War 2 Trailer X Review ;ಹೇಗಿದೆ ಹೃತಿಕ್ ರೋಷನ್-ಜೂ.ಎನ್.ಟಿ.ಆರ್ ಮುಖಾಮುಖಿ ? ಬಾಕ್ಸಾಫೀಸ್‌ಗೆ ಬೀಳುತ್ತಾ ಬೆಂಕಿ ?
ಮಲ್ಟಿಸ್ಟಾರ್ ಚಿತ್ರಗಳನ್ನು ಮಾಡುವುದು ಸುಲಭ ಅಲ್ಲ. ಯಾಕೆಂದರೆ.. ಸ್ಟಾರ್‌ಗಳನ್ನು ಒಪ್ಪಿಸುವುದು ಮಾತ್ರ ಅಲ್ಲ ಅವರ ಅಭಿಮಾನಿಗಳನ್ನು ಕೂಡ ಓಲೈಸುವುದು ತುಂಬಾ ಕಷ್ಟ. ಚೂರು ತಪ್ಪಾದರೂ ಕೂಡ ಅಸಮಾಧಾನದ ಜ್ವಾಲೆ ಭುಗಿಲೇಳುವ ಸಾಧ್ಯತೆ ಇರುತ್ತೆ. ಹೀಗಾಗಿಯೇ ಹಲವರು ಅದರಲ್ಲಿಯೂ ದಕ್ಷಿಣ ಭಾರತದಲ್ಲಿ ಈ ಸಾಹಸಕ್ಕೆ ಕೈ ಹಾಕುವುದಿಲ್ಲ. ಕನ್ನಡ ಚಿತ್ರರಂಗದ ಪಾಲಿಗಂತು ಈಗೀಗ ಒಂದೇ ಫ್ರೇಮ್‌ನಲ್ಲಿ ತಮ್ಮ ಇಷ್ಟದ ನಾಯಕರನ್ನು ನೋಡುವ ಸೌಭಾಗ್ಯ ಸಿಕ್ಕಿದ್ದು ತುಂಬಾ ಕಡಿಮೆಯೇ.
ಆದರೆ.. ಅದೇ ಬಾಲಿವುಡ್‌ನಲ್ಲಿ ಈ ಮಲ್ಟಿಸ್ಟಾರ್‌ಗಳ ಚಿತ್ರಗಳು ಮೇಲಿಂದ ಮೇಲೆ ಬರುತ್ತಲೇ ಇರುತ್ತವೆ. ಅಭಿಮಾನಿಗಳ ಹೃದಯವನ್ನು ಗೆಲ್ಲುವುದಲ್ಲದೇ ಬಾಕ್ಸಾಫೀಸ್‌ನಲ್ಲಿ ಕೂಡ ಸದ್ದು ಮಾಡುತ್ತವೆ. ಗೆಲ್ಲುತ್ತವೆ.ಹೀಗೆ ಬಂದು ಗೆದ್ದ ಚಿತ್ರಗಳಲ್ಲಿ 2019ರಲ್ಲಿ ಬಿಡುಗಡೆಯಾಗಿದ್ದ ವಾರ್ ಕೂಡ ಒಂದು.

ಹೃತಿಕ್ ರೋಷನ್ ಮತ್ತು ಟೈಗರ್ ಶ್ರಾಫ್ ಅಭಿನಯದ ಈ ಚಿತ್ರ ಆ ಕಾಲದಲ್ಲಿ ಬಾಕ್ಸಾಫೀಸ್‌ನ ದೋಚಿತ್ತು. ಇದೀಗ ವಾರ್ 2 ಸರದಿ. ಸದ್ಯ ಬಿಡುಗಡೆಯಾದ ವಾರ್ 2 ಟ್ರೇಲರ್ ಕೂಡ ಬಾಕ್ಸಾಫೀಸ್‌ನಲ್ಲಿ ಹೊಸ ಅಲೆಯನ್ನೇಬ್ಬಿಸುವ ಸೂಚನೆಯನ್ನು ನೀಡಿದ್ದು ಹೃತಿಕ್ ರೋಷನ್ ಮತ್ತು ಜ್ಯೂನಿಯರ್ ಎನ್‌ಟಿಆರ್ ಅಭಿಮಾನಿಗಳು ಹುಚ್ಚೆದ್ದು ಕುಣಿಯುತ್ತಿದ್ದಾರೆ. ಹಾಗಿದ್ದರೆ ವಾರ್ 2 ಟ್ರೇಲರ್ ನೋಡಿ ಇಬ್ಬರ ಅಭಿಮಾನಿಗಳು ಹೇಳಿದ್ದೇನು ಎಂದು ತಿಳಿಯಲು ಮುಂದೆ ಓದಿ.
ಹೊಸ ಚರಿತ್ರೆ ಬರೆಯುವುದು ಪಕ್ಕಾ
ವಾರ್ ಚಿತ್ರದ ಟ್ರೇಲರ್‌ನಲ್ಲಿ ಜೂನಿಯರ್ ಎನ್.ಟಿ.ಆರ್‌ಗೆ ನಾನು ಮಾರು ಹೋದೆ. ಎಲ್ಲ ತರಹದ ಭಾವನೆಗಳನ್ನು ಅವರು ವ್ಯಕ್ತಪಡಿಸಿದ್ದಾರೆ ಎಂದು ಒಬ್ಬ ಅಭಿಮಾನಿ ಹೇಳಿದರೆ, ಇನ್ನು ಹಲವರು ಈ ಚಿತ್ರ ಬ್ಲಾಕ್ ಬಸ್ಟರ್ ಆಗುವುದು ಗ್ಯಾರಂಟಿ ಎನ್ನುವ ಭವಿಷ್ಯವನ್ನು ಕೂಡ ಹೇಳಿದ್ದಾರೆ. ಬೆಳ್ಳಿ ಪರದೆ ಈ ಯುದ್ದವನ್ನು ತಡೆದುಕೊಳ್ಳಲು ಸಾಧ್ಯ ಇಲ್ಲ. ಇಬ್ಬರು ಅಜಾನುಬಾಹು ವ್ಯಕ್ತಿಗಳು.. ಒಂದು ಯುದ್ಧ.. ಹೊಸ ಇತಿಹಾಸ ನಿರ್ಮಾಣವಾಗಲಿದೆ ಎಂದು ಕೂಡ ಹೇಳಿದ್ದಾರೆ.
ಹೃತಿಕ್ ರೋಷನ್ ಅಭಿಮಾನಿಗಳು ಫುಲ್ ಖುಷ್
ಬಾಲಿವುಡ್‌ನ ಗ್ರೀಕ್ ಗಾಡ್ ಹೃತಿಕ್ ರೋಷನ್ ಅವರ ಅಭಿಮಾನಿಗಳು ವಾರ್ 2 ಟ್ರೇಲರ್ ನೋಡಿ ಫುಲ್ ಖುಷಿಯಾಗಿದ್ದಾರೆ. ನನ್ನನ್ನು ನಂಬಿ ಹೃತಿಕ್ ಬಹಳ ದಿನಗಳ ನಂತರ ನೀವು ನಮಗೆ ಉತ್ತಮವಾದ ಟ್ರೇಲರ್ ನೀಡಿದ್ದೀರಾ, ಅದ್ಭುತವಾಗಿ ಕೆಲಸ ಮಾಡಿದ್ದೀರಾ, ಸಂಪೂರ್ಣ ಹೃದಯ ಗೆಲ್ಲುವಂತಹ ಟ್ರೇಲರ್ ಇದು ಒಬ್ಬರು ಅಂದರೆ ಮತ್ತೊಬ್ಬರು ಹೃತಿಕ್ ನಗು ಮತ್ತು ಅಭಿನಯವನ್ನು ಕೊಂಡಾಡಿದ್ದಾರೆ.
ಸಂಭಾಷಣೆ ಅದ್ಭುತವಾಗಿದೆ
ಟ್ರೇಲರ್‌ನಲ್ಲಿರುವ ಡೈಲಾಗ್‌ಗಳು ಅದ್ಭುತವಾಗಿವೆ. ಹೃತಿಕ್ ರೋಷನ್ ಮತ್ತು ಜ್ಯೂ ಎನ್‌ಟಿಆರ್ ಅವರ ದಾರಿಗಳು ಮತ್ತು ಗುರಿಗಳು ಭಿನ್ನವಾಗಿರುವುದನ್ನು ತೋರಿಸುವಲ್ಲಿ ಟ್ರೇಲರ್ ಯಶಸ್ವಿಯಾಗಿದೆ.ಹೃತಿಕ್ ಮತ್ತು ಕಿಯಾರಾ ಅವರ ಮುಖಾಮುಖಿ ಕೂಡ ಚೆನ್ನಾಗಿದೆ. ಆದರೆ ಚಿತ್ರದ ವಿಎಫ್‌ಎಕ್ಸ್ ಇನ್ನು ಸುಧಾರಿಸಬೇಕಿತ್ತು. ಬಿಗಿಯಾದ ಕಥೆ ಮತ್ತು ಚಿತ್ರಕಥೆ ಈ ನ್ಯೂನತೆಯನ್ನು ದೂರ ಮಾಡುತ್ತೆ ಎಂದು ಭಾವಿಸುತ್ತೇನೆ ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ.
ಹುಚ್ಚಿಡಿಸುವ ಟ್ರೇಲರ್
ವಾರ್ 2 ಚಿತ್ರದ ಟ್ರೇಲರ್ ಹುಚ್ಚಿಡಿಸುವಂತೆ ಇದೆ. ತುಂಬಾ ವರ್ಷಗಳ ನಂತರ ಒಂದೊಳ್ಳೆಯ ಟ್ರೇಲರ್ ನೋಡಿದೆ. ಚಿತ್ರದ ಬಿಡುಗಡೆಯ ದಿನಕ್ಕೆ ಕಾಯಲು ಆಗುತ್ತಿಲ್ಲ ಎಂದು ಮತ್ತೊಬ್ಬರು ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದರೆ ಇದೊಂದು ದಂತಕಥೆ ಹೃತಿಕ್ ರೋಷನ್ ಸ್ಟೈಲ್ ಮತ್ತು ಜೂನಿಯರ್ ಎನ್.ಟಿ.ಆರ್ ಕೋಪ ಬೆಳ್ಳಿತೆರೆಯ ಮೇಲೆ ನೋಡಲು ಅದ್ಭುತವಾಗಿರುತ್ತೆ ಎಂದು ಮತ್ತೊಬ್ಬರು ಹೇಳಿದ್ಧಾರೆ.
ವಾರ್ 2 ಚಿತ್ರದ ತಾರಾಬಳಗ
ಹೃತಿಕ್ ರೋಷನ್ ಮತ್ತು ಜೂ.ಎನ್.ಟಿ.ಆರ್ ಹೊರತು ಪಡಿಸಿದರೆ ನಾಯಕಿಯಾಗಿ ಕಿಯಾರಾ ಅಡ್ವಾಣಿ ಇದ್ದಾರೆ. ಆಲಿಯಾ ಭಟ್ ಮತ್ತು ಶಾರ್ವರಿ ವಾಘ್ ಅತಿಥಿ ಪಾತ್ರಗಳನ್ನು ನಿರ್ವಹಿಸಿದ್ಧಾರೆ ಎನ್ನುವ ಸುದ್ದಿ ಇದೆ. ಇನ್ನು ಇದು YRF ಸ್ಪೈ ಯೂನಿವರ್ಸ್. ಈ ಹಿನ್ನೆಲೆ ಶಾರುಖ್ ಖಾನ್ ಮತ್ತು ಸಲ್ಮಾನ್ ಖಾನ್ ಅವರ ಗೆಸ್ಟ್ ರೋಲ್‌ನ ಕೂಡ ನಿರೀಕ್ಷೆ ಮಾಡಬಹುದು. ಅಯ್ಯನ್ ಮುಖರ್ಜಿ ನಿರ್ದೇಶನದಲ್ಲಿ ಮೂಡಿ ಬಂದ ಈ ಚಿತ್ರ ಈ ಆಗಸ್ಟ್ 14ರಂದು ಹಿಂದಿ, ತೆಲುಗು ಮತ್ತು ತಮಿಳಿನಲ್ಲಿ ಬಿಡುಗಡೆಯಾಗಲಿದೆ.


Click it and Unblock the Notifications











