Jawan Trailer: ಶಾರುಖ್ ಯೋಧನಾ, ಕೇಡಿನಾ, ಪೊಲೀಸಾ? ಜವಾನ್ ಟ್ರೈಲರ್ ಚಿಂದಿ; ಈ ಬಾರಿಯೂ ಬಾಯ್‌ಕಾಟ್‌ಗೆ ಸೋಲು ಫಿಕ್ಸ್!
ಜುಲೈ 10ರಂದು ಭಾರತದ ಬಹು ನಿರೀಕ್ಷಿತ ಚಿತ್ರಗಳಲ್ಲಿ ಒಂದಾದ ಜವಾನ್ ಚಿತ್ರದ ಟ್ರೈಲರ್ ಅನ್ನು ಚಿತ್ರತಂಡ ಜವಾನ್ ಪ್ರಿವ್ಯೂ ಎಂಬ ವಿಶೇಷ ಹೆಸರಿನ ಅಡಿಯಲ್ಲಿ ಬಿಡುಗಡೆಗೊಳಿಸಿ ಸಾಮಾಜಿಕ ಜಾಲತಾಣದಲ್ಲಿ ಹವಾ ಎಬ್ಬಿಸಿತ್ತು. ಈ ಮೊದಲ ಟ್ರೈಲರ್ ಮೂಲಕವೇ ದೊಡ್ಡ ತೂಫಾನ್‌ನ ಎಚ್ಚರಿಕೆ ನೀಡಿದ್ದ ಜವಾನ್ ಈಗ ತನ್ನ ಎರಡನೇ ಟ್ರೈಲರ್ ಅನ್ನು ಬಿಡುಗಡೆಗೊಳಿಸಿ ಚಿತ್ರದ ಬಿಡುಗಡೆಯ ಸನಿಹದಲ್ಲಿ ನಿರೀಕ್ಷೆಯೆಂಬ ಬೆಂಕಿಗೆ ಪೆಟ್ರೋಲ್ ಸುರಿದಿದೆ.
ಹೌದು, ಇಂದು ( ಆಗಸ್ಟ್ 31 ) ಜವಾನ್ ಚಿತ್ರದ ಎರಡನೇ ಟ್ರೈಲರ್ ಬಿಡುಗಡೆಗೊಂಡಿದೆ. ಮೊದಲ ಟ್ರೈಲರ್‌ನಲ್ಲಿ ಹೇಳಿದ್ದಕ್ಕಿಂತ ಹೆಚ್ಚು ಕಥೆಯನ್ನು ಹಾಗೂ ಮೊದಲ ಟ್ರೈಲರ್‌ನಲ್ಲಿ ಇಲ್ಲದಿದ್ದ ಅನೇಕ ಸನ್ನಿವೇಶಗಳನ್ನು ಮತ್ತು ಶಾರುಖ್ ಖಾನ್‌ರ ಲುಕ್‌ಗಳನ್ನು ಈ ಬಾರಿ ನಿರ್ದೇಶಕ ಅಟ್ಲಿ ಬಿಟ್ಟುಕೊಟ್ಟಿದ್ದಾರೆ.

ಒಂದಾನೊಂದು ಊರಲ್ಲಿ ಒಬ್ಬ ರಾಜ, ಒಂದಾದ ಮೇಲೊಂದರಂತೆ ಯುದ್ಧವನ್ನು ಸೋಲುತ್ತಲೇ ಇದ್ದಾನೆ, ದಾಹದೊಂದಿಗೆ, ಹಸಿವಿನೊಂದಿಗೆ ಅರಣ್ಯದಲ್ಲಿ ತಿರುಗುತ್ತಲೇ ಇದ್ದಾನೆ, ಆತ ಬಹಳ ಕೋಪದಲ್ಲಿದ್ದಾನೆ ಎಂಬ ಡೈಲಾಗ್‌ನೊಂದಿಗೆ ಆರಂಭವಾಗುವ ಟ್ರೈಲರ್‌ನಲ್ಲಿ ಶಾರುಖ್ ಮೆಟ್ರೊವೊಂದನ್ನು ಹೈಜಾಕ್ ಮಾಡುವ ದೃಶ್ಯದಲ್ಲಿ ಖಳನಾಗಿ ಕಾಣಿಸಿಕೊಂಡಿದ್ದಾರೆ.
ಮೆಟ್ರೊ ಹೈಜಾಕ್ ಮಾಡುವ ಶಾರುಖ್ ಹಿಡಿಯುವ ಕೆಲಸ ಪೊಲೀಸ್ ಅಧಿಕಾರಿ ನಯನತಾರಾ ಹೆಗಲ ಮೇಲಿರುತ್ತದೆ. ಇನ್ನು ಟ್ರೈಲರ್ ಗಮನಿಸಿದರೆ ಶಾರುಖ್ ಎಲ್ಲಿಯೂ ಸಹ ತನ್ನ ನಿಜವಾದ ಮುಖವನ್ನು ತೋರಿಸದೇ ಹೈಜಾಕ್ ಮಾಡಲಿದ್ದು, ಕೆಲವೊಂದಷ್ಟು ಬೇಡಿಕೆಗಳನ್ನು ಮುಂದಿಟ್ಟು ಅವುಗಳನ್ನು ನೆರವೇರಿಸಿಕೊಳ್ಳುವ ಕೆಲಸಕ್ಕೆ ಕೈಹಾಕಲಿದ್ದಾರೆ.
ಹೀಗೆ ಮೆಟ್ರೋ ರೈಲನ್ನು ಹೈಜಾಕ್ ಮಾಡುವ ಶಾರುಖ್ ಟ್ರೈಲರ್‌ನಲ್ಲಿ ಪೊಲೀಸ್ ಅಧಿಕಾರಿಯಾಗಿಯೂ ಸಹ ಕಾಣಿಸಿಕೊಂಡಿದ್ದಾರೆ. ಬಳಿಕ ಯೋಧನಾಗಿಯೂ ಸಹ ಟ್ರೈಲರ್‌ನಲ್ಲಿ 'ನಾವು ಯೋಧರು ದೇಶಕ್ಕಾಗಿ ಒಂದು ಬಾರಿಯಲ್ಲ, ಹಲವಾರು ಬಾರಿ ಸಾಯುತ್ತೇವೆ' ಎಂದು ಡೈಲಾಗ್ ಹೊಡೆದಿದ್ದಾರೆ. ಗನ್, ಬಾಂಬ್ ಸರಬರಾಜು ಮಾಡುವ ಖಳನಾಯಕ ವಿಜಯ್ ಸೇತುಪತಿ ಜತೆ ವೈರತ್ವ ಕಟ್ಟಿಕೊಳ್ಳುವ ಜವಾನ್ ಒಂದೆಡೆಯಾದರೆ, ಮೆಟ್ರೋ ಹೈಜಾಕ್ ಮಾಡುವ ಸೈತಾನ್ ಅವತಾರದ ನಾಯಕ ಮತ್ತೊಂದೆಡೆ ಇದ್ದು ಸಿನಿ ರಸಿಕರ ತಲೆಗೆ ನಿರ್ದೇಶಕ ಅಟ್ಲಿ ಸ್ವಲ್ಪ ಕೆಲಸ ಕೊಟ್ಟಿದ್ದಾರೆ.
ಈ ಬಾರಿಯ ಟ್ರೈಲರ್‌ನಲ್ಲಿ ದೀಪಿಕಾ ಪಡುಕೋಣೆಯ ಇನ್ನಷ್ಟು ದೃಶ್ಯಗಳು ಇದ್ದು, ನಯನತಾರಾ ಹಾಗೂ ಶಾರುಖ್ ಖಾನ್ ನಡುವಿನ ಲವ್ ದೃಶ್ಯಗಳು ಸಹ ಇವೆ. ಪ್ರಿಯಾಮಣಿ ಸಹ ಟ್ರೈಲರ್‌ನಲ್ಲಿ ಇದ್ದು, ವಿಜಯ್ ಸೇತುಪತಿ ಯಂಗ್ ಅವತಾರ ಹಾಗೂ ವೃದ್ಧನಾಗಿಯೂ ಸಹ ಕಾಣಿಸಿಕೊಂಡಿದ್ದಾರೆ. ಇನ್ನು ಟ್ರೈಲರ್ ಕಟ್ ಭರ್ಜರಿಯಾಗಿದ್ದು, ಟ್ರೈಲರ್ ಮೂಲಕವೇ ಸಿನಿ ರಸಿಕರನ್ನು ಕೆರಳಿಸುವ ಕಲೆ ಬಲ್ಲ ಅಟ್ಲಿ ಮತ್ತೊಮ್ಮೆ ತಮ್ಮ ಆ ಕಲೆಯನ್ನು ಪ್ರದರ್ಶಿಸಿದ್ದಾರೆ. ಇನ್ನು ಸಂಗೀತವನ್ನು ಅನಿರುದ್ಧ್ ರವಿಚಂದರ್ ಸಂಯೋಜಿಸಿದ್ದು, ಎಂದಿನಂತೆ ಔಟ್ ಆಫ್ ಔಟ್ ಮಾರ್ಕ್ಸ್ ಗಿಟ್ಟಿಸಿಕೊಂಡಿದ್ದಾರೆ.
ಇನ್ನು ಜವಾನ್ ಚಿತ್ರದ ಈ ಟ್ರೈಲರ್ ಅನ್ನು ನೋಡಿದ ಸಿನಿ ರಸಿಕರು ಪಠಾಣ್ ಮೂಲಕ ಬಾಯ್‌ಕಾಟ್ ಗ್ಯಾಂಗ್ ಅನ್ನು ಹೀನಾಯವಾಗಿ ಸೋಲಿಸಿ ಗೆದ್ದು ಬೀಗಿದ್ದ ಶಾರುಖ್ ಖಾನ್ ಮತ್ತೊಮ್ಮೆ ಜವಾನ್ ಮೂಲಕ ಅಂತಹದ್ದೇ ಕೆಲಸ ಮಾಡುವ ಸೂಚನೆ ನೀಡಿದ್ದಾರೆ.


Click it and Unblock the Notifications











