ್ತವೆ. ಬೆಂಗಳೂರಿನ ಗಲ್ಲಿ ಗಲ್ಲಿ ಕಿರಿಕ್ಕು, ಅಂಡರ್‌ವರ್ಲ್ಡ್, ರೌಡಿಸಂ, ಗನ್ನು, ಲಾಂಗು ಇನ್ನು ಕನ್ನಡ ಚಿತ್ರಗಳಿಗೆ ಸರಕಾಗುತ್ತಲೇ ಇದೆ. ಅದನ್ನು ಗಟ್ಟಿಯಾಗಿ ಕಟ್ಟಿಕೊಡುವಷ್ಟು ದಿನ ಅದು ಹಳತಾಗಲ್ಲ. ಪ್ರೇಮ್, ಪಿ. ಎನ್ ಸತ್ಯ ಬಳಿಕ ಸೂರಿ ಅದನ್ನು ಮತ್ತೊಂದು ರೀತಿಯಲ್ಲಿ ಹೇಳುತ್ತಾ ಬಂದರು. ಇದೀಗ ವಿಜಯ್ ಅದನ್ನು ಮುಂದುವರೆಸಿದ್ದಾರೆ.

ಡ್ರಗ್ಸ್ ವ್ಯಸನದ ಕಥೆ ಎನ್ನುವುದು ಬಿಟ್ಟರೆ ಹೆಚ್ಚೇನು ಚಿತ್ರತಂಡ ಬಿಟ್ಟುಕೊಟ್ಟಿರಲಿಲ್ಲ. ಆದರೆ ಚರಣ್ ರಾಜ್ ಸಾಂಗ್ಸ್ ಸಿನಿಮಾ ಮೇಲಿನ ಕುತೂಹಲ ಹೆಚ್ಚಿಸಿತ್ತು. ಕೊನೆಗೂ 'ಭೀಮ' ಬೆಳ್ಳಿಪರದೆಗೆ ಎಂಟ್ರಿ ಕೊಟ್ಟಿದ್ದಾನೆ. ಅವನ ಕಥೆ ಏನು? ಹಾಕಿರುವ ಪಟ್ಟುಗಳು ಹೇಗಿವೆ? ಮುಂದೆ ಓದಿ.
'ಭೀಮ'ನ ಕಥೆ
ಜೆ.ಸಿ ರಸ್ತೆ ಪಕ್ಕ ಗ್ಯಾರೇಜ್‌ವೊಂದರ ಸುತ್ತಾ ಮುತ್ತ ನಡೆಯುವ ಕಥೆ. ಮೆಕಾನಿಕ್ ಜಾವಾ ರಾಮಣ್ಣ(ಅಚ್ಯುತ್ ಕುಮಾರ್)ನ ಗ್ಯಾರೇಜ್‌ನಲ್ಲಿ ಕೆಲಸ ಮಾಡಿಕೊಂಡಿದ್ದ ಡ್ರ್ಯಾಗನ್ ಮಂಜ(ಮಂಜು) ಗಾಂಜಾ ಸಪ್ಲೆಯರ್ ಆಗಿ ಇಡೀ ಏರಿಯಾ ಹುಡುಗರನ್ನು ನಶೆಯಲ್ಲಿ ತೇಲಿಸುತ್ತಿರುತ್ತಾನೆ. ಅದೇ ನಶೆಯಲ್ಲಿ ಮುಳುಗಿ ರಾಮಣ್ಣ ಮಗ ಸಾಯುತ್ತಾನೆ. ಆಗ ಗ್ಯಾರೇಜ್‌ಯಿಂದ ಮಂಜು ದೂರಾಗುತ್ತಾನೆ. ಅದೇ ಗ್ಯಾರೇಜ್‌ಗೆ ಅನಾಥ ಹುಡುಗ ಭೀಮ(ವಿಜಯ್) ಎಂಟ್ರಿ ಆಗುತ್ತದೆ.
ರಾಮಣ್ಣನ ಗ್ಯಾರೇಜ್ ಗಾಂಜಾ ದಂಧೆ ಕಾರಣಕ್ಕೆ ಕೆಟ್ಟ ಹೆಸರುಪಡೆದುಕೊಂಡಿರುತ್ತದೆ. ಆ ಕೆಟ್ಟ ಹೆಸರನ್ನು ಅಳಿಸಲು ಭೀಮ ಪಣ ತೊಡುತ್ತಾನೆ. ಈ ಹಾದಿಯಲ್ಲಿ ಏನೆಲ್ಲಾ ಆಗುತ್ತದೆ. ಯಾರನ್ನೆಲ್ಲಾ ಕಳೆದುಕೊಳ್ಳುತ್ತಾನೆ. ಅದಕ್ಕೆ ಹೇಗೆ ಪ್ರತಿಕಾರ ತೀರಿಸಿಕೊಳ್ಳುತ್ತಾನೆ? ಗಾಂಜಾ, ಡ್ರಗ್ಸ್ ದಂಧೆಯ ಕಿಂಗ್ ಪಿನ್ ಆಗಿ ಬೆಳೆಯುವ ಮಂಜನನ್ನು ಹೇಗೆ ಮಟ್ಟ ಹಾಕುತ್ತಾನೆ? ಕಾರ್ಪೋರೇಟ್ ಆಗುವ ಮಂಜನ ಆಸೆ ಈಡೇರುತ್ತಾ? ಇಲ್ವಾ? ಅನ್ನೋದನ್ನೆಲ್ಲಾ ತೆರೆಮೇಲೆ ನೋಡಬೇಕು.
'ಭೀಮ' ಸಿನಿಮಾ ಹೇಗಿದೆ?
ಇವತ್ತಿನ ಅಂಡರ್‌ವರ್ಲ್, ಡ್ರಗ್ಸ್ ದಂಧೆ, ಅದರಿಂದ ಬಲಿಯಾಗುತ್ತಿರುವ ಯುವ ಜನತೆ. ಅದಕ್ಕೆಲ್ಲಾ ಕಡಿವಾಣ ಹಾಕಬೇಕು ಎನ್ನುವ ಆಶಯದೊಂದಿಗೆ 'ಭೀಮ' ಸಿನಿಮಾ ಕಥೆ ಸಾಗುತ್ತದೆ. ಹಿಂದೆ 'ಸಲಗ' ಸಿನಿಮಾ ಮಾಡಿ ಗೆದ್ದಿದ್ದ ದುನಿಯಾ ವಿಜಯ್ ಈ ಬಾರಿ ಮತ್ತಷ್ಟು ಲೋಕಲ್ ಕಥೆ ಹೇಳುವ ಸಾಹಸ ಮಾಡಿದ್ದಾರೆ. ಈ ಪ್ರಯತ್ನದಲ್ಲೇ ಅಂತೂ ಇಂತೂ ಗೆದ್ದಿದ್ದಾರೆ. ಆದರೆ ಎಲ್ಲಾ ವರ್ಗದ ಪ್ರೇಕ್ಷಕರು ನೋಡುವಂತಹ ಸಿನಿಮಾ ಇದಲ್ಲ ಎಂದು ಹೇಳಬಹುದು.
ಲೋಕಲ್‌ಗೆ ಲೋಕಲ್ ಎನ್ನುವಂತಹ ಸಿನಿಮಾ ಇದು. ಜೆ. ಸಿ ರೋಡ್ ಹಾಗೂ ಕಲಾಸಿಪಾಳ್ಯದ ಸುತ್ತ ಬಹುತೇಕ ಸಿನಿಮಾ ಕಥೆ ಸಾಗುತ್ತದೆ. ಅಲ್ಲಿನ ಚಿಲ್ಟಾರಿಗಳೆಲ್ಲಾ ಗಾಂಜಾ ನಶೆಯಲ್ಲಿ ತೇಲುವುದು, ಅಮ್ಮ, ಅಕ್ಕ ಇನ್ನು ಏನೇನೋ ಕೆಟ್ಟ ಪದಗಳನ್ನೆಲ್ಲಾ ಉದುರಿಸುತ್ತಾ ಹೋಗುತ್ತಾರೆ. ಚಿತ್ರ ಯಾಕೆ ಕಡ್ಡಾಯವಾಗಿ ವಯಸ್ಕರಿಗೆ ಮಾತ್ರ ಎನ್ನುವುದಕ್ಕೆ ಬರೀ ವೈಲೆನ್ಸ್ ಮಾತ್ರವಲ್ಲ, ಇದು ಕೂಡ ಒಂದು ಕಾರಣ ಎನ್ನುವುದು ಗೊತ್ತಾಗುತ್ತದೆ. 'ಸಲಗ' ಚಿತ್ರಕ್ಕೆ ಹೋಲಿಸಿದರೆ ವಿಜಿ ಕಥೆ, ನಿರ್ದೇಶನ ಸಪ್ಪೆ ಎನಿಸುತ್ತದೆ. ಇನ್ನು ಚಿತ್ರದಲ್ಲಿ ಭೀಮನ ಡ್ರಗ್ಸ್ ಮುಕ್ತ ಸಮಾಜದ ಹೋರಾಟಕ್ಕೆ ಪೊಲೀಸ್ ಅಧಿಕಾರಿ ಗಿರಿಜಾ ಬೆಂಬಲವಾಗಿ ನಿಲ್ಲುತ್ತಾರೆ.
