Jaat Review : ಸಲ್ಮಾನ್ ಖಾನ್ ಸೋತ ಜಾಗದಲ್ಲಿ ಗೆದ್ದ ಸನ್ನಿ ಡಿಯೋಲ್, ಹೇಗಿದೆ ಜಾಟ್ ?
ಸಿಕಂದರ್ ಬಾಲಿವುಡ್ ಬಾಕ್ಸಾಫೀಸ್‌ನಲ್ಲಿ ಹಣದ ಹೊಳೆ ಹರಿಸುತ್ತಾನೆ ಎನ್ನುವ ನಿರೀಕ್ಷೆ ಇತ್ತು. ಆದರೆ ಆ ನಿರೀಕ್ಷೆ ಹುಸಿಯಾಯ್ತು. ಸಲ್ಮಾನ್ ಖಾನ್ ವೃತ್ತಿ ಬದುಕಿನ ಅತ್ಯಂತ ಕಳಪೆ ಚಿತ್ರಗಳ ಸಾಲಿನಲ್ಲಿ ಸಿಕಂದರ್ ಕೂಡ ಸೇರಿಕೊಂಡಿತು. ತೆರೆಗೆ ಬಂದು ಎರಡು ವಾರವಾದರು ಕೂಡ ಚಿತ್ರದ ಗಳಿಕೆ 150 ಕೋಟಿಯ ಗಡಿಯನ್ನು ತಲುಪಿಲ್ಲ. ತಲುಪುವುದು ಕೂಡ ಅನುಮಾನ ಇದೆ.
ಇನ್ನು ಛಾವಾ ಹೊರತು ಪಡಿಸಿದರೆ ಈ ವರ್ಷ ಬಾಲಿವುಡ್‌ನಲ್ಲಿ ಬೇರೆ ಯಾರು ಚಿನ್ನದ ಬೆಳೆಯನ್ನು ಬೆಳೆದಿಲ್ಲ. ಇದರಿಂದ ಸಹಜವಾಗಿ ಬಾಲಿವುಡ್‌ನಲ್ಲಿ ಆತಂಕ ಮನೆ ಮಾಡಿದೆ. ಹೀಗಿರುವಾಗ ಸನ್ನಿ ಡಿಯೋಲ್ ಅಭಿನಯದ ಜಾಟ್ ಚಿತ್ರ ತೆರೆಗೆ ಬಂದಿದೆ. ಇನ್ನು ಎಲ್ಲರಿಗೆ ಗೊತ್ತಿರುವಂತೆ ಗದರ್ 2 ಚಿತ್ರದ ಮೂಲಕ ಸನ್ನಿ ಡಿಯೋಲ್ ಮತ್ತೆ ಲಯಕ್ಕೆ ಮರಳಿದ್ದಾರೆ. ಗದರ್ 2 ಮೂಲಕ ಗೆದ್ದು ಬೀಗಿದ್ದಾರೆ. ಹೀಗಾಗಿ ಜಾಟ್ ಚಿತ್ರದ ಮೂಲಕ ಜಾಕ್ ಪಾಟ್ ಹೊಡೆಯಬಹುದು ಎನ್ನುವ ವಿಶ್ವಾಸ ಬಾಲಿವುಡ್‌ನದ್ದು.

ಇನ್ನು ಜಾಟ್ ಚಿತ್ರದ ಮೂಲಕ ತೆಲುಗು ನಿರ್ದೇಶಕ ಗೋಪಿಚಂದ್ ಮಲಿನೇನಿ ಹಿಂದಿಯಲ್ಲಿ ತಮ್ಮ ಅದೃಷ್ಟ ಪರೀಕ್ಷೆ ಮಾಡಿಕೊಂಡಿದ್ದಾರೆ. ದಕ್ಷಿಣದ ಚಿತ್ರ ಪ್ರೇಮಿಗಳು ಕೈ ಹಿಡಿದಂತೆ ಉತ್ತರದ ಚಿತ್ರ ರಸಿಕರು ಕೂಡ ತಮ್ಮನ್ನು ಹರಸಿ ಹಾರೈಸುತ್ತಾರೆ ಎನ್ನುವ ನಂಬಿಕೆಯಲ್ಲಿ ಗೋಪಿಚಂದ್ ಇದ್ದಾರೆ. ಹಾಗಿದ್ದರೆ, ಜಾಟ್ ಬಾಲಿವುಡ್ ನ ಬರ ನೀಗಿಸುತ್ತಾನಾ ? ಸನ್ನಿ ಡಿಯೋಲ್ ಹೆಸರು ಇವತ್ತು ಕೂಡ ಮ್ಯಾಜಿಕ್ ಮಾಡುತ್ತಾ ? ಜಾಟ್ ಚಿತ್ರ ಹೇಗಿದೆ ? ಗೋಪಿಚಂದ್ ಮಲಿನೇನಿ ತಮ್ಮ ಮೊದಲ ಹಿಂದಿ ಪ್ರಯತ್ನದಲ್ಲಿ ಗೆದ್ದರಾ ? ಎಂದು ತಿಳಿದುಕೊಳ್ಳಲು ಮುಂದೆ ಓದಿ.
Star Cast: ಸನ್ನಿ ಡಿಯೋಲ್, ರಣ್‌ದೀಪ್ ಹೂಡಾ, ರೆಜಿನಾ ಕ್ಯಾಸಂಡ್ರಾ, ವಿನೀತ್ ಕುಮಾರ್ ಸಿಂಗ್, ಸಯಾಮಿ ಖೇರ್ ಮುಂತಾದವರು
Director- ಗೋಪಿಚಂದ್ ಮಲಿನೇನಿ
ಜಾಟ್ ಚಿತ್ರದ ಕಥೆ
ಜಾಟ್ ಕಥೆಯಲ್ಲಿ ಹೊಸತನ ಇಲ್ಲ. ಅದೇ ಹಳೆಯ ಕಮರ್ಷಿಯಲ್ ಕಥೆಯನ್ನೇ ಇಲ್ಲಿ ಹೇಳಲಾಗಿದೆ. ಹಳ್ಳಿಗಳಲ್ಲಿ ಭಯದ ವಾತಾವರಣ ನಿರ್ಮಾಣ ಮಾಡಿ, ಜನರನ್ನು ತನ್ನ ಕಪಿಮುಷ್ಟಿಯಲ್ಲಿ ಹಿಡಿದಿಟ್ಟಿರುವ ರಣತುಂಗಾ { ರಣದೀಪ್ ಹೂಡಾ } ಎಂಬ ಖಳನಾಯಕ, ಆತನ ಸಹೋದರ ಸೋಮುಲು { ವಿನೀತ್ ಕುಮಾರ್ ಸಿಂಗ್ } ಎಲ್ಲದಕ್ಕೂ ಕುಮ್ಮಕ್ಕು ನೀಡುವ ರಣ ತುಂಗಾ ರಾಣಾ ಪತ್ನಿ ಭಾರತಿ { ರೆಜಿನಾ ಕ್ಯಾಸಂಡ್ರಾ } ಸುತ್ತ ಕಥೆಯನ್ನು ಹೆಣೆಯಲಾಗಿದೆ. ಇವರ ಅನಾಚಾರ ಮತ್ತು ಅನ್ಯಾಯಕ್ಕೆ ಅಲೆಮಾರಿಯಂತೆ ಆ ಪ್ರದೇಶಕ್ಕೆ ಬರುವ ಸನ್ನಿ ಡಿಯೋಲ್ ಸಾಕ್ಷಿಯಾಗುತ್ತಾರೆ. ಮುಂದೇನಾಗುತ್ತೆ ಎನ್ನುವುದೇ ಚಿತ್ರದ ಕಥಾಹಂದರ.
ಪರ್ಫಾಮೆನ್ಸ್ ಹೇಗಿದೆ ?
ಸನ್ನಿ ಡಿಯೋಲ್‌ಗೆ ಈಗ 67ರ ಹರೆಯ ಆದರೆ ಎಲ್ಲಿಯೂ ಸನ್ನಿ ಡಿಯೋಲ್ ಅವರಿಗೆ ವಯಸ್ಸಾಗಿದೆ ಎಂಬ ಭಾವನೆ ಚಿತ್ರ ನೋಡುವಾಗ ಬರುವುದಿಲ್ಲ. ಇಡೀ ಚಿತ್ರವನ್ನು ಸನ್ನಿ ಡಿಯೋಲ್ ಆವರಿಸಿಕೊಂಡಿದ್ದಾರೆ. ತಮ್ಮ ಹೆಗಲ ಮೇಲೆ ಚಿತ್ರವನ್ನು ಹೊತ್ತುಕೊಂಡಿದ್ದಾರೆ. ಸಾಹಸ ಸನ್ನಿವೇಶಗಳಲ್ಲಿ ಸನ್ನಿ ಡಿಯೋಲ್ ಎಂದಿನಂತೆ ಮಿಂಚಿದ್ದಾರೆ. ಇನ್ನು ಖಳನಾಯಕನ ಪಾತ್ರವನ್ನು ರಣ್‌ದೀಪ್ ಹೂಡಾ ಸೊಗಸಾಗಿ ನಿರ್ವಹಿಸಿದ್ದಾರೆ. ಛಾವಾ ಚಿತ್ರದ ಮೂಲಕ ಅನೇಕರ ಹೃದಯ ಗೆದ್ದ ವಿನೀತ್ ಕುಮಾರ್ ಸಿಂಗ್ ಮತ್ತು ರಣ್‌ದೀಪ್ ಹೂಡ ಪತ್ನಿ ಪಾತ್ರವನ್ನು ನಿರ್ವಹಿಸಿರುವ ರೆಜಿನಾ ಕ್ಯಾಸಂಡ್ರಾ ತಮ್ಮ ಪಾತ್ರಗಳಿಗೆ ನ್ಯಾಯ ಸಲ್ಲಿಸಿದ್ದಾರೆ.
ನಿರ್ದೇಶನ ಹೇಗಿದೆ ?
ಗೋಪಿಚಂದ್ ಮಲಿನೇನಿ ಸೌತ್ ಪ್ಲೇವರ್‌ನ ಬೆರೆಸಿ ನಾರ್ತ್ ಮೀಲ್ಸ್‌ನ ಪ್ರೇಕ್ಷಕರ ಮುಂದಿಟ್ಟಿದ್ದಾರೆ. ತಮ್ಮ ಮೊದಲ ಹಿಂದಿ ಪ್ರಯತ್ನದಲ್ಲಿಯೇ ಗೋಪಿಚಂದ್ ಪ್ರೇಕ್ಷಕರ ಹೃದಯ ಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ.ಕಥೆ ಹಳೆಯದ್ದಾದರೂ ಕೂಡ ಅದನ್ನು ಹೇಳಿರುವ ರೀತಿ ಚೆನ್ನಾಗಿದೆ. ಚಿತ್ರದ ಮೊದಲಾರ್ಧದ ಚಿತ್ರಕಥೆ ತುಂಬಾನೇ ವೇಗವಾಗಿದ್ದು ದೃಶ್ಯಗಳು ಅಷ್ಟೇ ಪರಿಣಾಮಕಾರಿಯಾಗಿ ಮೂಡಿ ಬಂದಿವೆ. 'ಈಸ್ ಧಾಯಿ ಕೀಲೋ ಕಾ ಹಾಥ್ ಕೀ ಗೂಂಜ್ ನಾರ್ತ್ ನೆ ಸುನಿ ಹೈ, ಅಬ್ ಸೌಥ್ ಸುನೇಗಾ' ಹೀಗೆ ಪ್ರೇಕ್ಷಕರಿಗೆ ಮಜಾ ನೀಡುವ, ಶಿಳ್ಳೆ ಚಪ್ಪಾಳೆ ಗಿಟ್ಟಿಸುವ ಅನೇಕ ಸಂಭಾಷಣೆಗಳು ಚಿತ್ರದಲ್ಲಿವೆ. ಮಾಸ್ ಪ್ರೇಕ್ಷಕರನ್ನು ಗಮನದಲ್ಲಿಟ್ಕೊಂಡು ಗೋಪಿಚಂದ್ ಚಿತ್ರದ ಕಥೆ ಹೇಳುವ ಪ್ರಯತ್ನ ಮಾಡಿದ್ದು ತಮ್ಮ ಪ್ರಯತ್ನದಲ್ಲಿ ಬಹುತೇಕ ಯಶಸ್ವಿಯಾಗಿದ್ದಾರೆ.
ಪ್ಲಸ್ ಪಾಯಿಂಟ್ ಏನು ?
ಸನ್ನಿಡಯೋಲ್, ರಣ್‌ದೀಪ್ ಹೂಡ, ಅಭಿನಯ, ಸೌರಭ್ ಗುಪ್ತಾ ಮತ್ತು ಸಾಯಿ ಮಾಧವ್ ಬುರ್ರಾ ಅವರ ಸಂಭಾಷಣೆ ಮತ್ತು ನಿರ್ದೇಶನವನ್ನು ಹೊರತು ಪಡಿಸಿದರೆ ತಮನ್ ಸಂಗೀತ ಈ ಚಿತ್ರದ ಬೆನ್ನೆಲುಬು. ತಮ್ಮ ಹಿನ್ನೆಲೆ ಸಂಗೀತದಿಂದ ತಮನ್ ಪ್ರೇಕ್ಷಕರನ್ನು ಹಿಡಿದಿಟ್ಟುಕೊಳ್ಳುತ್ತಾರೆ. ಇನ್ನು ಚಿತ್ರದ ಸಾಹಸ ಸನ್ನಿವೇಶಗಳು ಮೈ ನವಿರೇಳಿಸುವಂತೆ ಇವೆ. ಹೊಡಿ ಬಡಿ ಚಿತ್ರಗಳಲ್ಲಿ ಸನ್ನಿ ಡಿಯೋಲ್ ಅವರನ್ನು ನೋಡಿ ಇಷ್ಟ ಪಟ್ಟವರಿಗೆ ಜಾಟ್ ಚಿತ್ರದ ಆಕ್ಷನ್ ಸಿಕ್ವೆನ್ಸ್‌ಗಳು ಇಷ್ಟವಾಗುವುದರಲ್ಲಿ ಅನುಮಾನ ಇಲ್ಲ.
ಮೈನಸ್ ಪಾಯಿಂಟ್ ಏನು ?
ಚಿತ್ರದ ಚಿತ್ರಕಥೆಯಲ್ಲಿ ಮೊದಲಾರ್ಧದ ಕಡೆ ಹೆಚ್ಚು ಗಮನ ವಹಿಸಿರುವ ನಿರ್ದೇಶಕ ಗೋಪಿಚಂದ್ ಮಲಿನೇನಿ ದ್ವೀತಿಯಾರ್ಧದ ಕಡೆ ಗಮನ ವಹಿಸಿಲ್ಲ. ಸೆಕೆಂಡ್ ಹಾಫ್‌ನಲ್ಲಿ ಹಲವು ವಿಚಾರಗಳನ್ನು ಗೋಪಿಚಂದ್ ಹೇಳುವ ಪ್ರಯತ್ನ ಮಾಡಿದ್ಧಾರೆ. ಮೂಲ ಕಥೆಯಿಂದ ಹಳಿ ತಪಿದ್ದಾರೆ. ಇನ್ನು ಊವರ್ಶಿ ರೌಟೇಲಾ ಅವರ ಐಟಂ ಡ್ಯಾನ್ಸ್ ಅನವಶ್ಯಕ. 153 ನಿಮಿಷಗಳ ಅವಧಿಯನ್ನು ಚಿತ್ರ ಹೊಂದಿದ್ದು ದ್ವೀತಿಯಾರ್ಧ ನೋಡಲು ತಾಳ್ಮೆ ಬೇಕು.
ಇನ್ನು ಬಾಲಿವುಡ್‌ನ ಪ್ರತಿಭಾವಂತ ನಟಿ ಸಯಾಮಿ ಖೇರ್ ಅವರಿಗೆ ಚಿತ್ರದಲ್ಲಿ ಪೊಲೀಸ್ ಪಾತ್ರವನ್ನು ನೀಡಲಾಗಿದೆ. ಆದರೆ ಇವರ ಈ ಪಾತ್ರವನ್ನು ಸಮರ್ಥವಾಗಿ ಗೋಪಿಚಂದ್ ಬಳಸಿಕೊಂಡಿಲ್ಲ. ಸಯಾಮಿ ಖೇರ್ ಅವರ ಪಾತ್ರ ಪೋಷಣೆ ಕಡೆ ಹೆಚ್ಚಿನ ಗಮನ ವಹಿಸಿಲ್ಲ. ರೆಜಿನಾ ಕ್ಯಾಸಂಡ್ರ ಅವರ ಪಾತ್ರ ಕೂಡ ಅಷ್ಟೇ. ಎರಡು ಪಾತ್ರಗಳಿಗೆ ಇನ್ನು ಹೆಚ್ಚಿನ ಸ್ಕ್ರಿನ್ ಸ್ಪೇಸ್ ನ ನಿರ್ದೇಶಕ ಗೋಪಿಚಂದ್ ನೀಡಬಹುದಿತ್ತು.
ಕೊನೆ ಮಾತು
ಸಿಕಂದರ್ ಚಿತ್ರದಲ್ಲಿ ಸಲ್ಮಾನ್ ಖಾನ್ ಅವರಿಂದ ಮಾಸ್ ಪ್ರೇಕ್ಷಕರು ಮನರಂಜನೆಯ ರಸದೌತಣ ನಿರೀಕ್ಷಿಸಿದ್ದರು. ಆದರೆ ಆ ನಿರೀಕ್ಷೆಯ ಹಂತವನ್ನು ತಲುಪುವಲ್ಲಿ ಸಲ್ಮಾನ್ ಖಾನ್ ಎಡವಿದರು. ಸೋತರು. ಸಾಮಾನ್ಯ ಚಿತ್ರಪ್ರೇಮಿಗಳನ್ನು ಮಾತ್ರವಲ್ಲದೇ ತಮ್ಮ ಅಭಿಮಾನಿಗಳನ್ನು ಕೂಡ ಸಲ್ಮಾನ್ ಖಾನ್ ನಿರಾಸೆಗೊಳಿಸಿದರು. ಆದರೆ ಸಲ್ಮಾನ್ ಖಾನ್ ಸೋತ ಜಾಗದಲ್ಲಿ ಸನ್ನಿ ಡಿಯೋಲ್ ಗೆದ್ದಿದ್ದಾರೆ. ಮಾಸ್ ಪ್ರೇಕ್ಷಕರಿಗೆ ಬೇಕಾದ ಮನರಂಜನೆಯ ಫುಲ್ ಮೀಲ್ಸ್‌ನ ಬಡಿಸಿದ್ದಾರೆ.
ಇನ್ನು, ಸೂಪರ್ ಸ್ಟಾರ್‌ಗಳನ್ನು ನಿರ್ದೇಶಕರು ಬೆಳ್ಳಿತೆರೆಯ ಮೇಲೆ ಹೇಗೆ ತೋರಿಸುತ್ತಾರೆ ಎನ್ನುವುದು ಕೂಡ ಮುಖ್ಯ. ಸಲ್ಮಾನ್ ಖಾನ್ ವಿಚಾರದಲ್ಲಿ ಎ.ಆರ್.ಮುರಗದಾಸ್ ಮಾಡಿದ್ದ ತಪ್ಪನ್ನು ನಿರ್ದೇಶಕ ಗೋಪಿಚಂದ್, ಸನ್ನಿ ಡಿಯೋಲ್ ಅವರ ವಿಚಾರದಲ್ಲಿ ಮಾಡಿಲ್ಲ. 67ರ ಹರೆಯದ ಸನ್ನಿ ಡಿಯೋಲ್ ಅವರನ್ನು ಸ್ಟೈಲಿಶ್ ಆಗಿ ಖಡಕ್ ಡೈಲಾಗ್‌ಗಳ ಮೂಲಕ ಕಣಕ್ಕಿಳಿಸಿದ್ದಾರೆ. ಕಮರ್ಷಿಯಲ್ ಚಿತ್ರಗಳಲ್ಲಿ ಸ್ಟಾರ್ ಹೀರೋಗೆ ಬೇಕಾದ ಬಿಲ್ಡಪ್‌ಗಳನ್ನು ಕೊಟ್ಟಿದ್ದಾರೆ. ಒಟ್ಟಾರೆಯಾಗಿ ಸನ್ನಿ ಡಿಯೋಲ್ ಅವರ ಅಭಿಮಾನಿಗಳನ್ನು ಗಮನದಲ್ಲಿಟ್ಟುಕೊಂಡು ಮಾಡಿರುವ ಸಿನಿಮಾ ಜಾಟ್. ಪಕ್ಕಾ ಕಮರ್ಷಿಯಲ್ ಚಿತ್ರಗಳನ್ನು ಇಷ್ಟಪಡುವರು ಜಾಟ್ ಚಿತ್ರವನ್ನು ನೋಡಲು ಅಡ್ಡಿ ಇಲ್ಲ.


Click it and Unblock the Notifications











