twitter
    For Quick Alerts
    ALLOW NOTIFICATIONS  
    For Daily Alerts

    ಜಗ್ಗೇಶ್‌ ಬಗ್ಗೆ ಜನರಿಗೆ ಈಗಾಗಲೇ ಇರುವ ಅಸಹ್ಯ ಮತ್ತು ‘ಕಾಕ್ರೋಚ್‌ ಫೀಲಿಂಗ್‌’ ಮತ್ತಷ್ಟು ಜಾಸ್ತಿಯಾಗಬಹುದು. ಜಗ್ಗೇಶ್‌ ನಟಿಸದೇ ಇರುವ ಸದ್ಬುದ್ಧಿಯನ್ನು ಕುಮಾರ ಸ್ವಾಮಿ ನೀಡಲಿ

    By Staff
    |

    ಚಿತ್ರ : ಜಿತೇಂದ್ರನಿರ್ದೇಶನ : ವಿಶ್ವನಾಥ್‌, ನಿರ್ಮಾಪಕ : ಎಚ್‌.ಡಿ. ಕುಮಾರಸ್ವಾಮಿತಾರಾಗಣ : ಜಗ್ಗೇಶ್‌, ರಮೇಶ್‌ಭಟ್‌, ಪದ್ಮಾ ವಾಸಂತಿ
    * ದೀಪಿಕಾ

    ಆತ ಥಕ ಥಕ ಕುಣಿಯುತ್ತಾನೆ. ತನ್ನನ್ನು ತಾನೇ ವರ್ಸ್ಟ್‌ ನನ್ಮಗ, ಕಚಡಾ ನನ್ಮಗ, ಡಬ್ಬಾ ನನ್ಮಗ ಎಂದು ಕರೆದುಕೊಳ್ಳುತ್ತಾನೆ. ಆಗಾಗ ದೇಹದ ಆಯ್ದ ಭಾಗಗಳನ್ನು ಕೆರೆದುಕೊಳ್ಳುತ್ತಾನೆ. ಬಟ್ಟೆಯನ್ನು ಹರಿದುಕೊಳ್ತಾನೆ.

    ಆತನ ಹೆಸರು ಜಿತೇಂದ್ರ
    ತಂದೆಯ ಹೆಸರು ಉಪೇಂದ್ರ.

    ಜಗ್ಗೇಶ್‌ ಫ್ರಸ್ಟ್ರೇಷನ್‌ಗೆ ಕೊನೆಯ ಸಾಕ್ಷಿಯಾಗಿ ನೀವು ಜಿತೇಂದ್ರ ಚಿತ್ರವನ್ನು ನೋಡಬೇಕು. ಒಂದು ರೀತಿಯ ಸಾಂಸ್ಕೃತಿಕ ಅಧಃಪತನಕ್ಕೂ ಇದು ಸಾಕ್ಷಿಯಾಗಬಲ್ಲುದು. ಉಪೇಂದ್ರ ಚಿತ್ರದ ಒಳಾರ್ಥಗಳನ್ನೂ, ಅದು ನೀಡುವ ಸಂತೋಷವನ್ನೂ ಗಮನದಲ್ಲಿಟ್ಟುಕೊಳ್ಳದೇ, ನವಿಲನ್ನು ನೋಡಿ ಕೆಂಬೂತ ಮೈ ಪರಚಿಕೊಂಡಂತೆ ಜಗ್ಗೇಶ್‌ ವರ್ತಿಸಿದ್ದಾರೆ. ಅವರಿಗೆ ಮಾರ್ಗದರ್ಶನ ಮಾಡುವುದಕ್ಕೆ ದಿ ಗ್ರೇಟ್‌ ಶಿವಕುಮಾರ್‌ ಮತ್ತು ಮಾಜಿ ನಟ, ಮಾಜಿ ಮನುಷ್ಯ, ವಿಶ್ವನಾಥ್‌ ಇದ್ದಾರೆ. ಇವರೆಲ್ಲರನ್ನು ಒಂದು ಮಾಡಿದವರು ದಿ ಗ್ರೇಟ್‌ ಕುಮಾರ ಸ್ವಾಮಿ. ಜಿತೇಂದ್ರ ಖ್ಯಾತಿಯ ಕುಮಾರ ಸ್ವಾಮಿ ಎಂದು ಕರೆಯಬಹುದಾದಷ್ಟು ಹೆಸರನ್ನು ಅವರು ಜಿತೇಂದ್ರ ಚಿತ್ರವೊಂದರಿಂದಲೇ ಸಂಪಾದಿಸಿದ್ದಾರೆ.

    ಜಿತೇಂದ್ರ ಚಿತ್ರಕ್ಕೆ ಕತೆಯೆಂಬುದಿಲ್ಲ. ಉಪೇಂದ್ರ ಚಿತ್ರ ನೋಡದವರಿಗೆ ಇದು ಅರ್ಥವಾಗುವ ಸಾಧ್ಯತೆಯೂ ಇಲ್ಲ. ಉಪೇಂದ್ರ ನೋಡಿದವರು ಇದನ್ನು ಮೆಚ್ಚುವುದು ಸಾಧ್ಯವಿಲ್ಲ. ಧೂರ್ತತನ, ಭಂಡತನ, ಮೂರ್ಖತನಗಳನ್ನು ಮೈ ಗೂಡಿಸಿಕೊಂಡ ನಿರ್ದೇಶಕನಷ್ಟೇ ಇಂಥ ಚಿತ್ರಗಳನ್ನು ನಿರ್ದೇಶಿಸಬಲ್ಲ. ಅಂಥ ನಾಯಕನಷ್ಟೇ ಈ ಚಿತ್ರದಲ್ಲಿ ನಟಿಸಬಲ್ಲ . ಉಪೇಂದ್ರರ ಚಿತ್ರಗಳಲ್ಲಿ ಬರುವ ಸನ್ನಿವೇಶಗಳನ್ನು ಅಲ್ಲಗಳೆಯುವುದು ಜಿತೇಂದ್ರ ಚಿತ್ರದ ಪ್ರಧಾನ ಉದ್ದೇಶ. ಆದರೆ ಜಿತೇಂದ್ರ ಕೂಡ ಒಂದು ಸಿನಿಮಾ ಅನ್ನುವುದನ್ನು ಎಲ್ಲರೂ ಸಾರಾಸಗಟಾಗಿ ಮರೆಯುತ್ತಾರೆ. ಉಪೇಂದ್ರನ ತತ್ವಗಳು ನಿಜ ಜೀವನಕ್ಕೆ ಹತ್ತಿರವಾಗಿಲ್ಲ ಅನ್ನುವುದನ್ನು ಸಿನಿಮಾ ಮೂಲಕ ಹೇಳ ಹೊರಡುವುದೇ ಒಂದು ಸಾಧನೆ ಎಂದು ಜಗ್ಗೇಶ್‌ ಭಾವಿಸಿದಂತಿದೆ. ಒಬ್ಬ ನಟನ ಹತಾಶೆ ಮತ್ತು ಕೊಳೆತ ಮನಸ್ಸು ಎಂಥ ಚಿತ್ರದ ಸೃಷ್ಟಿಗೆ ಕಾರಣವಾಗಬಲ್ಲುದು ಎನ್ನುವುದಕ್ಕೆ ಇದು ಸಾಕ್ಷಿ.

    ಒಂದು ಚಿತ್ರವನ್ನು ವಿಮರ್ಶಿಸುವ ಹೊತ್ತಿಗೆ ಚಿತ್ರದ ಉದ್ದೇಶ ನಟನ ಉದ್ದೇಶವೂ ಆಗಿರುತ್ತದೆ ಎಂದು ವಿಮರ್ಶಕ ಭಾವಿಸಕೂಡದು. ಅಂಥ ಭಾವನೆ ಮೂಡುವಂತೆ ನಟನೂ ವರ್ತಿಸಕೂಡದು. ಆದರೆ ಕನ್ನಡದ ಪ್ರೇಕ್ಷಕ ಮಾತ್ರ ಅಂದಿನಿಂದ ಇಂದಿನವರೆಗೂ ಹಾಗೇ ಭಾವಿಸಿಕೊಂಡು ಬಂದಿದ್ದಾನೆ. ಪಾತ್ರದ ಇಮೇಜು ನಟನ ಇಮೇಜೂ ಆಗಿರುತ್ತದೆ. ಹೀಗಾಗಿ ರಾಜ್‌ ತೆರೆಯ ಮೇಲೆ ಸಿಗರೇಟು ಸೇದಕೂಡದು. ಎಂದೂ ಸೋಲಕೂಡದು. ಅಷ್ಟೇ ಯಾಕೆ ನಮ್ಮ ರಮೇಶ್‌ ಕೂಡ ಸಿಗರೇಟು ಸೇದಿದರೆ ಜನ ಸಹಿಸುವುದಿಲ್ಲವಂತೆ.

    ಇವೆಲ್ಲವನ್ನೂ ಗಮನದಲ್ಲಿಟ್ಟುಕೊಂಡು ಹೇಳುವುದಾದರೆ, ಚಿತ್ರದ ಮೂಲಕ ಮತ್ತೊಂದು ಚಿತ್ರದ ವಿಮರ್ಶೆಗೆ ಕೈ ಹಾಕಿದ್ದಾರೆ ಕುಮಾರಸ್ವಾಮಿ. ಆದರೆ ಜನರ ಮುಂದೆ ಪ್ರಾಜೆಕ್ಟ್‌ ಆಗುವುದು ಜಗ್ಗೇಶ್‌. ಹೀಗಾಗಿ ಅವರ ಮೇಲೆ ಜನರಿಗೆ ಈಗಾಗಲೇ ಇರುವ ‘ಅಸಹ್ಯ’ ಮತ್ತು ‘ಕಾಕ್ರೋಚ್‌ ಫೀಲಿಂಗ್‌’ ಮತ್ತಷ್ಟು ಜಾಸ್ತಿಯಾಗಬಹುದು.

    ಯಶಸ್ಸು ಅನರ್ಹರಿಗೆ ಸಿಗಬಾರದು. ಆತ ಅದು ತನ್ನಪ್ಪನ ಆಸ್ತಿ ಅಂದುಕೊಳ್ತಾನೆ ಅನ್ನೋ ಮಾತಿದೆ. ಬಫೂನರಿ ಮಾಡುತ್ತಿದ್ದ ಜಗ್ಗೇಶರನ್ನು ಜನ ಸ್ವೀಕರಿಸಿದ ತಕ್ಷಣ ಅವರು ಹೀರೋ ಆಗಲು ಯತ್ನಿಸಿದರು. ಕನ್ನಡ ಭಾಷಣ ಶುರು ಮಾಡಿದರು. ನೀತಿ ಪಾಠ ಆರಂಭಿಸಿದರು. ಈಗ ನಾರಾಯಣ್‌ ಮಾಡುತ್ತಿರುವುದೂ ಅದನ್ನೇ.

    ಇವೆಲ್ಲ ಹೇಳುತ್ತಾ ಚಿತ್ರದ ಬಗ್ಗೆ ಹೇಳುವುದು ನಮ್ಮ ಉದ್ದೇಶ. ನೇರವಾಗಿ ಹೇಳುವುದಾದರೆ ಚಿತ್ರಕ್ಕೊಂದು ಕತೆಯಿಲ್ಲ. ಚಿತ್ರಕತೆಯೂ ಇಲ್ಲ . ಅದೊಂದು ಕೆಟ್ಟ ‘ಸ್ಕಿಟ್‌’ನಂತಿದೆ. ಅಭಿನಯದ ಬಗ್ಗೆ ಹೇಳುವಂಥದ್ದೇನಿಲ್ಲ.

    ಕನ್ನಡ ಪ್ರೇಕ್ಷಕನ ದುರದೃಷ್ಟ ಮತ್ತು ಅವನ ಮೇಲೆ ನಡೆಯುತ್ತಿರುವ ಅಮಾನವೀಯ ಹಲ್ಲೆಗೆ ಸಂತಾಪ ಸೂಚಿಸುತ್ತಾ, ಜಗ್ಗೇಶ್‌ ನಟಿಸದೇ ಇರುವ ಸದ್ಬುದ್ಧಿಯನ್ನು ಕುಮಾರ ಸ್ವಾಮಿ ನೀಡಲಿ ಎಂದು ಆಶಿಸುತ್ತೇವೆ.

    ಸೂಚನೆ : ಚಿತ್ರ ನೋಡಿದ ನಂತರ ಗಂಗಾಸ್ನಾನ ಮಾಡುವುದು ಸೂಕ್ತ. ಅದಕ್ಕೆ ಅವಕಾಶ ಇಲ್ಲದವರು ಕನಿಷ್ಠ ಡೆಟ್ಟಾಲ್‌ನಲ್ಲಿ ಮೈ ತೊಳೆದುಕೊಂಡರೂ ಆದೀತು.

    ಮುಖಪುಟ / ಸ್ಯಾಂಡಲ್‌ವುಡ್‌

    Friday, March 29, 2024, 16:05
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X