»   » ಹಳೇ ಚಿತ್ರ ಅಮೆರಿಕಾ ಅಮೆರಿಕಾದ ಕತೆಯನ್ನೇ ರೀರೈಟ್‌ ಮಾಡಿರುವ ನಾಗತಿಹಳ್ಳಿ , ಒಂದು ಒಳ್ಳೇ ಲವ್‌ ಸ್ಟೋರಿ ಕೊಡುವಲ್ಲಿ ಸೋತಿರುವುದು ತನಿಖೆಗೆ ಅರ್ಹವಾದ ಸಂಗತಿ

ಹಳೇ ಚಿತ್ರ ಅಮೆರಿಕಾ ಅಮೆರಿಕಾದ ಕತೆಯನ್ನೇ ರೀರೈಟ್‌ ಮಾಡಿರುವ ನಾಗತಿಹಳ್ಳಿ , ಒಂದು ಒಳ್ಳೇ ಲವ್‌ ಸ್ಟೋರಿ ಕೊಡುವಲ್ಲಿ ಸೋತಿರುವುದು ತನಿಖೆಗೆ ಅರ್ಹವಾದ ಸಂಗತಿ

Subscribe to Filmibeat Kannada

ಚಿತ್ರ : ನನ್ನ ಪ್ರೀತಿಯ ಹುಡುಗಿನಿರ್ದೇಶನ : ನಾಗತಿ ಹಳ್ಳಿ ಚಂದ್ರಶೇಖರ್‌, ಸಂಗೀತ : ಮನೋ ಮೂರ್ತಿತಾರಾಗಣ : ಧ್ಯಾನ್‌, ದೀಪಾಲಿ, ಭವ್ಯ, ಸುರೇಶ್‌ ಹೆಬ್ಳೀಕರ್‌
*ಸತ್ಯನಾರಾಯಣ

ಅತಿಯಾದ ನಿರೀಕ್ಷೆಯೇ ದುಃಖಕ್ಕೆ ಕಾರಣವಾಗುವುದುಂಟು. ಅದಕ್ಕೆ ಲೇಟೆಸ್ಟ್‌ ಉದಾಹರಣೆ ‘ನನ್ನ ಪ್ರೀತಿಯ ಹುಡುಗಿ’. ಅಮೆರಿಕಾ ಅಮೆರಿಕಾದಂತಹ ಹಿಟ್‌ ಚಿತ್ರ ಕೊಟ್ಟ ಮಾಜಿ ಕತೆಗಾರ ನಾಗತಿಹಳ್ಳಿಯವರ ಚಿತ್ರ ಎಂಬ ಕುತೂಹಲದಿಂದ ಥಿಯೇಟರ್‌ಗೆ ಹೋದವರಿಗೆ ಸಿಗುವುದು ಮತ್ತದೇ ಅಮೆರಿಕಾದ ದರ್ಶನ. ಛಾಯಾಗ್ರಾಹಕ ಪಿ. ರಾಜನ್‌ ಅವರು ಗೈಡ್‌ ಥರ ನಿಮ್ಮನ್ನು ಅಮೆರಿಕಾದಲ್ಲೊಂದು ರೌಂಡ್‌ ಹೊಡೆಸುತ್ತಾರೆ, ಕುಂಟಾ ಬಿಲ್ಲೆ ಆಡೋ ವಯಸ್ಸಿನ ಇಬ್ಬರು ಹುಡುಗ ಹುಡುಗಿಯರು ಪ್ರೇಮದಾಟ ಆಡುತ್ತಾರೆ. ಹುಡುಗಿಯ ಅಪ್ಪ ಅಮ್ಮಂದಿರು ಇಷ್ಟಕ್ಕೇ ತಲೆ ಮೇಲೆ ಆಕಾಶ ಬಿದ್ದವರಂತೆ ಎಗರಾಡುತ್ತಾರೆ. ಅವರು ಸುಮ್ಮನಿದ್ದಾಗ ಮನೋಮೂರ್ತಿಯವರ ಶಬ್ದ ಸಂಗೀತ ಕಿವಿ ತೂತು ಮಾಡುತ್ತದೆ. ನಾಯಕನ ಅಮ್ಮನಿಗೆ ಹಿಡಿದ ಹುಚ್ಚು ಬಿಡುವ ಹೊತ್ತಿಗೆ ಪ್ರೇಕ್ಷಕರಿಗೆ ಹುಚ್ಚು ಹಿಡಿದಿರುತ್ತದೆ. ಈ ಮಧ್ಯೆ ಕತೆಗಾರ ನಾಗತಿಹಳ್ಳಿ ಚಿತ್ರದಲ್ಲಿ ನಾಪತ್ತೆಯಾಗಿ ಬಿಡುತ್ತಾರೆ.

ನನ್ನ ಪ್ರೀತಿಯ ಹುಡುಗಿ ಚಿತ್ರದ ಹೈಲೈಟ್‌ಗಳಿವು. ನಾಗತಿಹಳ್ಳಿಯವರಿಗೆ ಅಮೆರಿಕಾದ ಮೂಲೆ ಮೂಲೆಯಲ್ಲಿ ಸ್ನೇಹಿತರಿದ್ದಾರೆ, ಡೆಟ್ರಾಯಿಟ್‌ನಲ್ಲಿ ಜಾಸ್ತಿ ಇದ್ದಾರೆ. ಅವರೆಲ್ಲರ ಉಪಕಾರ ಸ್ಮರಣೆ ಮಾಡುವುದಕ್ಕೆ ಟೈಟಲ್‌ ಕಾರ್ಡ್‌ನ ಕೆಲವು ಪುಟಗಳನ್ನು ಮೀಸಲಿಡಲಾಗಿದೆ. ಇಷ್ಟೊಂದು ಸ್ನೇಹಿತರನ್ನು ಬೆನ್ನಿಗಿಟ್ಟುಕೊಂಡೂ ನಾಗತಿಹಳ್ಳಿ ಒಂದು ಒಳ್ಳೇ ಲವ್‌ ಸ್ಟೋರಿ ಕೊಡುವಲ್ಲಿ ಸೋತಿರುವುದು ತನಿಖೆಗೆ ಅರ್ಹವಾದ ಸಂಗತಿ. ಅದರಲ್ಲೂ ನಾಗತಿಹಳ್ಳಿ, ಪ್ರೀತಿ ಪ್ರೇಮದ ಬಗ್ಗೆ ಹತ್ತಾರು ಕತೆಗಳನ್ನು ಬರೆದವರು. ಹಗಲು ರಾತ್ರಿ ಎಡೆಬಿಡದೆ ಕನಸು ಕಾಣುವುದಕ್ಕೆ ಖ್ಯಾತರಾದವರು. ಅಷ್ಟೇ ಏಕೆ, ಈ ಚಿತ್ರಕ್ಕೆ ಆಧಾರವಾಗಿರುವುದೇ ಅವರ ಜನಪ್ರಿಯ ಮಲೆನಾಡ ಹುಡುಗಿ, ಬಯಲುಸೀಮೆಯ ಹುಡುಗ ಕತೆ. ಆದರೆ ಆ ಕತೆಗೂ ಚಿತ್ರಕ್ಕೂ ಹೆಚ್ಚಿನ ಸಂಬಂಧವಿಲ್ಲ ಎನ್ನೋದು ಚಿತ್ರ ನೋಡುತ್ತಿದ್ದಂತೆ ಗೊತ್ತಾಗುತ್ತದೆ. ನಾಗತಿಹಳ್ಳಿಯವರು ವೃಥಾ ಶ್ರಮವೇಕೆ ಎಂದು ತಮ್ಮದೆ ಹಳೆ ಚಿತ್ರ ಅಮೆರಿಕಾ ಅಮೆರಿಕಾದ ಕತೆಯನ್ನೇ ರೀ ರೈಟ್‌ ಮಾಡಿದ್ದಾರೆ. ಅಲ್ಲಿ ಥರ್ಟಿ ಪ್ಲಸ್‌ ವಯಸ್ಸಿನ ಪ್ರೇಮಿಗಳ ಆಲಾಪನೆಯಿದ್ದರೆ, ಇಲ್ಲಿ ಹದಿ ಹರೆಯದ ಪ್ರೇಮಿಗಳ ಹುಡುಗಾಟವಿದೆ. ಇಲ್ಲೂ ಭಾರತೀಯ ಜನಜೀವನವನ್ನು ಗೇಲಿ ಮಾಡುವದಕ್ಕೊಂದು ಪಾತ್ರವಿದೆ. ಹಳ್ಳಿ ಬದುಕಿನ ಮೌಲ್ಯಗಳನ್ನು ಎತ್ತಿ ಹಿಡಿಯುವದಕ್ಕೊಂದು ಪಾತ್ರವಿದೆ. ಅದೇ ಆದರ್ಶ, ಅದೇ ಕನವರಿಕೆ, ಬೇರುಗಳ ಹುಡುಕಾಟ, ಸಾಂಸ್ಕೃತಿಕ ಸಂಘರ್ಷಗಳ ತಾಕಲಾಟ..... ಮಾತು ಮಾತು ಮಾತು.

ಮಿಚಿಗನ್‌ ಯೂನಿವರ್ಸಿಟಿಯಲ್ಲಿ ಓದುತ್ತಿರುವ 16 ವರ್ಷದ ಹುಡುಗಿ(?) ಅಜ್ಜಿ ನೆನಪನ್ನು ಸವಿಯುತ್ತಲೇ ಅಪ್ಪನಿಗೆ ಎದುರು ಮಾತಾಡುತ್ತಾಳೆ. ಅಪ್ಪನಿಗೆ ಭಾರತೀಯ ಸಂಸ್ಕೃತಿಯನ್ನು ಅರೆದು ಕುಡಿದ ಹೆಮ್ಮೆಯಿದ್ದರೂ, ಭಾರತೀಯರ ಬಗ್ಗೆ ಅಸಹ್ಯವಿದೆ. ಇನ್ನೊಬ್ಬ ಅರ್ಚಕನಂತೂ ಚಿಕನ್‌ ಬಿಯರ್‌ ಕುಡಿಯುತ್ತಾ, ವೆಬ್‌ ಸೈಟಿನಲ್ಲಿ ಮಂತ್ರಗಳನ್ನು ಹಂಚುವ ಜೋಕರ್‌. ಅಮೆರಿಕಾದಿಂದ ಆಹ್ವಾನ ಬಂತು ಅಂತ ಹಳ್ಳಿ ಬಿಟ್ಟು ಬರುವ ಹುಡುಗನಿಗೆ ಮುಗ್ಧತೆಯೇ ಬಂಡವಾಳ. ಆತ ಕೊಳಲು ಊದುವುದರಲ್ಲಿ ತಜ್ಞನಾಗಿದ್ದರೂ, ಅದಕ್ಕೆ ಅಮೆರಿಕಾದಲ್ಲಿ ಅವಕಾಶವಿಲ್ಲ. ತಮಾಷೆಯೆಂದರೆ ಅಮೆರಿಕಾಗೆ ಅವನು ಬರೋದಕ್ಕೆ ಕಾರಣವಾಗಿದ್ದೇ ಕೊಳಲು ವಾದಕ ಅನ್ನುವ ಕ್ವಾಲಿಫಿಕೇಷನ್‌. ಕೊನೆಗೆ ಅವನು ಕೊಳಲು ಬಿಟ್ಟು ಸೈಕಲ್‌ ಹಿಡಿಯುತ್ತಾನೆ. ಅಲ್ಲಿಂದ ಕಾರಿಗೆ ಜಿಗೀತಾನೆ. ಪ್ರೀತಿಯ ಹುಡುಗಿಯ ಜೊತೆಗೆ ಕಾರ್‌... ಕಾರ್‌ ಎಂದು ಹಾಡಿ ಕುಣಿಯುತ್ತಾನೆ. ಅವಳಪ್ಪನ ಜೊತೆ ಜಗಳಕ್ಕೇ ಇಳಿದುಬಿಡುತ್ತಾನೆ. ಬೀದಿಯಲ್ಲಿಯೇ ಐ ಲವ್‌ ಯು ಎಂದು ಕಿರುಚುತ್ತಾನೆ. ಅಮ್ಮನಿಗೆ ಹುಚ್ಚು ಹಿಡಿದಿದೆ ಎಂಬ ಸುದ್ದಿ ಬಂದಾಕ್ಷಣ ವಾಪಾಸು ಹಳ್ಳಿಗೆ ಬರುತ್ತಾನೆ. ಅವನ ಕೈಯಲ್ಲಿ ಕೊಳಲಿಗೆ ಬದಲಾಗಿ ಹುಡುಗಿ ಕೊಟ್ಟ ಬಳೆಯಿರುತ್ತದೆ. ..

