»   » ಜಗಳ, ಕದನ, ಹೊಡೆದಾಟಗಳ ನಡುವೆಯೂ ಹಿಂದೂ ಅವಿಭಕ್ತ ಕುಟುಂಬದ ಕಲ್ಪನೆ ಇಲ್ಲಿದೆ.

ಜಗಳ, ಕದನ, ಹೊಡೆದಾಟಗಳ ನಡುವೆಯೂ ಹಿಂದೂ ಅವಿಭಕ್ತ ಕುಟುಂಬದ ಕಲ್ಪನೆ ಇಲ್ಲಿದೆ.

Subscribe to Filmibeat Kannada

ಈ ಚಿತ್ರಕ್ಕೆ ಬಂದು ‘ದುಡ್ಡು ಕೊಟ್ಟು ದೆವ್ವ ಬಿಡಿಸಿಕೊಂಡಂತಾಯ್ತು’, ‘ದುಡ್ಡು ಹಾಳೂ ತಲೆಯೂ ಬೋಳು’ ಎಂದು ಕೆಲವರು ಗೊಣಗಿಕೊಂಡಿದ್ದು ನಮ್ಮ ಕಿವಿಗೂ ಬಿತ್ತು. ತಮಿಳಿನಲ್ಲಿ ಕ್ಲಿಕ್ಕಾದ ಕೂಡಿ ಬಾಳಿದರೆ ಸ್ವರ್ಗ ಸುಖ ಎಂಬ ಅರ್ಥ ಬರುವ ‘ಕೂಡಿವಾಳ್ವಾನ್‌ ಕೂಡಿ ನಮ್ಮೈ’ ಚಿತ್ರವನ್ನು ಕನ್ನಡಕ್ಕೆ ರಿಮೇಕ್‌ ಮಾಡುವಲ್ಲಿ ಉಮೇಶ್‌ ಎಡವಿದ್ದಾರೆ ಎನ್ನಲಡ್ಡಿಯಿಲ್ಲ.

ಈ ಚಿತ್ರದಲ್ಲಿ ಬರುವ ಎಲ್ಲರೂ ಜಗಳಗಂಟರೇ. ಮೊದಲು ಕಾಲು ಕೆರೆದು ಜಗಳಕ್ಕೆ ನಿಲ್ಲುವ ಅವರು, ಆನಂತರ ಕೈ ಕೈ ಮಿಲಾಯಿಸಿ ಹೊಡೆದಾಡುತ್ತಾರೆ. ಸ್ತ್ರೀಪಾತ್ರಗಳಂತೂ ಆಗಾಗ್ಗೆ ಕಪಾಳಮೋಕ್ಷಕ್ಕೆ ಒಳಗಾಗಿ, ಸಿಟ್ಟಿನಿಂದ ಬಾಯಿಗೆ ಬಂದಂತೆ ಛೀ.. ಥೂ ಎಂದು ಬೈಯುತ್ತಾರೆ.

ಮನೆ ಒಳಗೆ, ಮನೆ ಮುಂದೆ, ಹಾದಿ, ಬೀದಿ, ದೇವಸ್ಥಾನದಲ್ಲಿ ಜಗಳ ಕಾದಿದ್ದು ಸಾಲದು ಎಂದು ಆಸ್ಪತ್ರೆಗೂ ತಮ್ಮ ಕಾರ್ಯಕ್ಷೇತ್ರ ವಿಸ್ತರಿಸುತ್ತಾರೆ ಈ ಜಗಳದಲ್ಲಿ ಎಲ್ಲರೂ ಶಬ್ದ ಮಾಡುವವರೆ, ಚಿತ್ರವಿಡೀ ಶಬ್ದಮಾಲಿನ್ಯ ಪ್ರಧಾನ. ಬೈಯಲು ಬಾರದವರು, ಈ ಚಿತ್ರ ನೋಡಿ ಜಗಳಕಾಯೋದು ಹೇಗೆ, ಬೈಯೋದು ಹೇಗೆ ಎಂದು ಟ್ರೆೃನಿಂಗ್‌ ಪಡೆಯ ಬಹುದು.

ಈ ಚಿತ್ರವನ್ನು ನೋಡುವುದಕ್ಕಿಂತ ಕೇಳಬಹುದೇನೋ, ದೃಶ್ಯಗಳಿಗಿಂತ ಇಲ್ಲಿ ವಾಚ್ಯಕ್ಕೇ ಹೆಚ್ಚು ಪ್ರಾಶಸ್ತ್ಯ. ಅಂದಹಾಗೆ ಚಿತ್ರದ ಒಳಹೊಕ್ಕು ನೋಡೋಣ. ಆನಂದ ಸಾಗರದಂತಹ ಸಂಸಾರ. ಹಿರಿಯಣ್ಣ ಧರ್ಮರಾಯ. ತಮ್ಮಂದಿರು ಮೊದಲು ಅವನನ್ನು ಪ್ರೀತಿಸುತ್ತಾರೆ. ಕಾರ್ಮಿಕನಾಗಿ ಒಬ್ಬಂಟಿಯಾಗಿ ದುಡಿಯುತ್ತಾ ಸಾಗುವ ಜೀವ ಅದು. ಆತನ ಹೆಂಡತಿ (ಸಿತಾರ) ತ್ಯಾಗಮಯಿ. ಈಕೆ ತ್ಯಾಗಮಯಿಯಷ್ಟೇ ಅಲ್ಲ ಚಿತ್ರದಲ್ಲಿ ಕನಿಷ್ಠ 20-30 ಕರ್ಚಿಫ್‌ ಆದರೂ ನೆನೆಯುವಷ್ಟು ಅತ್ತಿದ್ದಾರೆ. ಈ ಮಧ್ಯೆ ನಿರುದ್ಯೋಗಿಯಾದ ತಮ್ಮ (ಗೋವಿಂದು) ಭಾರಿ ಸಂಬಳ ಪಡೆವ ಉದ್ಯೋಗಿ ಆಕ್ತಾನೆ. ಹೇಳಿ ಕೇಳಿ 25 ಸಾವಿರ ಸಂಬಳ ಅಂದಮೇಲೆ ಅಲ್ಪ ಅರ್ಧ ರಾತ್ರೀಲಿ ಕೊಡೆ ಹಿಡಿಯದೇ ಇರ್ತಾನೆಯೇ? ಇವನೂ ಪೂರ್ಣ ಬದಲಾಗುತ್ತಾನೆ. ಈತನ ಮಡದಿ (ಶ್ರುತಿ) ಯೂ ಶ್ರೀಮಂತೆ. ಸಾಧುವಾಗಿದ್ದ ಈಕೆಯೂ ಗಂಡನ ಜತೆ ಸೇರಿ ದುರಹಂಕಾರದ ಮುದ್ದೆ ಆಕ್ತಾಳೆ.

ಇಬ್ಬರೂ ಸೇರಿ ಮನೆಯವನ್ನು ಕೀಳಾಗಿ ಕಾಣ್ತಾರೆ. ಅಣ್ಣನ ಮಗಳ ಮದುವೆಗೆ ನೆರವಾಗಬೇಕಾದ ತಮ್ಮ ಜಗಳಕ್ಕೆ ನಿಲ್ತಾನೆ. ಹೆಂಡ್ತೀನ ಕರಕೊಂಡು ಬೇರೆ ಹೋಕ್ತಾನೆ. ಆದರೆ, ಮನೆ ಬಿಟ್ಟು ಹೋದ ತಮ್ಮ ಕಾರು ಅಪಘಾತದಲ್ಲಿ ಕಿಡ್ನಿ ಕಳಕೊಂಡಾಗ ಅತ್ತಿಗೆ ನೆರವಿಗೆ ಬರ್ತಾರೆ. ಮಗಳ ಮದುವೆಗೆ ಇಟ್ಟಿದ್ದ ಹಣ ಹಾಗೂ ತನ್ನ ಕಿಡ್ನಿಯನ್ನೇ ಅತ್ತಿಗೆ ತ್ಯಾಗ ಮಾಡ್ತಾಳೆ. ಇಷ್ಟಾದ ಮೇಲೆ ಪಶ್ಚಾತ್ತಾಪದಿಂದ ಕಣ್ಣೀರ ಕೋಡಿ ಹರಿಯತ್ತೆ. ಚಿತ್ರ ಸುಖಾಂತವಾಗಿ ಅಂತ್ಯ ಆಗತ್ತೆ.

