Gantumoote review: ಮುಗ್ದ ಮನಸ್ಸುಗಳ ಪ್ರೀತಿ ತುಂಬಿದ 'ಗಂಟುಮೂಟೆ'
90ರ ದಶಕದ ಬ್ಯಾಕ್ ಡ್ರಾಪ್ ನಲ್ಲಿ ಗಂಟುಮೂಟೆ ಸಿನಿಮಾ ಮೂಡಿ ಬಂದಿದೆ. ಹೈಸ್ಕೂಲ್ ಹೊಸ್ತಿಲಲ್ಲಿ ಯುವತಿಯ ಮನಸ್ಸಿನ ತಳಮಳ, ಹದಿಹರಿಯದ ವಯಸ್ಸಿನವರ ಆಸೆಗಳು, ಸಿನಿಮಾ ಮತ್ತು ನಿಜ ಜೀವನ ಎರಡು ಒಂದೆ ಎಂದು ಭ್ರಮೆಯಲ್ಲಿ ಬದುಕುವ ವಯಸ್ಸಿನ ಕಥೆಯನ್ನು 'ಗಂಟುಮೂಟೆ' ಮೂಲಕ ಕಟ್ಟಿಕೊಂಡಿದ್ದಾರೆ ನಿರ್ದೇಶಕಿ ರೂಪ ರಾವ್.
ಹೈಸ್ಕೂಲ್ ಹೋಗುವ ಮೀರಾ ಚಿತ್ರದ ನಾಯಕಿ. ಸಂಪೂರ್ಣ ಸಿನಿಮಾಕಥೆ ಮೀರಾ ಮೇಲೆ ನಡೆಯುತ್ತೆ. ಹೈಸ್ಕೂಲ್ ಜೀವನ, ಆಕೆಯ ಆಸೆಗಳು, ಮೊದಲ ಪ್ರೀತಿ, ಪ್ರಣಯದ ವಿಚಾರವನ್ನು ಗಂಟುಮೂಟೆ ಮೂಲಕ ಸುಂದರವಾಗಿ ಕೊಟ್ಟಿಕೊಡಲಾಗಿದೆ. ಸಂಪೂರ್ಣ ಸಿನಿಮಾ ನಾಯಕಿಯ ದೃಷ್ಟಿಕೋನದಲ್ಲಿ ನಿರೂಪಣೆ ಇರುವುದು ವಿಶೇಷ. ಕನ್ನಡ ಚಿತ್ರರಗಂದ ಮಟ್ಟಿಗೆ ಇದು ಹೊಸತು ಎನಿಸುತ್ತೆ. ಯಾಕಂದ್ರೆ ಸ್ಯಾಂಡಲ್ ವುಡ್ ನಲ್ಲಿ ನಾಯಕಿಯ ದೃಷ್ಟಿಕೋನದಲ್ಲಿ ಸಿನಿಮಾ ನಿರೂಪಣೆ ಇರುವುದು ತೀರ ಅಪರೂಪ.
ನಿರ್ದೇಶಕಿ ರೂಪ ರಾವ್ ಗಂಟುಮೂಟೆ ಹೊಸ ರೀತಿಯ ನಿರೂಪಣೆ ಶೈಲಿ ಮಹಿಳಾ ಪ್ರೇಕ್ಷಕರಿಗೆ ಇಷ್ಟವಾಗಲಿದೆ. ಬೆಂಗಳೂರಿನ ಮಧ್ಯಮವರ್ಗ ಕುಟುಂಬದ ಮುಗ್ಧ ಹುಡುಗಿ ಮೀರಾ. ಓದಿನಲ್ಲಿ ಟಾಪರ್. ಸಲ್ಮಾನ್ ಖಾನ್ ಅಭಿನಯದ "ಹಮ್ ಆಪ್ಕೆ ಹೈನ್ ಕೌನ್" ಸಿನಿಮಾ ನೋಡಿದ ಮೀರಾ, ತನ್ನ ಜೀವನವು ಹಾಗೆ ನಡೆಯುತ್ತೆ ಎನ್ನುವ ಭ್ರಮೆಯಲ್ಲಿ ಬದುಕುತಾಳೆ.

ಸಲ್ಮಾನ್ ಖಾನ್ ಹಾಗೆ ಆಡುವ ಮಧುನನ್ನ ಕ್ಲಾಸ್ ರೂಮ್ ನಲ್ಲಿ ನೋಡಿದ ಮೀರಾಗೆ ಆತನ ಮೇಲೆ ಪ್ರೀತಿ ಶುರುವಾಗುತ್ತೆ. ಆ ನಂತರ ಇಬ್ಬರ ನಡುವೆ ಏನೆಲ್ಲ ನಡೆಯುತ್ತೆ, ಮೀರಾಗೆ ಓದು, ಪ್ರೀತಿ, ಪ್ರಣಯ, ಸಿನಿಮಾ ಮತ್ತು ನಿಜ ಜೀವನ ಏನು ಎನ್ನುವುದರ ಬಗ್ಗೆ ಅರಿವಾಗುತ್ತಾ ಎನ್ನುವುದನ್ನು ತಿಳಿದುಕೊಳ್ಳಬೇಕು ಅಂದ್ರೆ ಸಿನಿಮಾ ನೋಡಬೇಕು.
ಮೀರಾ ಪಾತ್ರದಲ್ಲಿ ಕಾಣಿಸಿಕೊಂಡಿರುವ ಪ್ರಕಾಶ್ ಬೆಳ್ವಾಡಿ ಪುತ್ರಿ ತೇಜು ಬೆಳ್ವಾಡಿ ಮೊದಲ ಸಿನಿಮಾದಲ್ಲೆ ಪ್ರೇಕ್ಷಕರ ಮನಗೆಲ್ಲುತ್ತಾರೆ. ಸಹಪಾಠಿಯಾಗಿ ನಟಿಸಿರುವ ನಿಶ್ಚಿತ್ ಕೊರೋಡಿ ಕೂಡ ನೋಡುಗರ ಗಮನ ಸೆಳೆಯುತ್ತಾರೆ. ಈ ಸಿನಿಮಾ ನೋಡಿದ ಮೇಲೆ ಅದರಲ್ಲು 90 ದಶಕದಲ್ಲಿ ಹೈಸ್ಕೋಲ್ ಜೀವನ ಅನುಭವಿಸಿದವರಿಗೆ ಈ ಸಿನಿಮಾ ನೆನಪುಗಳ ಮೂಟೆಯನ್ನು ಹೊತ್ತುತರುವುದರಲ್ಲಿ ಯಾವುದೆ ಅನುಮಾನವಿಲ್ಲ.


Click it and Unblock the Notifications











