»   » ನೀತಿಯೇನಪ್ಪಾ ಅಂದ್ರೆ ಹೆಣ್ಣು ನಗಬಾರದು. ನಕ್ಕರೆ ಹತ್ತಾರು ಅನಾಹುತಗಳಾಗುವುದು ಗ್ಯಾರಂಟಿ. ಅಂಥಾ ಅನಾಹುತಕ್ಕೊಂದು ಉದಾಹರಣೆಯೆಂದರೆ ಈ ಸಿನಿಮಾ.

ನೀತಿಯೇನಪ್ಪಾ ಅಂದ್ರೆ ಹೆಣ್ಣು ನಗಬಾರದು. ನಕ್ಕರೆ ಹತ್ತಾರು ಅನಾಹುತಗಳಾಗುವುದು ಗ್ಯಾರಂಟಿ. ಅಂಥಾ ಅನಾಹುತಕ್ಕೊಂದು ಉದಾಹರಣೆಯೆಂದರೆ ಈ ಸಿನಿಮಾ.

Posted By:
Subscribe to Filmibeat Kannada

ಚಿತ್ರ : ಹೂಂ ಅಂತೀಯಾ ಊಹೂಂ ಅಂತಿಯಾನಿರ್ದೇಶನ : ಪ್ರವೀಣ್‌ ನಾಯಕ್‌ತಾರಾಗಣ : ರಮೇಶ್‌, ಇಶಾ ಕೊಪ್ಪೀಕರ್‌, ಕರಣ್‌, ಅನು ಪ್ರಭಾಕರ್‌
*ಎಂ. ವಿನೋದಿನಿ

ಕತೆ ಬರೆದವರು ಸಿನಿಮಾ ಪತ್ರಕರ್ತ ಮುರಳೀಧರ ಖಜಾನೆ, ನಿರ್ದೇಶಿಸಿದವರು ಸ್ಟಿಲ್‌ ಫೋಟೋಗ್ರಾಫರ್‌ ಪ್ರವೀಣ್‌ ನಾಯಕ್‌. ಇದೇ ಕಾರಣಕ್ಕೆ ಹೂಂ ಅಂತೀಯಾ ಊಹೂಂ ಅಂತೀಯಾ ಚಿತ್ರದ ಬಗ್ಗೆ ನೀವು ಭಾರಿ ನಿರೀಕ್ಷೆಯಿಟ್ಟುಕೊಂಡರೆ ಮೋಸ ಹೋಗುವುದು ಖಂಡಿತಾ.

ಹಾಗೆ ನೋಡಿದರೆ, ಚಿತ್ರದ ಒಟ್ಟಾರೆ ಕತೆಯೇ ಮೋಸ ಹೋದವರ ಕತೆಯಾಗಿರುವುದು ವಿಪರ್ಯಾಸ. ಇಲ್ಲಿ ನಿಜ ಅನಿಸುತ್ತಾ ಹೋಗೋದೆಲ್ಲಾ ಒಂದು ಹಂತದಲ್ಲಿ ಸುಳ್ಳಾಗುತ್ತದೆ, ಸುಳ್ಳು ಅಂತ ಅನಿಸೋದೆಲ್ಲಾ ನಿಜವಾಗುತ್ತದೆ, ಕನಸುಗಳು ಭ್ರಮೆಯಾಗುತ್ತವೆ. ಪಾತ್ರಗಳ ಸ್ವರೂಪ ಆಕಾರವೆಲ್ಲವೂ ಏಕ್‌ದಂ ಬದಲಾಗುತ್ತವೆ. ಥಿಯೇಟರ್‌ನಿಂದ ಹೊರಗೆ ಬರುವಾಗ ನಿಮ್ಮ ಶರ್ಟ್‌ ಹರಿದಿರುತ್ತದೆ, ತಲೆ ಚಿತ್ರಾನ್ನವಾಗಿರುತ್ತದೆ.

ಸಿನಿಮಾ ಕತೆ ಅಂದಮೇಲೆ ಅದರಲ್ಲಿ ಹತ್ತಾರು ತಿರುವುಗಳಿರಬೇಕೆಂದು ಕತೆಗಾರರು ಅಂದುಕೊಂಡಿದ್ದರೆ, ಅದರಲ್ಲಿ ತಪ್ಪೇನೂ ಇಲ್ಲ . ಆದರೆ ಈ ತಿರುವುಗಳೇ ಹೂಂ... ಊಹೂಂ... ಚಿತ್ರಕ್ಕೆ ಖಳನಾಯಕನಾಗಿರುವುದು ದುರಂತ.

ತಿರುವು ನಂಬರ್‌ ವನ್‌ - ನಾಯಕ ಡ್ಯಾನ್ಸರ್‌ ಒಬ್ಬಳ ಬೆನ್ನಿಗೆ ಬಿದ್ದಿದ್ದಾನೆ. ಅವಳನ್ನು ಪಾರ್ಕಿಗೆ ಕರೀತಾನೆ. ಅವನು ಐ ಲವ್‌ ಯೂ ಅಂದಕೂಡಲೇ ದಬಾಯಿಸಬೇಕು ಅನ್ನೋದು ಗಂಡು ದ್ವೇಷಿ ನಾಯಕಿಯ ಐಡಿಯಾ. ಆದರೆ ಆತ ಐ ಲವ್‌ ಯೂ ಅನ್ನೋದು ನಾಯಕಿಯ ಸ್ನೇಹಿತೆಗೆ. ಇವಳಿಗೋ ಭ್ರಮನಿರಸನ.

ತಿರುವು ನಂಬರ್‌ 2 - ಪ್ರೀತಿ ದರ್ಶನದ ಪ್ರಕ್ರಿಯೆಯಲ್ಲಿ ನಾಯಕನ ಕಾಲು ಮುರಿಯುತ್ತದೆ. ಕುಂಟನನ್ನು , ಮದುವೆಯಾಗಲಾರೆ ಅನ್ನುತ್ತಾಳೆ ಸ್ನೇಹಿತೆ. ನಾಯಕ ನಂದಿ ಬೆಟ್ಟದಿಂದ ಬಿದ್ದು ಪ್ರಾಣ ಬಿಡ್ತೀನಿ ಅಂತ ಬೆದರಿಕೆ ಹಾಕ್ತಾನೆ. ಸಾಯಿ ಅಂತ ಅನುಮತಿ ಕೊಡ್ತಾಳೆ ಅವಳು. ತಕ್ಷಣ ಗಂಡುದ್ವೇಷಿ ಡಾನ್ಸರ್‌ಗೆ ಸಿಂಪತಿ ಉಕ್ಕಿ ಹರಿಯುತ್ತದೆ. ನಂದಿ ಬೆಟ್ಟಕ್ಕೆ ಹೋಗಿ ನಾಯಕನ ಪ್ರಾಣ ಉಳಿಸಿ ತಬ್ಬಿಕೊಳ್ಳುತ್ತಾಳೆ. ಹಿಂದಿನಿಂದ ಸ್ನೇಹಿತೆಯ ಚಪ್ಪಾಳೆ. ಈ ಹಿಂದೆ ಆಡಿದ್ದೆಲ್ಲಾ ನಾಟಕ ಅನ್ನೋ ವಿವರಣೆ.

ತಿರುವು ನಂಬರ್‌ 3- ಅದೇ ನಾಯಕ ದೂರದೂರಲ್ಲಿ ಇನ್ನೊಬ್ಬಳ ಕತ್ತಿಗೆ ತಾಳಿ ಕಟ್ಟುವುದಕ್ಕೆ ಸಜ್ಜಾಗಿದ್ದಾನೆ.

ತಿರುವು ನಂಬರ್‌ 4- ಈಗ ತನ್ನದೆಲ್ಲಾ ನಾಟಕ ಎಂದು ಸಾರುವ ಸರದಿ ನಾಯಕನದ್ದು. ತಾನು ನಾಯಕಿಯನ್ನು ಪ್ರೀತಿಸಿದ್ದೆಲ್ಲಾ ನಾಟಕ. ತನ್ನ ತಮ್ಮನಿಗೆ ಅವಳು ಮೋಸ ಮಾಡಿದ್ದಕ್ಕೆ ಇದು ಶಿಕ್ಷೆ ಎನ್ನುವ ಘೋಷಣೆ.

ತಿರುವು ನಂಬರ್‌ 5- ನಾಯಕನ ಜೊತೆ ಮದುವೆಯಾಗಬೇಕಾಗಿದ್ದ ಹುಡುಗಿ ಮದುವೆ ಮಂಟಪದಿಂದ ಪರಾರಿ. ಆಕೆಗೆ ತಾಳಿ ಕಟ್ಟೋದಕ್ಕೆ ಮತ್ತೊಬ್ಬ ಹಾಜರ್‌. ಅವನೇ ನಾಯಕನ ತಮ್ಮ... ಅವನಿನ್ನೂ ಸತ್ತಿಲ್ಲ ಅನ್ನೋದು ಶಾಕ್‌. ಈಗೊಂದು ಫ್ಲಾಶ್‌ ಬ್ಯಾಕ್‌. ಯಾರೋ ಒಬ್ಬ ವಿಲನ್‌ನ ಒತ್ತಾಯಕ್ಕೆ ತಮ್ಮ , ತನ್ನ ಸಾವಿಗೆ ನಾಯಕಿಯೇ ಕಾರಣ ಎಂದು ಪತ್ರ ಬರೆದಿರುತ್ತಾನೆ. ಅದನ್ನು ನಿಜ ಎಂದು ನಾಯಕ ನಂಬಿರುತ್ತಾನೆ.

ತಿರುವು ನಂಬರ್‌ 6- ನಾಯಕಿಯ ಬದುಕನ್ನು ಸರಿಪಡಿಸಲು ನಾಯಕ ತಾನೇ ದುಷ್ಟನ ಥರ ನಟಿಸುತ್ತಾನೆ. ಅವಳು ಅವನನ್ನು ಮರೆತು ತನ್ನ ಮನೇಲಿರುವ ಅನಾಥನನ್ನು ಮದುವೆಯಾಗುವುದಕ್ಕೆ ಅಣಿಯಾಗುತ್ತಾಳೆ. ಆದರೆ ಆ ಅನಾಥ ಅವಳ ಸ್ನೇಹಿತೆಯನ್ನು ಪ್ರೀತಿಸುತ್ತಿದ್ದಾನೆ.

ತಿರುವು ನಂಬರ್‌ 7- ನಾಯಕನಿಗೆ ಅನಾಥನ ಆಟ ಗೊತ್ತಾಗುತ್ತದೆ. ತೆಹಲ್ಕಾ ಮಾದರಿಯಲ್ಲೇ ಅವನ ಪ್ರೇಮ ವಿಲಾಸವನ್ನು ಸೆರೆ ಹಿಡಿಯುತ್ತಾನೆ. ಸ್ನೇಹಿತೆಯಿಂದ ಅನಾಥನ ನಿಜರೂಪ ಬಯಲು. ನಾಯಕನ ತಮ್ಮನನ್ನು ಅಪಹರಿಸಿ, ಅವನ ಕೈಯಲ್ಲಿ ಪತ್ರ ಬರೆಸಿದವನೇ ಅನಾಥ ಎಂಬ ಸತ್ಯ ಬಯಲು. ನಾಯಕಿಯ ಮೇಲೆ ಸೇಡು ತೀರಿಸಿಕೊಳ್ಳೋದಕ್ಕೆ ಈ ಪ್ಲಾನ್‌. ಸೇಡು ಯಾಕಪ್ಪಾ ಅಂದ್ರೆ ಹಿಂದೊಮ್ಮೆ ಅನಾಥನ ಮದುವೆ ಪ್ರೊಪೋಸಲನ್ನು ಅವಳು ತಿರಸ್ಕರಿಸಿದ್ದಳು. ನಕ್ಕು ಅವಮಾನ ಮಾಡಿದ್ದಳು.

ತಿರುವು ನಂಬರ್‌ 8- ಮದುವೆ ಮಂಟಪಕ್ಕೆ ವಿಡಿಯೋ ಕ್ಯಾಸೆಟ್‌ನೊಂದಿಗೆ ನಾಯಕ ಹಾಜರ್‌. ಇನ್ನೊಂದೆಡೆ ಸ್ನೇಹಿತೆಯೂ ಹಾಜರ್‌. ಮೋಸದ ಕತೆ ಬಯಲು. ಜೊತೆಗೆ ಸ್ನೇಹಿತೆಯ ಹೊಟ್ಟೆಯಲ್ಲಿ ಮಗು ಬೆಳೆಯುತ್ತಿದೆ ಎಂಬ ಇನ್ನೊಂದು ರಹಸ್ಯವೂ ಬಯಲು. ಅನಾಥ್‌ ರಿವಾಲ್ವರ್‌ ಹಿಡಿದು ಬೆದರಿಸುವ ಹೊತ್ತಿಗೆ ಸ್ನೇಹಿತೆಯಿಂದ ಅವನ ಬೆನ್ನಿಗೆ ಚೂರಿ. ಅಲ್ಲಿಗೆ ಅಕೌಂಟ್‌ ಕ್ಲೋಸ್‌.

ಈ ತಿರುವುಗಳು ನಿಮಗೆ ಅರ್ಥವಾಗದೇ ಇದ್ದರೆ ಕ್ಷಮಿಸಿ. ಯಾಕೆಂದರೆ ಸಿನಿಮಾ ನೋಡಿದ ಮೇಲೂ ಅರ್ಥವಾಗುವ ಸಾಧ್ಯತೆಗಳು ಕಡಿಮೆ. ನೀತಿಯೇನಪ್ಪಾ ಅಂದ್ರೆ ಹೆಣ್ಣು ನಗಬಾರದು. ನಕ್ಕರೆ ಹತ್ತಾರು ಅ-ನಾಹುತಗಳಾಗುವುದು ಗ್ಯಾರಂಟಿ. ಅಂಥಾ ಅನಾಹುತಕ್ಕೊಂದು ಉದಾಹರಣೆಯೆಂದರೆ ಈ ಸಿನಿಮಾ.

ನಾಟಕೀಯ ತಿರುವುಗಳೊಂದಿಗೆ ಸೆಣಸಾಡುತ್ತಾ ಇಡೀ ಸಿನಿಮಾನೇ ಒಂದು ನಾಟಕವಾಗಿ ಬಿಡುವ ಚೋದ್ಯ ಇಲ್ಲಿದೆ. ಪ್ರತಿ ಪಾತ್ರಗಳೂ ತಮ್ಮ ಬಗಲಲ್ಲೊಂದು ಫ್ಲಾಷ್‌ ಬ್ಯಾಕನ್ನು ಇಟ್ಟುಕೊಂಡೇ ತೆರೆಯ ಮೇಲೆ ಹಾಜರಾಗುತ್ತವೆ. ಅದು ಮುಗಿಯುವ ಹೊತ್ತಿಗೆ ಒಂದು ಹಾಡು. ಐದೋ ಆರೋ ಗೀತೆಗಳಿವೆ. ಇಳಯರಾಜಾರ ಪುತ್ರ ಕಾರ್ತಿಕ್‌ ರಾಜಾರ ಸಂಗೀತ, ಉಸಿರೇಯಲ್ಲಿ ಅಪ್ಪನ ಸಾಧನೆಯನ್ನು ಮೀರಿಸುವಂತಿದೆ. ರೀರೆಕಾರ್ಡಿಂಗ್‌ ಅಂತೂ ಯಾವುದೋ ಹಾರರ್‌ ಚಿತ್ರದ ಹಿನ್ನೆಲೆಯನ್ನೇ ಹೋಲುತ್ತದೆ. ಪಾಪಾ, ಅವರಿಗೆ ಭಾಷೆ ಸಮಸ್ಯೆ. ರಾಜೇಂದ್ರ ಅವರ ಕ್ಯಾಮರಾ ನಾಯಕಿ ಇಶಾ ಕೊಪ್ಪೀಕರ್‌ ಬಗ್ಗೆ ಪಕ್ಷಪಾತಿ. ಅನುಪ್ರಭಾಕರ್‌ ಅವರು ತಮ್ಮನ್ನು ತೆರೆಯಲ್ಲಿ ನೋಡಿಕೊಂಡ ಮೇಲೆ ಮನೆಗೆ ಹೋಗಿ ಕನ್ನಡಿ ನೋಡುವುದು ವಾಸಿ. ತಮಿಳಿನಿಂದ ಆಮದಾಗಿರುವ ನಟ ಕರಣ್‌ ಆ್ಯಂಟಿ ಹೀರೋ ಪಾತ್ರದಲ್ಲಿ ಸಾಕಷ್ಟು ನಗಿಸುತ್ತಾರೆ. ಇವೆಲ್ಲದಕ್ಕಿಂತಲೂ ದಾರುಣ ಸಂಗತಿ ಎಂದರೆ ರಮೇಶ್‌ ಅಭಿನಯ . ಹಾದಿ ತಪ್ಪಿದ ಹುಡುಗನಂತೆ ಅಥವಾ ಮೆಜೆಸ್ಟಿಕ್‌ ರಶ್‌ನಲ್ಲಿ ಸಿಕ್ಕಿ ಹಾಕಿಕೊಂಡ ಹಳ್ಳಿ ಹೈದನಂತೆ ಕಾಣಿಸುತ್ತಾರೆ ಅವರು. ಪ್ರೇಕ್ಷಕರ ಥರಾನೇ ಅವರಿಗೂ ಸಿನಿಮಾ ಮತ್ತು ತಮ್ಮ ಪಾತ್ರ ಅರ್ಥವಾಗಿಲ್ಲದೇ ಇರಬಹುದು.

ಇಡೀ ಚಿತ್ರದಲ್ಲಿ ನೀವು ಮೆಚ್ಚಬಹುದಾದ ಪಾತ್ರವೆಂದರೆ ನಾಯಕಿಯದ್ದು. ಇಶಾ ಕೊಪ್ಪೀಕರ್‌ ತಾನು ಬರೀ ಬೊಂಬೆಯಲ್ಲ, ನಟಿ ಅನ್ನೋದನ್ನು ಇಲ್ಲಿ ಸಾಬೀತು ಪಡಿಸಿದ್ದಾರೆ. ಆದರೆ ಆಕೆಯ ಪ್ರಯತ್ನದಿಂದ ಮ್ಯಾಚಿನ ಫಲಿತಾಂಶವೇನೂ ಬದಲಾಗುವುದಿಲ್ಲ...

ಮುಖಪುಟ / ಸ್ಯಾಂಡಲ್‌ವುಡ್‌

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada