Ghost Review: ಶಿವಣ್ಣ-ಜಯರಾಮ್ ನಡುವಿನ ಹಾವು ಏಣಿ ಆಟ.. ಗೆದ್ದೋರು ಯಾರು?
ದಕ್ಷಿಣ ಭಾರತದಲ್ಲಿ ಸೆಂಚುರಿ ಸ್ಟಾರ್ ಶಿವರಾಜ್‌ಕುಮಾರ್ ಕ್ರೇಜ್ ದುಪ್ಪಟ್ಟಾಗಿದೆ. 'ಜೈಲರ್' ಸಿನಿಮಾ ನೋಡಿ ಶಿವಣ್ಣನನ್ನು ಮೆಚ್ಚಿಕೊಂಡಿರೋ ಅಭಿಮಾನಿಗಳು 'ಘೋಸ್ಟ್' ನೋಡುವುದಕ್ಕೆ ತುದಿಗಾಲಲ್ಲಿ ನಿಂತಿದ್ದರು. ಹೀಗಾಗಿ ಶಿವಣ್ಣ ಹಾಗೂ ಶ್ರೀನಿ ಕಾಂಬಿನೇಷನ್‌ನ ಮೊದಲ ಸಿನಿಮಾದ ಮೇಲೆ ನಿರೀಕ್ಷೆ ಇದ್ದಿದ್ದು ನಿಜ.
ಶಿವಣ್ಣ ಖದರ್, ಲುಕ್ ಒಂದು ಕಡೆಯಾದರೆ, ಇನ್ನೊಂದು ಕಡೆ ಶಿವಣ್ಣನ ಮಾಸ್ ಎಂಟ್ರಿ ಹೇಗಿರುತ್ತೋ ಅನ್ನೋ ಕುತೂಹಲವಿತ್ತು. ಮಧ್ಯರಾತ್ರಿಯಿಂದಲೇ 'ಘೋಸ್ಟ್' ಸ್ಪೆಷಲ್ ಶೋ ಕಂಡಿದೆ. ರಾತ್ರಿ 12 ಗಂಟೆಯ ಮೇಲೆ ಫ್ಯಾನ್ಸ್‌ಗಾಗಿ ವಿಶೇಷ ಪ್ರದರ್ಶನವನ್ನೂ ಹಮ್ಮಿಕೊಳ್ಳಾಗಿತ್ತು.

ಒರಿಜಿನಲ್ ಗ್ಯಾಂಗ್‌ಸ್ಟರ್ ಅಂತ ಕ್ರೇಜ್ ಹುಟ್ಟಿಸಿರೋ 'ಘೋಸ್ಟ್' ಥ್ರಿಲ್ಲಿಂಗ್ ಆಗಿದೆಯಾ? ಶಿವಣ್ಣನ ಖದರ್ ಹೇಗಿದೆ? ಬ್ಯಾಕ್‌ಗ್ರೌಂಡ್ ಮ್ಯೂಸಿಕ್ ಹೇಗಿದೆ? ಪ್ಯಾನ್ ಇಂಡಿಯಾ ರಿಲೀಸ್ ಮಾಡುವ ಸಿನಿಮಾ? ಸಿನಿಮಾದ ಪ್ಲಸ್ ಏನು? ಮೈನಸ್ ಏನು? ಅನ್ನೋದನ್ನು ತಿಳಿಯಲು ಮುಂದೆ ಓದಿ.
ಒರಿಜಿನಲ್ ಗ್ಯಾಂಗ್‌ಸ್ಟರ್ ಹಿನ್ನೆಲೆಯೇನು?
