Writing With Fire Review: ಆಸ್ಕರ್ ರೇಸಿನಲ್ಲಿದ್ದ 'ರೈಟಿಂಗ್ ವಿಥ್ ಫೈರ್' ಚಿತ್ರದ ವಿಮರ್ಶೆ!
'WRITING WITH FIRE' ಈ ಬಾರಿಯ ಆಸ್ಕರ್ ಪುರಸ್ಕಾರದ ಸಾಕ್ಷ್ಯಚಿತ್ರ ವಿಭಾಗಕ್ಕೆ ನಾಮಾಂಕಿತಗೊಂಡಿದ್ದ ಭಾರತೀಯ ಸಾಕ್ಷ್ಯಚಿತ್ರ. ಈ ವಿಭಾಗಕ್ಕೆ ಆಯ್ಕೆಯಾದ ಭಾರತದ ಮೊದಲ ಸಾಕ್ಷ್ಯಚಿತ್ರ ಕೂಡ. ಹಾಗಿದ್ದರೆ ಈ ಚಿತ್ರ ಹೇಗಿದೆ? ಇದರಲ್ಲಿ ಅಡಗಿರುವುದೇನು?. ಎನ್ನುವ ಬಗ್ಗೆ ಮುಂದೆ ಓದಿ.
"ನಾನು ಚಿಕ್ಕವಳಿದ್ದಾಗ ಇದೇ ಗಣಿಯಲ್ಲಿ ಕೆಲಸ ಮಾಡುತ್ತಿದ್ದೆ. ಚಿಕ್ಕ ಕಲ್ಲುಗಳನ್ನಾರಿಸಿ ಟ್ರಾಲಿಯಲ್ಲಿ ಪುಡಿ ಮಾಡಲು ತುಂಬುತ್ತಿದ್ದೆ ಎನ್ನುತ್ತಲೇ ಕ್ರೈಂ ರಿಪೋರ್ಟರ್ ಸುನೀತಾ ಕಾರ್ಮಿಕರ ಸ್ಥಿತಿಗತಿ ಮತ್ತು ಗಣಿ ಮಾಫಿಯಾ ಬಗ್ಗೆ ವರದಿ ಮಾಡುತ್ತಾಳೆ. ಇಂತಹ ಹಿನ್ನೆಲೆಯಿರುವ ಹುಡುಗಿ ಫೀಲ್ಡ್ ರಿಪೋರ್ಟಿಂಗ್ ಮತ್ತು ಕ್ರೈಂ ರಿಪೋರ್ಟಿಂಗ್‌ನಂತಹ ಅಪಾಯಕಾರಿ ಕೆಲಸಕ್ಕಿಳಿಯುತ್ತಾಳೆಂದರೆ...! ಇದು ಯಾವುದೋ ಥ್ರಿಲ್ಲರ್ ಸಿನಿಮಾದ ರೋಮಾಂಚಕ ಕಥೆ ಎಂದುಕೊಂಡರೆ ನಾನೀಗ ನಿಮಗೆ ಪತ್ರಿಕಾ ರಂಗದ ಬಹು ಚರ್ಚೆಯಲ್ಲಿರುವ ಸಾಕ್ಷ್ಯಚಿತ್ರ.ಅದರೊಳಗೆ ಬರುವ ಸ್ಪೂರ್ತಿದಾಯಕ ಪಾತ್ರಗಳ ಕಥೆ ಹೇಳಹೊರಟಿದ್ದೇನೆ."
ಮಹಿಳೆಯರು ಅದರಲ್ಲೂ ಹೆಚ್ಚಾಗಿ ದಲಿತ ಮಹಿಳೆಯರು ಮಾತ್ರವೇ ನಡೆಸುವ ಪತ್ರಿಕೆ 'ಖಬರ್ ಲಹರಿಯಾ'. ಮಹಿಳೆಯರು ಮಾತ್ರವೇ ನಡೆಸುವ ಭಾರತದ ಈ ಹೊತ್ತಿನ ಏಕೈಕ ಮಾಧ್ಯಮ ಕೂಡ. 'ಖಬರ್ ಲಹರಿಯಾ'ದ ಮೂವರು ಪ್ರಮುಖ ಪತ್ರಕರ್ತೆಯರು ಮತ್ತವರ ನೈಜ ಜೀವನದ ಘಟನೆಗಳ ಸುತ್ತ ತೆರೆದುಕೊಳ್ಳುತ್ತಲೇ ಆ ಭಾಗದ ಜನ ಜೀವನದ ವ್ಯಥೆಗಳೂ, ಪತ್ರಿಕೋದ್ಯಮದ ಸವಾಲುಗಳೂ ಜೊತೆಜೊತೆಗೆ ಖಬರ್ ಲಹರಿಯ ಪ್ರಬುದ್ಧ ಪರ್ಯಾಯ ಮಾಧ್ಯಮವಾಗಿ ಬೆಳೆದು ಬಂದ ಪರಿ ಹೇಳುವ ಒಂದೂವರೆ ಗಂಟೆಯ ಪೂರ್ಣ ಪ್ರಮಾಣದ ಸಾಕ್ಷಚಿತ್ರ WRITING WITH FIRE. ಈ ಬಾರಿಯ ಆಸ್ಕರ್ ಪುರಸ್ಕಾರದ ಸಾಕ್ಷ್ಯಚಿತ್ರ ವಿಭಾಗಕ್ಕೆ ನಾಮಾಂಕಿತಗೊಂಡಿದ್ದ ಭಾರತೀಯ ಸಾಕ್ಷ್ಯಚಿತ್ರ. ಈ ವಿಭಾಗಕ್ಕೆ ಆಯ್ಕೆಯಾದ ಭಾರತದ ಮೊದಲ ಸಾಕ್ಷ್ಯಚಿತ್ರ ಕೂಡ.

ಉತ್ತರ ಪ್ರದೇಶದ ಚಿತ್ರಕೂಟ ಜಿಲ್ಲೆಯಲ್ಲಿ 2002 ರಿಂದ ಮುದ್ರಿತ ಮಾಧ್ಯಮಕ್ಕೆ ಅಡಿಯಿಟ್ಟ ಪತ್ರಿಕಾ ತಂಡ 2016 ರಲ್ಲಿ ಮುದ್ರಣವನ್ನು ಅಂತರ್ಜಾಲಕ್ಕೆ ವಿಸ್ತರಿಸುವ ಮತ್ತು ಸ್ವತಂತ್ರ ಪರ್ಯಾಯ ದೃಶ್ಯ ಮಾಧ್ಯಮವಾಗುವ ನಿಟ್ಟಿನಲ್ಲಿ ಮುನ್ನಡಿಯಿಟ್ಟಿರುತ್ತದೆ. ಜಾತಿ ಪದ್ಧತಿ, ಲಿಂಗ ತಾರತಮ್ಯ ಗಟ್ಟಿಯಾಗಿ ಇನ್ನೂ ಬೇರೂರಿಕೊಂಡಿರುವ ಉತ್ತರ ಪ್ರದೇಶ ಮತ್ತು ಬಿಹಾರ್ ರಾಜ್ಯಗಳಲ್ಲಿ ಪತ್ರಿಕೆ ಮುದ್ರಿತ ಮಾಧ್ಯಮದಿಂದ ಡಿಜಿಟಲ್ ಮಾಧ್ಯಮದೆಡೆಗೆ ಪರಿವರ್ತನೆಯಾಗುವ ಪ್ರಮುಖ ಕಾಲಘಟ್ಟದಲ್ಲಿ ರಿಂತು ಥಾಮಸ್ ಮತ್ತು ಸುಶ್ಮಿತ್ ಘೋಷ್ ಈ ಸಾಕ್ಷ್ಯ ಚಿತ್ರದ ಚಿತ್ರೀಕರಣದಲ್ಲಿ ತೊಡಗುತ್ತಾರೆ. "ಖಬರ್ ಲಹರಿಯ ಕಾರ್ಯ ನಿರ್ವಹಿಸುತ್ತಿರುವ ಉತ್ತರ ಪ್ರದೇಶದ ದಕ್ಷಿಣ ಪ್ರಾಂತ್ಯಗಳು ದಲಿತ ಮಹಿಳೆಯರ ಅತ್ಯಾಚಾರಕ್ಕೆ ಕುಖ್ಯಾತಿ. ಈ ಪ್ರಾಂತ್ಯದ ಮಹಿಳೆಯರು ಹೊರಗೆ ಕಾಲಿಡುವುದೇ ಸವಾಲಾದಾಗ ಮುಖ್ಯವಾಹಿನಿ ಮಾಧ್ಯಮಗಳು ತಲುಪಲಾರದ ಪ್ರದೇಶಗಳಿಗೆ ತಲುಪಿ ವರದಿ ಮಾಡುವ ಈ ತಂಡ ಸ್ವತಂತ್ರ ಮಾಧ್ಯಮವಾಗಿ ಬೆಳೆದಿರುವ ಪರಿ ತಮಗೆ ಕುತೂಹಲ ಕೆರಳಿಸಿತ್ತು" ಎನ್ನುತ್ತಾರೆ ನಿರ್ದೇಶಕ ಸುಶ್ಮಿತ್ ಘೋಷ್.
''ಪತ್ರಿಕೋದ್ಯಮವೇ ಪ್ರಜಾಪ್ರಭುತ್ವದ ಅಸ್ತಿತ್ವ'' ಎನ್ನುತ್ತಾರೆ ಖಬರ್ ಲಹರಿಯ ಮುಖ್ಯ ಸಂಪಾದಕರಾದ ಮೀರಾ ದೇವಿ. ಇವಳ ಪತ್ರಿಕೆಯ ಬಗ್ಗೆ ಹೇಳುವುದೇನಿದೆ? ಇರುವಷ್ಟು ದಿನ ನಡೀತದೆ ಅಷ್ಟೇ ಎನ್ನುತ್ತಾರೆ ಮೀರಾಳ ಗಂಡ. ಎಷ್ಟೆಷ್ಟೋ ದೊಡ್ಡ ಕಂಪನಿಗಳೇ ಮುಚ್ಚಿಕೊಂಡು ಹೋಗಿವೆಯಂತೆ. ಇವರದ್ದೇನು ಮಹಾ ಎನ್ನುತ್ತಲೇ ಉಡಾಫೆಯಾಗಿ ಮಂದಹಾಸ ಬೀರುತ್ತಾನೆ. "ನಮ್ಮ ಪ್ರದೇಶದಲ್ಲಿ ಪತ್ರಕರ್ತರಾಗುವುದೆಂದರೆ ಮೇಲ್ಜಾತಿಯ ಗಂಡಸಾಗಿರಬೇಕು. ದಲಿತ ಮಹಿಳೆಯರನ್ನು ಪತ್ರಕರ್ತೆಯ ರೂಪದಲ್ಲಿ ಊಹಿಸಿಕೊಳ್ಳುವುದು ದೂರದ ಮಾತು. ಈ ಹದಿನಾಲ್ಕು ವರ್ಷಗಳಲ್ಲಿ ಇಂತಹ ಮಾನಸಿಕತೆಯನ್ನು ನಾವು ಸುಮಾರಾಗಿ ಬದಲಿಸಿದ್ದೇವೆ. ಖಬರ್ ಲಹರಿಯವನ್ನು ಮುದ್ರಿತ ಮಾಧ್ಯಮದಿಂದ ಹಿಡಿದು ಡಿಜಿಟಲ್ ಮಾಧ್ಯಮವಾಗಿ ಪರಿವರ್ತಿಸಿ ಬೆಳೆಸುವಲ್ಲಿ ಹಲವು ಅಡೆತಡೆಗಳಿವೆ. ಅವೆಲ್ಲವನ್ನೂ ಮೀರಿ ನಾವು ಯಶಸ್ಸು ಕಾಣಬೇಕಿದೆ. ನಾರಿ ಶಕ್ತಿಯನ್ನು ಜನಗಳಿಗೆ ಅರ್ಥ ಮಾಡಿಸಬೇಕೆಂದರೆ ಅಧಿಕಾರದ ಮರು ವ್ಯಾಖ್ಯಾನವಾಗಬೇಕು. ನಾನಿದನ್ನು ಸವಾಲಾಗಿ ಸ್ವೀಕರಿಸಿದ್ದೇನೆ." ಎಂದು ಮೀರಾ ಆತ್ಮವಿಶ್ವಾಸದಿಂದ ಹೇಳಿಕೊಳ್ಳುತ್ತಾರೆ.

ಖಬರ್ ಲಹರಿಯ ವರದಿಗಾರಿಕೆ ಶೈಲಿ:
ಚಿತ್ರೀಕರಣಕ್ಕೆಂದು ಸಾಮಾನ್ಯ ಸ್ಮಾರ್ಟ್ ಫೋನ್, ಜೊತೆಗೊಂದು ಬ್ಯಾಟರಿ ಬ್ಯಾಂಕ್ ಹಿಡಿದು ಕಾಲ್ನಡಿಗೆಯಲ್ಲಿ ವರದಿ ಮಾಡಲು ತೆರಳುವ ಈ ಮಹಿಳೆಯರಿಗೆ ಹಲವೆಡೆಗಳಲ್ಲಿ ಸವಾಲುಗಳೇ ಎದುರಾಗುತ್ತವೆ. ಪತ್ರಕರ್ತೆಯರೆಂದರೆ ಸಿಟಿಯಿಂದ ಕ್ಯಾಮೆರಾ ಹಿಡಿದು ಮಾಧ್ಯಮದ ಐಷಾರಾಮಿ ವಾಹನಗಳಲ್ಲಿ ಬಂದಿಳಿಯುವ ಬಿಳಿ ತೊಗಲ ಹುಡುಗಿಯರೆಂದೇ ತಿಳಿದುಕೊಂಡ ಹಲವರು ಕರಿ ತೊಗಲ, ಕಾಲ್ನಡಿಗೆಯ ಖಬರ್ ಲಹರಿಯ ಹುಡುಗಿಯರನ್ನು ಪತ್ರಕರ್ತೆಯರೆಂದು ನಂಬಲು ಹಿಂಜರಿಯುತ್ತಾರೆ. ಹೊಸ ಪತ್ರಕರ್ತೆಯರಿಗೆ ಸ್ಮಾರ್ಟ್ ಫೋನ್ ಬಳಸುವುದನ್ನೂ ಹಂತ ಹಂತಹಂತವಾಗಿ ಕಲಿಸಿದ ನಂತರವಷ್ಟೇ ಮುಂದಿನ ಕೆಲಸ ಸರಾಗವಾಗಿ ಸಾಗುವುದು. ಹೀಗಿದ್ದೂ ಖಬರ್ ಲಹರಿಯ ವರದಿ ಮಾಡಿದ ಹಲವು ಸಮಸ್ಯೆಗಳು ಪರಿಹಾರ ಕಂಡಿವೆ. 50 ಲಕ್ಷಕ್ಕೂ ಅಧಿಕ ಚಂದಾದಾರರೂ 150 ಮಿಲಿಯನ್ ದಾಟಿ ವೀಕ್ಷಣೆ ಪಡೆದಿದೆ ಎಂದರೆ ಮಾರ್ಕೆಟಿಂಗ್ ತಂತ್ರಗಳೂ, ಡಿಜಿಟಲ್ ಟೆಕ್ನಾಲಜಿ, ವರದಿಗಾರಿಕೆಯ ವಿಶೇಷತೆಗಳನ್ನು ಈ ಮಹಿಳೆಯರು ಹಂತ ಹಂತವಾಗಿ ಕಲಿತು ಸುಧಾರಿಸಿಕೊಂಡಿದ್ದಾರೆ ಎಂದರ್ಥ.
