KD Review: ಅದ್ಧೂರಿ 'ಪ್ರೇಮ್‌'ಲೋಕದಲ್ಲಿ 'ಕೆಡಿ' ಧ್ರುವ ಬರೆದ ರಕ್ತಚರಿತ್ರೆ

ಜೋಗಿ ಪ್ರೇಮ್ ನಿರ್ದೇಶನದಲ್ಲಿ ಧ್ರುವ ಸರ್ಜಾ ನಟನೆಯ 'ಕೆಡಿ' ಸಿನಿಮಾ ತೆರೆಗಪ್ಪಳಿಸಿದೆ. 4 ವರ್ಷಗಳಿಂದ ಹುಟ್ಟಿಕೊಂಡಿದ್ದ ಭಾರೀ ಕುತೂಹಲಕ್ಕೆ ಬ್ರೇಕ್ ಬಿದ್ದಿದೆ. 'ಕೆಡಿ' ಸಿನಿಮಾ ಅಲ್ಲ.. ಒಂದು ಟ್ರೈಲರ್.. ಎರಡೂವರೆ ಗಂಟೆ ಟ್ರೈಲರ್.. ನೋಡಿದ್ಮೇಲೆ ಕಥೆ ನೀವೇ ಮಾಡ್ಕೊಬೇಕು ಎಂದು ಸ್ವತಃ ಪ್ರೇಮ್ ಇತ್ತೀಚೆಗೆ ಸಂದರ್ಶನವೊಂದರಲ್ಲಿ ಹೇಳಿದ್ದರು. ಸಿನಿಮಾ ನೋಡಿದ್ಮೇಲೆ ಅದು ಸರಿ ಅನ್ನಿಸುತ್ತೆ.

Rating:
3.0/5
Star Cast: ಧ್ರುವ ಸರ್ಜಾ, ರೀಷ್ಮಾ ನಾಣಯ್ಯ, ಸಂಜಯ್ ದತ್, ಶಿಲ್ಪಾ ಶೆಟ್ಟಿ, ರಮೇಶ್ ಅರವಿಂದ್, ರವಿಚಂದ್ರನ್ ಮುಂತಾದವರು.
Director: ಜೋಗಿ ಪ್ರೇಮ್

70ರ ದಶಕದ ಭೂಗತಲೋಕದ ಕಥೆ, ಭಾರೀ ಬಜೆಟ್, ಸಂಜಯ್ ದತ್, ಶಿಲ್ಪಾ ಶೆಟ್ಟಿ, ರವಿಚಂದ್ರನ್, ರಮೇಶ್ ಅರವಿಂದ್ ಒಂದೇ ಸಿನಿಮಾದಲ್ಲಿ ಅಂದಾಗಲೇ ನಿರೀಕ್ಷೆ ಮೂಡಿತ್ತು. ಇನ್ನು ಪ್ರೇಮ್ ಸಿನಿಮಾ ಅಂದ್ಮೇಲೆ ಸದ್ದು ಗದ್ದಲ ಜೋರಾಗಿಯೇ ಇರುತ್ತೆ. ಕೊನೆಗೆ ಕಿಚ್ಚ ಸುದೀಪ್ ಕೂಡ ತಂಡ ಸೇರಿದ್ದಾರೆ ಅಂದಾಗ ನಿರೀಕ್ಷೆ ಎವರೆಸ್ಟ್ ಎತ್ತರಕ್ಕೆ ಏರಿತ್ತು. ಸಾಕಷ್ಟು ಅಡೆತಡೆಗಳನ್ನು ಎದುರಿಸಿ ಅಂತೂ ಇಂತೂ ಸಿನಿಮಾ ತೆರೆಗೆ ಬಂದಿದೆ. ಮೊದಲ ದಿನವೇ ಸಾಕಷ್ಟು ಜನ ಮುಗಿಬಿದ್ದು ಸಿನಿಮಾ ನೋಡಿದ್ದಾರೆ.

Jogi Prem and Dhruva Sarja s KD  The Devil review and Rating in Kannada

ಬಹಳ ದಿನಗಳ ನಂತ್ರ ಪ್ರೇಮ್ ಮ್ಯಾಜಿಕ್ ರಿಪೀಟ್ ಆಯ್ತಾ? ಧ್ರುವ ಕೊನೆಗೂ ಗೆದ್ರಾ? ಏನಿದು ಕಾಳಿದಾಸನ ರಕ್ತಚರಿತ್ರೆ? ಅವನು ರಕ್ತದ ಕೋಡಿ ಹರಿಸೋಕೆ ಕಾರಣ ಏನು? ಸಿನಿಮಾ ಕಥೆ ಏನು? ಮುಂದೆ ಓದಿ.

'ಕೆಡಿ' ಕಥೆ

ಅದು 80ರ ದಶದಕ ಆರಂಭ.. ಪೊಲೀಸ್ ಅಧಿಕಾರಿ ಸೂರಪ್ಪನ ಮನೆಯಲ್ಲಿ ಮದುವೆ ಸಂಭ್ರಮ.. ಅಷ್ಟರಲ್ಲೇ ಆತನ ಜೊತೆಗೆ ಕೆಲಸ ಮಾಡಿದ್ದ ನಾಲ್ವರು ಪೊಲೀಸರ ಹೆಣ ಬೀಳುತ್ತೆ. ಸೂರಪ್ಪನಿಗೂ ಸಮಸ್ಯೆ ಆಗಬಹುದು ಎಂದು ಪೊಲೀಸ್ ಪಡೆ ಭದ್ರತೆ ಓಡಿಬರುತ್ತೆ. ಆಗ ಕಾಲಭೈರವ(ಸುದೀಪ್) ಹಾಗೂ ಕಾಳಿದಾಸ(ಧ್ರುವ ಸರ್ಜಾ)ನ ರಕ್ತ ಚರಿತ್ರೆ ಬಿಚ್ಚಿಕೊಳ್ಳುತ್ತದೆ.

Jogi Prem and Dhruva Sarja s KD  The Devil review and Rating in Kannada

ಸೂರಪ್ಪನ ನಿರೂಪಣೆಯಲ್ಲಿ 1975ರ ಸುಮಾರಿಗೆ ಬೆಂಗಳೂರು ಭೂಗತಲೋಕವನ್ನು ಆಳುತ್ತಿದ್ದ ಧಕ್ ದೇವಾ(ಸಂಜಯ್ ದತ್) ಎಂಬ ಡಾನ್ ಕಥೆ ತೆರೆದುಕೊಳ್ಳುತ್ತದೆ. ರಾಜ್ಯದ ಮುಖ್ಯಮಂತ್ರಿ ಕೃಪಾ ಪೋಷಣೆಯಿಂದ ಸಾಮಾನ್ಯ ಕುಸ್ತಿ ಪೈಲ್ವಾನ್ ಆಗಿದ್ದ ದೇವಾ ಮುಂದೆ ಡಾನ್ ಆಗಿ ಮೆರೆಯುತ್ತಿರುತ್ತಾನೆ. ಪೊಲೀಸರಿಗೆ ಸಿಂಹಸ್ವಪ್ನವಾಗಿರುತ್ತಾನೆ. ಅವನ ರಕ್ತ ಹಂಚಿಕೊಂಡ ಕಾಳಿದಾಸ ಅಭಿಮಾನಿ ಆಗಿಬಿಟ್ಟಿರುತ್ತಾನೆ. ಆದರೆ ಕೊನೆಗೆ ತಾನು ಆರಾಧಿಸುವ ಧಕ್ ದೇವಾ ವಿರುದ್ಧವೇ ಕಾಳಿ ಸೆಟೆದು ನಿಲ್ತಾನೆ. ರುಂಡಗಳನ್ನು ಚೆಂಡಾಡುತ್ತಾನೆ. ಮುಂದೆ ಏನಾಗುತ್ತೆ? ಮುಗ್ಧ ಕಾಳಿದಾಸ ಕೊನೆಗೆ ರುದ್ರತಾಂಡವ ಆಡುವುದು ಏಕೆ? ಅಷ್ಟಕ್ಕೂ ಅದಕ್ಕೆಲ್ಲಾ ಕಾರಣ ಏನು? ಎನ್ನುವುದನ್ನು ತೆರೆಮೇಲೆ ನೋಡಬೇಕು.

ಸಿನಿಮಾ ಹೇಗಿದೆ?

ಮಾಸ್ ಪ್ರೇಕ್ಷಕರ ನಾಡಿಮಿಡಿತ ಅರಿತು ಪ್ರೇಮ್ 'ಕೆಡಿ' ಸಿನಿಮಾ ಕಟ್ಟಿಕೊಟ್ಟಿರುವುದು ಗೊತ್ತಾಗುತ್ತಿದೆ. ಅದಕ್ಕೆ ಕಲಾವಿದರ ನಟನೆ, ತಂತ್ರಜ್ಞರ ಶ್ರಮ, ಬಜೆಟ್ ಎಲ್ಲವೂ ಸಾಥ್ ಕೊಟ್ಟಿದೆ. 70ರ ದಶಕದ ಬೆಂಗಳೂರು ಚಿತ್ರಣವನ್ನು ಕಟ್ಟಿಕೊಡಲು ಪ್ರೇಮ್ ಅಂಡ್ ಟೀಂ ಬಹಳ ಶ್ರಮಿಸಿದೆ. ಅದು ಪ್ರತಿ ಫ್ರೇಮ್‌ನಲ್ಲೂ ಗೊತ್ತಾಗುತ್ತದೆ. ಕಥೆ ಸಿಂಪಲ್ ಅನ್ನಿಸಿದ್ರು ಅದಕ್ಕೆ ಮಾಸ್ ಮಸಾಲೆ ಬೆರೆಸಿ 'ಫಾಸ್ಟ್‌' ಫುಡ್ ರೀತಿ ಬಾಯಲ್ಲಿ ಇಟ್ಟ ತಕ್ಷಣ ನಾಲಿಗೆ ರುಚಿ ಹತ್ತುವಂತೆ ಕಟ್ಟಿಕೊಟ್ಟಿದ್ದಾರೆ. ಅಣ್ಣ-ತಮ್ಮನ ಬಾಂಧವ್ಯವನ್ನು ಅದಕ್ಕೆ ಟ್ರಂಪ್ ಕಾರ್ಡ್ ಆಗಿ ಬಳಸಿಕೊಂಡಿದ್ದಾರೆ.

ಯಾವುದೇ ದೃಶ್ಯವನ್ನು ಎಳೆದಾಡದೇ ಬೇಗ ಬೇಗ ಹೇಳಿ ಮುಗಿಸುವ ಧಾವಂತ ತೋರಿಸಿದ್ದಾರೆ ಪ್ರೇಮ್. ಕಾಳಿದಾಸ ಹಾಗೂ ಮಚ್ಚ್ ಲಕ್ಷ್ಮಿ ಲವ್ ಸ್ಟೋರಿಗೂ ಇಲ್ಲಿ ರಾಕೆಟ್ ವೇಗ ಇದೆ. ಎಲ್ಲವೂ ಪಟಪಟನೆ ಮುಗಿದು ಹೋಗುತ್ತದೆ. ಸೆಕೆಂಡ್ ಹಾಫ್ ಮುಗಿಯುವುದೇ ಗೊತ್ತಾಗಲ್ಲ. ಕಾಲಭೈರವನಾಗಿ ಸುದೀಪ್ ಎಂಟ್ರಿ ಆಯ್ತು. ಮುಂದೇನು ಎನ್ನುತ್ತಿದ್ದಂತೆ ಎರಡನೇ ಭಾಗದಲ್ಲಿ ಇನ್ನುಳಿದ ಕಥೆ ನೋಡಿ ಎಂದು ಕುತೂಹಲ ಮೂಡಿಸುತ್ತಾರೆ.

ಮುಗ್ಧ ಯುವಕ.. ತನ್ನವರಿಗೆ ಕಷ್ಟ ಅಂದಾಗ ತಿರುಗಿಬೀಳುವ ಕಿರಾತಕ.. ಇಷ್ಟೇ ಕಥೆ.. ಇದನ್ನು 'ಕೆಡಿ' ಸಿನಿಮಾ ಆಗಿ ತೆರೆಮೇಲೆ ತರಲಾಗಿದೆ. ಪ್ರೇಮ್ ಮೊನಚಾದ ಸ್ಕ್ರೀನ್‌ಪ್ಲೇ, ಕುಂತಲ್ಲೇ ಕುಣಿಸುವಂತ ಸಾಂಗ್ಸ್, ಜಬರ್ದಸ್ತ್ ಆಕ್ಷನ್ ಎಲ್ಲವನ್ನು ಸೇರಿಸಿ ಮಾಸ್ ಪ್ರೇಕ್ಷಕರಿಗೆ ಇಷ್ಟವಾಗುವಂತಹ ಸಿನಿಮಾ ಮಾಡಿದ್ದಾರೆ. ಫ್ಯಾಮಿಲಿ ಎಮೋಷನ್ ಕೂಡ ಚಿತ್ರದಲ್ಲಿದೆ. ಆದರೆ ಧ್ರುವ ಹರಿಸಿರುವ ರಕ್ತದ ಕೋಡಿ ಮುಂದೆ ಎಲ್ಲವೂ ಗೌಣವಾಗಿಬಿಡುತ್ತದೆ. ಇದೇ ಕಾರಣಕ್ಕೆ ಚಿತ್ರಕ್ಕೆ 'ಎ' ಸರ್ಟಿಫಿಕೇಟ್ ಕೊಟ್ಟಿರುವುದು ಎನ್ನುವುದು ಗೊತ್ತಾಗುತ್ತದೆ.

ಕಲಾವಿದರ ಅಭಿನಯ

ನಟನೆ ವಿಚಾರಕ್ಕೆ ಬಂದರೆ ಧ್ರುವ ಕಾಳಿದಾಸನ ಪಾತ್ರವೇ ತಾವಾಗಿಬಿಟ್ಟಿದ್ದಾರೆ. ಮೊದಮೊದಲಿಗೆ ಕೊಂಚ ಅತಿಯಾಯಿತು ಅನ್ನಿಸಿದ್ರು, ನೋಡ್ತಾ ನೋಡ್ತಾ ಜನ ಪಾತ್ರದ ಒಳಗೆ ಇಳಿದುಬಿಡುತ್ತಾರೆ. ಏನ್ ಕ್ರೇಜಿ ಆಕ್ಟಿಂಗ್ ಗುರೂ ಎಂದು ಉದ್ಘಾರ ತೆಗೆಯುತ್ತಾರೆ. ಸಂಬಂಧಗಳ ಪ್ರೀತಿಗೆ ಕಟ್ಟುಬಿದ್ದ ಮುಗ್ಧ ಕಾಳಿ, ಕೊನೆಗೆ ವ್ಯಾಘ್ರನಂತಾಗಿಬಿಡುತ್ತಾನೆ. ಧ್ರುವಗೆ ಹೇಳಿಮಾಡಿಸಿದಂತ ಸಿನಿಮಾ ಇದು ಎನಿಸುತ್ತದೆ.

ಧಕ್ ದೇವಾ ಆಗಿ ಸಂಜಯ್ ದತ್ ಅಬ್ಬರಿಸಿದ್ದಾರೆ. ಆದರೆ ಅವರ ಆರ್ಭಟಕ್ಕೆ ದೇಹ ಸರಿಯಾಗಿ ಸಾಥ್ ಕೊಟ್ಟಿಲ್ಲ. ಸತ್ಯವತಿ ಆಗಿ ಒಂದೆರಡು ಸನ್ನಿವೇಶಗಳಲ್ಲಿ ಶಿಲ್ಪಾ ಶೆಟ್ಟಿ ವಿಜೃಂಭಿಸಿ ಎರಡನೇ ಭಾಗಕ್ಕೆ ದರ್ಬಾರ್ ಉಳಿಸಿಕೊಂಡಿದ್ದಾರೆ. ಮಚ್ಚ್‌ ಲಕ್ಷ್ಮಿ ಆಗಿ ಗಂಡುಬೀರಿ ಹುಡುಗಿ ಆಗಿ ರೀಷ್ಮಾ ನಾಣಯ್ಯ ಗಮನ ಸೆಳೆಯುತ್ತಾರೆ. ಡ್ಯಾನ್ಸ್‌ನಲ್ಲಿ ಕೂಡ ಧ್ರುವ ಸವಾಲುವೊಡ್ಡಿದ್ದಾರೆ. ಇನ್ನು ಸಭ್ಯ ರಾಜಕಾರಣಿ ಅಣ್ಣಯ್ಯಪ್ಪ ಪಾತ್ರದಲ್ಲಿ ರವಿಚಂದ್ರನ್ ಇಷ್ಟವಾಗುತ್ತದೆ. ಪೊಲೀಸ್ ಅಧಿಕಾರಿ ಆಗಿ ರವಿಶಂಕರ್ ಆರ್ಭಟ ಕಮ್ಮಿ ಅನ್ನಿಸಿದ್ರು, ತಮ್ಮ ಕಂಚಿ ಕಂಠದಿಂದ ಕಾಳಿದಾಸನ ಕಥೆಗೆ ಗತ್ತು ತುಂಬಿದ್ದಾರೆ.

ತಾಂತ್ರಿಕವಾಗಿ 'ಕೆಡಿ'

ಹೆಚ್ಚು ಕಮ್ಮಿ 100 ಕೋಟಿ ರೂ. ಬಜೆಟ್‌ನಲ್ಲಿ 'ಕೆಡಿ' ಸಿನಿಮಾ ನಿರ್ಮಾಣವಾಗಿದೆ. 70ರ ದಶಕದ ಬೆಂಗಳೂರನ್ನು ತೆರೆಮೇಲೆ ಕಟ್ಟಿಕೊಟ್ಟಿದ್ದಾರೆ. ಅದಕ್ಕೆ ಆರ್ಟ್ ಡೈರೆಕ್ಟರ್ ಮೋಹನ್ ಬಿ ಕೆರೆ ಮತ್ತವರ ತಂಡ ಬಹಳ ಶ್ರಮಪಟ್ಟಿದೆ. ಪ್ರೇಮ್ ಕಲ್ಪನೆಯನ್ನು ಛಾಯಾಗ್ರಾಹಕ ವಿಲಿಯಂ ಡೇವಿಡ್ ಬಹಳ ಅದ್ಧೂರಿಯಾಗಿ ಸೆರೆಹಿಡಿದಿದ್ದಾರೆ. ಪ್ರತಿಫ್ರೇಮ್‌ನಲ್ಲಿ ನೂರಾರು ಜನರನ್ನು ತುಂಬಲಾಗಿದೆ. ಕೆಆರ್‌ ಮಾರ್ಕೆಟ್, ಟೌನ್ ಹಾಲ್, ಶಿವಾಜಿ ಚಿತ್ರಮಂದಿರ ಹೀಗೆ ಅವತ್ತಿನ ಬೆಂಗಳೂರಿನ ಬಣ್ಣಗಳನ್ನು ಚಿತ್ರದುದ್ದಕ್ಕೂ ತುಂಬಿದ್ದಾರೆ. ಅರ್ಜುನ್ ಜನ್ಯಾ ಹಾಡುಗಳು ಮಾತ್ರವಲ್ಲ ಹಿನ್ನೆಲೆ ಸಂಗೀತ ಕೂಡ ಚಿತ್ರಕ್ಕೆ ಬಲ ತುಂಬಿದೆ. ಆದರೆ ವಿವಾದ ಸೃಷ್ಟಿಸಿದ್ದ ಐಟಂ ಸಾಂಗ್‌ಗೆ ಕತ್ತರಿ ಬಿದ್ದಿದೆ.

ಕೊನೆ ಮಾತು

ಮಾಸ್ ಪ್ರೇಕ್ಷಕರಿಗೆ ಪ್ರೇಮ್ ಜಬರ್ದಸ್ತ್ ಪ್ಯಾಕೇಜ್ 'ಕೆಡಿ'. ಒಂದಷ್ಟು ತಪ್ಪುಗಳ ಹೊರತಾಗಿಯೂ ನೋಡುಗರನ್ನು ಹಿಡಿದಿಟ್ಟುಕೊಳ್ಳುವ ಶಕ್ತಿ ಚಿತ್ರಕ್ಕಿದೆ. ಹೆಚ್ಚು ನಿರೀಕ್ಷೆ ಇಲ್ಲದೇ ಚಿತ್ರಮಂದಿರ ಪ್ರವೇಶಿಸಿದರೆ ಧ್ರುವ ಕೈಗೆ ಮಚ್ಚು ಕೊಟ್ಟು ಪ್ರೇಮ್ ಬರೆಸಿದ ರಕ್ತಚರಿತ್ರೆ ಇಷ್ಟವಾಗುತ್ತದೆ. ಫ್ಯಾಮಿಲಿ ಸಮೇತ ಚಿತ್ರಮಂದಿರಕ್ಕೆ ಹೋಗಬೇಕು ಎನ್ನುವವರು ಒಮ್ಮೆ ಯೋಚಿಸಿ.

Read more about: kd prem review
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X