»   » ನಿರ್ದೇಶಕರ ಆವಾಹಿಸಿಕೊಂಡು ಪ್ರೇಕ್ಷಕರ ಆವರಿಸಿಕೊಳ್ಳದ ದೇವತೆ

ನಿರ್ದೇಶಕರ ಆವಾಹಿಸಿಕೊಂಡು ಪ್ರೇಕ್ಷಕರ ಆವರಿಸಿಕೊಳ್ಳದ ದೇವತೆ

Subscribe to Filmibeat Kannada


ರೂಢಿ ಪ್ರಕಾರವಾಗಿ ಎಂದಿನಂತೆ ದೈವಶಕ್ತಿಗೇ ಗೆಲುವು. ಆದರೆ, ದುಷ್ಟಶಕ್ತಿಯ ಅಬ್ಬರವೇನು ಕಡಿಮೆಯೇ. ದೈವಶಕ್ತಿಯನ್ನು ಗಂಟೆಗೊಮ್ಮೆಯಂತೆ ಮೂರು ಸಲ ಭೇಟಿಯಾಗುವ ದುಷ್ಟ ಶಕ್ತಿ ಮೂರನೇ ಯತ್ನದಲ್ಲಿ ತಾನೇ ಬೇಟೆಯಾಗುತ್ತದೆ. ಆದರೆ ಸಾಯಿಪ್ರಕಾಶ್‌ ಅವರಿಗೆ ಇಷ್ಟಕ್ಕೇ ಸಿನಿಮಾ ಮುಗಿಸಲು ಇಷ್ಟವಿಲ್ಲ . ಆ ಕಾರಣದಿಂದಾಗಿಯೇ ಸಿನಿಮಾದಲ್ಲಿ ದೇವದಾಸಿ ಪ್ರತ್ಯಕ್ಷಳಾಗುತ್ತಾಳೆ, ಒಂದೆಡೆ ವರ್ಗ ಸಂಘರ್ಷವನ್ನು ಪ್ರಸ್ತಾಪಿಸುವ ಪ್ರಯತ್ನವೂ ಕಾಣುತ್ತದೆ. ಆದರೆ, ನಿರ್ದೇಶಕರನ್ನು ಆವಾಹಿಸಿಕೊಂಡಿರುವ ಗ್ರಾಮದೇವತೆ ಪ್ರೇಕ್ಷಕರನ್ನು ಆವರಿಸಿಕೊಳ್ಳುವಲ್ಲಿ ಸೋಲುತ್ತಾಳೆ.

ಇಂಥ ಗ್ರಾಫಿಕ್‌ ಚಮತ್ಕಾರವನ್ನು ಭಾರತೀಯ ಸಿನಿಮಾ ಹಿಂದೆಂದೂ ಕಂಡಿಲ್ಲ ಎನ್ನುವುದು ಗ್ರಾಮದೇವತೆ ಪ್ರಚಾರ ತಂತ್ರಗಳಲ್ಲೊಂದು. ಸಿನಿಮಾ ನೋಡಿದ ನಿಮಗೆ ಗ್ರಾಫಿಕ್‌ನೊಳು ಗ್ರಾಮದೇವತೆಯೋ, ಗ್ರಾಮದೇವತೆಯಾಳು ಗ್ರಾಫಿಕ್‌ ತಂತ್ರವೋ ಎನ್ನುವ ಸಂದೇಹ ಕಾಡಿದರೆ ಅಚ್ಚರಿಯಿಲ್ಲಿ . ಸಿನಿಮಾ ಪೂರ್ತಿ ಗ್ರಾಫಿಕ್‌ ಮಯ. ಗ್ರಾಫಿಕ್‌ ಜಾದೂವಿನೊಳಗೆ ಗ್ರಾಮದೇವತೆ ಮಾಯ.

ಶಿವ ಶಿವೆ ಅದಲಿ ಬದಲಿಯಾಗುವುದು, ಕಲ್ಲುಮೂರ್ತಿಯಾದ ಪಾರ್ವತಿ ಮಗುವಿಗೆ ಮೊಲೆಯುಣಿಸುವುದು, ಮಾಂತ್ರಿಕ ಸುಂಟರಗಾಳಿ ಸುಳಿ ಸುಳಿಯಾಗಿ ಅಲೆಯಾಗುವುದು, ಸುಡು ಬೆಂಕಿಯಾಗುವುದು, ಭಕ್ತನ ಮೊಗದ ಸಿಡುಬು ದೇವಿ ಮುಖಕ್ಕೆ ಆವರಿಸಿಕೊಳ್ಳುವುದು.. ಹೀಗೆ ಗ್ರಾಫಿಕ್‌ ವೈಭವ ಸಾಗುತ್ತದೆ. ನರಬಲಿ, ಪ್ರಾಣಿಬಲಿಗಳ ಓಕುಳಿಯಾಟವೂ ಗ್ರಾಫಿಕ್‌ಗೆ ಸೆಡ್ಡು ಹೊಡೆಯುವಂತೆಯೇ ಪ್ರೇಕ್ಷಕರನ್ನು ರಾಚುತ್ತದೆ.

ಇನ್ನು ಕಲಾವಿದರ ಪೈಕಿ ಮಾಂತ್ರಿಕನಾಗಿ ನಟಿಸಿದ ಗಜರ್‌ಖಾನ್‌ಗೆ ಹೆಚ್ಚಿನ ಮಾರ್ಕ್ಸ್‌. ಅಳು, ಅಬ್ಬರ, ರೋಷ ಎಲ್ಲದರಲ್ಲೂ ಅವರ ಅನುಭವ ಎದ್ದು ಕಾಣುತ್ತದೆ. ಹಾಗೆ ನೋಡಿದರೆ, ಗ್ರಾಮದೇವತೆಯ ಬಳಗದವರೆಲ್ಲ ಅನುಭವಿಗಳೇ. ಗ್ರಾಮದೇವತೆಯಾಗಿ ಮೀನಾ, ಭಕ್ತೆಯಾಗಿ ಪ್ರೇಮಾ, ಈಶ್ವರನಾಗಿ ಶ್ರೀಧರ್‌, ಶಿವೆಯಾಗಿ ರೋಜಾ ತಂತಮ್ಮ ಪಾತ್ರಗಳಲ್ಲಿ ಪಳಗಿದವರು. ಈ ಕಾರಣದಿಂದಾಗಿ ಎಲ್ಲರೂ ಸಂದರ್ಭೋಚಿತವಾಗಿ ಭಾವ ಪ್ರದರ್ಶನ ನೀಡಿದ್ದಾರೆ. ಇವರ ನಡುವೆ ದೆವ್ವ ದೇವತೆಗಳ ಸಿನಿಮಾಗಳಲ್ಲಿ ಅಷ್ಟೊಂದು ಅನುಭವವಿಲ್ಲದ ವೈದ್ಯ ವೇಷಧಾರಿ (ಅಮೆರಿಕಾ ರಿಟರ್ನ್ಡ್‌) ಸಾಯಿಪ್ರಕಾಶ್‌ ಪೆಕರು ಪೆಕರಾಗಿ ಕಾಣಿಸಿ ಪ್ರೇಕ್ಷಕರ ಹೆಚ್ಚಿನ ಅನುಕಂಪಕ್ಕೆ ಪಾತ್ರರಾಗುತ್ತಾರೆ.

ತಮಿಳಿನ ದಿನ ಅವರ ಸಂಗೀತದಲ್ಲಿ ವಿಭಿನ್ನತೆ ಹುಡುಕುವ ಅವಕಾಶವೇ ಇಲ್ಲ . ರಮೇಶ್‌ಬಾಬು ಛಾಯಾಗ್ರಹಣ ಮೆಚ್ಚಬಹುದು. ಸಾಯಿಪ್ರಕಾಶ್‌ ಅವರಿಗೆ ಗ್ರಾಮದೇವತೆ ಒಳ್ಳೆಯದು ಮಾಡಲಿ. ಕೊನೆಯದಾಗಿ, ಗ್ರಾಮದೇವತೆ ನೋಡಿದ ನಂತರ ಪ್ರೇಕ್ಷಕರಿಗೊಂದು ಕ್ವಿಜ್‌ ಏರ್ಪಡಿಸಬಹುದು: ಅಮ್ಮಾ ನಾಗಮ್ಮ, ನೀಲಾಂಬರಿ, ಗ್ರಾಮದೇವತೆ- ಯಾರು ಹಿತವರು ಈ ಮೂವರೊಳಗೆ?

ಮುಖಪುಟ / ಸ್ಯಾಂಡಲ್‌ವುಡ್‌

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada