GOAT Review: ಗಾಂಧಿ ರಿವೇಂಜ್ ಸ್ಟೋರಿ ನಿಜಕ್ಕೂ 'ಗ್ರೇಟ್' ಆಗಿ ಇದ್ಯಾ?
ಸೂಪರ್ ಸ್ಟಾರ್, ಬಿಗ್ ಬಜೆಟ್, ಸ್ಟಾರ್ ನಿರ್ದೇಶಕ ಇದ್ದ ಮಾತ್ರಕ್ಕೆ ಒಂದು ಸಿನಿಮಾ ಗೆದ್ದುಬಿಡುತ್ತದೆ ಎಂದು ಹೇಳುವುದು ಕಷ್ಟ. ನಿಜ ಹೇಳಬೇಕು ಅಂದ್ರೆ ಸಿನಿಮಾ ಸಕ್ಸಸ್ ಸೀಕ್ರೆಟ್ ಯಾರಿಗೂ ಗೊತ್ತಿಲ್ಲ. ಎಲ್ಲರೂ ಒಳ್ಳೆಯ ಸಿನಿಮಾ ಮಾಡುವ ಪ್ರಯತ್ನ ಮಾಡುತ್ತಾರೆ. ಆ ಸಿನಿಮಾ ತೆರೆಮೇಲೆ ಕರಾಮತ್ತು ಮಾಡಿ ಪ್ರೇಕ್ಷಕರನ್ನು ರಂಜಿಸಿದರೆ ಮಾತ್ರ ಗೆಲ್ಲುತ್ತದೆ.
ದಳಪತಿ ವಿಜಯ್ ನಟನೆಯ ತಮಿಳು ಸಿನಿಮಾ 'ಗೋಟ್' ಈ ವಾರ ತೆರೆಗೆ ಬಂದಿದೆ. ವೆಂಕಟ್ ಪ್ರಭು ನಿರ್ದೇಶನದ ಚಿತ್ರ ದೊಡ್ಡಮಟ್ಟದಲ್ಲಿ ತೆರೆಗಪ್ಪಳಿಸಿದೆ. ಅಂದಾಜು 400 ಕೋಟಿ ರೂ. ಬಜೆಟ್‌ನಲ್ಲಿ ಸಿನಿಮಾ ಮೂಡಿ ಬಂದಿದೆ. ವಿಜಯ್ ಡಬಲ್ ರೋಲ್‌ನಲ್ಲಿ ಕಮಾಲ್ ಮಾಡುತ್ತಿದ್ದಾರೆ. ದೇಶವಿದೇಶಗಳಲ್ಲಿ ಚಿತ್ರ ತೆರೆಕಂಡು ಭರ್ಜರಿ ರೆಸ್ಪಾನ್ಸ್ ಪಡೆದುಕೊಂಡಿದೆ. ಸ್ನೇಹಾ, ಪ್ರಭುದೇವಾ, ಪ್ರಶಾಂತ್, ಲೈಲಾ ಚಿತ್ರದ ತಾರಾಗಣದಲ್ಲಿದ್ದಾರೆ.

GOAT ಕಥೆ
ಗಾಂಧಿ(ವಿಜಯ್) ಭಯೋತ್ಪಾದನೆ ನಿಗ್ರಹ ದಳದ ಸೀಕ್ರೆಟ್ ಏಜೆಂಟ್. ಈ ವಿಷಯ ಆತನ ಪತ್ನಿ(ಸ್ನೇಹಾ)ಗೂ ಗೊತ್ತಿರಲ್ಲ. ಇನ್ನು ಗಾಂಧಿ ಜೊತೆ ತಂಡದ ಮೂವರು (ಪ್ರಶಾಂತ್, ಪ್ರಭುದೇವಾ, ಅಜ್ಮಲ್) ಸದಸ್ಯರ ಜೊತೆ ಸೇರಿ ಒಬ್ಬ ಉಗ್ರನನ್ನು ಫ್ಯಾಮಿಲಿ ಸಮೇತ ಕೊಲ್ಲುತ್ತಾರೆ. ಇದಕ್ಕೆ ಪ್ರತಿಯಾಗಿ ಗಾಂಧಿ ತನ್ನ 5 ವರ್ಷದ ಮಗ ಜೀವನ್‌ನನ್ನು ಕಳೆದುಕೊಳ್ಳುತ್ತಾನೆ. ಇದೇ ಕಾರಣಕ್ಕೆ ಪತ್ನಿ ಕೂಡ ದೂರಾಗುತ್ತಾಳೆ.
