»   » ದೀಪಾಲಿಯಂಥ ಉನ್ಮಾದದ ಪಲುಕು ಮತ್ತು ಉತ್ಸುಕ ಚೈತನ್ಯದ ಚಿಲುಮೆ, ಧ್ಯಾನ್‌ನಂಥ ತಪ್ತ ಪ್ರೇಮಿ... ಇಷ್ಟು ಸಾಕು, ಸಾಧಾರಣ ಚಿತ್ರವೊಂದನ್ನು ಶೋಭಾಯಮಾನ ಆಗಿಸುವುದಕ್ಕೆ

ದೀಪಾಲಿಯಂಥ ಉನ್ಮಾದದ ಪಲುಕು ಮತ್ತು ಉತ್ಸುಕ ಚೈತನ್ಯದ ಚಿಲುಮೆ, ಧ್ಯಾನ್‌ನಂಥ ತಪ್ತ ಪ್ರೇಮಿ... ಇಷ್ಟು ಸಾಕು, ಸಾಧಾರಣ ಚಿತ್ರವೊಂದನ್ನು ಶೋಭಾಯಮಾನ ಆಗಿಸುವುದಕ್ಕೆ

Subscribe to Filmibeat Kannada

ಚಿತ್ರ : ನನ್ನ ಪ್ರೀತಿಯ ಹುಡುಗಿನಿರ್ದೇಶನ : ನಾಗತಿ ಹಳ್ಳಿ ಚಂದ್ರಶೇಖರ್‌, ಸಂಗೀತ : ಮನೋ ಮೂರ್ತಿತಾರಾಗಣ : ಧ್ಯಾನ್‌, ದೀಪಾಲಿ, ಭವ್ಯ, ಸುರೇಶ್‌ ಹೆಬ್ಳೀಕರ್‌
*ಗೋಪಿ ಎಸ್‌. ನಾಯಕ್‌, ಕೊಂಡಜ್ಜಿ

ಅಮೆರಿಕಾ ಅಮೆರಿಕಾ ಖ್ಯಾತಿಯ ನಾಗತಿಹಳ್ಳಿ ಚಂದ್ರಶೇಖರ್‌ ಅವರ ಮತ್ತೊಂದು ಅಮೆರಿಕಾ ಯಾತ್ರೆಯ ಫಲವೇ ನನ್ನ ಪ್ರೀತಿಯ ಹುಡುಗಿ. ಹೆಚ್ಚೂ ಕಡಿಮೆ ಹಳೆಯ ಟೀಮ್‌ ಇಟ್ಟುಕೊಂಡೇ ಅವರು ಸಿನಿಮಾ ಮಾಡಿದ್ದಾರೆ. ಸಂಗೀತಕ್ಕೆ ಮನೋಮೂರ್ತಿ, ಕತೆ, ಚಿತ್ರಕತೆ, ಸಂಭಾಷಣೆಗೆ ಸ್ವಯಂ ಸ್ಫೂರ್ತಿ!

ಬಸರಿಕಟ್ಟೆಯ ಬಾಲಕ ಕೊಳಲನೂದುತ, ಊದುತ ಅಮೆರಿಕಾಕ್ಕೆ ಕಾಲಿಡುವುದು, ಅಲ್ಲಿ ಹುಡುಗಿಯಾಬ್ಬಳನ್ನು ಪ್ರೇಮಿಸುವುದು, ಪ್ರೇಮ ವಿವಾಹಕ್ಕೆ ಹುಡುಗಿಯ ಮಾವ ಅಡ್ಡಿಯಾಗುವುದು, ಕೊನೆಗೂ ಪ್ರೇಮಿಗಳು ಎಲ್ಲವನ್ನೂ ಗೆದ್ದು ಒಂದಾಗುವುದು ಚಿತ್ರದ ಕತೆ. ಈ ಒಂದೆಳೆಯ ಕತೆಯನ್ನು ಅಪ್ಪಟ ಮೇಷ್ಟರ ಹಾಗೆ ನಾಗತಿಹಳ್ಳಿ ವಿವರಿಸಿ ಹೇಳಿದ್ದಾರೆ. ಪ್ರೇಮದ ತೀವ್ರತೆ ಕಡಿಮೆಯಾದಾಗ ಸೆಂಟಿಮೆಂಟ್‌, ರಿಸೆಂಟಿಮೆಂಟ್‌ ಎರಡನ್ನೂ ತುಂಬಿದ್ದಾರೆ.

ಅಮ್ಮನ ಚಿಂತೆ, ಅಜ್ಜಿಯ ನೆನಪು, ಎಂದೋ ಆಡಿದ ಮರಕೋತಿ ಆಟ, ರಾಗಿ ರೊಟ್ಟಿ - ಹೀಗೆ ನೆನಪುಗಳಲ್ಲಿ ಚಿತ್ರ ಬಿಚ್ಚಿಕೊಳ್ಳುತ್ತದೆ. ಮಲೆನಾಡಿನ ಹುಡುಗ,ಬಯಲು ಸೀಮೆಯ ಹುಡುಗಿಗೆ ಮನಸೋತದ್ದರ ಪರಿಣಾಮ ಪುಟ್ಟದೇನಲ್ಲ ಅನ್ನುವುದು ಇಬ್ಬರಿಗೂ ಅರಿವಾಗುತ್ತದೆ.

ನಿಮಗೆ ಸಿನಿಮಾ ಇಷ್ಟವಾಗುವುದಕ್ಕೆ , ಮತ್ತು ಇಷ್ಟವಾಗದೇ ಇರುವುದಕ್ಕೆ ಕಾರಣಗಳನ್ನು ಕೊಟ್ಟು ಈ ಕಿರು ವಿಮರ್ಶೆಯನ್ನು ಮುಗಿಸುವುದು ಜಾಣತನ.

ಮೆಚ್ಚುವುದು ಯಾಕೆಂದರೆ,

  • ಧ್ಯಾನ್‌ ಮತ್ತು ದೀಪಾಲಿಯಂಥ ಹಸಿ ಬಿಸಿ ಜೋಡಿ ತೆರೆಯ ಮೇಲಿದೆ. ನಲುವತ್ತು ಮೀರಿದ ನಾಯಕರನ್ನೂ ಅಲವತ್ತುಕೊಳ್ಳುವ ನಾಯಕಿಯರನ್ನೂ ಕಂಡವರಿಗೆ ಈ ಹೊಸ ಜೋಡಿ ಮೈ ನವಿರೇಳುವಂತೆ ಮಾಡದಿರದು.
  • ಅಮೆರಿಕಾದ ಸುಂದರ ಹೊರಾಂಗಣವಿದೆ. ಅದನ್ನು ರಾಜನ್‌ ತಮ್ಮ ಕಣ್ರೆಪ್ಪೆಯಲ್ಲಿ ಬಂಧಿಸಿ, ನಿಮ್ಮೆದುರು ಪ್ರತ್ಯಕ್ಷವಾಗಿಸಿದ್ದಾರೆ.
  • ನಾಗತಿಹಳ್ಳಿ ಸಂಭಾಷಣೆ ಬೌದ್ಧಿಕ ಭಾರದ ಹೊರತಾಗಿಯೂ ಅಲ್ಲಲ್ಲಿ ಮೆಚ್ಚುಗೆಯಾಗುತ್ತದೆ.
  • ಕಾರ್‌ ಕಾರ್‌ ಕಾರ್‌... ಹಾಡು ತನ್ನ ವೇಗ ಮತ್ತು ಲಯದಿಂದ ಇಷ್ಟವಾಗುತ್ತದೆ.
ಮೆಚ್ಚಬಾರದು ಯಾಕೆಂದರೆ

  • ಕತೆಯಲ್ಲಿ ಹೊಸತೇನಿಲ್ಲ
  • ಸಂಗೀತ ಕರ್ಕಶ
  • ಅರ್ಚಕನ ಹಾಸ್ಯ ಹಾಸ್ಯಾಸ್ಪದ
  • ಪ್ರೀತಿ ವಾಚ್ಯವಾಗಿದೆ, ಮೌನಕ್ಕೆ ಬೆಲೆಯೇ ಇಲ್ಲ.
  • ಲೋಕೇಶನ್‌ ಬದಲಾಗಿದೆ. ವ್ಯಾಖ್ಯೆ ಬದಲಾಗಿಲ್ಲ.
ಹಾಗಿದ್ದರೂ ನೀವೊಮ್ಮೆ ಪ್ರೀತಿಯ ಹುಡುಗಿಯನ್ನು ನೋಡಬಹುದು. ಯಾಕೆಂದರೆ, ಪ್ರೇಮ ಚಿತ್ರಗಳು ಮೂಲತಃ ಇಷ್ಟವಾಗುವುದು ಅದರ ಸರಳತೆ ಮತ್ತು ಸಹಜ ಸ್ಫೂರ್ತಿಯಿಂದ. ಅದನ್ನು ನೀಡುವುದು ನಿರ್ದೇಶಕನೂ ಅಲ್ಲ, ಕತೆಯೂ ಅಲ್ಲ. ತೆರೆಯ ಮೇಲೆ ಕಾಣಿಸಿಕೊಳ್ಳುವ ಜೋಡಿ ಯೌವನ ಮತ್ತು ಜೀವಂತಿಕೆ. ದೀಪಾಲಿಯಂಥ ಉನ್ಮಾದದ ಪಲುಕು ಮತ್ತು ಉತ್ಸುಕ ಚೈತನ್ಯದ ಚಿಲುಮೆ. ಜೊತೆಗೆ ಧ್ಯಾನ್‌ನಂಥ ತಪ್ತ ಪ್ರೇಮಿ. ಅಷ್ಟು ಸಾಲದೆ... ಸಾಧಾರಣ ಚಿತ್ರವೊಂದನ್ನು ಶೋಭಾಯಮಾನ ಆಗಿಸುವುದಕ್ಕೆ.

ವಾರ್ತಾಸಂಚಯ
ಮುಖಪುಟ / ಸ್ಯಾಂಡಲ್‌ವುಡ್‌

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada