Jawan Review: ಭರಪೂರ ಎಮೋಷನ್ಸ್, ಆಕ್ಷನ್ ತುಂಬಿಕೊಂಡು ಜನರಿಗಾಗಿ ರಾಬಿನ್ ಹುಡ್ ಆದ 'ಜವಾನ್'!
ಬಹುನಿರೀಕ್ಷಿತ ಜವಾನ್ ಸೆಪ್ಟಂಬರ್ 7ಕ್ಕೆ ತೆರೆಗೆ ಅಪ್ಪಳಿಸಿದೆ. ಹಲವು ದಿನಗಳಿಂದ ಹಲ್ ಚಲ್ ಎಬ್ಬಿಸಿದ್ದ ಸಿನಿಮಾ ಪ್ರೇಕ್ಷಕರ ಮುಂದಿದೆ. ಪಠಾಣ್ ನಂತರ ಎರಡನೇ ದೊಡ್ಡ ಹಿಟ್ ನೀಡಲು ಶಾರುಖ್ ಖಾನ್ ಸಿದ್ಧವಾಗಿದ್ದಾರೆ. ಮಾಸ್ ಡೈರೆಕ್ಷರ್ ಅಟ್ಲಿ ನಿರ್ದೇಶನದಲ್ಲಿ ನಯನತಾರಾ, ದೀಪಿಕಾ ಪಡುಕೋಣೆ, ವಿಜಯ್ ಸೇತುಪತಿ ನಟಿಸಿರುವ ಸಿನಿಮಾದಲ್ಲಿ ಏನಿದೆ ಏನಿಲ್ಲ..? ಏನು ಹೇಳಲು ಹೊರಟಿದೆ. ಬಾಲಿವುಡ್‌ಗೆ ಕಾಲಿಟ್ಟ ಅಟ್ಲಿ ಗೆದ್ದರೇ? ಚಿತ್ರದ ಸಂಪೂರ್ಣ ವಿಮರ್ಶೆ ಇಲ್ಲಿದೆ ಓದಿ.
'ಜವಾನ್' ಕಥೆಯೇನು?
ಅಟ್ಲಿ ಬರೆದು ನಿರ್ದೇಶಿಸಿರುವ ಜವಾನ್, ವಿಕ್ರಮ್ ರಾಥೋಡ್ ಮತ್ತು ಆತನ ಮಗ ಆಜಾದ್ ಎಂಬ ಅಪ್ಪ- ಮಗನ ಕಥೆ. ಎರಡೂ ಪಾತ್ರಗಳನ್ನು ಶಾರುಖ್ ಖಾನ್ ನಿರ್ವಹಿಸಿದ್ದಾರೆ. ಆಜಾದ್ ವ್ಯವಸ್ಥೆಯಿಂದ ಅನ್ಯಾಯಕ್ಕೊಳಗಾದವರಿಗೆ ನ್ಯಾಯ ಕೊಡಿಸುತ್ತೇನೆ ಎಂದು ಪ್ರತಿಜ್ಞೆ ಮಾಡಿರುವ ಒಬ್ಬ ಜೈಲರ್. ಸಿಂಗಲ್ ಪೇರೆಂಟ್ ಆಗಿರುವ ನಯನತಾರಾ ಒಬ್ಬ ಪೋಲೀಸ್ ಆಗಿದ್ದು ಆಜಾದ್‌ನನ್ನು ಮದುವೆಯಾಗುತ್ತಾಳೆ.

ಖೈದಿಗಳಾಗಿರುವ ಪ್ರಿಯಾಮಣಿ, ಸನ್ಯಾ ಮಲ್ಹೋತ್ರಾ, ಲೆಹರ್ ಖಾನ್, ಸಂಗೀತಾ ಭಟ್ಟಾಚಾರ್ಯ ಮತ್ತು ಇತರರು ಆಜಾದ್‌ನ ಆರ್ಮಿ. ಇವರೆಲ್ಲು ಜೈಲಿನಲ್ಲಿರಲು ಕಾರಣವೇನು ಎಂಬುದನ್ನು ಸಿನಿಮಾದಲ್ಲಿ ನೊಡಬೇಕು. ವಿಜಯ್ ಸೇತುಪತಿ ವೆಪನ್ ಸಪ್ಲೈ ಮಾಡುವ ದೊಡ್ಡ ವ್ಯಾಪಾರಿ. ಖಳನಾಯಕನಿಗೂ ಯೋಧ ವಿಕ್ರಮ್ ರಾಥೋಡ್‌ಗೂ ಇರುವ ಸಂಬಂಧ, ಆಜಾದ್ ಅನ್ಯಾಯದ ವಿರುದ್ಧ ಏಕೆ ಹೋರಾಡಲು ಶುರು ಮಾಡುತ್ತಾನೆ ಎಂಬುದನ್ನು ಸಿನಿಮಾ ನೋಡಿ ತಿಳಿಯಬೇಕು.
ಸಿನಿಮಾ ಹೇಗಿದೆ?
ಇದು ಪಕ್ಕಾ ಮಾಸ್ ಎಂಟರ್‌ಟೈನರ್ ಅಂದುಕೊಂಡರೆ ಅದು ತಪ್ಪು. ಆಕ್ಷನ್ ಜೊತೆಗೆ ಪ್ರೇಕ್ಷಕರ ಕಣ್ಣಲ್ಲಿ ನೀರು ತರಿಸುವ ದೃಶ್ಯಗಳಿವೆ. ಆಕ್ಷನ್ ಸೀನ್‌ಗಳಿಗೆ ಕೊಟ್ಟಿರುವ ಒತ್ತನ್ನು ಎಮೋಷನಲ್ ಸೀನ್‌ಗಳಿಗೂ ನೀಡಲಾಗಿದೆ. ಮ್ಯೂಸಿಕ್ ಆಕ್ಷನ್ ಮತ್ತು ಎಮೋಷನಲ್ ಸೀನ್‌ಗಳಲ್ಲಿ ಚೆನ್ನಾಗಿ ಬಳಸಲಾಗಿದೆ. ತಾವು ಹೋರಾಡುತ್ತಿರುವುದು ಜನರ ಸಮಸ್ಯೆಗಳ ವಿರುದ್ಧವೋ ಅಥವಾ ಒಬ್ಬ ವ್ಯಕ್ತಿಯ ವಿರುದ್ಧವೋ ಎಂಬುದನ್ನು ಪ್ರೇಕ್ಷಕರಿಗೆ ತಲುಪಿಸುವಲ್ಲಿ ನಿರ್ದೇಶಕರು ವಿಫಲವಾಗಿದ್ದಾರೆ.

ನಟನೆ ಹೇಗಿದೆ?
ಶಾರುಖ್ ಖಾನ್ ತಮ್ಮ ಶಕ್ತಿ ಮೀರಿ ಸಿನಿಮಾದಲ್ಲಿ ನಟಿಸಿದ್ದಾರೆ. ಆಕ್ಷನ್ ಮತ್ತು ಎಮೋಷನಲ್ ಸೀನ್ ಎರಡರಲ್ಲೂ ಇಷ್ಟವಾಗ್ತಾರೆ. ಲೇಡಿ ಬಾಂಡ್ ನಯನತಾರಾ ಸಕತ್ ಆಗಿ ನಟಿಸಿದ್ದಾರೆ. ವಿಕ್ರಮ್ ರಾಥೋಡ್ ಹೆಂಡತಿಯಾಗಿ, ಆಜಾದ್ ತಾಯಿಯಾಗಿ ಐಶ್ವರ್ಯಾ ಪಾತ್ರದಲ್ಲಿ ದೀಪಿಕಾ ಪಡುಕೋಣೆ ಕಾಡುತ್ತಾರೆ. ಖಳನಟನಾಗಿ ಮೊದಲಾರ್ಧದಲ್ಲಿ ಕಡಿಮೆ ಕಾಣಿಸಿಕೊಳ್ಳುವ ವಿಜಯ್ ಸೇತುಪತಿ ದ್ವಿತಿಯಾರ್ಧದಲ್ಲಿ ಸಿನಿಮಾವನ್ನು ಆವರಿಸಿಕೊಂಡಿದ್ದಾರೆ. ಆಸ್ಪತ್ರೆಯಲ್ಲಿ ಆಕ್ಸಿಜನ್ ಇಲ್ಲದೆ ಮಕ್ಕಳು ಸಾಯುವಾಗ ಸಾನ್ಯಾ ಮಲೋತ್ರಾ ಕಣ್ಣೀರನ್ನು ನಾವೇ ಒರೆಸಬೇಕು ಎನ್ನಿಸುತ್ತದೆ. ನಯನತಾರಾ ಮಗಳ ಪಾತ್ರದಲ್ಲಿ ಮಗು ನಟನೆ ನೆನಪಲ್ಲಿ ಉಳಿಯಲಿದೆ. ಕೆಲವೇ ನಿಮಿಷಗಳು ಬಂದರೂ ಸಂಜಯ್ ದತ್ ಪಾತ್ರಕ್ಕೆ ಅಂತಹ ತೂಕವಿಲ್ಲ.
ಸಿನಿಮಾದ ಪ್ಲಸ್ ಪಾಯಿಂಟ್
ಬಹು ತಾರಾಂಗಣದ ಸಿನಿಮಾದಲ್ಲಿ ಎಲ್ಲರ ನಟನೆಯೇ ಪ್ಲಸ್ ಪಾಯಿಂಟ್. ಮ್ಯೂಸಿಕ್ ಚೆನ್ನಾಗಿದೆ. ಹಾಡುಗಳು ಗುನುಗುವಂತಿವೆ. ಆಕ್ಷನ್ ಸೀನ್‌ಗಳು ಚಪ್ಪಾಳೆ ಗಿಟ್ಟಿಸಿದರೇ, ಎಮೋಷನಲ್ ಸೀನ್‌ಗಳು ಮನಸ್ಸು ಭಾರವಾಗಿಸುತ್ತವೆ. ಮೂರು ಗಂಟೆಯ ಸಿನಿಮಾವಾದರೂ ಬೋರೆ ಹೊಡೆಸುವುದಿಲ್ಲ. ಕ್ಯಾಮೆರಾ ವರ್ಕ್ ಚೆನ್ನಾಗಿದೆ. ಮೆಟ್ರೋ ಹೈಜಾಕ್ ಸೀನ್ ನೆನಪಲ್ಲಿ ಉಳಿಯಲಿದೆ. ಆಕ್ಷನ್ ಪ್ರಿಯರಿಗೆ ಹೇಳಿ ಮಾಡಿಸಿದ ಸಿನಿಮಾ.
ಜವಾನ್ ಮೈನಸ್ ಪಾಯಿಂಟ್
ಸಿನಿಮಾದಲ್ಲಿ ಡಿಟೈಲಿಂಗ್ ಕೊರತೆ ಕಾಣಿಸುತ್ತದೆ. ಆಜಾದ್ ಸಮಾಜದ ಸಮಸ್ಯೆಗಳ ವಿರುದ್ಧ ಹೋರಾಡಲು ಇರುವ ಗಟ್ಟಿ ಕಾರಣ ತಿಳಿಸುವಲ್ಲಿ ನಿರ್ದೇಶಕ ಗೊಂದಲಕ್ಕೆ ಒಳಗಾಗಿದ್ದಾರೆ. ತಾಯಿಗೆ ಕೊಟ್ಟ ಮಾತಿಗೋ ಅಥವಾ ತನ್ನ ಲೇಡಿ ಆರ್ಮಿಗಾಗಿಯೋ ಅನ್ನುವುದನ್ನು ವಿವರಿಸಬಹುದಿತ್ತು. ಖಳನಾಯಕ ತನ್ನ ಕುಟುಂಬಕ್ಕೆ ಮಾಡಿರುವ ಅನ್ಯಾಯ ಆಜಾದ್‌ಗೆ ಗೊತ್ತಿತ್ತೆ ಎಂದು ಎಲ್ಲೂ ಹೇಳಿಲ್ಲ. ಮಹಿಳಾ ಜೈಲು ಇಷ್ಟು ಸುಂದರವಾಗಿ, ಅನುಕೂಲಕರವಾಗಿ ಇರುವುದು ಕೃತಕ ಎನಿಸುತ್ತದೆ. ಜನರ ಸಮಸ್ಯೆ ಪರಿಹಾರಕ್ಕೆ ಇವಿಎಂ ಕಳ್ಳತನ ತುಂಬಾ ಒವರ್ ಎನ್ನಿಸುತ್ತದೆ. ತಮಿಳು ಚಿತ್ರದ ಛಾಯೆ ಸಿನಿಮಾ ತುಂಬಾ ತುಂಬಿದೆ.


Click it and Unblock the Notifications