'ಘೋಸ್ಟ್' ಒಂದು ಜೈಲ್ ಹೈಜಾಕ್ ಮಾಡುವ ಕಥೆ. ಅದನ್ನು ಮಾಡೋದು ಶಿವಣ್ಣ. ಅಷ್ಟಕ್ಕೂ ಶಿವಣ್ಣ ಯಾಕೆ ಜೈಲ್ ಅನ್ನು ಹೈಜಾಕ್ ಮಾಡಿದ್ರು? ಈ ಹೈಜಾಕ್ ಹಿಂದಿರೋ ಐಡಿಯಾ ಏನು? ಹಣಕ್ಕಾಗಿ ಮಾಡಿದ್ರಾ ಅಥವಾ ವೈಯಕ್ತಿಕ ಕಾರಣಕ್ಕೆ ಹೈಜಾಕ್ ಮಾಡಿದ್ರಾ? ಅನ್ನೋ ಪ್ರಶ್ನೆಗೆ ಉತ್ತರ ಹುಡುಕುತ್ತಾ ಹೋಗುವುದೇ 'ಘೋಸ್ಟ್'. ಕೇವಲ 48 ಗಂಟೆಗಳಲ್ಲಿ ನಡೆಯುವ ಕಥೆಯಾಗಿದ್ದರಿಂದ ವೇಗವಾಗಿ ಸಿನಿಮಾ ಸಾಗುತ್ತೆ. ಹೀಗಾಗಿ 'ಘೋಸ್ಟ್' ಮೊದಲ ಬಾರಿ ನೋಡುವವರಿಗೆ ಇಂಟ್ರೆಸ್ಟಿಂಗ್ ಅಂತ ಅನಿಸುತ್ತೆ.
ಶಿವಣ್ಣ-ಜಯರಾಮ್ ನಡುವೆ ಹಾವು ಏಣಿ ಆಟ
ಶಿವಣ್ಣ ಏಳೆಂಟು ಖೈದಿಗಳನ್ನು ಬಳಸಿ ಜೈಲಿನ ಸಿಬ್ಬಂದಿಗಳನ್ನೇ ಯಾಮಾರಿಸುತ್ತಾರೆ. ಶಿವಣ್ಣ ಕೊನೆವರೆಗೂ ತಾನ್ಯಾರು ಮತ್ತು ತನ್ನ ಹಿಂದೆ ಇರೋದ್ಯಾರು ಅನ್ನೋದನ್ನು ಬಿಟ್ಟುಕೊಡಲ್ಲ. ಈ ನಡುವೆ ಜೈಲಿನ ಮುಖ್ಯ ಅಧಿಕಾರಿಯಾಗಿ ಮಲಯಾಳಂ ನಟ ಜಯರಾಮ್ ಎಂಟ್ರಿ ಆಗುತ್ತೆ. ಹೈಜಾಕ್ ಆದ ಜೈಲನ್ನು ಮತ್ತೆ ತಮ್ಮ ಅಧೀನಕ್ಕೆ ಪಡೆಯೋ ಹೊಣೆ ಹೊತ್ತು ಬರುವ ಜಯರಾಮ್ ಹಾಗೂ ಶಿವಣ್ಣ ನಡುವೆ ಹಾವು ಏಣಿ ಆಟ ನಡೆಯುತ್ತೆ. ಇದರಲ್ಲೇ ಮೊದಲಾರ್ಧ ಮುಗಿದು ಹೋಗುತ್ತೆ.

ಶಿವಣ್ಣ ಪಾತ್ರದಲ್ಲಿ ಸ್ವ್ಯಾಗ್ ಇದೆ
ಜೈಲರ್ ಬಳಿಕ ಶಿವಣ್ಣ ಮತ್ತೊಂದು ಜೈಲಿನ ಕಥೆಯಲ್ಲಿ ನಟಿಸಿರೋದು ಕಾಕತಾಳೀಯವೇನೋ? ಆದರೆ, ಈ ಸತ್ಯವನ್ನು ನಂಬಲೇಬೇಕು. ಶಿವಣ್ಣನ ಗ್ಯಾಂಗ್‌ಸ್ಟರ್ ಲುಕ್ ಪ್ರೇಕ್ಷಕರಿಗೆ ಕಿಕ್ ಕೊಡುತ್ತೆ. ಇಡೀ ಸಿನಿಮಾ ಶಿವಣ್ಣನ ಆಂಗ್ರಿ ಯಂಗ್ ಮ್ಯಾನ್ ಲುಕ್ ಇಷ್ಟ ಆಗುತ್ತೆ. ಇದರೊಂದಿಗೆ ಪಟ ಪಟನೇ ಸಾಗುವ ಸ್ಕ್ರೀನ್ ಪ್ಲೇ ಪ್ರೇಕ್ಷಕರನ್ನು ಎಂಗೇಜಿಂಗ್ ಆಗಿ ಇಡುತ್ತದೆ. ಶಿವಣ್ಣ ಲುಕ್, ಮ್ಯಾನರಿಸಂ ಹಾಗೂ ಡೈಲಾಗ್ ಡಿಲೇವರಿ ಫ್ಯಾನ್ಸ್‌ಗಂತೂ ಸಖತ್ ಕಿಕ್ ಕೊಡುತ್ತೆ.
