Dunki Review: ವಲಸೆ, ವಲಸಿಗರ ಕಥೆ ವ್ಯಥೆ ತೋರಿಸುತ್ತಾ ಜೀವನ ಪಾಠ ಹೇಳುವ 'ಡಂಕಿ'
Movie: ಡಂಕಿ.
Star Cast: ಶಾರುಖ್ ಖಾನ್, ತಾಪ್ಸಿ ಪನ್ನು, ವಿಕ್ಕಿ ಕೌಶಲ್, ಬೊಮನ್ ಇರಾನಿ, ಅನಿಲ್ ಗ್ರೋವರ್, ವಿಕ್ರಮ್ ಕೊಚ್ಚರ್
Director: ರಾಜ್‌ಕುಮಾರ್ ಹಿರಾನಿ
ಈ ವರ್ಷದ ಮೊದಲ ಬಾಲಿವುಡ್ ಹಿಟ್ ಸಿನಿಮಾ ನೀಡಿದ್ದು ನಟ ಶಾರುಖ್ ಖಾನ್. ಎರಡು ಪಕ್ಕಾ ಮಾಸ್ ಸಿನಿಮಾಗಳ ಮೂಲಕ ಸಿನಿಪ್ರಿಯರನ್ನು ರಂಜಿಸಿ ಬಾಕ್ಸ್ ಆಫೀಸ್ ದಾಖಲೆ ಉಡೀಸ್ ಮಾಡಿದ್ದರು. ಬಾಲಿವುಡ್ ಬಾದ್‌ಷಾ ಈ ವರ್ಷಾಂತ್ಯಕ್ಕೆ ಪಕ್ಕಾ ಕ್ಲಾಸ್ 'ಡಂಕಿ' ಚಿತ್ರದೊಂದಿಗೆ ನಿಮ್ಮ ಮುಂದೆ ಬಂದಿದ್ದಾರೆ.
ಸಿದ್ಧಾರ್ಥ್ ಆನಂದ್ ಅವರ 'ಪಠಾಣ್' ಮತ್ತು ಅಟ್ಲೀ ನಿರ್ದೇಶನದ 'ಜವಾನ್' ಸಿನಿಮಾಗಳ ಮೂಲಕ ಎರಡು ಸೂಪರ್ ಹಿಟ್ ಸಿನಿಮಾ ನೀಡಿ, ಇದೇ ಮೊದಲ ಬಾರಿಗೆ ಖ್ಯಾತ ನಿರ್ದೇಶಕ ರಾಜ್‌ಕುಮಾರ್ ಹಿರಾನಿ ಜೊತೆಗೆ ಶಾರುಖ್ ಖಾನ್ ಕೈ ಜೋಡಿಸಿದ್ದರು. ಹೀಗಾಗಿ 'ಡಂಕಿ' ಸಿನಿಮಾ ಬಗ್ಗೆ ನಿರೀಕ್ಷಿಗಳು ಹೆಚ್ಚಿದ್ದರು. ಕಾಮಿಡಿ ಮತ್ತು ಎಮೋಷನಲ್ ಸಿನಿಮಾ ಎಂದು ಈಗಾಗಲೇ ಚಿತ್ರದ ಟ್ರೈಲರ್, ಹಾಡುಗಳು ತಿಳಿದ್ದವು. ಸಿನಿಮಾ ಡಿಸೆಂಬರ್ 21 ರಂದು ಬಿಡುಗಡೆಯಾಗಿದ್ದು, 'ಡಂಕಿ' ಹೇಗಿದೆ ಎಂಬುದನ್ನು ತಿಳಿಯಲು ಮುಂದೆ ಓದಿ.

'ಡಂಕಿ' ಸಿನಿಮಾ ಕಥೆಯೇನು..?
ಹಾರ್ಡಿ ಸಿಂಗ್ ಡಿಲೋನ್ ಎಂಬ ಮಾಜಿ ಸೈನಿಕ ತನ್ನನ್ನು ರಕ್ಷಿಸಿದ ಯುವಕನನ್ನು ಹುಡುಕಿಕೊಂಡು ಪಠಾಣ್‌ಕೋಟ್‌ನಿಂದ ಲಾಲ್ಟು ಎಂಬ ಹಳ್ಳಿಗೆ ಬರುತ್ತಾನೆ. ಇಲ್ಲಿ ಲಂಡನ್‌ಗೆ ಹೋಗಿ ತಮ್ಮ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಬೇಕು ಎಂಬ ತವಕದಲ್ಲಿರುವ ನಾಲ್ಕರ ಗುಂಪು ಸಿಗುತ್ತದೆ. ಇಂಗ್ಲೀಷ್ ಬರದೆ, ಹಣವಿಲ್ಲದೇ ವೀಸಾ ಸಿಗದೆ ಪರದಾಡುವ ಅವರ ಜೀವನದಲ್ಲಿ ಹಠಾತ್ ತಿರುವು. ಲಂಡನ್ ಸೇರಲೇಬೇಕು ಎಂದು ಕಳ್ಳಮಾರ್ಗದಲ್ಲಿ ಹೋಗಲು ಜೀವ ಪಣಕ್ಕಿಡುವ ಅಸಹಾಯಕತೆ..ಇವರಿಗೆ ನೆರವಿಗೆ ನಿಲ್ಲುವ ಮಾಜಿ ಸೈನಿಕ... ಒಂದು ಚಂದದ ಲವ್ ಸ್ಟೋರಿ... ಕೊನೆಗೆ ಇವರ ಕಥೆ ಎಲ್ಲಿಗೆ ಬರುತ್ತದೆ ಎಂಬುದನ್ನು ಸಿನಿಮಾದಲ್ಲಿ ನೋಡಬೇಕು.
ಡಂಕಿ ಕಾಮಿಡಿಯೋ..ಭಾವುಕ ಸಿನಿಮಾವೋ...?
ಡಂಕಿ ಸಿನಿಮಾ ಗಂಭೀರ ವಿಷಯವನ್ನು ಹಾಸ್ಯದ ಮೂಲಕ ಜನರ ಮುಂದಿಟ್ಟಿದೆ. ಎಷ್ಟು ಹಾಸ್ಯಕ್ಕೆ ಪ್ರಾಮುಖ್ಯತೆ ನೀಡಲಾಗಿದೆಯೋ ಭಾವುಕತೆಗೂ ಅಷ್ಟೇ ಪ್ರಾಶಸ್ತ್ಯ ನೀಡಲಾಗಿದೆ. ಮುಖದಲ್ಲಿ ನಗು ಬರಿಸುವವರೇ ತಕ್ಷಣ ಬೇಸರಕ್ಕೆ ನೂಕುತ್ತಾರೆ. ಹೀಗಾಗಿ ಇದು ಟಿಪಿಕಲ್ ರಾಜ್‌ಕುಮಾರ್ ಹಿರಾನಿ ಸಿನಿಮಾ.

ಡಂಕಿಯಲ್ಲಿ ನಟನೆ ಹೇಗಿದೆ..?
ನಟ ಶಾರುಖ್ ಖಾನ್ ಈ ವರ್ಷ ಎರಡು ಭರ್ಜರಿ ಮಾಸ್ ಸಿನಿಮಾಗಳನ್ನು ನೀಡಿ ಸೂಪರ್ ಹೀರೋ ಅವತಾರ ಎತ್ತಿದ್ದಾರೆ. ಆದರೆ, ಈ ಸಿನಿಮಾದಲ್ಲಿ ಅವರು ಯಾವ ಹೀರೋನೂ ಅಲ್ಲ. ಒಬ್ಬ ಸಾಮಾನ್ಯ ವ್ಯಕ್ತಿಯಾಗಿ ಎರಡು ಶೇಡ್‌ಗಳಲ್ಲಿ ತಮ್ಮ ಪಾತ್ರವನ್ನು ಅಚ್ಚುಕಟ್ಟಾಗಿ ನಿಭಾಯಿಸಿದ್ದಾರೆ. ಇದು ಶಾರುಖ್ ಖಾನ್ ಸಿನಿಮಾ ಎನ್ನುವುದಕ್ಕಿಂತ ತಾಪ್ಸಿ ಪನ್ನು ಸಿನಿಮಾ ಎನ್ನಬಹುದು. ಅವರಿಗೆ ಹೆಚ್ಚು ಸ್ಕ್ರೀನ್ ಸ್ಪೇಸ್ ಸಿಕ್ಕಿದೆ. ವಿಕ್ಕಿ ಕೌಶಲ್ ಕೆಲವೇ ಹೊತ್ತು ತೆರೆ ಮೇಲಿದ್ದರೂ, ಸಿನಿಮಾ ಮುಗಿಯುವವರೆಗೂ ಕಾಡುತ್ತಾರೆ. ಅನಿಲ್ ಗ್ರೋವರ್, ವಿಕ್ರಮ್ ಕೊಚ್ಚರ್ ನಟನೆಗೂ ಹೆಚ್ಚು ಜಾಗ ಸಿಕ್ಕಿದೆ. ಇಂಗ್ಲೀಷ್ ಟೀಚರ್ ಆಗಿ ಬೊಮನ್ ಇರಾನಿ ಕೆಲ ಕಾಲ ಕಾಣಿಸಿಕೊಳ್ಳುತ್ತಾರೆ.
'ಡಂಕಿ 'ಚಿತ್ರದ ಪ್ಲಸ್ ಪಾಯಿಂಟ್
ಡಂಕಿ ಸಿನಿಮಾ ಉತ್ತಮ ಬದುಕು ಕಟ್ಟಿಕೊಳ್ಳಲು ಬೇರೆ ದೇಶಗಳಿಗೆ ತೆರಳಲು ಬಯಸುವ ವಲಸಿಗರ ಕಥೆ ಹೇಳುತ್ತದೆ. ಹೆಚ್ಚಾಗಿ ಪಂಜಾಬ್‌ನಲ್ಲಿರುವವರು ಲಂಡನ್ ಮತ್ತು ಕೆನಡಾಕ್ಕೆ ಹೋಗಲು ತುದಿಗಾಲಿನಲ್ಲಿ ನಿಂತಿರುತ್ತಾರೆ. ಇದು ಕೂಡ ಅದೇ ಧಾಟಿಯಲ್ಲಿದೆ. ಬೇರೆ ದೇಶಕ್ಕೆ ಹೋಗಲು ಬೇಕಾಗುವ ವೀಸಾ ನೀಡುವಾಗಿನ ತಾರತಮ್ಯವನ್ನು ರಾಜ್‌ಕುಮಾರ್ ಹಿರಾನಿ ತುಂಬಾ ಅಚ್ಚುಕಟ್ಟಾಗಿ ತಿಳಿಸಿದ್ದಾರೆ. ಸಿನಿಮಾದ ಕೊನೆಯಲ್ಲಿ ತೋರಿಸಲಾಗಿರುವ ಫೋಟೋಗಳು ನಿಮ್ಮನ್ನು ಒಮ್ಮೆ ಬೆಚ್ಚಿಬೀಳಿಸಬಹುದು.
'ಡಂಕಿ 'ಚಿತ್ರದ ಮೈನಸ್ ಪಾಯಿಂಟ್
ಸಿನಿಮಾ ಲಂಡನ್‌ಗೆ ಹೋಗಲು ಬಯಸುವವರ ಮತ್ತು ವಲಸಿಗರ ಕಷ್ಟದ ಬಗ್ಗೆ ಹೇಳಿದರೂ ಕೂಡ ಅದು ಸಮಸ್ಯೆ ಮೇಲೆ ಅಷ್ಟು ಗಂಭೀರ ಪರಿಣಾಮ ಬೀರುವುದಿಲ್ಲ ಎನಿಸುತ್ತದೆ. ಹಾಸ್ಯಕ್ಕೆ ಹೆಚ್ಚು ಒತ್ತು ನೀಡಿಲಾಗಿದ್ದು, ಡಂಕಿ (ಕಳ್ಳ ಮಾರ್ಗ) ದಾರಿಯಲ್ಲಿ ವಲಸೆ ಹೋಗಿ ನಾಪತ್ತೆಯಾದವರು, ದಾರಿ ಮಧ್ಯೆ ಹೆಣವಾದವರ ನೋವು, ಸಂಕಷ್ಟ ತೋರಿಸಿಲ್ಲ. ಈ ವಿವರಗಳು ಇದ್ದಿದ್ದರೇ ಸಿನಿಮಾಗೆ ಇನ್ನಷ್ಟು ಗಟ್ಟಿತನ ಬರುತ್ತಿತ್ತು.


Click it and Unblock the Notifications