ಅಕಾಡೆಮಿ ಪುರಸ್ಕಾರಕ್ಕೆ ನಾಮಾಂಕಿತಗೊಂಡ ಈ ಸಾಕ್ಷಚಿತ್ರ ಮತ್ತು ಖಬರ್ ಲಹರಿಯದಂತಹ ಸ್ವತಂತ್ರ ಪರ್ಯಾಯಗಳು ಹಲವು ಕಾರಣಗಳಿಗೆ ಮುಖ್ಯವಾಗುತ್ತದೆ. ದಶಕಗಳಿಂದ ಪತ್ರಿಕೋದ್ಯಮ ನಡೆದುಬಂದ ದಾರಿಗಳನ್ನು ಅವಲೋಕಿಸುವುದಾದರೆ, ಮುದ್ರಿತ ಮಾಧ್ಯಮದಿಂದ ದೃಶ್ಯ ಮಾಧ್ಯಮದೆಡೆಗೆ ರೂಪಾಂತರಗೊಂಡ ಮಾಧ್ಯಮ ಜಗತ್ತು ತ್ವರಿತಗತಿಯಲ್ಲಿ 24/7 ಬ್ರೇಕಿಂಗ್ ನ್ಯೂಸ್ ಬಿತ್ತರಿಸುತ್ತಾ ಟಿ ಆರ್ ಪಿ ಗಿಟ್ಟಿಸುವಲ್ಲಿ ನಾ ಮುಂದು ತಾ ಮುಂದು ಎಂದು ನುಗ್ಗಾಟ ನಡೆಸುತ್ತಲೇ ಬಂದಿವೆ. ಸಂಪೂರ್ಣ ವ್ಯಾಪಾರೀಕರಣಕ್ಕೊಳಗಾದ ಮಾಧ್ಯಮ ಜಗತ್ತು ತನ್ನ ಸಾಂವಿಧಾನಿಕ ಕರ್ತವ್ಯ ನಿರ್ವಹಣೆಗೆ ಪರದಾಡುತ್ತಲೇ ತನ್ನ ಗುಣಮಟ್ಟ ಮತ್ತು ವರದಿಯ ಸತ್ಯಾಸತ್ಯತೆಯನ್ನು ಕಾಪಾಡುವಲ್ಲಿ ಸೋಲುತ್ತಿರುವುದನ್ನು ಗಮನಿಸಿರಬೇಕು.

ತನಿಖಾ ಪತ್ರಿಕೋದ್ಯಮ ಹೇಗಿರಬೇಕು?
ತನಿಖಾ ಪತ್ರಿಕೋದ್ಯಮ ಹೇಗಿರಬೇಕು ಎನ್ನುವುದಕ್ಕೆ ಬರಿಯ ಸಾಕ್ಷ್ಯಚಿತ್ರವಲ್ಲದೆ ಖಬರ್ ಲಹರಿಯಾದ ಯೂಟ್ಯೂಬ್ ಚಾನೆಲ್ ಮತ್ತು ಅಂತರ್ಜಾಲ ಕೊಂಡಿಯನ್ನೊಮ್ಮೆ ಇಣುಕಿ ನೋಡಬೇಕು. ನಾವು ಸ್ವಚ್ಛ ಭಾರತ್ ಆಂದೋಲನದಡಿ ಎಲ್ಲೆಲ್ಲಿ ಎಷ್ಟು ಶೌಚಾಲಯ ನಿರ್ಮಿಸಿದ್ದೇವೆ ಎಂದು ಸರ್ಕಾರ ಘೋಷಿಸಿದಾಗ, ಪತ್ರಕರ್ತೆ ಖುದ್ದು ಕಾಲ್ನಡಿಗೆಯಲ್ಲಿ ದೂರದೂರದ ಹಳ್ಳಿಗಳಿಗೆ ತೆರಳಿ ಗ್ರಾಮಸ್ಥರನ್ನು ಸಂದರ್ಶಿಸುತ್ತಾರೆ. ವಾಸ್ತವದಲ್ಲಿ ತಲೆಯೆತ್ತಿರದ ದಾಖಲೆಗಳಲ್ಲಿ ಮಾತ್ರವೇ ತೋರ್ಪಡಿಸಿರುವ ಶೌಚಾಲಯಗಳ ಬಗ್ಗೆ ಸರ್ಕಾರವನ್ನು ದಾಖಲೆ ಸಹಿತ ತಮ್ಮ ವರದಿಯಲ್ಲಿ ಪ್ರಶ್ನಿಸುತ್ತಾರೆ. ಅತ್ಯಾಚಾರ ಪ್ರಕರಣಗಳು, ಕೊಲೆ, ರಸ್ತೆ ಇನ್ನೂ ಮುಂತಾದ ಜನರ ಸಮಸ್ಯೆಗಳಿಗೆ ಈ ಪತ್ರಕರ್ತೆಯರು ತಾವೇ ಖುದ್ದು ಪೊಲೀಸ್ ಸ್ಟೇಷನ್, ಕಚೇರಿ ಅಲೆಯುವುದನ್ನು ಸಾಕ್ಷಚಿತ್ರ ಸೆರೆ ಹಿಡಿದಿದೆ. ಉತ್ತರ ಪ್ರದೇಶ, ಬಿಹಾರದಂತಹ ರಾಜ್ಯಗಳಲ್ಲಿ ದಲಿತರ ಆತ್ಮವಿಶ್ವಾಸ ಹೆಚ್ಚಿಸಿ ಅದರಲ್ಲೂ ದಲಿತ ಮಹಿಳೆಯರಿಂದ ಅತ್ಯಾಚಾರ, ಕೊಲೆ, ರಾಜಕೀಯದಂತಹ ವರದಿಗಾರಿಕೆಗಳನ್ನು ನಿರ್ಭೀತವಾಗಿ ವರದಿ ಮಾಡಿಸಲು ಅತ್ಯುತ್ತಮ ಯೋಜನೆಯೊಂದಿರಲೇ ಬೇಕು. ಮಹಿಳಾ ಪತ್ರಕಾರಿಕೆಯ ಬಗ್ಗೆ ಇರುವ ಉಡಾಫೆ, ಪರಿಹಾಸ್ಯ, ಅಜ್ಞಾನ, ಅಶಿಕ್ಷಣ, ಕೀಳರಿಮೆ ಎಲ್ಲವನ್ನೂ ಮೆಟ್ಟಿ ನಿಲ್ಲುವ ಗಟ್ಟಿ ಮಾನಸಿಕತೆ ಪ್ರತಿ ಪತ್ರಕರ್ತೆಯಲ್ಲೂ ಹುಟ್ಟಿಸಿಕೊಳ್ಳುವುದು ತಂತ್ರಜ್ಞಾನ ಕಲಿಕೆಗಿಂತ ಬಹು ಮುಖ್ಯ.
ಇವೆಲ್ಲವುಗಳ ಜೊತೆಜೊತೆಗೆ ತುಳಿತಕ್ಕೊಳಗಾದವರ ಪರ ಮಾತನಾಡುವ ಗಟ್ಟಿತನವೂ, ವ್ಯವಸ್ಥೆಯ ಹುಳುಕುಗಳನ್ನು ಎತ್ತಿ ತೋರಿಸುವ ಸಾಮರ್ಥ್ಯವೂ. ತಮ್ಮ ಚೊಚ್ಚಲ ಚಿತ್ರ ಅಕಾಡೆಮಿ ಪುರಸ್ಕಾರಕ್ಕೆ ಆಯ್ಕೆಯಾಗಿದ್ದೆ ನಮ್ಮ ಗೆಲುವು ಎನ್ನುತ್ತಾರೆ ನಿರ್ದೇಶಕರು ಮತ್ತು ನಿರ್ಮಾಪಕರಾದ ರಿಂತು ಥಾಮಸ್ ಮತ್ತು ಸುಸ್ಮಿತ್ ಘೋಷ್. ಮೀರಾ ಮತ್ತವರ ತಂಡ ಬ್ರೇಕಿಂಗ್ ನ್ಯೂಸ್ ನೊಟ್ಟಿಗೆ ಶತಶತಮಾನಗಳಿಂದ ಬಂದ ಹಲವು ಚೌಕಟ್ಟುಗಳನ್ನು ಮುರಿದು ನಿಂತ ಯಶೋಗಾಥೆಯನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಎತ್ತಿಹಿಡಿದ ಗೌರವ WRITING WITH FIRE


Click it and Unblock the Notifications











