Game Changer Review: ಪ್ರಿಡಿಕ್ಟ್ ಮಾಡಿಬಿಡಬಹುದಾದ ಪೊಲಿಟಿಕಲ್ ಥ್ರಿಲ್ಲರ್ ಕಥೆ 'ಗೇಮ್ ಚೇಂಜರ್'
ಸ್ಟಾರ್ ನಟ, ಸ್ಟಾರ್ ನಿರ್ದೇಶಕ ಒಟ್ಟಿಗೆ ಸೇರಿ ಸಿನಿಮಾ ಮಾಡಿದ್ರೆ ಸಹಜವಾಗಿಯೇ ನಿರೀಕ್ಷೆ ಮೂಡುತ್ತದೆ. ಆದರೆ ರಾಮ್‌ಚರಣ್ ಹಾಗೂ ಶಂಕರ್ ಜೋಡಿಯ 'ಗೇಮ್ ಚೇಂಜರ್' ಸಿನಿಮಾ ಯಾಕೋ ಅಷ್ಟಾಗಿ ಸದ್ದು ಮಾಡಲಿಲ್ಲ. ಅದಕ್ಕೆ ಕಾರಣ ಅವರಿಬ್ಬರ ಹಿಂದಿನ ಚಿತ್ರಗಳ ಸೋಲು.
ಅಂತೂ ಇಂತೂ 'ಗೇಮ್ ಚೇಂಜರ್' ಸಿನಿಮಾ ತೆರೆಗಪ್ಪಳಿಸಿದೆ. ಬೆಳ್ಳಂಬೆಳಗ್ಗೆ ಪ್ರೇಕ್ಷಕರು ಸಿನಿಮಾ ನೋಡಿ ಎಂಜಾಯ್ ಮಾಡಿದ್ದಾರೆ. ಬಹಳ ಅದ್ಧೂರಿಯಾಗಿ ತಯಾರಾಗಿರುವ ಚಿತ್ರದಲ್ಲಿ ರಾಮ್‌ಚರಣ್ ತಂದೆ-ಮಗನಾಗಿ ದ್ವಿಪಾತ್ರದಲ್ಲಿ ನಟಿಸಿದ್ದಾರೆ. ಅಷ್ಟಕ್ಕೂ ಸಿನಿಮಾ ಹೇಗಿದೆ? ಕಥೆ ಏನು? ಶಂಕರ್ ಹಾಗೂ ಚರಣ್ ಗೆದ್ರಾ? ಮುಂದೆ ಓದಿ.

'ಗೇಮ್ ಚೇಂಜರ್' ಕಥೆ
ಉತ್ತರ ಭಾರತದಲ್ಲಿ IPS ಅಧಿಕಾರಿಯಾಗಿ ಸೇವೆ ಸಲ್ಲಿಸುತ್ತಿರುವ ರಾಮ್ ನಂದನ್(ರಾಮ್‌ಚರಣ್), ಬಳಿಕ IAS ಪಾಸ್ ಮಾಡಿ ಹುಟ್ಟೂರು ವಿಶಾಖಪಟ್ಟಣಕ್ಕೆ ಜಿಲ್ಲಾಧಿಕಾರಿಯಾಗಿ ವಾಪಸ್ ಬರ್ತಾನೆ. ಆಂಧ್ರ ಸಿಎಂ ಸತ್ಯಮೂರ್ತಿ(ಶ್ರೀಕಾಂತ್) ಹಾಗೂ ಆತನ ಸಾಕು ಮಕ್ಕಳಾದ ಬೊಬ್ಬಿಲಿ ಮೋಪಿದೇವಿ(ಎಸ್. ಜೆ ಸೂರ್ಯ) ಹಾಗೂ ರಾಮಚಂದ್ರ ರೆಡ್ಡಿ(ಜಯಾಮ್) ಸಚಿವರಾಗಿ ಭ್ರಷ್ಟಚಾರದಲ್ಲಿ ಮುಳುಗಿರುತ್ತಾರೆ.
ವಿಶಾಖಪಟ್ಟಣದಲ್ಲಿ ಭ್ರಷ್ಟಚಾರ ತಡೆಯಲು ಜಿಲ್ಲಾಧಿಕಾರಿ ರಾಮ್‌ನಂದನ್ ಮುಂದಾಗುತ್ತಾನೆ. ಆತನ ವಿರುದ್ಧ ಮೋಪಿದೇವಿ ತಿರುಗಿ ಬೀಳ್ತಾನೆ. ಸಿಎಂ ಪಟ್ಟಕ್ಕಾಗಿ ತಂದೆಯನ್ನೇ ಕೊಲ್ಲುತ್ತಾನೆ. ಆದರೆ ಸಿಎಂ ಪಟ್ಟ ರಾಮ್‌ನಂದನ್ ಪಾಲಾಗುವಂತಾಗುತ್ತದೆ. ಹಾಗಾದ್ರೆ ರಾಮ್‌ನಂದನ್ ಸಿಎಂ ಆಗ್ತಾನಾ? ಅದಕ್ಕೆ ಮೊಪಿದೇವಿ ಒಪ್ಪುತ್ತಾನಾ? ದುಷ್ಟ ಮೋಪಿರೆಡ್ಡಿಗೆ ಸಿಎಂ ಪಟ್ಟ ಸಿಗದಂತೆ ಮಾಡಲು ರಾಮ್‌ನಂದನ್ ಏನೆಲ್ಲಾ ಮಾಡ್ತಾನೆ? ಎನ್ನುವುದು ಗೊತ್ತಾಗಬೇಕು ಅಂದ್ರೆ ನೀವು 'ಗೇಮ್ ಚೇಂಜರ್' ಸಿನಿಮಾ ನೋಡಬೇಕು.
ಫಸ್ಟ್ ಹಾಫ್
ಕಥೆ ಹಳೆಯದ್ದೇ ಎನಿಸಿದರೂ ಶಂಕರ್ ಟ್ರೀಟ್‌ಮೆಂಟ್ ಹೊಸದಾಗಿದೆ. ಆದರೆ ಅದು ಇವತ್ತಿನ ಪ್ರೇಕ್ಷಕರಿಗೆ ಇಷ್ಟವಾಗುತ್ತಾ? ಎನ್ನುವುದು 'ಗೇಮ್ ಚೇಂಜರ್' ದೊಡ್ಡ ಹಿನ್ನಡೆ. ಫಸ್ಟ್ ಹಾಫ್ ವಿಚಾರಕ್ಕೆ ಬಂದರೆ ಖಡಕ್ ಆಕ್ಷನ್ ಸೀಕ್ವೆನ್ಸ್ ಜೊತೆ ಹೀರೊ ಆಗುತ್ತದೆ. ಅಲ್ಲಿಂದ ಕಥೆ ನೇರವಾಗಿ ವಿಶಾಖಪಟ್ಟಣ ಜಿಲ್ಲಾಧಿಕಾರಿ ಕಚೇರಿಗೆ ಶಿಫ್ಟ್ ಆಗುತ್ತದೆ. ಮೋಪಿರೆಡ್ಡಿ ಮತ್ತವನ ಗ್ಯಾಂಗ್ ಆಟಾಟೋಪಕ್ಕೆ ಬ್ರೇಕ್ ಹಾಕಲು ರಾಮ್‌ನಂದನ್ ಮುಂದಾಗುತ್ತಾನೆ. ಬಳಿಕ ಫ್ಲಾಶ್‌ಬ್ಯಾಕ್‌ನಲ್ಲಿ ರಾಮ್- ದೀಪಿಕಾ ಲವ್ ಸ್ಟೋರಿ ರಿವೀಲ್ ಆಗುತ್ತದೆ.
ನಡುವೆ ಎರಡು ಹಾಡುಗಳು ಬಂದು ಹೋಗುತ್ತದೆ. ಜಿಲ್ಲಾಧಿಕಾರಿಯ ಅಧಿಕಾರ ಹೇಗಿರುತ್ತದೆ? ವ್ಯವಸ್ಥೆಯನ್ನು ಸರಿಪಡಿಸಲು ಏನೆಲ್ಲಾ ಮಾಡಬಹುದು ಎನ್ನುವುದನ್ನು ಸಿನಿಮಾ ಸ್ಟೈಲ್‌ನಲ್ಲಿ ತೋರಿಸಲಾಗುತ್ತದೆ. ಅಷ್ಟರಲ್ಲೇ ಮೋಪಿ ರೆಡ್ಡಿ ಜೊತೆ ಜಿದ್ದು ಶುರುವಾಗುತ್ತದೆ. ದೊಡ್ಡ ಟ್ವಿಸ್ಟ್ ಜೊತೆಗೆ ಇಂಟರ್‌ವಲ್ ಕಾರ್ಡ್ ಬೀಳುತ್ತದೆ.

ಸೆಕೆಂಡ್ ಹಾಫ್
ರಾಮ್‌ನಂದನ್ ತಂದೆ ಅಪ್ಪಣ್ಣನ ಕಥೆ ಏನು? ನ್ಯಾಯಕ್ಕಾಗಿ ಹೋರಾಟ ಮಾಡುತ್ತಿದ್ದ ಆತ ಸ್ವಂತ ಪಕ್ಷ ಕಟ್ಟಿ ಜನರಿಗೆ ಜನಸೇವೆ ಮಾಡಲು ಮುಂದಾಗುತ್ತಾನೆ. ಆದರೆ ಜೊತೆಗಿರುವವರೇ ಆತನ ಬೆನ್ನಿಗೆ ಚೂರಿ ಹಾಕುತ್ತಾರೆ. ತಂದೆಯನ್ನು ಕಳೆದುಕೊಂಡ ರಾಮ್ ತಾಯಿಯಿಂದಲೂ ದೂರಾಗಿ ಓದಿ ವಿದ್ಯಾವಂತನಾಗುತ್ತಾನೆ. ಮುಂದೆ ತನ್ನ ತಂದೆಗೆ ಆದ ಅನ್ಯಾಯವನ್ನು ಅರಿತು ತಂದೆಯ ಆಶಯದಂತೆ ಭ್ರಷ್ಟಾಚಾರ ಮುಖ್ಯ ಸಮಾಜ ನಿರ್ಮಾಣಕ್ಕೆ ರಾಮ್ ಮುಂದಾಗುತ್ತಾನೆ.
'ಗೇಮ್ ಚೇಂಜರ್' ಚಿತ್ರದ ದೊಡ್ಡ ಹಿನ್ನಡೆ ಅಂದರೆ ಹೊಸತನ ಇಲ್ಲದೇ ಇರುವುದು. ಇದನ್ನೆಲ್ಲಾ 15 ವರ್ಷಗಳ ಹಿಂದಿನ ಸಿನಿಮಾಗಳಲ್ಲಿ ನೋಡಿಬಿಟ್ಟಿದ್ದೇವೆ ಅಲ್ಲವಾ? ಇವತ್ತು ಸಿನಿಮಾ ಅಂದರೆ ಬೇರೆ, ಇದನ್ನೆಲ್ಲಾ ಮೀರಿ ಬಂದುಬಿಟ್ಟಿದ್ದೇವೆ. ಮಾಸ್ ಅಂಶಗಳು ಇರಬೇಕು, ಎಲಿವೇಶನ್ ಸೀನ್ಸ್ ಇರಬೇಕು. ಆದರೆ ಇಲ್ಲಿ ಇರುವ ಅಂಶಗಳು ಪ್ರೇಕ್ಷಕರಿಗೆ ಅಷ್ಟು ಕಿಕ್ ಕೊಡಲ್ಲ. ಸೀದಾ ಸಾದಾ ಸಿನಿಮಾ ಎನಿಸಿಬಿಡುತ್ತದೆ.
ಶಂಕರ್ ರೀತಿಯ ಸ್ಟಾರ್ ಡೈರೆಕ್ಟರ್, ರಾಮ್‌ಚರಣ್ ರೀತಿಯ ಸ್ಟಾರ್ ನಟ ಜೊತೆಯಾಗಿದ್ದಾರೆ ಅಂದರೆ ಪ್ರೇಕ್ಷಕರ ನಿರೀಕ್ಷೆ ಹೆಚ್ಚಿರುತ್ತದೆ. ಆದರೆ ಆ ಮಟ್ಟಕ್ಕೆ ಸಿನಿಮಾ ರಂಜಿಸುವುದಿಲ್ಲ. ನಾಯಕ ಚಿತ್ರದಲ್ಲಿ "ಐ ಯಾಮ್ ಅನ್‌ಪ್ರಿಡಿಕ್ಟಬಲ್" ಎಂದು ಡೈಲಾಗ್ ಹೊಡೆಯುತ್ತಾನೆ. ಆದರೆ ಮೊದಲ ಒಂದು ಗಟೆ ಸಿನಿಮಾ ನೋಡಿದ ಮೇಲೆ ಮುಂದೇನು ಎನ್ನುವುದನ್ನು ಪ್ರೇಕ್ಷಕರು ಸುಲಭವಾಗಿ ಪ್ರಿಡಿಕ್ಟ್ ಮಾಡಿಬಿಡಬಹುದು.
ಸಿನಿಮಾ ಹೇಗಿದೆ?
ನಿರ್ದೇಶಕ ಶಂಕರ್ ತಮ್ಮ ಬಹುತೇಕ ಸಿನಿಮಾಗಳಲ್ಲಿ ಸಾಮಾಜಿಕ ಸಮಸ್ಯೆಗಳ ಬಗ್ಗೆ ಚರ್ಚಿಸಿದ್ದಾರೆ. ಮುಖ್ಯವಾಗಿ ಭ್ರಷ್ಟಾಚಾರದ ವಿರುದ್ಧ ಹೋರಾಟ ಅವರ ಕಥೆಗಳಲ್ಲಿ ಇರುತ್ತದೆ. 'ಗೇಮ್ ಚೇಂಜರ್' ಕೂಡ ಅದರಿಂದ ಹೊರತಾಗಿಲ್ಲ. ಆದರೆ ಈ ಬಾರಿ ಜಿಲ್ಲಾಧಿಕಾರಿ, ಸಚಿವರು, ಚುನಾವಣಾಧಿಕಾರಿಗಳ ಅಧಿಕಾರ ವ್ಯಾಪ್ತಿ ಏನು? ಇನ್ನುವ ಅಂಶಗಳನ್ನು ಇಟ್ಟುಕೊಂಡು ಕಥೆಯನ್ನು ಹೆಣೆದಿದ್ದಾರೆ. ತಂದೆ ಮಗನಾಗಿ ದ್ವಿಪಾತ್ರದಲ್ಲಿ ರಾಮ್‌ಚರಣ್ ನಟನೆ ಇಷ್ಟವಾಗುತ್ತದೆ. ಆದರೆ ರೋಟೀನ್ ಸ್ಟೋರಿ ಆಗಿರುವುದರಿಂದ ಮತ್ತಷ್ಟು ವೇಗವಾಗಿ ಹೇಳಿ ಮುಗಿಸಬಹುದಿತ್ತು ಎನಿಸದೇ ಇರಲ್ಲ.
ಕಲಾವಿದರ ಅಭಿನಯ
ರಾಮ್‌ಚರಣ್ ಇಡೀ ಸಿನಿಮಾ ಆವರಿಸಿಕೊಂಡಿದ್ದಾರೆ. ಜಿಲ್ಲಾಧಿಕಾರಿ ರಾಮ್‌ನಂದನ್ ಹಾಗೂ ಹೋರಾಟಗಾರ ಅಪ್ಪಣ್ಣ ಆಗಿ ಇಷ್ಟವಾಗುತ್ತಾರೆ. ಬಿಕ್ಕಳಿಕೆ ಸಮಸ್ಯೆಯಿಂದ ಬಳಲುವ ಅಪ್ಪಣ್ಣ ಪಾತ್ರದಲ್ಲಿ ಹೆಚ್ಚು ಅಂಕ ಗಿಟ್ಟಿಸುತ್ತಾರೆ. ಇನ್ನು ನಾಯಕಿಯಾಗಿ ಕಿಯಾರಾಗೆ ಹೆಚ್ಚು ಕೆಲಸ ಇಲ್ಲ. ಭ್ರಷ್ಟ ರಾಜಕಾರಣಿ ಆಗಿ ಎಸ್. ಜೆ ಸೂರ್ಯ ಅಬ್ಬರಿಸಿದ್ದಾರೆ. ಕೆಲ ಸನ್ನಿವೇಶಗಳಲ್ಲಿ ರಾಮ್‌ಚರಣ್ ಕೂಡ ಅವರ ಮುಂದೆ ಡಲ್ಲಾಗಿಬಿಟ್ಟಿದ್ದಾರೆ.
ಅಂಜಲಿ, ಶ್ರೀಕಾಂತ್, ಸಮುದ್ರಖನಿ ಎಲ್ಲರೂ ತಮ್ಮ ಪಾತ್ರಗಳಿಗೆ ನ್ಯಾಯ ಒದಗಿಸಿದ್ದಾರೆ. ಹಾಸ್ಯ ನಟ ಸುನೀಲ್ ಪಾತ್ರವನ್ನು ಬಹಳ ವಿಭಿನ್ನವಾಗಿ ಡಿಸೈನ್ ಮಾಡಿದ್ದಾರೆ. ಆದರೆ ಕೊನೆ ಕೊನೆಗೆ ಅದನ್ನು ನೋಡುವುದು ಕಸಿವಿಸಿ ಎನಿಸಿಬಿಡುತ್ತದೆ.
ಟೆಕ್ನಿಕಲಿ 'ಗೇಮ್ ಚೇಂಜರ್'
ಕಥೆ ಸಿಂಪಲ್ ಅನ್ನಿಸಿದರೂ ಅದನ್ನು ರೋಚಕವಾಗಿ ತೆರೆಗೆ ತರಲು ಶಂಕರ್ ಶ್ರಮ ಹಾಕಿದ್ದಾರೆ. ಪ್ರತಿಫ್ರೇಮ್ ಕಣ್ಣಿಗೆ ಹಬ್ಬ ಎನ್ನುವಂತೆ ಚಿತ್ರಿಸುವ ಪ್ರಯತ್ನ ಮಾಡಿದ್ದಾರೆ. ಪ್ರತಿ ಸನ್ನಿವೇಶದಲ್ಲಿ ಜನ ತುಂಬಿ ತುಳುಕುತ್ತಾರೆ. ಎಲ್ಲವೂ ಅದ್ಧೂರಿ ಎನ್ನುವಂತಿದೆ. ಕೆಲ ಲಾಜಿಕ್ ಇಲ್ಲದ ಸನ್ನಿವೇಶಗಳು ಚಿತ್ರದಲ್ಲಿದೆ. ತಿರು ಛಾಯಾಗ್ರಹಣ ಪೂರಕವಾಗಿದೆ. ತಮ್ಮ ಸಂಗೀತ ಸಾಧ್ಯವಾದಷ್ಟು ಚಿತ್ರಕ್ಕೆ ಬಲ ತುಂಬಿದೆ. ಆದರೆ ಒಂದಷ್ಟು ಸನ್ನಿವೇಶಗಳ ಕತ್ತರಿ ಹಾಕಿದ್ದರೆ ಸಿನಿಮಾ ಮತ್ತಷ್ಟು ಇಷ್ಟವಾಗುವ ಸಾಧ್ಯತೆಯಿತ್ತು.
ಕೊನೆ ಮಾತು
'ಗೇಮ್ ಚೇಂಜರ್' ಇವತ್ತಿನ ಪ್ರೇಕ್ಷಕರು ಕೇಳುವ ಮಾಸ್ ಸಿನಿಮಾ ಅಲ್ಲ, ಬದಲಿಗೆ ಶಂಕರ್ ಸ್ಟೈಲ್ ಕ್ಲಾಸ್ ಸಿನಿಮಾ. ಯಾವುದೇ ನಿರೀಕ್ಷೆ ಇಲ್ಲದೇ ಚಿತ್ರಮಂದಿರಕ್ಕೆ ಹೋದರೆ ಇಷ್ಟವಾಗಬಹುದು. 'ಇಂಡಿಯನ್-2' ಸೋಲಿನ ಬಳಿಕ 'ಗೇಮ್ ಚೇಂಜರ್' ಮೂಲಕ ಶಂಕರ್ ಕಂಬ್ಯಾಕ್ ಮಾಡುತ್ತಾರೆ ಎನ್ನುವ ನಿರೀಕ್ಷೆ ಇತ್ತು. ಆದರೆ ಆ ಪ್ರಯತ್ನದಲ್ಲಿ ಸಂಪೂರ್ಣವಾಗಿ ಗೆದ್ದಿಲ್ಲ ಎನ್ನಬಹುದು. ಒಟ್ಟಾರೆ ಸಿನಿಮಾ ಆವರೇಜ್ ಲಿಸ್ಟ್ ಸೇರುವಂತಿದೆ.


Click it and Unblock the Notifications











