Fighter Review: ಬಾಲಿವುಡ್ ನ ಬಾನಹಕ್ಕಿ 'ಫೈಟರ್'; ಹೇಗಿದೆ ಸಿನಿಮಾ ? ಇಲ್ಲಿದೆ ಕಂಪ್ಲೀಟ್ ರಿವ್ಯೂ
ಕಳೆದ ವರ್ಷ ಇದೇ ದಿನ ತೆರೆಗೆ ಬಂದಿದ್ದ ಪಠಾಣ್, ಸೋಲಿನ ಸುಳಿಯಲ್ಲಿ ಸಿಲುಕಿದ್ದ ಬಾಲಿವುಡ್ ಗೆ ಹೊಸ ಚೈತನ್ಯ ತಂದು ಕೊಟ್ಟಿತ್ತು. ಕಿಂಗ್ ಖಾನ್ ಶಾರುಖ್ ಖಾನ್ ಗೂ ಕೂಡ ಮರು ಹುಟ್ಟನ್ನ ನೀಡಿತ್ತು. ಆ ನಂತರ ಹಿಂದಿ ಉದ್ಯಮಕ್ಕೆ ಸಿಕ್ಕಿದ್ದು ಅಕ್ಷರಶ ಕುಬೇರ ವರ. ಅಲ್ಲಿಂದಾಚೆ ಒಂದಾದ ಮೇಲೊಂದು ಬ್ಲಾಕ್ ಬಸ್ಟರ್ ಸಿನಿಮಾ ನೀಡಿದ ಬಾಲಿವುಡ್ ವರ್ಷದ ಕೊನೆಯಲ್ಲಿ ಡಂಕಿ ಮೂಲಕ ಬ್ಯಾಲೆನ್ಸ್ ಶೀಟ್ ಗೆ ಶುಭಂ ಹಾಡಿತ್ತು. ವಿಶೇಷ ಅಂದರೆ 2023ರ ವರ್ಷದ ಆರಂಭ ಮಾಡಿದ್ದು ಕೂಡ ಶಾರುಖ್ ಖಾನ್ ವರ್ಷದ ಅಂತ್ಯಕ್ಕೆ ಮಂಗಳ ಹಾಡಿದ್ದು ಕೂಡ ಶಾರುಖ್ ಖಾನ್.
ಈ ವರ್ಷ ಈ ಜವಾಬ್ದಾರಿಯನ್ನ ಬಾಲಿವುಡ್ ನ ಗ್ರೀಕ್ ಗಾಡ್ ಹೃತಿಕ್ ರೋಷನ್ ವಹಿಸಿಕೊಂಡಂತೆ ಇದೆ. 2024ರ ವರ್ಷದ ಆರಂಭದಲ್ಲಿ ಹೃತಿಕ್ ಅಭಿನಯದ ಬಹುನಿರೀಕ್ಷಿತ ಸಿನಿಮಾ ಫೈಟರ್ ಗಣರಾಜ್ಯೋತ್ಸವದ ಪ್ರಯುಕ್ತ ಬಿಡುಗಡೆಯಾಗಿದೆ. ಇನ್ನೂ ವಿಶೇಷ ಅಂದರೆ, ಕಳೆದ ವರ್ಷ ಪಠಾಣ್ ಚಿತ್ರವನ್ನ ನಿರ್ದೇಶಿಸಿದ್ದ ಸಿದ್ಧಾರ್ಥ್ ಆನಂದ್ ಅವರ ನಿರ್ದೇಶನ ಈ ಫೈಟರ್ ಚಿತ್ರಕ್ಕೂ ಇದೆ.

ಫೈಟರ್ ಕಥಾಹಂದರ
ಟ್ರೇಲರ್.. ಟೀಸರ್ ನಲ್ಲಿ ನೋಡಿದಂತೆ ಇಲ್ಲಿ ಭಾರತ-ಪಾಕಿಸ್ತಾನದ ನಡುವಿನ ಸಂಘರ್ಷದ ಕಥೆ ಇದೆ. ಕಾಶ್ಮೀರಕ್ಕಾಗಿ ನಡೆಯುವ ಹೋರಾಟ ಇದೆ. ಆದರೆ ಅಷ್ಟಕ್ಕೆ ಇಲ್ಲಿ ಸಿದ್ಧಾರ್ಥ್ ಆನಂದ್ ಸೀಮಿತವಾಗಿಲ್ಲ. ಪುಲ್ವಾಮ ದಾಳಿಯ ಹಿಂದೆ ಹಾಗೂ ಮುಂದೆ ಕಥೆಯನ್ನ ರಚಿಸಿದ್ದಾರೆ. ಹಾಗಂಥ ಇಲ್ಲಿ ಪುಲ್ವಾಮ ದಾಳಿಯ ಮೇಲೆ ಹಿಂದೆ ಬಂದ ಸಿನಿಮಾಗಳ ನೆರಳಿಲ್ಲ. ಯಾಕೆಂದರೆ ನಿರ್ದೇಶಕ ಸಿದ್ಧಾರ್ಥ್ ಆನಂದ್ ತಮ್ಮದೇ ಶೈಲಿಯಲ್ಲಿ ಕಥೆಯನ್ನ ಕಟ್ಟಿ ಕೊಟ್ಟಿದ್ದಾರೆ. ಸ್ನೇಹ.. ಪ್ರೀತಿ.. ಶೌರ್ಯದ ನಡುವೆ ದೇಶಭಕ್ತಿ ಇಲ್ಲಿ ಹಾಸು ಹೊಕ್ಕಿದೆ. ಹಿನ್ನಲೆಯಲ್ಲಿ ಕೇಳಿ ಬರುವ ವಂದೇ ಮಾತರಂ ಹಾಗೂ ಜೈ ಹಿಂದ್ ಘೋಷವಾಕ್ಯ ರೋಮಾಂಚನಗೊಳಿಸುತ್ತೆ.
ಮೊದಲಾರ್ಧದಲ್ಲಿ ಪಾತ್ರಗಳ ಪರಿಚಯ, ಹೃತಿಕ್ ಹಾಗೂ ದೀಪಿಕಾ ನಡುವಿನ ಪ್ರೇಮ ಕಥೆಗೆ ಮೀಸಲಿಟ್ಟಿರುವ ಸಿದ್ಧಾರ್ಥ್ ಆನಂದ್ ದ್ವೀತಿಯಾರ್ಧದಲ್ಲಿ ನಿಬ್ಬೇರಗಾಗಿಸುತ್ತಾರೆ. ಸಿದ್ದಾರ್ಥ್ ಆನಂದ್ ಅವರ ಈ ಪ್ರಯತ್ನಕ್ಕೆ ಸಾಹಸ ನಿರ್ದೇಶಕ ಪರ್ವೇಜ್ ಶೇಕ್ ಅಷ್ಟೇ ಬೆಂಬಲವನ್ನೂ ಕೊಟ್ಟಿದ್ದಾರೆ. ಇದಕ್ಕೆ ಉದಾಹರಣೆ ಅನ್ನುವಂತೆ ಆಕಾಶದೆತ್ತರದಲ್ಲಿ ನಡೆಯುವ ರಣರೋಚಕ ಕದನ ಬೆಕ್ಕಸ ಬೆರಗಾಗಿಸುತ್ತೆ. ಒಂದರ್ಥದಲ್ಲಿ ಆಕ್ಷನ್ ವಿಭಾಗ ಈ ಚಿತ್ರದ ನಿಜವಾದ ಹೀರೋ ಅಂದರೆ ತಪ್ಪಲ್ಲ.

ಇನ್ನೂ ಸಾಮಾನ್ಯವಾಗಿ ಸಿದ್ಧಾರ್ಥ್ ಸಿನಿಮಾದಲ್ಲಿ ನಾಯಕನ ಎಂಟ್ರಿ ವಿಶೇಷವಾಗಿರುತ್ತೆ. ಇದಕ್ಕೆ ಸಿದ್ಧಾರ್ಥ್ ಆನಂದ್ ಹಿಂದೆ ನಿರ್ದೇಶಿಸಿದ ಪಠಾಣ್ ಹಾಗೂ ವಾರ್ ಸಾಕ್ಷಿ. ಆದರೆ, ಇಲ್ಲಿ ಸಿದ್ಧಾರ್ಥ್ ಆನಂದ್ ಹೃತಿಕ್ ಕ್ಕಿಂತ ದೀಪಿಕಾ ಪಡುಕೋಣೆಯನ್ನ ಪರಿಚಯಿಸಲು ಸಿಕ್ಕಾಪಟ್ಟೆ ಕಾಳಜಿ ವಹಿಸಿದ್ದಾರೆ. ತಮ್ಮ ಪ್ರಯತ್ನದಲ್ಲಿ ಯಶಸ್ವಿಯೂ ಆಗಿದ್ದಾರೆ. ಹುಸೇನ್ ಹಾಗೂ ಅಬ್ಬಾಸ್ ಬರೆದ ಸಂಭಾಷಣೆ ಈ ಚಿತ್ರದ ಇನ್ನೊಂದು ಆಕರ್ಷಣೆ. ಕ್ಲೈಮ್ಯಾಕ್ಸ್ ಚಿತ್ರದ ಇನ್ನೊಂದು ಜೀವಾಳ
ಕಲಾವಿದರ ಅಭಿನಯ ಹೇಗಿದೆ..?
ಪ್ಯಾಟಿ ಪಾತ್ರಕ್ಕೆ ಬಣ್ಣ ಹಚ್ಚಿರುವ ಹೃತಿಕ್ ರೋಷನ್, ಅಕ್ಷರಶ: ಪಾತ್ರವನ್ನ ಜೀವಿಸಿದ್ದಾರೆ. ಹೃತಿಕ್ ಅಭಿನಯದ ಇಲ್ಲಿಯವರೆಗಿನ ಚಿತ್ರಗಳಲ್ಲಿಯೇ ಫೈಟರ್ ವಿಶೇಷ ಹಾಗೂ ವಿಭಿನ್ನ. ಇನ್ನೂ ದೀಪಿಕಾ ಪಡುಕೋಣೆ ಕೇವಲ ಗ್ಲ್ಯಾಮರಸ್ ನಟಿ ಅಷ್ಟೇ ಅಲ್ಲ ಅಭಿನಯದ ಗ್ರಾಮರ್‌ನ ಕೂಡ ಚೆನ್ನಾಗಿ ಕಲಿತಿರುವ ನಟಿ ಅನ್ನುವುದನ್ನ ಫೈಟರ್ ಇನ್ನೊಮ್ಮೆ ಸಾಬೀತು ಮಾಡಿದೆ. ಅನಿಲ್ ಕಪೂರ್ ಹಾಗೂ ಹೃತಿಕ್ ರೋಷನ್ ನಡುವಿನ ಸನ್ನಿವೇಶ ಪರಿಣಾಮಕಾರಿಯಾಗಿ ಮೂಡಿ ಬಂದಿವೆ. ಕರಣ್ ಸಿಂಗ್ ಗ್ರೋವರ್, ಸಂಜಿದಾ ಶೇಕ್ ಹಾಗೂ ಅಕ್ಷಯ್ ಓಬೆರಾಯ್ ತಮ್ಮ ಪಾತ್ರಕ್ಕೆ ಸಂಪೂರ್ಣ ನ್ಯಾಯ ಸಲ್ಲಿಸಿದ್ದಾರೆ.

ಫೈಟರ್ ಚಿತ್ರದ ಇನ್ನೊಂದು ವಿಶೇಷ ಅಂದರೆ ಹೃತಿಕ್ ರೋಷನ್ ಹಾಗೂ ದೀಪಿಕಾ ಪಡುಕೋಣೆ ನಡುವಿನ ಕೆಮೆಸ್ಟ್ರೀ. ಸಮವಸ್ತ್ರದಲ್ಲಿ ಜವಾಬ್ದಾರಿಯುತವಾಗಿ ನಡೆದುಕೊಳ್ಳುವ ಇಬ್ಬರು ಆ ನಂತರ ಸಲುಗೆಯಿಂದ ವರ್ತಿಸುವ ರೀತಿ ಕಣ್ಮನ ಸೆಳೆಯುತ್ತೆ.
ಮೈನಸ್ ಪಾಯಿಂಟ್ ಏನು..?
ಇಡೀ ಚಿತ್ರದಲ್ಲಿ ಚಿಕ್ಕ ಪುಟ್ಟ ತಪ್ಪುಗಳಿದ್ದರೂ, ಬಹುದೊಡ್ಡ ಸಮಸ್ಯೆ ಚಿತ್ರದ ಖಳನಾಯಕ ರಿಷಬ್ ಸಾಹ್ನಿ. ಹೃತಿಕ್-ದೀಪಿಕಾ ಹಾಗೂ ಅನಿಲ್ ಕಪೂರ್ ಅವರಂಥ ಘಟಾನುಘಟಿಗಳ ಮುಂದೆ ರಿಷಬ್ ಅಭಿನಯ ತುಂಬಾನೇ ಸಪ್ಪೆ.
ಕೊನೆ ಮಾತು
ಫೈಟರ್ ಬೆಳ್ಳಿ ತೆರೆಗೆ ಹೇಳಿ ಮಾಡಿಸಿದ ಸಿನಿಮಾ. ನೀವೂ ಆಕ್ಷನ್ ಪ್ರಿಯರಾಗಿದ್ದರೆ, ದೇಶಾಭಿಮಾನದ ಸಿನಿಮಾ ನೋಡಲು ಬಯಸುವುದಾದರೆ ಫೈಟರ್ ಚಿತ್ರವನ್ನ
ನಿಮ್ಮ ಹತ್ತಿರದ ಚಿತ್ರಮಂದಿರಗಳಲ್ಲಿ ನೋಡಿ. ಸಾಧ್ಯವಾದರೆ 3D ಅಲ್ಲಿ ನೋಡುವ ಪ್ರಯತ್ನವನ್ನ ಮಾಡಿ. 3D ಯಲ್ಲಿ ಫೈಟರ್ ಮನಸಿಗೆ ಹಾಗೂ ಕಣ್ಣಿಗೆ ಇನ್ನೂ ಹತ್ತಿರವಾಗುತ್ತೆ.


Click it and Unblock the Notifications