ಚಿತ್ರದಲ್ಲಿ ಉಮಾಶ್ರೀ ಎಂದಿನ ತಮ್ಮ ಆರ್ಭಟದ ಅಭಿನಯ ಮೆರಿದಿದ್ದಾರೆ. ಶ್ರುತಿ ಹಾಗೂ ಸಿತಾರ ತಮ್ಮ ಪಾತ್ರಗಳಿಗೆ ನ್ಯಾಯ ಕೊಟ್ಟಿದ್ದಾರೆ. ಪೊಲೀಸ್‌ ಪಾತ್ರ ಇದ್ದದಿದ್ದರೂ, ಕಾರ್ಮಿಕನಾಗಿಯಾದರೂ ಮತ್ತೊಮ್ಮೆ ದೇವರಾಜ್‌ ಕಾಕಿ ಬಟ್ಟೆ ತೊಟ್ಟಿದ್ದಾರೆ. ಎರಡು ಹಾಡು ಬಿಟ್ಟರೆ, ಉಳಿದದ್ದು ಅಷ್ಟಕ್ಕಷ್ಟೇ. ಹಿನ್ನೆಲೆ ಸಂಗೀತದ ಅಬ್ಬರ ಅತಿಯಾಯ್ತು ಎನಿಸುತ್ತದೆ.

ಚಿತ್ರದ ನಿರ್ದೇಶಕ ಉಮೇಶ್‌ ಅವರೇ ಸಂಕಲನಕಾರರಾಗಿದ್ದರೂ ಚಿತ್ರ ಕೆಲವೊಮ್ಮೆ ಗೊತ್ತು ಗುರಿ ಇಲ್ಲದೆ ಜಂಪ್‌ ಆಗಿದೆ. ಈ ಗದ್ದಲ - ಗಲಾಟೆಯ ಸಂಸಾರದಲ್ಲಿ ದೇವರಾಜ್‌ ಕೂಗಾಟ, ಉಮಾಶ್ರೀ ಅಬ್ಬರ, ಗೋವಿಂದು ಕೆಂಗಣ್ಣು, ಉಮಾಶ್ರೀ ಅಬ್ಬರ ಹತ್ತಿಕ್ಕಲು ಯತ್ನಿಸುವ ಕರಿಬಸಯ್ಯ ಆರ್ಭಟ, ಶ್ರುತಿಯ ಕೂಲ್‌ ಅಂಡ್‌ ಸ್ಟಡಿ ಥಿಯರಿ, ಸಿತಾರಾ ಸಜ್ಜನಿಕೆ, ಮೃದುತ್ವಗಳ ಮಧ್ಯೆ ಮೋಹನ್‌ನ ಲವಲವಿಕೆ ಅಭಿನಯ ಇದೆ. ಮನೆ ಮಾಲಿಕನ ಮಗನನ್ನು ಬೈಯುವುದೇ ಇಲ್ಲಿ ಒಂದು ಗ್ರೇಟ್‌ ಜೋಕು.

ಸಿನಿಮಾದ ನೀತಿ ಇಷ್ಟೇ - ಹಿಂದೂ ಅವಿಭಕ್ತ ಕುಟುಂಬದಂತೆ ಬಾಳಬೇಕು ಎಂದರೆ ಮನೆ ಮಂದಿಯೆಲ್ಲಾ ದುಡಿಯಬೇಕು. ಈ ಥಿಯರಿ ಹಾಗೂ ಸಾಂಸಾರಿಕ ಕಥೆ ಹೆಂಗಸರಿಗೆ ಹಾಗೂ ತಮ್ಮಂದಿರ ಸಾಕಿ ನೋವುಂಡವರಿಗೆ ಇಷ್ಟ ಆಗುತ್ತದೆ.

ಮುಖಪುಟ / ಸ್ಯಾಂಡಲ್‌ವುಡ್‌

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada