twitter
    For Quick Alerts
    ALLOW NOTIFICATIONS  
    For Daily Alerts

    ಮಹೇಂದರ್‌ ನಿರ್ದೇಶಕನಾಗಿ ಗೆದ್ದಿದ್ದಾರೆ. ಉಳಿದಂತೆ ಮಹೇಂದರ್‌- ಶ್ರುತಿ ಜೋಡಿಗಿಂತ ದೊಡ್ಡಣ್ಣ - ಶ್ರುತಿ ಜೋಡಿಯೇ ಹೆಚ್ಚು ಸ್ಕೋರ್‌ ಮಾಡುತ್ತದೆ

    By Staff
    |

    ಚಿತ್ರ : ಗಟ್ಟಿ ಮೇಳನಿರ್ದೇಶನ : ಮಹೇಂದರ್‌, ಸಂಗೀತ : ಹಂಸಲೇಖಾತಾರಾಗಣ : ಶ್ರುತಿ, ಮಹೇಂದರ್‌, ದೊಡ್ಡಣ್ಣ
    *ಎಂ. ವಿನೋದಿನಿ

    ನಿರ್ದೇಶಕ ಮಹೇಂದರ್‌ ಹೀರೋ ಆಗಿದ್ದಾರೆ. ಅವರ ಪತ್ನಿ ಶ್ರುತಿ ನಿರ್ಮಾಪಕಿಯಾಗಿದ್ದಾರೆ. ಗಟ್ಟಿ ಮೇಳ ಚಿತ್ರ ಬಂದಿದೆ. ಚಿತ್ರದ ಹೈಲೈಟ್‌ ಕೂಡ ಇದೇ.

    ಗ್ರಾಮೀಣ ಪರಿಸರದ ಚಿತ್ರಗಳನ್ನು ನಿರ್ದೇಶಿಸುವುದರಲ್ಲಿ ಎತ್ತಿದ ಕೈ ಅನಿಸಿರುವ ಮಹೇಂದರ್‌ಗೆ ಆ ಮೂಲಕವೇ ಒಂದು ಇಮೇಜ್‌ ಪ್ರಾಪ್ತಿಯಾಗಿದ್ದುಂಟು. ಆದರೆ ಅದನ್ನು ಗಟ್ಟಿಮೇಳ ಚಿತ್ರದಲ್ಲಿ ಕ್ಯಾಶ್‌ ಮಾಡಿಕೊಳ್ಳುವ ಪ್ರಯತ್ನವನ್ನೇ ಮಹೇಂದರ್‌ ಮಾಡಿಲ್ಲ ಅನ್ನೋದು ಮೊದಲ ಅಚ್ಚರಿ. ಇಲ್ಲಿ ಅವರು ಪಟ್ಟಣದ ಹೀರೋ. ಟೀ ಶರ್ಟ್‌ ಧರಿಸಿದಾಕ್ಷಣ ಇಮೇಜ್‌ ಬದಲಾಗುವುದಿಲ್ಲ. ಹಾಗಾಗಿ ಚಿತ್ರದುದ್ದಕ್ಕೂ ಮಹೇಂದರ್‌ ಪಾತ್ರ, ಮುಷ್ಟಿಯಲ್ಲಿ ಚಣಕಾಲ ಹಿಡಿದಿಟ್ಟು ಅನಂತರ ಹೊರಗೆ ಬಿಟ್ಟ ಹಕ್ಕಿಯಂತಾಗಿದೆ. ಇದೂ ಸಾಲದು ಎಂಬಂತೆ ಫೈಟ್‌, ಹಾಡು ಮೊದಲಾದ ಎಕ್‌ಸ್ಟ್ರಾ ಜವಾಬ್ದಾರಿಗಳನ್ನು ಅನಗತ್ಯವಾಗಿ ಅವರು ತಮ್ಮ ಮೇಲೆ ಹೇರಿಕೊಂಡಿದ್ದಾರೆ.

    ಹೀಗೆ ನಾಯಕನಾಗಿ ಮಹೇಂದರ್‌ ಮಾಡುವ ಡ್ಯಾಮೇಜನ್ನು ರಿಪೇರಿ ಮಾಡುವ ಕೆಲಸ ಯಥಾ ಪ್ರಕಾರ ಶ್ರುತಿ ಹೆಗಲಿಗೆ ಬಿದ್ದಿದೆ. ಅವರು ಸೀಸನ್‌ಡ್‌ ನಟಿ, ಹಾಗಾಗಿ ತಮಗೆ ಸಿಕ್ಕ ಹಳ್ಳಿಯ ಮುಗ್ಧೆಯ ಪಾತ್ರವನ್ನು ಲೀಲಾ ಜಾಲವಾಗಿ ನಿರ್ವಹಿಸಿದ್ದಾರೆ. ಅದರಲ್ಲೂ ದೊಡ್ಡಣ್ಣ- ಶ್ರುತಿ ಜೋಡಿ ಸಾಧನೆ, ಮಹೇಂದರ್‌-ಶ್ರುತಿ ಜೋಡಿಯ ಸಾಧನೆಯನ್ನು ಮೀರಿ ನಿಲ್ಲುತ್ತದೆ.

    ಚಿತ್ರಕಥೆ ಆರಂಭವಾಗುವುದೇ ಮುರಿದು ಬೀಳುವ ಮದುವೆಯಾಂದಿಗೆ. ನಾಯಕನಿಗೆ ಗೊತ್ತಾಗಿದ್ದ ಮೀನಾಕ್ಷಿ , ಮದುವೆ ದಿನವೇ ನಾಪತ್ತೆ. ಇದಕ್ಕೆ ಪರಿಹಾರವಾಗಿ ಆಕೆಯ ತಂಗಿ ಗಿರಿಜಾಳನ್ನೇ ನಾಯಕನಿಗೆ ಕೊಡಲಾಗುತ್ತದೆ. ಅಚಾನಕ್ಕಾಗಿ ಒಲಿದು ಬಂದ ಕಂಕಣ ಭಾಗ್ಯವನ್ನು ವಿಷಾದದಿಂದಲೇ ಒಪ್ಪಿಕೊಳ್ಳುವ ಗಿರಿಜಾ ಪ್ರಸ್ತದಂದೇ ನಾಯಕನ ಕೆನ್ನೆಗೆ ಬಾರಿಸುತ್ತಾಳೆ. ಅಲ್ಲಿಂದ ಗಂಡ ಹೆಂಡತಿ ಪಟ್ಟಣಕ್ಕೆ ಬರುತ್ತಾರೆ. ವಠಾರವೊಂದರಲ್ಲಿ ಸಂಸಾರ. ಅಲ್ಲಿಯ ಹೆಂಗಸರ ಗಾಸಿಪ್‌ಗೆ ಈ ಜೋಡಿ ಆಹಾರ. ಬಾರ್‌ನಲ್ಲಿ ಕೆಲಸ ಮಾಡುವ ಗಂಡನ ಮೇಲೆ ಹೆಂಡತಿ ಅನುಮಾನ ಪಡುತ್ತಾಳೆ. ಆತ ಕುಡುಕನಲ್ಲ ಎಂದು ಗೊತ್ತಾದಾಗ ಪಶ್ಚಾತ್ತಾಪ. ಮತ್ತೆ ಆತ ಪರಸ್ತ್ರೀ ಪ್ರೇಮಿ ಅನ್ನುವ ಮತ್ತೊಂದು ಗಾಸಿಪ್‌. ಮತ್ತೆ ವಿರಸ, ಪಶ್ಚಾತ್ತಾಪ. ಕೊನೆಗೆ ಗಿರಿಜಾ ಮಕ್ಕಳನ್ನು ಹೆರುವಲ್ಲಿಗೆ ಸುಖಾಂತ.

    ಕಥೆಯ ಎಳೆ ಸೂಕ್ಷ್ಮವಾಗಿರುವುದರಿಂದ ಮಹೇಂದರ್‌ ಘಟನೆಗಳ ಮೊರೆ ಹೋಗಿದ್ದಾರೆ. ವಠಾರ ಹಾಗೂ ಅಲ್ಲಿರುವ ಸಂಸಾರಗಳ ಹಾಡು ಪಾಡುಗಳನ್ನು ಚೆನ್ನಾಗಿ ಬಳಸಿಕೊಂಡಿದ್ದಾರೆ. ವಠಾರದ ಮಾಲಿಕನ ಪಾತ್ರದಲ್ಲಿ ನಟಿಸಿರುವ ದೊಡ್ಡಣ್ಣ ಅವರ ಮೇಲೆಯೇ ಚಿತ್ರದ ಎರಡನೇ ಭಾಗ ಕೇಂದ್ರೀಕೃತವಾಗಿರುವುದೂ ಮಹೇಂದರ್‌ ಜಾಣ್ಮೆಗೆ ನಿದರ್ಶನ. ಪತ್ನಿ ತೀರ್ಥ ಯಾತ್ರೆಗೆ ಹೋದಾಕ್ಷಣ ಮತ್ತೊಬ್ಬ ಹೆಣ್ಣಿನ ಪ್ರೇಮ ಪಾಶದಲ್ಲಿ ಸಿಕ್ಕು ವಿಲ ವಿಲ ಒದ್ದಾಡುವ ದೊಡ್ಡಣ್ಣ ಕೊನೆಗೆ ಇಬ್ಬರು ಹೆಂಡಿರ ಮಧ್ಯೆ ಸ್ಯಾಂಡ್‌ವಿಚ್‌ ಆಗುವಲ್ಲಿಗೆ ಒಂದು ಜೋಕು ಮುಕ್ತಾಯ. ಇದೇ ಥರ ಹತ್ತಾರು ಹಾಸ್ಯ ಪ್ರಸಂಗಗಳು ಚಿತ್ರಕತೆಯಾಳಗೆ ಚೆನ್ನಾಗಿ ಜಮೆಯಾಗಿವೆ. ಆದರೆ ಹಾಸ್ಯ ಪ್ರಸಂಗದಲ್ಲಿ ಗೆಲ್ಲುವುದು ಮಾತಿನ ವರಸೆಯೇ. ಕೆಲವೊಮ್ಮೆ ಮಹೇಂದರ್‌ ತಮ್ಮ ಸಂಭಾಷಣಾ ಸಾಮರ್ಥ್ಯದ ಬಗ್ಗೆ ಅತಿಯಾದ ಆತ್ಮವಿಶ್ವಾಸ ಇಟ್ಟುಕೊಂಡಿದ್ದಾರೆ ಅನ್ನುವುದಕ್ಕೂ ಸ್ಯಾಂಪಲ್‌ ಸಿಗುತ್ತದೆ. ಉದಾಹರಣೆಗೆ ನೈಟಿ ಧರಿಸಿದ ಗೃಹಿಣಿಗೆ ಕಿಟಕಿ ಇರುವ ಡ್ರೆಸ್‌ ಹಾಕಿಕೊಂಡಿದ್ದೀಯಾ ಎಂದು ನಾಯಕ ಗೇಲಿ ಮಾಡುವ ಸಂದರ್ಭ.

    ಮಧ್ಯೆ ವಿನಾ ಕಾರಣ ಖುಷಿಕೊಡುವ ಹಾಡು ಸಂಗೀತವನ್ನು ಹಂಸಲೇಖಾ ನೀಡುತ್ತಾರೆ. ಮಹೇಂದರ್‌ ಡ್ಯಾನ್ಸ್‌ ಸಹಿಸಿಕೊಂಡರೆ ಹಾಡನ್ನು ಸಂತೋಷದಿಂದ ಆಲಿಸಬಹುದು. ಹಾಗಿದ್ದೂ, ಮಹೇಂದರ್‌ ಶ್ರುತಿ ಪ್ರೇಮ ಸಲ್ಲಾಪ ತೆರೆಯ ಮೇಲೆಯೂ ಮುಂದುವರಿದಿಲ್ಲ ಅನ್ನುವುದು ನೆಮ್ಮದಿಯ ಸಂಗತಿ.

    ಟೆಲಿಫಿಲಂಗಳನ್ನು ಇಷ್ಟಪಡುವವರು ಗಟ್ಟಿಮೇಳ ಚಿತ್ರವನ್ನು ನೋಡಬಹುದು. ಮೆಸೇಜ್‌ನ ಕಾಟವಿಲ್ಲದೆ ಸುಮ್ಮನೆ ಸಾಗುವ ಚಿತ್ರವಿದು.

    ಮುಖಪುಟ / ಸ್ಯಾಂಡಲ್‌ವುಡ್‌

    Wednesday, April 24, 2024, 16:19
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X