ಇನ್ನು ಕ್ಲೈಮ್ಯಾಕ್ಸ್‌ನಲ್ಲಿ ಸಣ್ಣ ಟ್ವಿಸ್ಟ್ ಕೊಟ್ಟು 'ಸಲಗ' ಜೈಲಿನಿಂದ ರಿಲೀಸ್ ಆಗಿ ಬರುವುದನ್ನು ತೋರಿಸಿದ್ದಾರೆ. ಅದು ಯಾಕೆ ಎನ್ನುವುದನ್ನು ತೆರೆಮೇಲೆ ನೋಡಬೇಕು. ಲೋಕಲ್ ಮಾಸ್ ಇಷ್ಟಪಡುವವರನ್ನು ಮಾತ್ರ ಮನಸ್ಸಿನಲ್ಲಿಟ್ಟುಕೊಂಡು ವಿಜಿ 'ಭೀಮ'ನ ಕಥೆ ಹೇಳಿರುವುದು ಗೊತ್ತಾಗುತ್ತದೆ. ಅಂತಹವರಿಗಂತಲೇ ಒಂದಷ್ಟು ಸನ್ನಿವೇಶಗಳಿವೆ. ಅಲ್ಲಿ ಶಿಳ್ಳೆ, ಚಪ್ಪಾಳೆ ಕೂಡ ಬೀಳುತ್ತದೆ. ಮುಂದಿನ ಚಿತ್ರದಲ್ಲಾದರೂ ಅವರು ಅದರಿಂದ ಹೊರಬಂದು ಬೇರೆ ರೀತಿಯ ಕಥೆ ಹೇಳಲಿ ಅನ್ನಿಸದೇ ಇರದು.
ಕಲಾವಿದರ ಅಭಿನಯ
ನಟನೆಯ ವಿಚಾರಕ್ಕೆ ಬಂದರೆ ವಿಜಿ ಎಂದಿನ ತಮ್ಮ ಮಾಸ್ ಸ್ಕ್ರೀನ್ ಪ್ರೆಸೆನ್ಸ್‌ನಿಂದ ಗಮನ ಸೆಳೆಯುತ್ತಾರೆ. ನಿರ್ದೇಶನ ಹಾಗೂ ನಟನೆ ಎರಡನ್ನು ನಿಭಾಯಿಸುವಲ್ಲಿ ಅಲ್ಲಲ್ಲಿ ಕೊಂಚ ಡಲ್ಲಾಗಿರುವುದು ಗೊತ್ತಾಗುತ್ತದೆ. ಇನ್ನುಳಿದಂತೆ ತಮ್ಮ ಹುರಿಗಟ್ಟಿದ ದೇಹ ಪ್ರದರ್ಶನಕ್ಕೂ ಸನ್ನಿವೇಶವನ್ನು ಕಟ್ಟಿಕೊಟ್ಟಿದ್ದಾರೆ. ರಂಗಭೂಮಿ ಪ್ರತಿಭೆ ಅಶ್ವಿನಿ ನಾಯಕಿಯಾಗಿ ಕ್ಯಾಮರಾಗೆ ಇನ್ನು ಹೊಂದಿಕೊಳ್ಳಬೇಕಿತ್ತು. ಖಡಕ್ ಪೊಲೀಸ್ ಆಫೀಸರ್ ಗಿರಿಜಾ ಪಾತ್ರಕ್ಕೆ ಪ್ರಿಯಾ ಶಠಮರ್ಷಣ ಹೆಚ್ಚು ಅಬ್ಬರಿಸಿದ್ದಾರೆ.