ಅರ್ಜುನ್ ಜನ್ಯಾ ಹಿನ್ನೆಲೆ ಸಂಗೀತ ಹೀರೊ
'ಘೋಸ್ಟ್' ಸಿನಿಮಾದಲ್ಲಿ ಗಮನ ಸೆಳೆಯೋದು ಅರ್ಜುನ್ ಜನ್ಯ ಹಿನ್ನಲೆ ಸಂಗೀತ. ಸಿನಿಮಾದ ಪ್ರಮುಖ ಘಟ್ಟಗಳಲ್ಲಿ ಪ್ರೇಕ್ಷಕರಿಗೆ ಒಂದೊಳ್ಳೆ ಅನುಭವ ಕೊಡುವುದಕ್ಕೆ ಅರ್ಜುನ್ ಜನ್ಯ ಶ್ರಮಿಸಿದ್ದಾರೆ. ಹಿನ್ನೆಲೆ ಸಂಗೀತ ಈ ಸಿನಿಮಾ ತುಂಬಾನೇ ಮುಖ್ಯ ಪಾತ್ರ ವಹಿಸುತ್ತದೆ. ಹೀಗಾಗಿ 'ಘೋಸ್ಟ್'ನಲ್ಲಿ ಹಿನ್ನೆಲೆ ಸಂಗೀತವೇ ಸಿನಿಮಾದ ಹೀರೊ ಎಂದು ಹೇಳಬಹುದು.
'ಘೋಸ್ಟ್' ಪ್ಲಸ್ ಏನು?
ಶಿವಣ್ಣ ಹಾಗೂ ಜಯರಾಮ್ ನಡುವಿನ ಜಿದ್ದಾಜಿದ್ದಿ ಸಿನಿಮಾ ಹೈಲೈಟ್. ಅರ್ಜುನ್ ಜನ್ಯ ಹಿನ್ನೆಲೆ ಸಂಗೀತ ಗಮನ ಸೆಳೆಯುತ್ತೆ. ಮಹೇನ್ ಸಿಂಹ ಸಿನಿಮ್ಯಾಟೋಗ್ರಫಿ ನೋಡುಗನಿಗೆ ಹೊಸ ಅನುಭವ ನೀಡುತ್ತೆ. ಇದರೊಂದಿಗೆ ಶ್ರೀನಿ ಕನ್ನಡ ಚಿತ್ರರಂಗಕ್ಕೆ ಒಳ್ಳೊಳ್ಳೆ ಸಿನಿಮಾಗಳನ್ನು ಕೊಡಬಹುದು ಅನ್ನೋ ಭರವಸೆ ಮೂಡಿಸಿದ್ದಾರೆ. ಎಲ್ಲಕ್ಕಿಂತ ಮುಖ್ಯವಾಗಿ ಶಿವಣ್ಣನ ಯಂಗ್ ಲುಕ್ ಫ್ಯಾನ್ಸ್‌ಗೆ ಹಬ್ಬನೇ ಸರಿ.
'ಘೋಸ್ಟ್' ಮೈನಸ್ ಏನು?
'ಘೋಸ್ಟ್' ಸಿನಿಮಾದ ಸ್ಕ್ರೀನ್ ಪ್ಲೇ ಅಲ್ಲಲ್ಲಿ ಗೊಂದಲ ಅಂತ ಅನಿಸುತ್ತೆ. ಶ್ರೀನಿ ಚಿತ್ರಕಥೆಯಲ್ಲಿ ಇನ್ನಷ್ಟು ವರ್ಕ್‌ಔಟ್ ಮಾಡಬೇಕಿತ್ತು. ಜನರಿಗೆ ಕಥೆ ಅರ್ಥ ಆಗುವ ಹೊತ್ತಿಗೆ ಸಿನಿಮಾದ ಹೆಚ್ಚು ಕಡಿಮೆ ಅರ್ಧ ಮುಗಿದಿರುತ್ತೆ. ಇಷ್ಟು ಬಿಟ್ಟರೆ ಸಿನಿಮಾವನ್ನು ಆರಾಮಾಗಿ ನೋಡಿ ಬರಬಹುದು.


Click it and Unblock the Notifications