ಕೆಲ ವರ್ಷಗಳ ಬಳಿಕ ಸ್ಪೆಷಲ್ ಆಪರೇಷನ್‌ಗಾಗಿ ರಷ್ಯಾಗೆ ಹೋದ ಗಾಂಧಿಗೆ ಜೀವನ್ ಎದುರಾಗುತ್ತಾನೆ. ಸತ್ತು ಹೋದ ಎಂದುಕೊಂಡಿದ್ದ ಮಗ ಸಿಕ್ಕಿದಾಗ ಉಗ್ರರಿಂದ ಅವನನ್ನು ರಕ್ಷಿಸಿ ಮನೆಗೆ ಕರೆತರುತ್ತಾನೆ. ಆದರೆ ಅಲ್ಲಿಂದ ಆತನ ಜೀವನಕ್ಕೆ ದೊಡ್ಡ ತಿರುವು ಸಿಗುತ್ತದೆ. ಮಗ ಎಂದು ಮನೆ ಸೇರಿದವನು ಯಾರು? ಆತನ ಹಿನ್ನೆಲೆ ಏನು? ಆತ ಗಾಂಧಿ ವಿರುದ್ಧ ಸೇಡು ತೀರಿಸಿಕೊಳ್ಳಲು ಮುಂದಾಗುತ್ತಾನೆ? ತಂದೆ- ಮಗ ಎದಿರುಬದಿರಾಗುವುದು ಯಾಕೆ? ಎನ್ನುವುದು ಇನ್ನುಳಿದ ಕಥೆ.

ಸಿನಿಮಾ ಹೇಗಿದೆ?
ಒನ್‌ಲೈನ್ ಕಥೆ ಕೇಳಿದಾಗ ಐಡಿಯಾ ಚೆನ್ನಾಗಿದೆ ಅನ್ನಿಸದೇ ಇರಲ್ಲ. ಆದರೆ ಅದನ್ನು ಕಥೆಯಾಗಿ ಮಾಡಿ ಸರಿಯಾದ ಟ್ರೀಟ್‌ಮೆಂಟ್ ಕೊಟ್ಟು ಒಂದೊಳ್ಳೆ ಸಿನಿಮಾ ಮಾಡುವಲ್ಲಿ ವೆಂಕಟ್ ಪ್ರಭು ಮತ್ತವರ ತಂಡ ಸಂಪೂರ್ಣವಾಗಿ ಗೆದ್ದಿಲ್ಲ. ಕಥೆಯಲ್ಲಿ ಕೂಡ ಹೊಸದೇನು ಇಲ್ಲ. ನಾಯಕನ ಮಗನನ್ನು ಖಳನಾಯಕ ಬೆಳೆಸಿ ಕೊನಗೆ ತಂದೆ ವಿರುದ್ಧ ತಿರುಗಿ ಬೀಳುವಂತೆ ಮಾಡುವ ಕಥೆಗಳು ಸಾಕಷ್ಟು ಸಿನಿಮಾಗಳಲ್ಲಿ ನೋಡಿದ್ದೇವೆ. ಕಥೆ ಹಳೆಯದೇ ಆದರೂ ಅದನ್ನು ಹೊಸದಾಗಿ ಹೇಗೆ ಕಟ್ಟುತ್ತಾರೆ ಎನ್ನುವುದು ಮುಖ್ಯ.
ಕೀನ್ಯಾದಲ್ಲಿ ಶುರುವಾಗುವ ಕಥೆ ಮುಂದೆ ಥಾಯ್ಲೆಂಡ್, ರಷ್ಯಾ ಎಲ್ಲಾ ಕಡೆ ಸುತ್ತಾಡಿಸಿ ಕೊನೆಗೆ ಚೆನ್ನೈ ಕ್ರಿಕೆಟ್ ಮ್ಯಾಚ್‌ಗೆ ಬಂದು ನಿಲ್ಲುತ್ತದೆ. ಧೋನಿ ಸಿಕ್ಸರ್‌ಗಳು ಪ್ರೇಕ್ಷಕರಿಗೆ ಕ್ಲೈಮ್ಯಾಕ್ಸ್ ಕಿಕ್ ಕೊಡುತ್ತದೆ. ವಿಜಯ್ ನಟಿಸಿದ ಇತ್ತೀಚಿನ ಸಿನಿಮಾಗಳು ಅಷ್ಟಾಗಿ ಪ್ರೇಕ್ಷಕರನ್ನು ರಂಜಿಸಲಿಲ್ಲ. 'ಗೋಟ್' ಕೂಡ ಅದೇ ಲಿಸ್ಟ್ ಸೇರಿಕೊಂಡಿದೆ. ದಳಪತಿ ಇಮೇಜ್‌ಗೆ ತಕ್ಕಂತೆ ಒಂದೊಳ್ಳೆ ಕಥೆ ಆಯ್ಕೆ ಮಾಡಿಕೊಂಡರೂ ಅದನ್ನು ಸೊಗಸಾಗಿ ತೆರೆಗೆ ತರುವಲ್ಲಿ ವೆಂಕಟ್ ಪ್ರಭು ಸೋತಿದ್ದಾರೆ. ಅಭಿಮಾನಿಗಳನ್ನು ರಂಜಿಸಲು ಒಂದಷ್ಟು ಸನ್ನಿವೇಶಗಳನ್ನು ಮೀಸಲಿಟ್ಟಿದ್ದಾರೆ.
3 ಗಂಟೆಗಳ ಸುದೀರ್ಘ ಕಾಲಾವಧಿ ಕೂಡ 'ಗೋಟ್' ಚಿತ್ರಕ್ಕೆ ಹಿನ್ನಡೆಯಾಗಿದೆ. ಇನ್ನು ಡಿ-ಏಜ್ ತಂತ್ರಜ್ಞಾನ ಬಳಸಿ ವಿಜಯ್ ಅವರನ್ನು ಬಹಳ ಯಂಗ್ ಲುಕ್‌ನಲ್ಲಿ ತೋರಿಸಿರುವ ಪ್ರಯತ್ನವೂ ವಿಫಲವಾಗಿದೆ. ಟ್ರೈಲರ್ ಬಂದಾಗಲೇ ಅದನ್ನು ಕೆಲವರು ಟ್ರೋಲ್ ಮಾಡಿದ್ದರು. ಈಗ ಸಿನಿಮಾದಲ್ಲಿ ಕೂಡ ಅದೇ ರೀತಿ ಭಾಸವಾಗುತ್ತದೆ. ಅಲ್ಲಲ್ಲಿ ಹಾಲಿವುಡ್ 'ಜೆಮಿನಿಮ್ಯಾನ್' ಸಿನಿಮಾ ಹೋಲಿಕೆ ಕೂಡ ಇದೆ. ಒಂದಷ್ಟು ಗ್ರಾಫಿಕ್ಸ್ ಸನ್ನಿವೇಶಗಳು ಚೆನ್ನಾಗಿಲ್ಲ. ಮುಖ್ಯವಾಗಿ ಯುವನ್ ಶಂಕರ್ ರಾಜಾ ಬಿಜಿಎಂ ಕೈಕೊಟ್ಟಿದೆ.
ಕಲಾವಿದರ ಅಭಿನಯ
ದಳಪತಿ ವಿಜಯ್ ಎಂದಿನಂತೆ ತಮ್ಮ ನಟನೆ ಮೂಲಕ ಅಭಿಮಾನಿಗಳನ್ನು ರಂಜಿಸುತ್ತಾರೆ. ಗಾಂಧಿ ಪಾತ್ರದಲ್ಲಿ ನೈಜ ಅಭಿನಯ ಚಿತ್ರಕ್ಕೆ ಪ್ಲಸ್ ಆಗಿದೆ. ಆದರೆ ಮಗನಾಗಿ ಕೆಲವೆಡೆ ಡಿ-ಏಜ್ ತಂತ್ರಜ್ಞಾನದಲ್ಲಿ ಬರುವ ಸನ್ನಿವೇಶಗಳು ಪೇಲವ ಎನ್ನಿಸಿಬಿಡುತ್ತದೆ. ನಾಯಕಿಯಾಗಿ ಮೀನಾಕ್ಷಿ ಚೌಧರಿಗೆ ಹೆಚ್ಚು ಅವಕಾಶ ಸಿಕ್ಕಿಲ್ಲ. ಇನ್ನುಳಿದಂತೆ ಪ್ರಶಾಂತ್, ಸ್ನೇಹಾ, ಪ್ರಭುದೇವಾ ಎಲ್ಲರೂ ತಮ್ಮ ತಮ್ಮ ಪಾತ್ರಗಳಿಗೆ ನ್ಯಾಯ ಒದಗಿಸಿದ್ದಾರೆ.
ಶಿವ ಕಾರ್ತಿಕೇಯನ್ ಸಣ್ಣ ಝಲಕ್‌ನಲ್ಲಿ ಕಾಣಿಸಿಕೊಳ್ಳುತ್ತಾರೆ. ಹಾಡೊಂದರಲ್ಲಿ ತ್ರಿಷಾ ಎಂಟ್ರಿ ಕೊಟ್ಟು ಹುಬ್ಬೇರಿಸುತ್ತಾರೆ. ಎಐ ತಂತ್ರಜ್ಞಾನ ಬಳಸಿ ದಿವಂಗತ ನಟ ಕ್ಯಾಪ್ಟನ್ ವಿಜಯ್ ಕಾಂತ್ ಅವರನ್ನು ತೆರೆಮೇಲೆ ತರುವ ಪ್ರಯತ್ನ ಮಾಡಲಾಗಿದೆ. ಇನ್ನು ಚೆನ್ನೈ ಸೂಪರ್ ಕಿಂಗ್ಸ್ ಐಪಿಎಲ್ ಪಂದ್ಯದ ಸನ್ನಿವೇಶವನ್ನು ಬಳಸಿಕೊಳ್ಳಲಾಗಿದೆ.
ತಾಂತ್ರಿಕ ವರ್ಗ
ಹಳೇ ಕಥೆಯನ್ನು ಇವತ್ತಿನ ತಂತ್ರಜ್ಞಾನ ಬಳಸಿ ಮತ್ತಷ್ಟು ಸೊಗಸಾಗಿ ಕಟ್ಟಿಕೊಡುವ ಪ್ರಯತ್ನ ಮಾಡಿದ್ದಾರೆ. ಅದಕ್ಕಾಗಿ ಎಐ, ಡಿ-ಏಜ್ ತಂತ್ರಜ್ಞಾನವನ್ನು ಬಳಸಿಕೊಂಡಿದ್ದಾರೆ. ಆದರೆ ಅದು ಅಷ್ಟಾಗಿ ವರ್ಕ್ ಆಗಿಲ್ಲ. ಛಾಯಾಗ್ರಹಣ ಚೆನ್ನಾಗಿದೆ. ಆದರೆ ಸಂಕಲನ ಕೈ ಕೊಟ್ಟಿದೆ. ಸಾಕಷ್ಟು ಸಿನಿಮಾಗಳಲ್ಲಿ ನೋಡಿರುವ ಕಥೆಯನ್ನು ವಿಜಯ್ ಅಭಿಮಾನಿಗಳು ಮೆಚ್ಚುವಂತೆ ಕಟ್ಟಿಕೊಡುವ ಪ್ರಯತ್ನ ವೆಂಕಟ್ ಪ್ರಭು ಮಾಡಿದ್ದಾರೆ. ಇನ್ನು ಸಿನಿಮಾ ಕೇಳಿದ್ದನೆಲ್ಲಾ ನಿರ್ಮಾಪಕರು ಕೊಟ್ಟಿದ್ದಾರೆ.
ಕೊನೆ ಮಾತು
ಎಲ್ಲಾ ವರ್ಗದ ಪ್ರೇಕ್ಷಕರಿಗೆ 'ಗೋಟ್' ಸಿನಿಮಾ ಇಷ್ಟ ಆಗಲ್ಲ. ವಿಜಯ್ ಅಭಿಮಾನಿಗಳು ಮಾತ್ರ ಯಾವುದೇ ನಿರೀಕ್ಷೆ ಇಲ್ಲದೇ ಬಂದರೆ ನೋಡಿ ಎಂಜಾಯ್ ಮಾಡಬಹುದು. ಇನ್ನು ನೆಗೆಟಿವ್ ಶೇಡ್‌ನಲ್ಲಿ ದಳಪತಿಯನ್ನು ನೋಡುವುದು ಅಭಿಮಾನಿಗಳಿಗೆ ಇಷ್ಟವಾಗುತ್ತದೆ. ಆದರೆ ಟ್ರೈಲರ್ ನೋಡಿ ಭಾರೀ ನಿರೀಕ್ಷೆ ಇಟ್ಟುಕೊಂಡು ಸಿನಿಮಾ ನೋಡಲು ಬಂದವರಿಗೆ ನಿರಾಸೆ ಕಟ್ಟಿಟ್ಟಬುತ್ತಿ.


Click it and Unblock the Notifications