ಇನ್ನುಳಿದಂತೆ ಭೀಮನ್ನು ಸಾಕಿ ಬೆಳೆಸಿದ ತಂದೆ ಹಾಗೂ ತಾಯಿ ಪಾತ್ರಗಳಲ್ಲಿ ಅಚ್ಯುತ್‌ಕುಮಾರ್ ಹಾಗೂ ಕಲ್ಯಾಣಿ, ಸಹೋದರನಾಗಿ ಗೋಪಾಲ್‌ದೇಶ್‌ಪಾಂಡೆ ತಮ್ಮ ಪಾತ್ರಗಳಿಗೆ ನ್ಯಾಯ ಒದಗಿಸಿದ್ದಾರೆ. ಮೇನ್ ಆಗಿ ಮಂಜು ತಮ್ಮ ದೇಹಭಾಷೆಯಿಂದಲೇ ಹೆಚ್ಚು ಗಮನ ಸೆಳೆಯುತ್ತಾರೆ. ಆದರೆ ಅವರ ನಟನೆ ಹಾಗೂ ಡೈಲಾಗ್ ಡೆಲಿವರಿಯಲ್ಲಿನಲ್ಲಿ ಪಕ್ವತೆ ಬೇಕಿತ್ತು. ಅದೇ ಕಾರಣಕ್ಕೂ ಏನೋ ಆ ಪಾತ್ರಕ್ಕಿಂತ ಪಕ್ಕದಲ್ಲಿರುವ ಪಾತ್ರಗಳು ಹೆಚ್ಚು ಮಾತನಾಡುತ್ತವೆ. ಇನ್ನು ಮಾದಕ ದ್ರವ್ಯ ವ್ಯಸನ ಮುಕ್ತ ಕೇಂದ್ರ ಮುಖ್ಯಸ್ಥರಾಗಿ ರಂಗಾಯಣ ರಘು ಗಂಭೀರ ಪಾತ್ರದಲ್ಲಿ ನಟಿಸಿದ್ದಾರೆ.

ತಂತ್ರಜ್ಞರ ಬಳಗ
ಛಾಯಾಗ್ರಹಕ ಶಿವಸೇನಾ ಕಲಾಸಿಪಾಳ್ಯ, ಜೆ.ಸಿ ನಗರದ ಸಂದಿ ಗೊಂದಿಗಳನ್ನು ಚೆನ್ನಾಗಿ ಸೆರೆ ಹಿಡಿದಿದ್ದಾರೆ. ಅಪಾಯಕಾರಿ ಬೈಕ್ ವೀಲ್ಹಿಂಗ್ ಸನ್ನಿವೇಶವನ್ನು ಚೆನ್ನಾಗಿ ಕಟ್ಟಿಕೊಟ್ಟಿದ್ದಾರೆ. ಇನ್ನು ಇಡೀ ಚಿತ್ರದ ಜೀವಾಳ ಚರಣ್ ರಾಜ್ ಸಂಗೀತ. ಹಾಡುಗಳು ಮಾತ್ರವಲ್ಲ ಚಿತ್ರದ ಸಾಕಷ್ಟು ಸನ್ನಿವೇಶಗಳನ್ನು ತಮ್ಮ ಹಿನ್ನೆಲೆ ಸಂಗೀತದಿಂದ ಮೇಲೆತ್ತಿದ್ದಾರೆ. ಮಾಸ್ತಿ ಸಂಭಾಷಣೆ ಚೆನ್ನಾಗಿದೆ. ಒಂದು ಮಾಸ್ ಕಥೆಗೆ ಬೇಕಿದ್ದ ಒನ್‌ಲೈನರ್‌ಗಳು ಕಮ್ಮಿ ಎನಿಸುತ್ತದೆ. ಇನ್ನು ಅವಾಚ್ಯ ಪದಗಳ ನಡುವೆ ಅವರ ತೂಕದ ಸಾಲುಗಳು ನೆನಪಿನಲ್ಲಿ ಉಳಿಯುವುದಿಲ್ಲ.
ಕೊನೆ ಮಾತು
ಒಂದೊಳ್ಳೆ ಸಂದೇಶವನ್ನು ಹೊತ್ತು 'ಭೀಮ' ಬಂದಿದ್ದಾನೆ ನಿಜ. ಆದರೆ ಪಕ್ಕಾ ಲೋಕಲ್ ಮಾಸ್ ಇಷ್ಟಪಡುವವರಿಗೆ 'ಭೀಮ'ನ ಲಾಂಗ್ ಯುದ್ಧ ಇಷ್ಟವಾಗಬಹುದು. ಆದರೆ ಫ್ಯಾಮಿಲಿ ಆಡಿಯನ್ಸ್ ಸಿನಿಮಾ ನೋಡಲು ಒಮ್ಮೆ ಯೋಚಿಸುವುದು ಉತ್ತಮ.


Click it and Unblock the Notifications