ಕಣ್ಣಿಗೆ ಹಿತವೆನಿಸುವ ಚಿತ್ರ, ಕಿವಿಗೆ ಕರ್ಕಶ ಅನಿಸುವುದಕ್ಕೆ ಮನೋಮೂರ್ತಿಯವರ ಸಂಗೀತ ಮತ್ತು ಸಂಭಾಷಣೆ ನೆರವಾಗಿದೆ. ಫಾರಿನ್‌ ಅಮ್ಮ ಮತ್ತು ನಾಯಕನ ನಡುವಣ ಸಂಬಂದ ಚೆನ್ನಾಗಿ ಮೂಡಿ ಬಂದಿದೆ. ಹುಡುಗ ಹುಡುಗಿಯರಿಬ್ಬರೂ ಕಾಣೋದಕ್ಕೆ ಚೆಂದವಾಗಿದ್ದಾರೆ. ಹಾಗಾಗಿ ಅವರೇನು ಮಾಡಿದರೂ ಚೆಂದವಾಗಿಯೇ ಕಾಣುತ್ತದೆ. ಪ್ರೆಸ್ಟೀಜ್‌ ಪ್ರಿಯ ಅಪ್ಪನಾಗಿ ಸುರೇಶ್‌ ಹೆಬ್ಳೀಕರ್‌ ಅಭಿನಯ ಚಿತ್ರದ ಇನ್ನೊಂದು ಹೈಲೈಟ್‌. ಹುಚ್ಚಿ ಅಮ್ಮನಾಗಿ ಭವ್ಯ ಇಲ್ಲಿ ವೇಸ್ಟ್‌ ಆಗಿದ್ದಾರೆ. ಧ್ಯಾನ್‌ ಮತ್ತು ದೀಪಾಲಿ ಎಂಬ ಹೊಸ ಪ್ರತಿಭೆಗಳನ್ನು ಪರಿಚಯಿಸಿದ್ದು ನಾಗತಿಹಳ್ಳಿ ಅವರ ಏಕೈಕ ಹೆಗ್ಗಳಿಕೆ. ಅಮೆರಿಕಾ ಸಿನಿಮಾ ಮತ್ತು ದೇಶ ನೋಡದವರು ಈ ಚಿತ್ರವನ್ನು ನೋಡಬಹುದು.

ವಾರ್ತಾಸಂಚಯ
ಮುಖಪುಟ / ಸ್ಯಾಂಡಲ್‌ವುಡ್‌

Please Wait while comments are loading...